ಜಯಶ್ರೀ ಎಸ್ ಪಾಟೀಲ ಧಾರವಾಡ ಅವರ ಕವಿತೆ-“ಯಾರ ಸೊಸಿ ಹೆಚ್ಚು”

ಏನ್ ಮಾಡಾಕತ್ತೀಯ ಎಕ್ಕಾ
ನಿನ್ನ ಸೊಸಿ ಬಾಳದಾಳ ಪಕ್ಕಾ
ಏನೂ ಬಾರಾಂಗಿಲ್ಲಾಂತ ಲೆಕ್ಕಾ
ಆದರೂ ಚೆಂದ ಆಡ್ತಾಳ ಚಕ್ಕಾ

ನೀ ಹೀಂಗ ಹೇಳತಿರ್ತಿ ಹೇಳ್ಕೊ
ನಿನ್ನ ಸೊಸೀನ್ನ ಮೊದ್ಲ ನೋಡ್ಕೊ
ಬಾಳ ಚಾಲೂ ಅದಾಳ ಎಳ್ಕೊ
ನಿನ್ನ ಮುಂದ ಗೌರಮ್ಮ ತಿಳ್ಕೊ

ದಿನಾಲು ತಟ್ಟತಾಳ ಬುಟ್ಟಿ ರೊಟ್ಟಿ
ತುಂಬಿಸ್ತಾಳ ಮನಿ ಮಂದಿ ಹೊಟ್ಟಿ
ಕೆಲಸಾ ಮಾಡಾಕಂತು ಬಾಳ ಗಟ್ಟಿ
ಆಕೀಗ ಬಯ್ದ ಆಗೂದಿಲ್ಲ ಖೊಟ್ಟಿ

ನನ್ನ ಸೊಸೀನು ಶ್ಯಾಣ್ಯಾ ಅದಾಳ
ನೂರ ಕೊಡ ಭಾವಿ ನೀರ ತರ್ತಾಳ
ಹೊಲಕ್ಕ ಹೋಗಿ ಕಳೆ ತಗೀತಾಳ
ದನಕರುಗಳಿಗೆ ಮೇವು ಹಾಕತಾಳ

ಹಬ್ಬದ ಅಡಗಿ ಛಲೋ ಮಾಡ್ತಾಳ
ಬ್ಯಾಳಿಗೆ ಹಾಕಿ ಹೋಳಗಿ ಮಾಡ್ತಾಳ
ಚಟ್ನಿ ಪಲ್ಯ ಸಾರು ರುಚಿ ಮಾಡ್ತಾಳ
ನೂರ ಮಂದಿಗೆ ಊಟಾ ಬಡಿಸ್ತಾಳ

ಅಡಗಿ ಮಾಡೋದು ಅಷ್ಟ ಅಲ್ಲ
ಪಾಠಾನೂ ಹೇಳ್ತಾಳ ಮಕ್ಕಳಿಗೆಲ್ಲ
ಹಾಡು ನೃತ್ಯ ನಾಟಕ ರೂಪಕ ಎಲ್ಲ
ಹೇಳೀಗ ಲೆಕ್ಕಾ ಹೆಂಗ ಬರಾಂಗಿಲ್ಲ

ಯಾರ ಸೊಸಿ ಹೆಚ್ಚು ಬಿಡು ಎಕ್ಕಾ
ನಿನ್ನ ಸೊಸಿ ಜಾಣಿ ಅದಾಳ ಪಕ್ಕಾ
ಇಲ್ಲ ಅವಳಲ್ಲಿ ಒಂದಿಷ್ಟೂ ಸೊಕ್ಕಾ
ನಿಮ್ಮಿಬ್ಬರ ಪ್ರೀತಿ ವಿಶ್ವಾಸ ಚೊಕ್ಕಾ


Leave a Reply

Back To Top