ವರದೇಂದ್ರ ಕೆ ಮಸ್ಕಿ ಅವರ ಕವಿತೆ-ಭಾವದುಂಬಿ

ಹೃದಯದುಂಬಿ ಮಾತನಾಡಲು ಬಂದೆ
ಸೋನೆ ಮಳೆಯ ನೆನೆದು ನಿಂದೆ
ಒಲವ ಸುಧೆಯ ಹೃದಯ ದನಿಗೆ
ಮಂಜಾದೆ ನಿನ್ನ ಪ್ರೇಮಕೆ ಕರಗಲೆಂದೆ

ಮಮತೆಯ ವೀಣೆಯ ರಾಗಕೆ
ಭಾವದುಂಬಿದೆ ಹೊಸ ಕಾವ್ಯ,
ಸ ರಿ ಗ ಮ ಪ ನಿನಾದದ ಹಾಡಿನ ಲಹರಿಗೆ,
ನೀನಿಂತೆ ಶೃತಿ ಪೆಟ್ಟಿಗೆ ತುಂಬ

ನೋಡುವ ನೋಟಕೆ ನಾ ವಶವಾದೆ
ಮುತ್ತು ರತ್ನಗಳ ದನಿಗೆ ನಶೆಯಾದೆ
ಸುರಿದ ಒಲವ ಪಸೆ ಅರುವ ಮುನ್ನ
ನವಿರಾದ ಸಂಗಮಕೆ ಮನವ ತಂದೆ

ಕಣ್ಣಾಡಿಸಿ ಕಳ್ಳಾಟ ಆಡಿದ್ದು ನೀನು
ತೀಕ್ಷ್ಣತೆಗೆ ಸಿಕ್ಕು ನಾಪತ್ತೆಯಾಗಿದ್ದು ನಾನು
ಒಂದು, ಎರಡು, ಮೂರಾದರೆ ಸಿಗುತ್ತಿರಲಿಲ್ಲ
ಅಂತ್ಯವಿಲ್ಲದ ತುಂಟಾಟಕೆ ಮೋಹಗೊಂಡೆ

ಬಂದೆ ಎಂದು ಬೀಗಿದರೆ ಮಾಯವಾದೆ
ಮರೆಯಾದ ದಿಗಿಲಿಗೆ ಬಿಕ್ಕಲು, ಜೇನಾದೆ
ಸವಿಯಲು ಹೊರಟ ದುಂಬಿಯ ಮನಕೆ
ನಾಕದ ಅಮೃತ ಹೊಕ್ಕ ನೀ ಸಿಹಿಯಾದೆ

ಸೋನೆ ಮಳೆಯೋ ಜೇನ ಹನಿಯೋ
ಮೋಹ ಮಾತ್ರ ಎದೆಗೆ ಸವಿಸವಿಯೋ
ನಾ ನಿನ್ನ ವಶವೋ, ನನಮನಕೆ ನಿಶೆಯೋ
ಪ್ರೇಮ ಪರವಶ ಮಾತ್ರ ಆಮ್ರ ಸಿಹಿಸವಿಯೋ


Leave a Reply

Back To Top