ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
ದ್ವೇಷದ ಜ್ವಾಲೆ

ಶಸ್ತ್ರಾಸ್ತ್ರಗಳನ್ನು ಹೊಂದುವುದೆಂದರೆ
ರಕ್ಷಣೆಗೋಸುಗ ತಿಳಿಯಿದನು
ಅಮಾಯಕರ ಜೀವ ತೆಗೆಯುವುದೆಂದರೆ
ಘಾತುಕತನ ಅಲ್ಲವೇನು?
ದ್ವೇಷದ ಜ್ವಾಲೆ ಕೆನ್ನಾಲಿಗೆ ಚಾಚಿದರೆ
ಅಮಾಯಕರ ಜೀವಕೆಲ್ಲಿಯ ರಕ್ಷಣೆ
ಮುಯ್ಯಿಗೆ ಮುಯ್ಯಿ ತೀರಿಸುವುದೆಂದರೆ
ಯುಗ ಕಳೆದರೂ ತೀರದು ಬವಣೆ
ಜೀವ ತೆಗೆಯಲೆಂದೇ ಭುವಿಗೆ ಬಂದಂತಿದೆಯಲ್ಲ!
ಮೆದುಳಿನಲ್ಲಿ ಹದುಳ ತುಂಬದ ಅಮಾಯಕರು
ಬದುಕಿನ ಮತ್ತೊಂದು ಮಜಲಿನ ಅರಿವಿರದೆ
ಕುಹಕ ಜಾಲಕೆ ಬಲಿಯಾದ ದುರ್ದೈವಿಗಳು
ಪ್ರತಿಯೊಬ್ಬನೂ ಬಾಡಿಗೆದಾರ ಈ ಧರಣಿಗೆ
ಅನ್ಯರ ನೆಲ ಕಬಳಿಸುವ ಹೀನತೆ ಏತಕೆ?
ಸಾಧನೆಯ ಹಾದಿಗೆ ಮುಳ್ಳನೆಳೆದು
ದೇವ ಕೊಟ್ಟ ದೇಹವನ್ನು ವ್ಯರ್ಥಗೊಳಿಸಲೇಕೆ?
ಎಲ್ಲಿ ಮೊಳೆತು, ಎಲ್ಲಿ ಬೆಳೆಯುವವೀ ಕರ್ಮಟಗಳು
ಬೇರುಸಹಿತ ಕೀಳುವವರಾರಿದನು?
ಕರುಳ ರಸ ಬಸಿದು ಜನ್ಮ ನೀಡಿದವಳ
ಸಂಕಟದ ಪರಾಕಾಷ್ಠೆಗೆ ವಿರಾಮವಿಡುವವರಾರು?
ಶಕುಂತಲಾ ಎಫ್ ಕೋಣನವರ.
