“ಅಂಪಾಯರ್ ಅಮ್ಮ…. ಫೆಮಿಲಿ ರೂಲ್ಸು”‌ ಬಾನುವಾರದ ವಿಶೇಷ ಲೇಖನ ಪ್ರೇಮಾ‌ ಟಿ ಎಂ ಆರ್

ನಿತ್ಯದ ಉಡುಗೆ ಒಂಚೂರು ಬಿಗಿಯಾಗತೊಡಗಿತ್ತು. ಎಷ್ಟೊಂದು ದಿನಗಳಾಗಿ ಹೋಗಿದ್ದವು ಬೆಳಗಿನ ನಡಿಗೆ ತಪ್ಪಿಸಿಕೊಂಡು. ಮದುವೆ ಮುಂಜಿ ಸಮಾರಂಭಗಳ ಗದ್ದಲದಲ್ಲಿ ಒಂದು ಸುತ್ತು ದಪ್ಪಗಾಗಿ ಬಿಟ್ಟಿದ್ದೆ. ಧತ್ತೇರೀಕೆ, ಇದು ಹೀಗೇ ಬಿಟ್ರೆ ಮತ್ತೆ ಎಲ್ಲ ಬಟ್ಟೆಗಳ ಹೊಲಿಗೆ ಬಿಚ್ಚಿಕೊಳ್ಳೋ ಖರ್ಮ ಅನ್ನಿಸಿದಾಗ ಮೊದಲಿನ ರಾತ್ರಿ ಶೂ ಹೊರಗೆಳೆದು ಕೊಡವುತ್ತಾ ನಾಳೆಯಿಂದ ಬೆಳಗಿನ  ವಾಕ್ ಹೋಗ್ತೇನೇರೀ ಎಂದೆ.. ಈ ಚಳೀಲಿ ಯಾಕ್ಬೇಕಿತ್ತು? ಮುಸ್ಸಂಜೆ  ಹೋಗೋಕೇನಾಗಿದೆ..?  ರೋಡಲ್ಲಿ ಎಷ್ಟೊಂದು ನಾಯಿಗಳು.  ಅದೂ ಇದೂ ಲಟ್ಟೆ ಪಟ್ಟೆ ಅಂತ ಶುರು ಮಾಡಿದರು. ಇದೆಲ್ಲ ತಮ್ಮ ಬೆಳಗಿನ ನಿದ್ದೆಗೆ ಅಡಚಣೆಯಾಗದಿರಲಿ ಎಂಬ ಆಶಯದೊಂದಿಗೆ ಎಂಬುದು ನನಗೆ ಗೊತ್ತು. ನಿಮಗೆ ಡಿಸ್ಟರ್ಬ್ ಮಾಡಲ್ಲ ಬಿಡಿ. ನಾನು ಲೊಕ್ ಮಾಡ್ಕೊಂಡು ಹೋಗ್ತೇನೆ ಎಂದೆ. ಮತ್ತೆ ಮಾತಾಡದೇ ಎದ್ದು ಹೋದರೆಂದರೆ ಅಸಹಕಾರವೇ ಎಂದು ಗೊತ್ತು.
        ನಿತ್ಯ ಏಳು ಗಂಟೆಗೆ ಏಳುವ ದಿನಚರಿಗೆ ಬದಲಾಗಿ ಅಲಾರಾಂ‌ ಆರು ಗಂಟೆಗೆ ಸೆಟ್ ಮಾಡಿದೆ. ಆರುವರೆಗೆಲ್ಲ ಶೂಸು ಬಿಗಿದು ರಸ್ತೆಗಿಳಿಯಲು ಶುರು ಮಾಡಿದೆ. ಆದಿನ ಡಿ.ಸಿ ಒಫೀಸ್ ಎದುರಿನ ಹೈವೇ ಮೇಲಿನ ವೇ ಬ್ರಿಜ್ ಕೆಳಗಿಂದ ನುಸುಳಿ ಕಡಲದಂಡೆಯಂಚಿನ ಡ್ರೈವ್ ಇನ್ ಕ್ರಾಸ್ ಗೆ ತಿರುಗಿಕೊಳ್ಳುತ್ತಿದ್ದೆ. ಮಯೂರವರ್ಮ್ ವೇದಿಕೆಯ ಹಿಂದುಗಡೆಯ ವಿಶಾಲ ಅಂಗಳದಲ್ಲಿ ಒಂದು ಕ್ರಿಕೆಟ್ ಟೀಮ್ ಹಾಸಿಕಂಡಿತ್ತು. ಅಪ್ಪ  ಬ್ಯಾಟ್ ಹಿಡಿದಿದ್ದರು. ಹಿರಿ ಮಗ ಅನ್ಸುತ್ತೆ , ಬಾಲ ಹಿಡಿದು ಜಸ್ಪ್ರೀತ್ ಬೂಮ್ರಾಹ್ ಥರ ಪೋಸುಕೊಟ್ಟು ನಿಂತಿದ್ದ. ಟ್ವಿನ್ಸ್ ಅನ್ನಿಸುವಂತೆ ಒಂದೇ ಥರ ಕಾಣುವ ಇಬ್ಬರು ಹರೆಯದ ಖಿಲಾಡಿಗಳು ಫೀಲ್ಡಿಂಗ್ ಮಾಡುತ್ತಿದ್ದರು. ಅವರ ಅಮ್ಮ ಇರ್ಬೇಕು, ತೊಟ್ಟ ದುಪಟ್ಟಾ ಸೊಂಟಕ್ಕೆ ಬಿಗಿದು ತಲೆಗೆ ಬಿಳಿ ಟೋಪಿ ಧರಿಸಿ ಅಂಪಾಯರ್ ಸ್ಟೈಲಲ್ಲಿ ನಿಂತಿದ್ದಳು.‌ ತುಸು ಹೊಟ್ಟೆ ಊದಿಕೊಂಡ ಚಂದದ ಬಸುರಿ ಹೆಣ್ಣು ದೂರದ ಕಟ್ಟೆಯ ಮೇಲೆ ಕೂತು ವೀಕ್ಷಿಸುತ್ತಿದ್ದಳು. ಸೊಸೆ ಇರಬಹುದು ಅಂದ್ಕೊಂಡೆ. ಹತ್ತು ಹೆಜ್ಜೆ ಮುಂದಕ್ಕೆ ಹೋಗಿ ಇನ್ನೇನು ಕಡಲದಂಡೆಗೆ ಇಳಿಯಬೇಕು ಅನ್ನುವಷ್ಟರಲ್ಲಿ ಕೈಯಲ್ಲಿನ ಫೋನ್ ಹೊಡೆದುಕೊಂಡಿತು.
      ಮಗನ ಕಾಲ್.. “ಸೊರಿ ಮಾ, ನಿನ್ನೆ ರಾತ್ರಿ ಕಾಲ್ ಮಾಡೋಕೆ ಆಗ್ಲಿಲ್ಲ , ಹೇಳಿದ್ನಲ್ಲ ಹೊಸ ಪ್ರೊಜೆಕ್ಟ್ ಲಾಂಚ್ ಆಗ್ತಾ ಇದೆ, ರಾತ್ರಿಯೆಲ್ಲ ನಿದ್ದೆಯಿಲ್ಲ. ಈಗ ನಿದ್ದೆ ಮಾಡ್ತೇನೆ” ಅಂದ. ಅಲ್ಲಿ ದೊಡ್ಡ ಮಗ ಓಡಿ ಬಂದು ಬಾಲ್ ಎಸೆದ್ರೆ ಬ್ಯಾಟಿಂಗ್ ಮಾಡುತ್ತಿದ್ದ ಅಪ್ಪ ಬ್ಯಾಟ್ ಬೀಸಿದ ವೇಗಕ್ಕೆ ಮೂರು ಸ್ಟಂಪ್ ಉರುಳಿ ಬಿದ್ದಿತ್ತು.. ಕ್ಲೀನ್ ಬೋಲ್ಡ್ ಎಂದು ಬೊಬ್ಬೆ ಹೊಡೆಯುತ್ತಾ ದೊಡ್ಡ ಮಗ ಕುಣಿದಾಡುತ್ತಿದ್ದ. (ನನ್ಮಗನಿಗೆ ಕ್ರಿಕೆಟ್ ಅಂದ್ರೆ ಜೀವ.. ಸಿಕ್ಕ ಗೌವರ್ನಮೆಂಟ್ ಮೆಡಿಕಲ್ ಸೀಟು ಬಿಟ್ಟು ಇಂಟರ್ನೆಶನಲ್ ಕ್ರಿಕೆಟಿಗನಾಗುವ ಕನಸಲ್ಲಿ ಇಂಜಿನಿಯರಿಂಗ್ ಸೇರಿದ್ದು ಹಳೆಮಾತು. ರಣಜಿ ಸಿಲೆಕ್ಷನ್ ಗೆ ಆಡಿ ಅಲ್ಲಿನ ಲಾಬಿಗೆ ಬೇಸತ್ತು ಬಿಇ ಕಾಲೇಜ್ ಟೀಮ್ ಕೆಪ್ಟನ್ ಆಗಿ ಇಷ್ಟು ಸಾಕು ಎಂದು ಎಂಬಿಎ ಜೊಯ್ನ ಆದವ)” ಮಗಾ ಒಂದ್ನಿಮಿಷ ನಿಲ್ಲು, ನಿನಗೊಂದು ಮಜಾ ತೋರಿಸ್ತೇನೆ” ಅಂತ ವಿಡಿಯೋ ಕಾಲ್ ಹಚ್ಚಿದೆ. “ಮಗಾ ಸುಮ್ನೆ ನೋಡ್ತಾ ಇರು. ಮಾತಾಡ್ಬೇಡ”  ಅಂದೆ. ಎರಡು ನಿಮಿಷ ಏನೋ ಯೋಚಿಸುವಂತೆ ನಿಂತೇ ಇದ್ದ ಅಮ್ಮ, ಕೈಯ್ಯೆತ್ತಿ ನೊಟ್ ವಟ್ ಎಂದು ತನ್ನ ತೀರ್ಮಾನ ಕೊಟ್ಟೇ ಬಿಟ್ಲು. ಬೌಲರ್ ಕೋಪದಿಂದ ಕುಣಿದಾಡತೊಡಗಿದ, “ಏನಮ್ಮಾ ನೀನು ಫಸ್ಟ್ ಬಾಲ್ ಗೆ ಅಪ್ಪ ಕ್ಯಾಚ್ ಔಟು. ನಿನ್ನ ಕಣ್ಸನ್ನೆ ನೋಡಿ ಈ ಕೋತಿ ಹಿಡಿದ ಬಾಲ್ನ ಬೇಕೆಂತಲೇ ಬೀಳಿಸಿದ್ದು . ( ತಮ್ಮನ ಕಿವಿ ಹಿಂಡಿದ ) ಈಗ್ಹೇಳು, ಇದು ಔಟ್ ಹೌದೋ ಅಲ್ವೋ. ಮೊದಲ್ನೇ ಬಾಲ್ ಗೆ ಔಟ್ ಡಿಕ್ಲೆರ್ ಮಾಡೋಕಾಗಲ್ಲ ಅಂದಿದ್ದಕ್ಕೆ. ನಾನು ಹೋಗ್ಲಿಬಿಡು ಅಂತ ಸುಮ್ನಾದೆ. ಅಪ್ಪ ಎರಡ್ನೇ ಬಾಲ್ ಗೆ  ಕ್ಲೀನ್ ಬೌಲ್ಡ್.. ನೀನೋಡಿದ್ರೆ ನಾಟ್ ಔಟ್ ಅಂತೀಯಾ. ಏನಮ್ಮಾ ಇದು ನಿನ್ನಂತ ಅಂಪಾಯರ್ಸ್ ಇದ್ರೆ ಕ್ರಿಕೆಟ್ ಮಟಾಶ್” ಅಂತ ಬೊಬ್ಬೆ ಹೊಡೆದ.. ನನ್ನ ಖರ್ಮ, ಮಾತನಾಡುವ ನಟನೆ ಮಾಡುತ್ತ ಮಗನಿಗೆ ಕ್ರಕೆಟ್ ಮ್ಯಾಚ್ ಮಜಾ ತೋರಿಸುತ್ತಿದ್ದ ನನ್ನ ನೋಡಿ ಹುಡುಗ , “ಎಕ್ಸಕ್ಯೂಸ್ ಮಿ ಆಂಟಿ, ಸ್ವಲ್ಪ ಬನ್ನಿ ಇಲ್ಲಿ” ಎಂದು ಗೌರವದಿಂದ ಕರೆದ.. ಒಂದು ಕ್ಷಣ ನಾನು ಕಕ್ಕಾಬಿಕ್ಕಿ.. ಮಗನಿಗೆ ಕ್ರಿಕೆಟ್ ಮ್ಯಾಚ್ ತೋರಿಸುತ್ತಿದ್ದ ಗುಟ್ಟು ಬಿಟ್ಡುಕೊಡದೇ ಏನೂ ಗೊತ್ತಿಲ್ಲದವಳ ಹಾಗೇ ನಡೆದುಬಂದೆ. ಅಪ್ಪ ಎರಡು ಬಾಲ್ ಗೆ ಎರಡು ಬಾರಿ ಔಟಗಿದ್ದನ್ನು ಅಮ್ಮ ನೊಟ್ ಔಟ್ ಎಂದುದನ್ನು ತೋಡಿಕೊಂಡ.. ನನ್ನದು ಸೆಕೆಂಡ್ ಅಂಪಾಯರ್ ಕೆಲ್ಸ್. “ನೋಡು ಕಂದಾ, ನಂಗೇನೂ ಈ ಕ್ರಿಕೆಟ್ ಬಗ್ಗೆ ಅಷ್ಟೊಂದು ಗೊತ್ತಿಲ್ಲಪ್ಪಾ. ಒಂದ್ ಕೆಲ್ಸ ಮಾಡು, ಅಲ್ಲಿ ನಿನ್ ಹೆಣ್ತಿ ಕೂತಿದ್ದಾಳಲ್ಲ ಅವ್ಳನ್ನು ಕರ್ದು ಕೇಳು” ಅಂದೆ. ಇಬ್ಬರು ಕಿರುಬರು ಓಡಿಹೋಗಿ ಅತ್ತಿಗೆಯನ್ನು ಕೈಹಿಡಿದು ನಡೆಸಿಕೊಂಡು ಬಂದರು. ಬಂದವಳು ಒಂದು ಕ್ಷಣ ಮಾವನ ಮುಖವನ್ನು ಸಂಗಾತಿ ಮುಖವನ್ನು ನೋಡಿದವಳು ಸಣ್ಣಗೆ ನಕ್ಕು “ಗಿರಿ, ಪಪ್ಪ ನೊಟ್ ಔಟು. ಫಸ್ಟ್ ಒವರ್ ಲ್ಲಿ ಪಪ್ಪಂಗೆ  ಔಟ ಕೊಡೋ ಹಾಗಿಲ್ಲ. ಆದ್ರೆ ನಿನ್ಗೆ ಆರೂಲ್ ಅಪ್ಲೈ ಆಗಲ್ಲ,  ತಿಳ್ಕೋ”  ಅಂದ್ಲು ಗಂಭಿರವಾಗಿ.. ಕ್ಷಣ ಕಕ್ಕಾಬಿಕ್ಕಿಯಾದೆ. ಕೋಪಗೊಂಡ  ಬೌಲರ್ ಕೈಯ್ಯೆತ್ತುವಷ್ಟರಲ್ಲಿ ಅವಳು ಅತ್ತೆಯ ಬೆನ್ನಿಗೆ ಜಾರಿಕೊಂಡಿದ್ದಳು. ನಾನು ಫೈಟ್ ಮುಗಿಸುವ ರೀತಿಯಲ್ಲಿ “ನೋಡಪ್ಪಾ ಫೆಮಿಲಿ ಕ್ರಿಕೆಟ್ ಗೆ ಇದೇ ರೂಲ್ಸು” ಎಂದು ಕೊನೆ ತೀರ್ಮಾನ ಕೊಟ್ಟು ಅಲ್ಲಿಂದ ಜಾರಿಕೊಂಡೆ.. ಹುಡುಗ ಕ್ಯಾಚ ಹಿಡಿದು, ಬಾಲ್ ಸಮೇತ ಬೌಂಡರಿ ಲೈನ್ ಹೊರಗೆ ನಿಂತವನಂತೆ ತಲೆಮೇಲೆ ಕೈ ಹೊತ್ತು ನಿಂತಿದ್ದ.
    ‌‌ಹತ್ತು ಹೆಜ್ಜೆ ನಡೆದು ಕಡಲ ದಂಡೆಗಿಳಿಯುತ್ತಿದ್ದಂತೆ ಇಷ್ಟೊತ್ತು ಉಸಿರು ಬಿಗಿದುಕೊಂಡಿದ್ದ ಮಗ ಹೋಹೋಹೋ ಎಂದು ನಗುತ್ತಿದ್ದ. ನನಗೆ ಅವನ ಮುಖದಲ್ಲಿ ಈ ನಗು ಬೇಕಿತ್ತು.. ಇಡೀ ರಾತ್ರಿ ಲೆಪ್ಟೊಪ್ ಎದುರು ಕೂತ  ಮಗ ಆ ಒತ್ತಡದಿಂದ ಈಚೆ ಬಂದರೆ ಸುಖ ನಿದ್ದೆಗೆ ಜಾರುತ್ತಾನೆಂಬ ನೆಮ್ಮದಿ… “ನೀನೂ ತುಂಬಾ ಜೋರಿದ್ದೀಯಾ ಅಮ್ಮಾ, ಇಂಡಿಯಾದಲ್ಲಿ ಫೆಮಿಲಿ ಕ್ರಿಕೆಟ್ ಹೊಸ ರೂಲ್ಸು ಜಾರಿ ಮಾಡ್ಬಿಟ್ಟೆ” ಎಂದು ಮತ್ತೊಮ್ಮೆ ಹಃಹಃಹಃ ಎಂದ. “ನಾನು ನೀನು ಆಡುವಾಗ ಈ ರೂಲ್ಸ್  ಅಪ್ಲೈ ಆಗಲ್ಲ ನೋಡು. ಓನ್ಲಿ ಫಸ್ಟ್ ಬಾಲ್ ಗೆ  ಔಟಿಲ್ಲ” ನೆನಪಿಟ್ಕೊ” ಅಂದ. ಮಗ ಮನೆಗೆ ಬಂದಾಗ ನಾವೂನು ಹೀಗೇ ಬೆಟ್ ಬಾಲ್ ಹಿಡಿಯುವದಿದೆ.. ಆಗೆಲ್ಲ “ಹೋಗಮ್ಮಾ ನೀನು ಯಾವಾಗ್ಲೂ ಅನ್ಯಾಯದ ಆಟ ಆಡ್ತೀಯಾ..” ಎನ್ನುವದು ಮಗನ ತಕರಾರು.
ಸರಿ ನೀ ನಿದ್ದೆ ಮಾಡು ಎಂದು ಹೆಜ್ಜೆಯ ವೇಗ ಹೆಚ್ಚಿಸಿದೆ…. 
         ತಲೆಯಲ್ಲಿ ವೀಕ್ಷಿಸಿದ ಕ್ರಿಕೆಟ್ ಮೆಚ್ ಮತ್ತೆ ಮತ್ತೆ ಸುತ್ತಿ ಉಮೇದಿ ಹೆಚ್ಚಿಸಿತ್ತು… ಶನಿವಾರ ರವಿವಾರ ವೀಕ್ ಎಂಡ್ ಗಳಲ್ಲಿ ಮನೆಯೆದುರಿನ ಬೀದಿಯಲ್ಲಿ ಪುಟ್ಟದೊಂದು ಕ್ರಿಕೆಟ್ ತಂಡ ಮುಸ್ಸಂಜೆ ಹೀಗೇ ಹಾಸಿಕೊಳ್ಳುತ್ತದೆ. ಇಶಾನ್, ಅಯಾನ್, ರುದ್ರ, ಶ್ರೀರಾಮ್, ವೇದಾಂಶ ಇನ್ನೂ ಯಾರ್ಯಾರೋ… ಇವರ ಸಿಕ್ಸ್ ಬಂದು ಬೀಳುವದು ನನ್ನ ಗಾರ್ಡನ್ನಿನಲ್ಲಿ. ಇವರೊಟ್ಟಿಗೆ ಒಬ್ಬಳೇ ಒಬ್ಬಳು ಹುಡುಗಿ ಇವರ ಟೀಂ ಗೆ ಇತ್ತೀಚೆಗೆ ಜೊಯ್ನ ಆಗಿದ್ದಾಳೆ. ನಾಲ್ಕು ವರ್ಷ ಇರಬಹುದು. ಇದ್ದಿದ್ದರಲ್ಲಿ ರುದ್ರ ಮಹಾ ಖಿಲಾಡಿ, ಪೋಖರಿ.. ಆ ಪುಟ್ಟ ಚಿನ್ನಮ್ಮನನ್ನು ಮೊದಲ ಬಾಲ್ ಗೆ ಔಟ್ ಕೊಟ್ಟು ಫೀಲ್ಡಿಂಗ್ ಗೆ ಅಟ್ಟಿ ಬಿಡ್ತಾನೆ… ಆಗೆಲ್ಲಾ ನಾನು ಕ್ರೀಸಿಗೆ ಇಳಿಯಲೇ ಬೇಕಾಗುತ್ತದೆ… “ನೋಡಿ ಆ ಹುಡ್ಗಿಗೆ ನೀವು ಫಸ್ಟ್ ಬಾಲ್ಗೆ ಔಟ್ ಕೊಡ್ಬಾರ್ದು ಸರೀನಾ.? ಹಾಗಿದ್ರೆ ಮಾತ್ರ ಒಳಗೆ ಬಂದು ಬಾಲ್ ಹುಡ್ಕಿ ಇಲ್ದಿದ್ರೆ ವಾಪಸ್ ಹೋಗಿ” ಅಂತ ಧಮಕಿ ಹಾಕಿದ್ಮೇಲೇನೆ ಆ ಹುಡ್ಗಿಗೆ ಒಂದಷ್ಟು ಛಾನ್ಸ್ ಸಿಗ್ತಿರೋದು… ಇನ್ಮುಂದೆ ಇಲ್ಲಿನ ಫೆಮಿಲಿ ರೂಲ್ಸು ಅಲ್ಲಿ ಹೇರಿಬಿಡೋದು ಅಂದ್ಕೊಂಡಾಗ ಒಳಗೊಳಗೆ ನಗು ಉಕ್ಕರಿಸಿತು… ಹೋ ಎಂದು ನಗುವಂತಿಲ್ಲ ನೂರಾರು ಜನ ನಡೆಯುವ ಜಾಗ.. ಉಕ್ಕಿದ ನಗುವಿಗೆ ಲಗಾಮು ಬಿಗಿದು ಹೆಜ್ಜೆ ವೇಗಹೆಚ್ಚಿಸಿದೆ…. ಹಿಂತಿರುಗಿ ಬರುವಾಗ ಅದೇ ಟೀಮು.. ಅತ್ತೆ ಸೊಸೆ ವಾಕ್ ಮಾಡ್ತಿದ್ದಾರೆ.. ಕಿರುಬರು ಬಾಡಿ ಬಿಲ್ಡರ್ ತರ ಏನೇನೋ ಸರ್ಕಸ್ ಮಾಡ್ತಿದ್ದಾರೆ.. ಬೆಟ್ಸ್ಮನ ಬೌಲರ್ ಅಪ್ಪ ಮಗ ಹೆಗಲ ಮೇಲೆ ಕೈಹಾಕಿಕೊಂಡು ಯಾವುದೋ ಮಾತಿಗೆ ನಗುತ್ತಿದ್ದಾರೆ. ಹೆಲ್ದಿ ಫೆಮಿಲಿ ಉಸುರಿತು ಮನ.
          ಮನೋವೇಗದಲ್ಲಿ ಮುನ್ನಡೆಯುತ್ತಿರುವ ಟೆಕ್ನೊಲಜಿ, ಅನಾರೋಗ್ಯಕರ ಸ್ಪರ್ಧಾತ್ಮಕ ಜಗತ್ತು, ದುಡ್ಡಿನ ಮೋಹಕ್ಕೆ ಬಿದ್ದ ಯುವ ಜನಾಂಗ, ಸಮಯ ಮೀರಿ ದುಡಿಸಿಕೊಳ್ಳುವ ಕಣ್ಣಲ್ಲಿ ರಕ್ತವೇ ಇಲ್ಲದ ಬಹು ರಾಷ್ಟ್ರೀಯ ಕಂಪನಿಗಳು… ಒಟ್ಟಿನಲ್ಲಿ ಕುಟುಂಬವೆಂಬ ಚಂದದ ಪ್ರಪಂಚವನ್ನು ನಾನು, ನನ್ ಹೆಣ್ತಿ, ನನ್ ಮಕ್ಳು ಎಂದು ತ್ರಿಕೋನವಾಗಿಸಿಕೊಂಡ ಈ ಜನರೇಶನ್ನಿನ ಕಾಲದಲ್ಲಿ ಇಂತಹ ಕುಟುಂಬಗಳ ಸಂತತಿ ಹೆಚ್ಚಲಿ ಎಂದು ಮನ ಮಿಡಿಯುತ್ತಿತ್ತು……


One thought on ““ಅಂಪಾಯರ್ ಅಮ್ಮ…. ಫೆಮಿಲಿ ರೂಲ್ಸು”‌ ಬಾನುವಾರದ ವಿಶೇಷ ಲೇಖನ ಪ್ರೇಮಾ‌ ಟಿ ಎಂ ಆರ್

Leave a Reply

Back To Top