ಮಧುಮಾಲತಿ ರುದ್ರೇಶ್ ಅವರ ಕವಿತೆ-“ಆಕಾಶ ಮುಟ್ಟುವ ಅವಕಾಶ”

ತೆರೆಯಬೇಕಿದೆ ನನ್ನ ಮನವನು ಮುಗಿಲಿಗೆ
ಹಚ್ಚಬೇಕಿದೆ ರೆಕ್ಕೆಯನೊಂದ ಕನಸ ಹಕ್ಕಿಗೆ

ಆಕಾಶ ಮುಟ್ಟುವ ಅವಕಾಶ ನನ್ನದೀಗ
ನನಸಾಗುತಿದೆ ಮುಗಿಲ ಬಾಚುವ ಕನಸೀಗ

ಬಂಧ ಬಂಧನಗಳೆಲ್ಲವೂ ಆಗಿವೆ ಬಂಧುರ
ಮನಸು ಮಾಗಲು ಆಗಲೇಬೇಕಿದೆ ನಿಷ್ಠುರ

ಬೇಲಿಯಿಲ್ಲದ ಬಾನಿಗೆ ಏಣಿ ಹಾಕುವೆ ನಾನು
ಪಾರತಂತ್ರದ ಮುಷ್ಟಿಯಿಂದ ಮುಕ್ತಳಾಗಿರುವೆನು

ಸಾಧನೆಯ ಹಾದಿಯಲಿ ಕಲ್ಲು ಮುಳ್ಳೇಯಿಹುದು
ಸಾಧಿಸುವೆನೆಂಬ ಆತ್ಮ ವಿಶ್ವಾಸ ಜೊತೆಗಿಹುದು

ಕಟ್ಟುಪಾಡುಗಳ ಕಟ್ಟಳೆಯ ಬಿಡಿಸಿ ಬಂದೆ
ಜಡ್ಡು ಹಿಡಿದ ವ್ಯವಸ್ಥೆಗೆ ಸಡ್ಡು ಹೊಡೆದು ನಿಂದೆ

ಸರಿಸಬೇಕಿದೆ ಎನ್ನೆಡೆಗಿನ ಮಡಿ ಮೈಲಿಗೆಯ ಸೆರಗು
ಕಣ್ಣರಳಿಸಿ ಕಾಣಬೇಕಿದೆ ಸ್ತ್ರೀ ಸಾಧನೆಯ ಬೆರಗು


One thought on “ಮಧುಮಾಲತಿ ರುದ್ರೇಶ್ ಅವರ ಕವಿತೆ-“ಆಕಾಶ ಮುಟ್ಟುವ ಅವಕಾಶ”

Leave a Reply

Back To Top