![](https://sangaati.in/wp-content/uploads/2025/02/bannikoppa.jpg)
ಅಂಕಣ ಸಂಗಾತಿ
ಚಿಂತನೆಯ ಚಿಟ್ಟೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಮೂಢನಂಬಿಕೆಯಗಳ
ವಿವಿಧ ಮಜಲುಗಳು..
![](https://sangaati.in/wp-content/uploads/2025/02/download-13.jpg)
ನಮ್ಮ ಬದುಕಿನಲ್ಲಿ ಅನೇಕ ಆಚರಣೆಗಳು ಅರ್ಥಹೀನತೆಯಿಂದ ಕೂಡಿರುತ್ತವೆ. ಅವು ಪರಸ್ಪರ ಒಬ್ಬರನ್ನೊಬ್ಬರು ದ್ವೇಷಿಸುವ, ಹೀಯಾಳಿಸುವ, ಅವಮಾನಿಸುವ ಹಂತಕ್ಕೂ ಬಂದಿರುತ್ತವೆ. ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ, ಆಸ್ತಿಯ ವಿಷಯಕ್ಕೂ, ಹಣಕಾಸಿನ ವಿಷಯಕ್ಕೂ ಅಥವಾ ಯಾವುದೋ ವೈರುಧ್ಯತೆಗೆ ಸಣ್ಣ ಪುಟ್ಟ ಜಗಳ ಮಾಡಿಕೊಂಡವರು ತಮ್ಮ ವಿರೋಧಿಗಳನ್ನು ವಿರೋಧಿಸಲು, ಮಣಿಸಲು ಇವರು ಮಾಟ, ಮಂತ್ರ, ತಂತ್ರಗಳ ಮೊರೆಹೋಗುತ್ತಾರೆ.
ಇವುಗಳಿಂದ ಏನಾದರೂ ದುಷ್ಪಪರಿಣಾಮ ಬೀರುತ್ತವೆಯೇ..? ಬೀರಿದರೆ ಅದು ಮಾಟ ಮಂತ್ರದಿಂದಲೇ ಸಾಧ್ಯವಾ..? ಹಾಗೇ ನೋಡಿದರೆ, ನಿಜವಾಗಲೂ ಮಾಟ ಮಂತ್ರಗಳಿಂದ ಯಾವುದೇ ದುಷ್ಪಪರಿಣಾಮ ಆಗುವುದಿಲ್ಲ. ಆದರೆ ದುಷ್ಪರಿಣಾಮ ಬೀರುವ ಅನೇಕ ವೈದ್ಯಕೀಯ, ವೈಜ್ಞಾನಿಕ ವಸ್ತುಗಳನ್ನು ಬಳಸಿ ಪ್ರಯೋಗಿಸಿದರೆ ಮಾತ್ರ ದುಷ್ಪರಿಣಾಮ ಬೀರಬಹುದು. ಇದರಿಂದಾಗಿ ಕೆಲವು ವ್ಯಕ್ತಿಗಳನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸವಾಗುತ್ತದೆ. ಒಬ್ಬರಿಗೊಬ್ಬರು ಪ್ರೀತಿಯಿಂದ ಬಾಳಬೇಕಾದವರು ಪರಸ್ಪರ ದ್ವೇಷಿಸಲು ಪ್ರಾರಂಭಿಸುತ್ತಾರೆ.
![](https://sangaati.in/wp-content/uploads/2025/02/download-1-7.jpg)
ಅಂತಹ ಅನೇಕ ಮೂಢಾಚರಣೆಗಳನ್ನು ನೋಡಬಹುದು. ಮೂರು ಹಾದಿ ಕೂಡುವ ವೃತ್ತದಲ್ಲಿ ಮೊಟ್ಟೆ, ನಿಂಬೆಹಣ್ಣು, ಬಳೆ, ಕುಂಕುಮ, ವಿಭೂತಿ, ತಾಯ್ತತ…ಮುಂತಾದವುಗಳನ್ನು ಪೂಜಿಸಿ ಎಸೆಯುವುದನ್ನು ನಾವು ನೋಡಿರುತ್ತೇವೆ. ಬೆಕ್ಕು ಅಡ್ಡ ಬಂದಿದೆ ನಿಂತು ಹೋಗು, ತುಂಬಿದ ಕೊಡ ಬಂದಿದೆ ಒಳ್ಳೆಯದಾಗುತ್ತದೆ; ಖಾಲಿ ಕೊಡ ಬಂದರೆ ಕೆಟ್ಟದಾಗುತ್ತದೆ, ವಿಧವೆಯರು ನಮ್ಮೆದುರಿಗೆ ಬಂದರೆ ತುಂಬಾ ಕೆಟ್ಟದಾಗುತ್ತದೆ, ಕೆಲವು ಜನಾಂಗಗಳ ಜನರ ಮುಖವನ್ನು ಮುಂಜಾನೆ ನೋಡಿದರೆ ಅಶುಭವಾಗುತ್ತದೆ.. ಎನ್ನುವ ಇಂತಹ ಅನೇಕ ಅರ್ಥಹೀನ ಮಾತುಗಳನ್ನು ನಾವು ಸಮಾಜದಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ ಕೇಳುತ್ತಿರುತ್ತೇವೆ. ಈ ಮಾತುಗಳು ಹಳೆಯದೆನಿಸಿದರೂ ಕೂಡ ಗ್ರಾಮೀಣ ಮಟ್ಟದಲ್ಲಿ ಇಂದಿಗೂ ಬೇರೂರಿವೆ ಎನ್ನುವುದನ್ನು ನಾವು ಮರೆಯಬಾರದು.
ನಾವು ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದರೂ, ತಾಂತ್ರಿಕವಾಗಿ ಅನೇಕ ಸಂಶೋಧನೆಗಳನ್ನು ಮಾಡಿದರೂ, ನಮ್ಮ ಮನದೊಳಗೆ ಮೂಢನಂಬಿಕೆಗಳು ಮನೆಮಾಡಿಬಿಟ್ಟಿವೆ. ಇಂದಿಗೂ ಜನಸಾಮಾನ್ಯರು ಮತ್ತು ಮುಗ್ಧ ಜನರನ್ನು ಶೋಷಿಸುವ ಅನೇಕ ಮಂತ್ರವಾದಿಗಳನ್ನು, ತಂತ್ರವಾದಿಗಳನ್ನು, ಮಾಟ ಮಂತ್ರ ಮಾಡುವವರನ್ನು ನಾವು ನೋಡುತ್ತೇವೆ. ಎಷ್ಟೋ ಜನರು ಇವರಾಡುವ ಆಟಕ್ಕೆ ಬಲಿಯಾಗಿ ಆಸ್ತಿಪಾಸ್ತಿಯನ್ನು ಕಳೆದುಕೊಂಡವರು ಉಂಟು. ಅಷ್ಟೇ ಅಲ್ಲದೆ ಮುಂದೊಂದು ದಿನ ತಮಗೆ ಏನೋ ಕೆಟ್ಟದ್ದಾಗುತ್ತದೆ ಎನ್ನುವ ಋಣಾತ್ಮಕ ಅಂಶಗಳನ್ನು ಅಂತಹವರಿಂದ ಕೇಳಿ ಮಾನಸಿಕವಾಗಿ ಕುಗ್ಗಿದವರು ಉಂಟು. “ಭವಿಷ್ಯ ಯಾರ ಕೈಯಲ್ಲಿಲ್ಲ” ಜೀವನ ಬಂದಂತೆ ನಡೆದುಕೊಳ್ಳಬೇಕೆಂಬ ವಾಸ್ತವಿಕ ಸತ್ಯವನ್ನು ನಮ್ಮ ಜನರು ಇನ್ನೂ ಅರ್ಥಮಾಡಿಕೊಳ್ಳಲಿಲ್ಲ ಎನ್ನುವುದೇ ನೋವಿನ ಸಂಗತಿ. ಜನರ ಭವಿಷ್ಯ ಅವರಿಗೆ (ಮಂತ್ರವಾದಿಗಳಿಗೆ) ಗೊತ್ತಿದ್ದರೆ ಅವರ ಭವಿಷ್ಯ ಹಿಂಗೇಕೆ ಆಗುತ್ತಿತ್ತು..? ಇನ್ನೊಬ್ಬರ ಮುಂದೆ ಕೈಯೊಡ್ಡಿ ಹಣ ತೆಗೆದುಕೊಂಡು, ಕಪಟನಾಟಕ ಮಾಡುವ, ಮೋಸ ಮಾಡಿ ಇಲ್ಲಸಲ್ಲದ ಋಣಾತ್ಮಕ ಅಂಶಗಳನ್ನು ಬಿತ್ತುವ ಕೆಲಸದಲ್ಲಿ ತೊಡಗುತ್ತಿರಲಿಲ್ಲ.
![](https://sangaati.in/wp-content/uploads/2025/02/images-6.jpg)
ಇವರನ್ನು ಪೋಷಿಸುವ, ಬೆಳೆಸುವ, ಇವರಿಗೆ ವೇದಿಕೆ ಒದಗಿಸುವ, ಋಣಾತ್ಮಕ ಅಂಶಗಳನ್ನು ಬಿತ್ತರಿಸುವ ಅನೇಕ ಸುದ್ದಿ ಪತ್ರಿಕೆಗಳು, ಟಿವಿ ಮಾಧ್ಯಮಗಳು ಪ್ರೋತ್ಸಾಹಿಸಲು ತೊಡಗಿರುವುದು ದುರಂತ.
ಅತ್ಯಂತ ರಂಜನೀಯವಾಗಿ ದೊಡ್ಡ ಪ್ರಮಾಣದ ಹೆಡ್ ಲೈನ್ ಗಳೊಂದಿಗೆ, ಪುಂಕಾನುಪುಂಕವಾಗಿ ಚೀರಾಡುವ, ಒದರಾಡುವ ರೀತಿಯಲ್ಲಿ ಅವುಗಳನ್ನು ಪ್ರಸಾರ ಮಾಡುತ್ತವೆ.
ಜನರಲ್ಲಿ ಜಾಗೃತಿ ಮೂಡಿಸಬೇಕಾದ ಹೊಣೆಗಾರಿಕೆಯ ಅನೇಕ ಸಮೂಹ ಮಾಧ್ಯಮಗಳು ಇವತ್ತು ಅದರ ವಿರೋಧಿ ಮನೋಭಾವವನ್ನು ಬೆಳೆಸಿಕೊಳ್ಳುತ್ತಿವೆ. ಜನರಲ್ಲಿ ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಬೇಕಾದ ಅಗತ್ಯತೆ ಇಂದು ತುಂಬಾ ಇದೆ. ಇಲ್ಲದೆ ಹೋದರೆ ಮೂಢನಂಬಿಕೆಗಳಿಂದ ಅನೇಕ ಅನಾಹುತಗಳು ಆಗುವುದನ್ನು ನಾವು ನೋಡುತ್ತೇವೆ. ಮಕ್ಕಳನ್ನು ತೂರುವುದನ್ನು, ದುರಾಸೆಯಿಂದ ಮಕ್ಕಳನ್ನು ಬಲಿಕೊಡುವ, ವಾಮಾಚಾರ ಮಾಡಿ ಜನರನ್ನು ಹೆದರಿಸುವ, ಬೆದರಿಸುವ ಕಾಯಕದಲ್ಲಿ ತೊಡಗಿರುವವರನ್ನು ನಾವು ನೋಡುತ್ತೇವೆ.
ಇದರಿಂದ ಜನರನ್ನು ಜಾಗೃತಗೊಳಿಸಬೇಕಾದ ಅಗತ್ಯತೆ ಇಂದು ತುಂಬಾನೇ ಇದೆ. ಇದಕ್ಕಾಗಿ ಸರ್ಕಾರವು ಮೂಢನಂಬಿಕೆ ವಿರೋಧಿ ಮತ್ತು ವಾಮಾಚಾರ ವಿರೋಧಿ ಕಾನೂನುಗಳನ್ನು ತಂದಿದೆ. ಅದನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕಾದ ಕೆಲಸವಾಗಬೇಕಾಗಿದೆ. ಜನರಲ್ಲಿ ಜಾಗೃತಿ ಮೂಡಿಸಿ, ಯಾವುದು ಸತ್ಯ..? ಯಾವುದು ಮಿತ್ಯ..? ಯಾವುದು ವೈಜ್ಞಾನಿಕ ನಂಬಿಕೆಗೆ ಅರ್ಹವೋ ಅದನ್ನು ಮಾತ್ರ ನಾವು ಸ್ವೀಕರಿಸಬೇಕು. ಯಾವುದು ವೈಜ್ಞಾನಿಕವಾಗಿರುವುದಿಲ್ಲವೋ ಅದು ಮನುಷ್ಯನ ಮೇಲೆ ಮತ್ತು ಜೀವಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳುವಳಿಕೆ ನೀಡಬೇಕು. ಒಂದು ವೇಳೆ, ಸಮಾಜದಲ್ಲಿ ಮಾಟ ಮಂತ್ರದ ಹೆಸರಿನಲ್ಲಿ, ಕಂದಾಚಾರ, ವಾಮಾಚಾರದ ಹೆಸರಿನಲ್ಲಿ ತೊಡಗಿದವರನ್ನು ಯಾವುದೇ ಮುಲಾಜಿಲ್ಲದೆ ಕಾನೂನು ಬದ್ಧವಾಗಿ ಶಿಕ್ಷಿಸುವ,, ಅವರನ್ನು ಬಂಧಿಸುವ ವ್ಯವಸ್ಥೆ ಪೊಲೀಸ್ ಇಲಾಖೆಯಿಂದ ಆಗಬೇಕಾದ ತುರ್ತು ಅಗತ್ಯವಿದೆ. ಇಲ್ಲದೆ ಹೋದರೆ ಮೂಢನಂಬಿಕೆಗಳ ಪರಿಧಿಯೊಳಗೆ ಜನಸಾಮಾನ್ಯರು, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಮುಗ್ಧ ಜನರು ಬಲಿಯಾಗಿ, ತಮ್ಮ ಬದುಕನ್ನು ನಾಶ ಮಾಡಿಕೊಳ್ಳುತ್ತಾರೆ.
ನಮ್ಮ ಸುತ್ತಮುತ್ತಲಿರುವ ಅಕ್ಷರ ಜ್ಞಾನವನ್ನು ಹೊಂದಿರುವ ಅಲ್ಲದೆ ವೈಜ್ಞಾನಿಕ ಮನೋಭಾವವನ್ನು ಪಡೆದುಕೊಂಡಿರುವ ಜಾಗೃತ ಜನರು ತಮ್ಮ ಸುತ್ತಮುತ್ತಲಿನ ಮುಗ್ಧ ಜನರಿಗೆ ತಿಳಿ ಹೇಳುವ ತುರ್ತು ಕೆಲಸ ಮಾಡಬೇಕಾಗಿದೆ. ವಿವಿಧ ಮೂಢನಂಬಿಕೆಗಳಿಂದ ಮುಗ್ಧ ಮಕ್ಕಳು, ವಿಶೇಷವಾಗಿ ಮಹಿಳೆಯರು ಇದಕ್ಕೆ ಬಲಿಯಾಗುವುದನ್ನು ನಾವು ಕಾಣುತ್ತೇವೆ. ಎಲ್ಲಿಯವರೆಗೆ ನಾವು ವೈಜ್ಞಾನಿಕ ಸಮಾಜವನ್ನು ನಿರ್ಮಿಸುವುದಿಲ್ಲವೋ ; ಅಲ್ಲಿಯವರೆಗೆ ವೈಚಾರಿಕ ಸಮಾಜ ನಿರ್ಮಾಣ ಮಾಡಲು ಅಸಾಧ್ಯ..! ನಮ್ಮಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವದ ನಾಗರಿಕರನ್ನು, ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ಸರ್ಕಾರಗಳು ಎಷ್ಟೇ ಕಾನೂನು ತಂದರೂ, ಅದು ವ್ಯರ್ಥವಾಗುತ್ತದೆ. ಜನರು, ಜನರಲ್ಲಿನ ಮುಗ್ಧತೆ ಇನ್ನೊಬ್ಬರ ಕೈದಾಳವಾಗಿ ಇಲ್ಲವೇ ಕೈಗೊಂಬೆಯಾಗಿ ತೊಂದರೆಗೆ ಒಳಗಾಗುವುದನ್ನು ನಾವು ಕಾಣಬಹುದಾಗಿದೆ.
ಸ್ನೇಹಿತರೆ, ನಮ್ಮ ಕುಟುಂಬದಲ್ಲಿಯೋ ಅಥವಾ ನಮ್ಮ ಸುತ್ತಮುತ್ತಲಿನ ಕುಟುಂಬಗಳಲ್ಲಿಯೋ ಇಂತಹ ಅನೇಕ ಮೂಢ ನಂಬಿಕೆಗಳ ಆಚರಣೆಗಳು, ವಾಮಾಚಾರಗಳು, ಕಂದಾಚಾರಗಳು, ಆಚರಿಸುವುದನ್ನು ತಡೆಗಟ್ಟಬೇಕಾದ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರ ಜೊತೆಗೆ ತಾರ್ಕಿಕ ಮನೋಭಾವದಿಂದ ವೈಚಾರಿಕ ಮನೋಭಾವವನ್ನು ಬೆಳೆಸುವ ಪ್ರಯತ್ನವನ್ನು ಮಾಡೋಣ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
![](https://sangaati.in/wp-content/uploads/2025/01/bannikoppa-680x1024.jpg)