ಹಮೀದಾಬೇಗಂ ದೇಸಾಯಿ ಅವರ ಕವಿತೆ-ಮರುಳ ಜೀವ..

ಈ ಜೀವ ,
ಜೀವನ ಜಂಜಡದಿ
ತೊಳಲಾಡುತಿದೆ..
ಕನಸುಗಳ ಕಾಣುತಲಿ
ಭ್ರಮೆಯಲಡಗಿದೆ..
ತಾನೇ ನೇಯ್ದ
ಮಿಥ್ಯ ಬಲೆಯಲಿ ಬಂದಿಯಾಗಿದೆ..

ಒಳಗಿರಲು ಆಗದೆ
ಹೊರಬರಲು ತೋರದೆ
ರೆಕ್ಕೆ ಕತ್ತರಿಸಿದ ಹಕ್ಕಿಯಾಗಿದೆ
ತತ್ತರಿಸಿ ದಿಕ್ಕುಗಾಣದೆ..

ಕ್ಷಣಿಕ ಆಸೆಗೆ ಬೆರಗಾಗಿ
ಕೃತಕ ಹೊಳಪಿಗೆ ಬೆರಗಾಗಿ
ಇಂದ್ರಚಾಪದ ರಂಗಿಗೆ
ಸೋತು ಶರಣಾಗಿ
ಕಿತ್ತಿಟ್ಟಿದೆ ನೆಟ್ಟ ಹೆಜ್ಜೆಗಳ
ನಿರಾಧಾರ ಬೇರುಗಳಂತೆ…

ಬೆರಕೆ ಸುಖದಲಿ ಬೆರೆತು
ತನ್ನತನವನೇ ಮರೆತು
ಮಲಿನಗೊಂಡಿಹ ಮೈ-ಮನ
ಚೈತನ್ಯ ಶೂನ್ಯವಾಗಿದೆ…

ವಿವೇಕ ಎಚ್ಚೆತ್ತಾಗ
ಮೂಢತೆಗೆ ಮರುಗಿತ್ತು
ತನಗೆ ತಾನೇ ನಾಚಿ
ಈ ಮರುಳ ಜೀವ…

ತಾ ಮುಳುಗಿದುದು
ಅಂಧಕಾರ ಕೂಪದಲಿ
ಎಂದರಿವಾದಾಗ
ಆತ್ಮ ಕಣ್ತೆರೆದು
ಬಂಧನವ ಬಿಡಿಸಿತ್ತು..
ಜೀವನದ ಬಲೆ ಹರಿದು
ಜೀವ ಬಯಲಾಯ್ತು
ಅನಂತ ಬಯಲಿನಲಿ…ಅನನ್ಯ ಶಾಂತಿಯಲಿ…


4 thoughts on “ಹಮೀದಾಬೇಗಂ ದೇಸಾಯಿ ಅವರ ಕವಿತೆ-ಮರುಳ ಜೀವ..

  1. ವಿವೇಕಸೌಖ್ಯ! ಬಯಲಲ್ಲಿ ಬಯಲಾಗಿಯೇ ನೆಮ್ಮದಿ.
    ಚೆನ್ನಾಗಿದೆ,ಮೇಡಮ್.

Leave a Reply

Back To Top