ವಾಣಿ ಯಡಹಳ್ಳಿಮಠ ಅವರಕವಿತೆ-ನೀ ನಿರುತ್ತರವೇ

[ನಿನ್ನದೊಂದು ಮೌನ ನನ್ನಷ್ಟೂ ಪ್ರಶ್ನೆಗಳಿಗೆ ಉತ್ತರವೇ ?
ಕಂಬನಿಯು ಕಳವಳಿಸುತಿದ್ದರೂ ನೀ ನಿರುತ್ತರವೇ ?

ನನ್ನೊಳಗಿನ ಮಾತುಗಳು ನನ್ನನಿರಿಯುತಿವೆ
ತಿವಿ ತಿವಿದು ನನ್ನಭಿಮಾನ ನನ್ನ ಸೋಲಿಸುತಿದೆ
ಕವಿ ಮನದೊಂದಿಗೆ ಕನಸು, ಕಲ್ಪನೆಗಳೂ ಗಾಯ
ಭಾವನೆಗಳೊಂದಿಗೆ ಅಕ್ಷರ, ಲೇಖನಿಗಳೂ ಗಾಯ
ಹಗಲು , ಇರುಳುಗಳಿಗೆ ಆ ಕ್ಷಣದ ನೆನಪು
ಅಭಿಮಾನಕೆ ಅಪಮಾನವಾದ ಆ ಚಣದ ನೆನಹು

ನನ್ನಿಂದಾದ ಪ್ರಮಾದವೊಮ್ಮೆ ಹೇಳಬೇಕಿತ್ತು
ಮೌನವಾಗುವ ಮುನ್ನ ನೀ ಮಾತಾಗಬೇಕಿತ್ತು
ಮನದೊಳಗಿನ ಕೋಪ ಹೊರಹಾಕಬೇಕಿತ್ತು
ಒಲ್ಲದ ಮನಸಿಂದಾದರೂ ಮನಸಾರೆ ಜರಿಯಬೇಕಿತ್ತು

ಸ್ನೇಹವದು ಸುಳ್ಳಾಗಿತ್ತೇ?
ಬಾಂಧವ್ಯವದು ಹುಸಿಯಾಗಿತ್ತೇ ?
ಕಾಳಜಿಯದು ಕಲ್ಪನೆಯಾಗಿತ್ತೇ?
ಅನುಬಂಧವದು ಕನಸಾಗಿತ್ತೇ ?
ಮನದುಂಬಿ ಬರುವ ಪ್ರಶ್ನೆಗಳ ಸುರಿಮಳೆ
ಮನತುಂಬಿ ಬರುವ ಕಣ್ಣೀರ ಹೊಳೆ
ನಿನ್ನದೊಂದು ಮೌನ ನನ್ನಷ್ಟೂ ಪ್ರಶ್ನೆಗಳಿಗೆ ಉತ್ತರವೇ ?
ಕಂಬನಿಯು ಕಳವಳಿಸುತಿದ್ದರೂ ನೀ ನಿರುತ್ತರವೇ ?


2 thoughts on “ವಾಣಿ ಯಡಹಳ್ಳಿಮಠ ಅವರಕವಿತೆ-ನೀ ನಿರುತ್ತರವೇ

Leave a Reply

Back To Top