ಕಾವ್ಯ ಸಂಗಾತಿ
ಎಚ್.ಗೋಪಾಲಕೃಷ್ಣ
ಸುದ್ದಿ ಬ್ರಹ್ಮರು
![](https://sangaati.in/wp-content/uploads/2025/02/download-4-3.jpg)
ವಾರ್ತೆಗಳು
ಪತ್ರಿಕೆಗಳಲ್ಲಿ, ಟಿವಿ ಗಳಲ್ಲಿ
ವಾರ್ತೆಗಳು
ರೋಚಕ ಸುದ್ದಿಗಳು
ಮೈನವಿರೇಳಿಸುವ
ಜೀವೋದ್ಧಾರಕಗಳು
ವೈವಿಧ್ಯದವು ಏಕತಾನತೆ
ಮುರಿದವು ಸಕಲರನ್ನೂ
ಎಲ್ಲಾ ಕಾಲಕ್ಕೂ ಸೆಳೆದು
ಹಿಡಿವ ಆತ್ಮ ವಿಶ್ವಾಸದಿಂದ
ಕುಣಿದು ಕುಪ್ಪಳಿಸುವ
ತುಣುಕುಗಳು ಮಿಣುಕುಗಳು
ಕ್ಷಣ ಮಾತ್ರ ಜೀವಿಸುವ ಜಂತುಗಳು
ಶರ್ಮಿಳಾ ಸೀರೆ ಉಟ್ಟಳು
ಊರ್ಮಿಳಾ ಲಂಗ ತೊಟ್ಟಳು
ಮಾಂಡ್ರೆ ತಿಲಕ ಇಟ್ಟಳು
ಅನುಷ್ಕಾ ಚಳಿಗೆ ಮೈ ಬಿಟ್ಟಳು
ವಿರಾಟ ಗಡ್ಡ ಬಿಟ್ಟ
ಪರಶು ರಾಮ ಗಡ್ಡ ಕಿತ್ತ
ಸಿಂಗಪ್ಪ ಸ್ವೆಟರ್ ತೊಟ್ಟ
ಅಂಶುಮಾನ ಹೆಂಡತಿ ಬಿಟ್ಟ
ಕೇಶಿ ಸ್ನಾನ ಮಾಡಿದ
ಸಿದ್ದು ಮೂತಿ ಒರೆಸಿದ
ಕರ್ಗೆ ಮುದ್ದೆ ಉಂಡ
ರಘು ಬಿಸಿಬೇಳೆ ಬಾತು ತಿಂದ
ಅಹಾ ಹಾಹಾ ಎಂತೆಂಥ
ಎಂತಹ ರೋಚಕ ಸುದ್ದಿಗಳು
ಸುದ್ದಿ ಸೃಷ್ಟಿಯ ಬ್ರಹ್ಮರು
ಅಕ್ಷರ ಮಾಲೆ ಅಳಿದರೆ ಇವರ ಬದುಕು ಬರಡು
ಅಳಿಯದಿರಲಿ ಉತ್ಸಾಹ
ಹುಟ್ಟುತಲಿರಲಿ ರಕ್ತ
ಮಾಂಸ ಮೂಳೆ ರಹಿತ
ಜೀವವೂ ಇಲ್ಲದ ಸುದ್ದಿಗಳು
ಬರಡಾಗದಿರಲಿ
ಸುದ್ದಿಬ್ರಹ್ಮನ ಬುರುಡೆ…
ಸಾವಿಲ್ಲದಿರಲಿ ಸುದ್ದಿ ಬ್ರಹ್ಮರಿಗೆ
ಚಿರಂಜೀವಿಗಳಾಗಲಿ
ಸಾವಿರ ಹತ್ತುಸಾವಿರ
ಲಕ್ಷ ಹತ್ತು ಲಕ್ಷ ಊಹೂಂ ಕೋಟಿ
ಕೋಟಿ ವರ್ಷ ಬಾಳಲಿ
ಸುದ್ದಿ ಸೃಷ್ಟಿ ಬ್ರಹ್ಮರು
ಎಚ್.ಗೋಪಾಲಕೃಷ್ಣ
![](https://sangaati.in/wp-content/uploads/2025/02/gopalk-461x1024.jpg)