ಗುಲ್ಬರ್ಗದ ಕೊಳಗೇರಿಯಲ್ಲಿ ತರಕಾರಿ ಮಾರುತ್ತಿದ್ದ ಹೆಣ್ಣುಮಗಳನ್ನು ಆಕೆಯ ಗಂಡನೇ ಆ ದಿನ ರಾತ್ರಿ ಆಕೆಯ ಕೊರಳಿನ ತಾಳಿಯನ್ನು  ಕೊಡಲು ಕೇಳಿದ. ಇದ್ದುದು ಅದೊಂದೇ ಜೊತೆ ಚಿನ್ನದ ತಾಳಿ ಬೊಟ್ಟು. ಸಹಜವಾಗಿಯೇ ಸಂಪ್ರದಾಯಸ್ಥ ಮನಸ್ಥಿತಿಯ ಆ ಹೆಣ್ಣು ಮಗಳು ಕೊಂಚ ಹಿಂಜರಿದಾಗ ‘ಗಟ್ಟಿ ಗುಂಡು ಕಲ್ಲಿನಂಗ ನಾನ ಅದೀನಿ… ತಾಳಿ ಬೊಟ್ಟ ಮಾರಿದರೆ ನಿನ್ನ ಮಗಳ ಸಾಲಿ ಫೀಸ್ ಕಟ್ಟಾಕ ಬರ್ತೈತಿ’ ಎಂದು ಹೇಳಿದಾಗ ಮರು ಮಾತಿಲ್ಲದೆ ಕೊರಳ ತಾಳಿಯನ್ನು ಬಿಚ್ಚಿಕೊಟ್ಟ ಆಕೆ ಅರಿಶಿಣದ ಕೊಂಬನ್ನು ಕೊರಳಲ್ಲಿ ಧರಿಸಿದಳು.

 ಹೀಗೆ ಆಕೆಯಿಂದ ತಾಳಿಯ ಬೊಟ್ಟನ್ನು ಇಸಿದುಕೊಂಡು ಮಾರಿ ಮಗಳ ವೈದ್ಯಕೀಯ  ಕಾಲೇಜಿನ ಫೀಸ್ ಕಟ್ಟಿದವರು ಬಾಬುರಾವ್ ದೇಶಮಾನೆ ಮತ್ತು ಆ ವೈದ್ಯಕೀಯ ಪದವಿಯನ್ನು ಪಡೆದು ಸ್ನಾತಕೋತ್ತರ ವೈದ್ಯಕೀಯದಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸಕಳಾದ ಆ ಮಗಳೇ ನಮ್ಮ ಇಂದಿನ ಕಥೆಯ ಸ್ಫೂರ್ತಿ ದೇವತೆ ಡಾ. ವಿಜಯಲಕ್ಷ್ಮಿ ದೇಶಮಾನೆ.
ದೇಶಮಾನೆ ಎಂಬುದು ಅವರ ಮನೆತನದ ಅಡ್ಡ ಹೆಸರಲ್ಲ… ಅಂದಿನ ಕಾಲಕ್ಕೆ ತುಸು ಪ್ರಖರ ವಿಚಾರ ಧಾರೆಗಳನ್ನು ಹೊಂದಿದ ವೃತ್ತಿಯಿಂದ ಚಮ್ಮಾರರಾಗಿದ್ದು, ಗುಲ್ಬರ್ಗದ  ಎಸ್ ಕೆ ಮಿಲ್ ನ ಕೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಬುರಾವ್ ತರಕಾರಿ ಮಾರುತ್ತಿದ್ದ ಪತ್ನಿ ಮತ್ತು ಆರು ಮಕ್ಕಳೊಂದಿಗೆ ಗುಲ್ಬರ್ಗದ ಕೊಳಗೇರಿಯೊಂದರಲ್ಲಿ ವಾಸವಾಗಿದ್ದು ತಮ್ಮ ಜಾತಿ ಸೂಚಕವಾದ ಅಡ್ಡ ಹೆಸರನ್ನು ತೆಗೆದುಹಾಕಿ ದೇಶವೇ ಒಪ್ಪುವಂತಹ ಎಂಬ ಅಡ್ಡ ಹೆಸರನ್ನು ತಮ್ಮದಾಗಿಸಿಕೊಂಡವರು ಬಾಬುರಾವ್.

 ತಾಯಿ ತುಂಬಿ ಕೊಟ್ಟ ತರಕಾರಿಗಳನ್ನು ಶಾಲೆಗೆ ಹೋಗುವ ಮುನ್ನ ಹತ್ತಿರದ ಓಣಿಗಳಲ್ಲಿ ಮಾರಾಟ ಮಾಡಿ ಬರುವ ಮಕ್ಕಳು ಓದಿನಲ್ಲಿ ಅತ್ಯಂತ ಜಾಣರಾಗಿದ್ದರು, ಅದರಲ್ಲೂ ಹಿರಿಯ ಪುತ್ರಿ ವಿಜಯಲಕ್ಷ್ಮಿ ಶಾಲೆಗೆ ಪ್ರಥಮ ಸ್ಥಾನ ಪಡೆದು ಹತ್ತನೇ ತರಗತಿಯಲ್ಲಿ ಪಾಸಾಗಿದ್ದಳು. ಮುಂದೆ ಪಿಯುಸಿಯಲ್ಲಿ ಉತ್ತಮ ಅಂಕಗಳು ದೊರೆತಾಗ ಅನಾಯಾಸವಾಗಿ ಆಕೆಗೆ ಹುಬ್ಬಳ್ಳಿಯ ಕಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ
ದೊರೆಯಿತು. ವೈದ್ಯಕೀಯ ಕಾಲೇಜಿನ ವೆಚ್ಚವನ್ನು ಭರಿಸಲು ಪತ್ನಿಯ ತಾಳಿ ಬೊಟ್ಟನ್ನು ಮಾರಿದ ಬಾಬುರಾವ್  ಮಗಳ ಎಲ್ಲ ಪ್ರವೇಶ ಪ್ರಕ್ರಿಯೆಗಳನ್ನು
ಪೂರೈಸಿ ಆಕೆಯನ್ನು ಕಾಲೇಜಿನ ಹಾಸ್ಟೆಲ್ ನಲ್ಲಿ ಬಿಟ್ಟು ಹೋಗುವಾಗ ‘ನೋಡವಾ ಸಂಪ್ರದಾಯಸ್ಥ ಮನಸ್ಥಿತಿಯ ಹೆಣ್ಣು ಮಗಳು ನಿಮ್ಮವ್ವ.. ಅಕಿ ತಾಳಿ ಮಾರಿ ನಿನಗೂ ಓದಿಸಾಕ್ ಬಂದೀನಿ. ‘ನಂದು ನಿಂದು, ಇಡೀ ಮನೆತನದ ಮರ್ಯಾದೆ ನಿನ್ನ ಕೈಯಾಗ ಐತಿ ಚಂದಾಗಿ ಓದಿ ಮುಂದಕ್ಕೆ ಬಾ’ ಎಂದು ಹರಸಿ ಹೋದರು. ತಂದೆಯ ಮಾತನ್ನು ತಪಸ್ಸಿನಂತೆ ಸ್ವೀಕರಿಸಿ ಓದಿದ ಆ ಯುವತಿ ಹುಬ್ಬಳ್ಳಿಯ ಕಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ 1980 ರಲ್ಲಿ ತಮ್ಮ ವೈದ್ಯಕೀಯ ಪದವಿಯನ್ನು ಪಡೆದರು.

 ಮುಂದೆ ಬಳ್ಳಾರಿಯಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿಯನ್ನು ಆಕೆ ಕ್ಯಾನ್ಸರ ಕಾಯಿಲೆಯ ವಿಶೇಷ ಸರ್ಜನ್ ಆಗಿ ಪಡೆದುಕೊಂಡರು.  
ಹಳೆಯ ಚಪ್ಪಲಿಗಳನ್ನು ಹೊಲಿದು ಕೊಡುತ್ತಿದ್ದ ಹಿಂದುಳಿದ ಚಮ್ಮಾರ ಜನಾಂಗದ ತಂದೆಯ ಆಶಯದಂತೆ ಮಗಳು ತನ್ನ ಬಳಿ ಬರುವ ಕ್ಯಾನ್ಸರ್ ರೋಗಿಗಳ ಶಸ್ತ್ರಚಿಕಿತ್ಸೆ ಮಾಡಿ ಹೊಲಿಗೆಯನ್ನು ಹಾಕುವಲ್ಲಿ ಪರಿಣತಳಾದಳು.
 ಮುಂದೆ ಮುಂಬೈಯ ಟಾಟಾ ಮೆಮೋರಿಯಲ್ ಸೆಂಟರ್ ಮತ್ತು ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಕೇಂದ್ರಗಳಲ್ಲಿ ಸ್ತನ ಕ್ಯಾನ್ಸರ್ ನ ಶಸ್ತ್ರಚಿಕಿತ್ಸೆಯಲ್ಲಿ ಹೆಚ್ಚಿನ ತರಬೇತಿ ಪಡೆದರು.

 ಕಿದ್ವಾಯಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ನಲ್ಲಿ ಪ್ರೊಫೆಸರ್ ಆಗಿ ಸುಮಾರು 30 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಡಾ.ವಿಜಯಲಕ್ಷ್ಮಿಯವರು ಕರ್ನಾಟಕ ರಾಜ್ಯದ ಕ್ಯಾನ್ಸರ್ ಸೊಸೈಟಿಯ ಅಧ್ಯಕ್ಷರಾಗಿದ್ದರು. ಸಾರ್ವಜನಿಕರಲ್ಲಿ ಸ್ತನ ಕ್ಯಾನ್ಸರ್ ನ ಕುರಿತಾದ ಜಾಗೃತಿಯನ್ನು ಮೂಡಿಸುವಲ್ಲಿ ದೇಶಮಾನೆ ಅವರ ಪಾತ್ರ ಬಹಳ ಹಿರಿದಾದದ್ದು.  ಡಾ. ವಿಜಯಲಕ್ಷ್ಮಿ ಅವರು ತಮ್ಮ ವೃತ್ತಿ ಜೀವನಕ್ಕೆ ವ್ಯತ್ಯಯವಾಗದಿರಲೆಂದು ವೈವಾಹಿಕ ಬದುಕನ್ನು ನಿರಾಕರಿಸಿ ತಮ್ಮಿಡೀ ಜೀವನವನ್ನು ಕ್ಯಾನ್ಸರ್ ಚಿಕಿತ್ಸೆಗೆಂದೇ ಮುಡುಪಾಗಿಟ್ಟಿದ್ದಾರೆ. ಡಾಕ್ಟರ್ ದೇಶ ಮಾನೆಯವರ ಸೇವಾ ಮನೋಭಾವ ಮತ್ತು ವೃತ್ತಿ ಪರಿಣತಿಯನ್ನು ಕಂಡು ಭಾರತ ಸರ್ಕಾರದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಇನ್ಸ್ಪೆಕ್ಟರ್ ಆಗಿ ಅವರನ್ನು ನೇಮಕ ಮಾಡಲಾಯಿತು.
 ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ಮುಖ್ಯಸ್ಥೆಯಾಗಿ ಮುಂದೆ ಡೀನ್ ಅಗಿ
ಡಾ. ವಿಜಯಲಕ್ಷ್ಮಿ ದೇಶಮಾನೆಯವರು ಕಾರ್ಯನಿರ್ವಹಿಸಿ 2005ರಲ್ಲಿ ನಿವೃತ್ತಿ ಹೊಂದಿದರು.

 ನಿವೃತ್ತಿಯ ನಂತರವೂ ಅವರು ತಮ್ಮ ಜೀವನದ ಮಹತ್ವಾಕಾಂಕ್ಷೆಯ ಸೇವಾ ವಲಯದಲ್ಲಿ ಮುಂದುವರೆದು ಬೆಂಗಳೂರಿನ ಅಬಲಾಶ್ರಮದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 ತಮ್ಮ ಬಳಿ ಬರುವ ರೋಗಿಗಳನ್ನು ಮತ್ತು ಅವರ ಸಂಬಂಧಿಕರನ್ನು ಗೌರವಯುತವಾಗಿ ಕಾಣುವಂತೆ ಮತ್ತು ಮಾನವೀಯ ನೆಲೆಯಲ್ಲಿ ಅವರಿಗೆ ಚಿಕಿತ್ಸೆ ನೀಡುವಂತೆ ಯುವ ವೈದ್ಯರಿಗೆ ಸಲಹೆ ನೀಡುವ ಡಾಕ್ಟರ್ ವಿಜಯಲಕ್ಷ್ಮಿಯವರು ಇಂದಿಗೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು 2025ರ ಜನವರಿ 26 ಗಣರಾಜ್ಯೋತ್ಸವದ ಸಮಯದಲ್ಲಿ ನೀಡುವ ದೇಶದ ಮೂರನೇ ಅತ್ಯುನ್ನತ ಗೌರವ ಪ್ರಶಸ್ತಿ ಪದ್ಮಶ್ರೀಯನ್ನು ಸ್ವೀಕರಿಸಿದ್ದಾರೆ.
 ಆಕೆಯ ಸೇವಾ ಪರತೆ,ರೋಗಿಗಳ ಕುರಿತಾದ ಕಾಳಜಿ ಮತ್ತು ಶಸ್ತ್ರಚಿಕಿತ್ಸೆಯ ನೈಪುಣ್ಯತೆಗಳು ಇಂದಿನ ಯುವ ವೈದ್ಯರಿಗೆ ಮಾದರಿಯಾಗಿದ್ದು ಇಂತಹ ಹೆಣ್ಣು ಮಕ್ಕಳ ಸಂತತಿ ಸಾವಿರವಾಗಲಿ ಎಂದು ಆಶಿಸುವ


Leave a Reply

Back To Top