ಸುವಿಧಾ ಹಡಿನಬಾಳ ಅವರ ಲೇಖನ-ಸತ್ಯವಂತರಿಗಿದು ಕಾಲವಲ್ಲ…

‘ಸತ್ಯವಂತರಿಗಿದು ಕಾಲವಲ್ಲ ದುಷ್ಟ ಜನರಿಗಿದು ಸುಭಿಕ್ಷ ಕಾಲ’ ಎಂಬುದು ಅನುಭವಜನ್ಯ  ಕವಿವಾಣಿ. .ಕಾಲ ಬದಲಾದಂತೆ ಈ ಮಾತು ಮತ್ತಷ್ಟು ತನ್ನ ಸತ್ಯಾಸತ್ಯತೆಯನ್ನು ಸಾಬೀತುಪಡಿಸುತ್ತಿರುವುದು ದುರಂತ !  ಇಂದು ಅಧಿಕಾರದ ಅಮಲು, ಭ್ರಷ್ಟಾಚಾರದ ಉತ್ತುಂಗ ಹಣದ ಮದ ಮೆರೆಯುತ್ತಿರುವ ಕಾಲ;  ಅಹಂಕಾರ ಅಬ್ಬರಿಸುತ್ತಿರುವ ವಿಷಮ ಕಾಲ!  ರಾಜಕೀಯದಲ್ಲಿ ಧರ್ಮ , ಧರ್ಮದಲ್ಲಿ  ರಾಜಕಾರಣ ಬೆರೆತು ಮದವೇರಿದೆ. ಭ್ರಷ್ಟಾಚಾರ ಕ್ರೌರ್ಯ, ಸುಲಿಗೆ , ಕಿರುಕುಳ ,ಒತ್ತಡ, ಸೈಬರ್ ಕ್ರೈಂ, ಅತ್ಯಾಚಾರ ಅಪಘಾತ , ಆತ್ಮಹತ್ಯೆ ದಿನದಿಂದ ದಿನಕ್ಕೆ  ಹೆಚ್ಚುತ್ತಿರುವ ಸಂಕಷ್ಟ ಕಾಲ .

ಸಾಮಾನ್ಯ ನೌಕರನಿಂದ ಉನ್ನತ ಅಧಿಕಾರಿಯವರೆಗೆ ಪ್ರತಿಯೊಬ್ಬರ ಮೇಲು ಒಂದಿಲ್ಲೊಂದು ರೀತಿಯ ಒತ್ತಡ ಧಾವಂತ;  ನೆಮ್ಮದಿ ಎಂಬುದು ಮರೀಚಿಕೆಯಾಗಿದೆ… ಕೊರೋನ ನಂತರದಲ್ಲಿ ಹೆಚ್ಚುತ್ತಿರುವ ಆನ್ಲೈನ್ ಕೆಲಸಗಳು, ದಿನದ 24 ಗಂಟೆಯೂ ಬರುತ್ತಿರುವ ಸುತ್ತೋಲೆ, ಸಂದೇಶ ,ಮಾಹಿತಿಗಳು ನೌಕರರ ಅಧಿಕಾರಿಗಳ ನೆಮ್ಮದಿ ಮತ್ತು ವೈಯಕ್ತಿಕ ಬದುಕನ್ನು ಕಿತ್ತುಕೊಳ್ಳುತ್ತಿವೆ;  ಪರಿಣಾಮ ಬಿಪಿ ಶುಗರ್ ಬಳುವಳಿ!!  ಸಾಮಾನ್ಯ ಮುಗ್ಧ ಮನಸ್ಸಿನ ಮೃದು ವ್ಯಕ್ತಿಗಳಾದರೆ ಇವೆಲ್ಲವನ್ನು ಎದುರಿಸಲು ಧೈರ್ಯ ಸಾಲದೆ  ಮಾನಸಿಕ  ಖಿನ್ನತೆಗೆ ಒಳಗಾಗುವ  ಕಾಲವಿದು. ನಿಜಕ್ಕೂ ಇದೊಂದು ಅತ್ಯಂತ ವಿಷಾದನೀಯ ಸಂಗತಿ …

   ನಮ್ಮ ಬಹುತೇಕ ಸಮಸ್ಯೆಗಳ ಮೂಲ ಬದಲಾದ ರಾಜಕೀಯ ವ್ಯವಸ್ಥೆಯಾಗಿದೆ.ಪ್ರಜಾಪ್ರಭುತ್ವದಲ್ಲಿ ಇಂದು ಚುನಾವಣೆ ಎಂಬುದು ಜ್ವರದಂತೆ ಕಾವೇರಿಸಿ ಕುರ್ಚಿಗಾಗಿ ಅಧಿಕಾರಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಿ ಆರಿಸಿ ಬರುವ ಜನಪ್ರತಿನಿಧಿಗಳಿಗೆ ಅಧಿಕಾರಕ್ಕೆ ಬಂದ ನಂತರ ಅದನ್ನು ಹಿಂದಿರುಗಿ ಪಡೆಯುವ ಧಾವಂತ ; ಹೀಗಾಗಿ ತಮ್ಮ ಕೈ ಕೆಳಗೆ ದಕ್ಷವಾಗಿ ಪ್ರಾಮಾಣಿಕವಾಗಿ ತನ್ನ ಪಾಡಿಗೆ ದೇಶದ ಹಿತಕ್ಕಾಗಿ ,ಜನಸಾಮಾನ್ಯರ ಹಿತಕ್ಕಾಗಿ ಕೆಲಸ ಮಾಡುವ ಅಧಿಕಾರಿಗಳು ನೌಕರರು ಇಂತವರ ಕೆಂಗಣ್ಣಿಗೆ ಗುರಿಯಾಗುತ್ತಾರೆ ! ಇದರ ಪರಿಣಾಮ ಮತ್ತೆ ಮತ್ತೆ ವರ್ಗಾವಣೆ, ಕಿರುಕುಳ,   ಕೊನೆಯ ಅಸ್ತ್ರ ಯಾವು ಯಾವುದೊ  ಪ್ರಕರಣಗಳಲ್ಲಿ ಫಿಕ್ಸ್ ಮಾಡಿ ಸಂಪೂರ್ಣವಾಗಿ ಅವರ ಆತ್ಮಸ್ಥೈರ್ಯ ಕುಂದಿಸಿ ಮೆತ್ತಗಾಗಿಸುವ ಪರಿ!  ಇನ್ನು ಮಹಿಳಾ ಅಧಿಕಾರಿಗಳಿಗೆ ನಿರ್ಭೀತಿಯಿಂದ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದು ಬಹಳ ಕಷ್ಟದ ಮಾತು. ಇದು ಮೇಲಾಧಿಕಾರಿಗಳ ಪರಿಸ್ಥಿತಿಯಾದರೆ ತಳಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಸಾಮಾನ್ಯ ನೌಕರನ ಪಾಡು ದೇವರಿಗೆ ಪ್ರಿಯ!  ಎಲ್ಲ ಬಗೆಯ ಒತ್ತಡಗಳು ಎಲ್ಲ ಬಗೆಯ ಮಾಹಿತಿಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಜನರಿಗೆ ಹತ್ತಿರವಾಗಿರುವ ನೌಕರರು ಸುಲಭವಾಗಿ ಬಲಿಪಶುಗಳಾಗುತ್ತಿದ್ದಾರೆ .

 ಇಂದು ಜನಸಾಮಾನ್ಯರ ಮನಸ್ಥಿತಿಯಲ್ಲೂ ಕೂಡ ಅಗಾಧವಾದ ಬದಲಾವಣೆ, ಉಚಿತ ಸೌಲಭ್ಯಗಳು,  ಗ್ಯಾರಂಟಿ ಯೋಜನೆಗಳು ಸೋಮಾರಿತನ , ದುರಹಂಕಾರ, ಅಧಿಕಾರಿಗಳು ನೌಕರರ ಬಗೆಗೆ  ಉಡಾಫೆ ಧೋರಣೆಯನ್ನು ಸೃಷ್ಟಿಸಿದೆ.  ಪ್ರತಿನಿತ್ಯ ನಡೆಯುವ ಪೊಲೀಸರ ಮೇಲೆ ಕಲ್ಲು ತೂರಾಟ,  ಕಂಡಕ್ಟರ್ ಜೊತೆ ದಿನವೂ ಕಿತ್ತಾಟ, ಮಕ್ಕಳ  ಮಾತು ಕೇಳಿ ಶಿಕ್ಷಕರನ್ನು ಬೆದರಿಸುವ, ಮಕ್ಕಳೆದುರೇ ಅವಮಾನಿಸುವ ಪಾಲಕರ ಮನಸ್ಥಿತಿ, ಡ್ಯೂಟಿಯಲ್ಲಿದ್ದ ಸಾಮಾನ್ಯ ನೌಕರರ ಕೊರಳಪಟ್ಟಿಗೂ ಕೈ ಹಚ್ಚುವ ಸಾಮಾನ್ಯರ  ಅಪ್ರಬುದ್ಧ ಮನಸ್ಥಿತಿ ಒಂದೆಡೆಯಾದರೆ ಮಹಿಳೆಯರಾದಲ್ಲಿ  ಹಗುರವಾಗಿ,ಕೆಟ್ಟದಾಗಿ ನಡೆದುಕೊಳ್ಳುವ ರೀತಿಯೂ ಇಲ್ಲದಿಲ್ಲ,… ತಮ್ಮ ತಮ್ಮ ಮೂಗಿನ ನೇರಕ್ಕೆ ಯೋಚಿಸುವ ಮಾತನಾಡುವ ಬಹುತೇಕರಿಗೆ ಸಾರ್ವಜನಿಕ ಹಿತ, ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಇಲ್ಲ. ಸುಖಾಸುಮ್ಮನೆ  ಜನಪ್ರತಿನಿಧಿಗಳನ್ನು ಹಾಡಿ ಹೊಗಳಿ, ಹಾರ ತುರಾಯಿ ತೊಡಿಸಿ ಜೈಕಾರ ಹಾಕುವ ಜನರಿಗೆ ಅವರಿಂದ ಅಭಿವೃದ್ಧಿ ಕೆಲಸ ಕೇಳುವ , ಮಾಡಿಸಿಕೊಳ್ಳುವ ಧೈರ್ಯ, ಆಸಕ್ತಿ ಇಲ್ಲ… ಇದರಿಂದ ಸಾರ್ವಜನಿಕ ಕೆಲಸಗಳಲ್ಲಿ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು   ಜನಜನಿತ…

ಎಂದಿಗೆ ಆಳುವ ವರ್ಗ, ಅಧಿಕಾರಿ ವರ್ಗ, ನೌಕರ ಸಮುದಾಯ ಜನಪರವಾಗಿ ಚಿಂತಿಸುವುದೊ;  ಜನ ಸಾಮಾನ್ಯರು ನೌಕರರು, ಅಧಿಕಾರಿಗಳು,  ಆಳುವ ವರ್ಗದವರಿಗೆ ಸಹಕರಿಸಿ ,ಇನ್ನಷ್ಟು ಮತ್ತಷ್ಟು ಕೆಲಸವನ್ನು ಪಡೆದು, ಗೌರವ ಕೊಟ್ಟು ಗೌರವ ಪಡೆಯುವ  ಮನಸ್ಥಿತಿ ಹೊಂದುತ್ತಾರೊ ಆಗಲೆ ಅಭಿವೃದ್ದಿ  ಹೊಂದಿದ ಸಮಾಜ, ಶಾಂತಿ  ಸುಭಿಕ್ಷೆ ಸಾಧ್ಯವೇನೊ……


Leave a Reply

Back To Top