ಶಕುಂತಲಾ ಎಫ್ ಕೋಣನವರ ಅವರ ಕವಿತೆ-ಕಳೆದು ಹೋದ ಚಂದಿರ

ಕಾಯುತ್ತಲೇ ಇರುವಳು ಕರುಳ ಬಸಿದವಳು
ನಾಳೆ ಹೊಸ ಬೆಳಕು ಬಂದೀತೆಂದು…
ಹುಡುಕುತ್ತಲೇ ಇರುವಳು
ಮೋಜು ಮಸ್ತಿಯ ಕಡು ಕತ್ತಲಲ್ಲಿ ಕಳೆದುಹೋದ ಚಂದಿರನನ್ನು ..

ಅವನಿಗಾಗೇ ತೆತ್ತಿರುವಳೆಲ್ಲವನು
‌‌ಮೈತುಂಬ ಒಡವೆಯಿಟ್ಟು ನಲಿದವಳು
ಎಲೆಯುದುರಿದ ಮರವಾಗಿ ಹೊಸ ಚಿಗುರಿಗೆ ಬಾಯ್ತೆರೆದಿರುವಳು
ಕುಲದೀಪಕ ಬರಲೆಂದು ನಾಲ್ಕು ಹೆಣ್ಣು ಹೆತ್ತವಳು

ಕರುಳ ಮೇಲಿನ ಗಾಯದ ಹಕ್ಕಳೆಯನ್ನು ಕೀಳುತ್ತಲೇ ಇದ್ದಾನೆ
ಕೊಳ್ಳಿ ಇಟ್ಟವನು
ದಿನ ದಿನ ಹೊಸ ಹೊಸ ಕಗ್ಗಂಟಿನ ಸರಮಾಲೆಯನೇ ತಂದು ಸುರಿಯುತ್ತಲೇ ಇರುವನು

ಈಗೀಗ ಅವಳ ತುಟಿಯಂಚಿನಲಿ ಮಿಂಚುವ ನಗುವಿಗೆ ತುಕ್ಕು ಹಿಡಿದಂತಿದೆ
ಕಾಂತಿ ಸುರಿಸುವ ಕಂಣ್ಗೊಳವು ಕಂಬನಿಯೂ ಬರದಂತೆ ಬತ್ತಿಹೋಗಿವೆ
” ಇಂತಾ ಮಗನ್ ಕೊಡು ಅಂತಾ ಕೇಳಿದ್ನೇನು ಶಿವನೆ” ಎಂದು ದೂರುತ್ತಿರುವಳು
ಹರಕೆ ಹೊತ್ತು ಮಗನನ್ನು ಹೆತ್ತವಳು

Leave a Reply

Back To Top