ಪುಸ್ತಕ ಸಂಗಾತಿ
ಅನಸೂಯ ಜಹಗೀರುದಾರ
ಅವರ ಕಥಾ ಸಂಕಲನ
“ಪರಿವರ್ತನೆ” ಕುರಿತ
ಒಂದು ಅವಲೋಕನ
ಎಂ ಆರ್ ಅನಸೂಯ ಅವರಿಂದ


ಕೃತಿ – ಪರಿವರ್ತನೆ
ಲೇಖಕರು – ಅನಸೂಯ ಜಹಗೀರುದಾರ
ಪ್ರಕಾಶನ : ಗುರು ಪ್ರಕಾಶನ , ಕೊಪ್ಪಳ
ಪುಟಗಳು : ೯೬
ಬೆಲೆ : ರೂ. ೧೨೦ / –
ಈ ಕೃತಿಯಲ್ಲಿ ಒಟ್ಟು ಹದಿನೈದು ಕಥೆಗಳಿವೆ. ಈ ಕಥೆಗಳ ಬಗ್ಗೆ ಓದುಗಳಾಗಿ ಬಗ್ಗೆ ನನ್ನ ಅನಿಸಿಕೆಗಳನ್ನು ಸಹೃದಯ ಓದುಗರ ಜೊತೆ ಹಂಚಿಕೊಳ್ಳ ಬಯಸುತ್ತೇನೆ .
೧. ‘ ಪರಿವರ್ತನೆ ‘
ಈ ಕಥೆಯಲ್ಲಿ ಹೆತ್ತೊಡಲು ತನ್ನ ಬೇಗುದಿಗಳನ್ನು ಮರೆತು ಕ್ಷಮಯಾ ಧರಿತ್ರಿಯಂತೆ ಮಗನೊಡನೆ ಬದುಕಲು ಹೊರಟು ನಿಂತ ತಾಯಿಯೊಬ್ಬಳ ಕಥೆ. ಆಡುಭಾಷೆಯ ಸೊಗಡಿನೊಡನೆ ಸಹಜತೆ ತಾನಾಗೇ ಮೂಡಿ ಬಂದಿದೆ.
೨. ‘ ಬರಿದಾದ ಬದುಕು ‘
ಇಲ್ಲಿ ಅಜ್ಜಿ ಮೊಮ್ಮಗಳ ಪ್ರೀತಿಯ ಬಂಧನದಲ್ಲಿ ಮೊಮ್ಮಗಳು ದೂರವಾಗುವ ಸಮಯದಲ್ಲಿ ಅಜ್ಜಿಯ ಮಾನಸಿಕ ತುಮುಲ ವಾಸ್ತವಿಕ ನೆಲೆಯಲ್ಲಿ ಚಿತ್ರಿತವಾಗಿದೆ
೩. ‘ ವಾಸ್ತವ ‘
ಗಂಡನು ಭಾವನಾ ಲೋಕದಲ್ಲಿ ವಿಹರಿಸುವ ಜೀವಿಯಾದರೆ , ಹೆಂಡತಿ ಕಟು ವಾಸ್ತವ ಲೋಕದವಳು. ವಾಸ್ತವ ನೆಲೆಯಲ್ಲಿ ಬದುಕುತ್ತಿದ್ದವಳು ಭಾವುಕ ಗಂಡನೊಂದಿಗೆ ಹೇಗೆ ಬಾಳಿದಳು ಎಂಬುದನ್ನು ತಿಳಿಯಲು ಓದುಗರು ಕೃತಿಯನ್ನು ಓದಬೇಕು.
೪. ‘ ಗೆಳೆತನದಾಲದಡಿಯಲ್ಲಿ ‘
ದುರ್ಯೋಧನ, ಭಾನುಮತಿ ಹಾಗೂ ಕರ್ಣನ ನಡುವೆ ಇದ್ದ ನಿಷ್ಕಲ್ಮಶ ಗೆಳೆತನದ ಹೋಲಿಕೆಯಲ್ಲಿ ಇಂದಿನ ಸ್ನೇಹಿತರಿಬ್ಬರು ಹಾಗೂ ಗೆಳೆಯನ ಹೆಂಡತಿಯ ನಡುವಿನ ಸ್ನೇಹವನ್ನು ಅದೇ ರೀತಿಯ ಸನ್ನಿವೇಶದೊಡನೆ ಸಮೀಕರಿಸಿರುವುದು ವಾಸ್ತವಕ್ಕೆ ದೂರವಾಗಿದೆ ಎಂದು ಓದುಗರಿಗೆ ಅನ್ನಿಸುವುದರ ಜೊತೆಗೆ ಈ ಕಾಲದಲ್ಲೂ ಇಂತಹ ಸ್ನೇಹವಿರುವುದೇ ಎಂಬ ಅಚ್ಚರಿಯು ಮೂಡದೆ ಇರದು.
೫. ‘ ಸುಟ್ಟು ಹೋದ ಸತ್ಯ ‘
ಸಾಲದ ಉರುಳಿಗೆ ಸಿಕ್ಕು ಸಾಲ ಕೊಟ್ಟವನ ದುರಾಸೆ ಮತ್ತು ಕುತಂತ್ರದಿಂದ ಪ್ರಾಣ ಮತ್ತು ಹಣ ಎರಡನ್ನೂ ಕಳೆದುಕೊಂಡ ದುರ್ದೈವಿಯ ಕಥೆ .
೬. ಚರಿತ್ರೆಯಲ್ಲಿ ಹುದುಗಿದವರು
ಸಮಾಜಕ್ಕೆ , ಕುಟುಂಬಕ್ಕೆ ಹೆದರಿ , ಕೋಮುಗಳಿಗೆ ಹೆದರಿ ತನ್ನ ಪ್ರೇಮವನ್ನು ದೂರಮಾಡಿದ ಹೆಣ್ಣೊಬ್ಬಳ ಮಾನಸಿಕ ವೇದನೆ ಚಿತ್ರಿತವಾಗಿದೆ. ಇಲ್ಲಿ ಬರುವ ಕೆಳಗಿನ ಮಾತು ಗಮನಾರ್ಹ — ರಾಜಕೀಯ ಚದುರಂಗದಾಟದಲ್ಲಿ ನಾಯಕರೆಲ್ಲ ಸುರಕ್ಷಿತರೇ ! ಬದಲಾಗಿ ಸೈನಿಕ ಕಾಯಿಗಳು ಇಲ್ಲವಾಗುತ್ತವೆ. ನಿರ್ನಾಮ ಆಗುತ್ತವೆ. ಧರ್ಮ – ಭೇದವಿಲ್ಲದೆ ಅಸುನೀಗಿದ ಇಂಥವರು ಚರಿತ್ರೆಯಲ್ಲಿ ಲೀನವಾಗುತ್ತಾರೆ.
೭. ಆ ಮುಖ ಮತ್ತು ಗೋಚರ
“ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ” ಎಂಬ ಹೇಳಿಕೆಗೆ ಸೂಕ್ತವಾದ ಈ ಕಥೆಗಳು ಸಹಜ ಸುಂದರವಾಗಿಯೇ ಮೂಡಿ ಬಂದಿವೆ.
೮. ಆ ದೃಶ್ಯ
ವೈವಾಹಿಕ ಜೀವನದಲ್ಲಿ ಎಲ್ಲಾ ಇದ್ದೂ ಇಲ್ಲದ ಹನಿ ಪ್ರೀತಿಗಾಗಿ ಹಂಬಲಿಸಿದ ಹೆಣ್ಣಿನ ಮನದ ಸೂಕ್ಷ್ಮತೆಗಳ ಚಿತ್ರಣ ಓದುಗರಿಗೆ ಆಪ್ತವಾಗುತ್ತದೆ.
೯. ಗುಂಡಿನ ಟಿಕ್ಕಿ
ಅತ್ತೆ ಪಾರವ್ವಳ ಬಗ್ಗೆ ತಪ್ಪು ತಿಳಿದ ಸೊಸೆ ಶಾಂತಿಯ ಮನಸ್ಥಿತಿ ಅತ್ತೆಯ ಮರಣಾನಂತರ ಬದಲಾಗಲು ಕಾರಣವೇನೆಂದು ತಿಳಿಯುವ ಕುತೂಹಲವನ್ನು ಓದುಗರ ಪಾಲಿಗೆ ಬಿಡುತ್ತೇನೆ.
೧೦. ತೇಜೋಮಯಿ ಮಾಯಿ
ಕುಟುಂಬದ ಪ್ರೀತಿಯ ಆಸರೆ ದೊರಕದ ವೃದ್ಧ ಮಾತೆಯು ಒಂದು ವೃದ್ಧಾಶ್ರಮಕ್ಕೆ ತಾಯಿಯಾಗಿ ಬದುಕಿ ಸಾರ್ಥಕ್ಯವನ್ನು ಕಂಡುಕೊಂಡ ಹೃದಯಸ್ಪರ್ಶಿ ಕಥೆ.
೧೧.ಪಡೆದದ್ದು
ಗಂಡು ಮಗುವಿಗಾಗಿ ಹಂಬಲಿಸಿದ ಗಂಡನೊಬ್ಬ ಮಗುವಿಗೆ ಜನ್ಮ ಕೊಡುವ ವೇಳೆ ಹೆಂಡತಿಯು ತೀರಿಕೊಂಡಾಗ ತಾನು ಪಡೆದಿದ್ದೇನೆಂದು ಚಿಂತಿಸುವ ಮನಸ್ಥಿತಿ ಇಲ್ಲಿದೆ.
೧೨. ಕಾಳಿಕಾ
ಮೂಢನಂಬಿಕೆಗಳಿಗೆ ಬಲಿಯಾಗಬೇಕಿದ್ದ ಕುಟುಂಬವನ್ನು ತನ್ನ ಸತತ ಪ್ರಯತ್ನಗಳಿಂದ ಹೊರತರುವಲ್ಲಿ ಯಶಸ್ವಿಯಾದ ಶಿಕ್ಷಕಿಯೊಬ್ಬಳ ಕಥೆ ನೆನೆಪಿನಾಳದಲ್ಲಿ ಉಳಿಯುತ್ತದೆ.ಉತ್ತಮ ಸಂದೇಶವುಳ್ಳ ಕಥೆ.
೧೩. ನೆರಳು ಮತ್ತು ಬೆಳಕು
ಆತ್ಮೀಯರಲ್ಲಿ ಉಂಟಾಗುವ ತಪ್ಪು ತಿಳುವಳಿಕೆಯಿಂದಾಗುವ ಅನರ್ಥಗಳನ್ನು ಕುರಿತು ವಾಸ್ತವಿಕ ನೆಲೆಗಟ್ಟಿನಲ್ಲಿರುವ ಈ ಕಥೆಗಿಟ್ಟಿರುವ ಶೀರ್ಷಿಕೆಯು ಸಮಂಜಸವಾಗಿದೆ.
1೪. ಆತ್ಮ ಹೇಳಿದ ಕಥೆ
ಗಂಡನ ದಬ್ಬಾಳಿಕೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯ ಆತ್ಮ ನಿವೇದನೆಯ ಕಥೆ. ಹೊಸತನದ ಕಥಾವಸ್ತು ಓದುಗರಲ್ಲೂ ಜಿಜ್ಞಾಸೆ ಹುಟ್ಟಿಸುತ್ತದೆ.
ಇಲ್ಲಿನ ಬಹುಪಾಲು ಕಥೆಗಳು ಸ್ತ್ರೀ ಕೇಂದ್ರಿತವಾಗಿದ್ದು ಹೆಣ್ಣಿನ ವಿವಿಧ ಮುಖಗಳ ಪಾತ್ರ ಚಿತ್ರಣದಲ್ಲಿ ಲೇಖಕಿಯು ಸಫಲತೆ ಹೊಂದಿದ್ದಾರೆ. ವಿಭಿನ್ನ ಕಥಾವಸ್ತುಗಳ ಆಯ್ಕೆಯಲ್ಲಿಯೂ ಸೈ ಎನಿಸಿಕೊಳ್ಳುತ್ತಾರೆ. ಕಥನ ಕಟ್ಟುವ ಶೈಲಿಯಿಂದ ಸರಾಗವಾಗಿ ಓದಿಸಿಕೊಂಡು ಹೋಗುವ ಈ ಕೃತಿಯು ಲೇಖಕಿಯ ಬಗ್ಗೆ ಓದುಗರಲ್ಲಿ ಇನ್ನಷ್ಟು ನಿರೀಕ್ಷೆಗಳನ್ನು ಮೂಡಿಸುತ್ತದೆ.
ಎಮ್.ಆರ್.ಅನಸೂಯ
