ರುದ್ರಾಗ್ನಿ ಅವರ ಕವಿತೆ-ಖರೀದಿ…

ಖರೀದಿ ಮಾಡಿದ
ಗುಲಾಬಿಗಳೆಲ್ಲಾ
ಕರಾರು ಮಾಡದೆ
ಅವನ ಕರಕ್ಕೆ
ಕೃತಜ್ಞತೆ ಹೇಳಿತ್ತು.

ಇಂದರಳಿ
ನಾಳೆ ಬಾಡುವ
ಹೂವಿನ ಸಂತೆಯನ್ನು
ಪ್ರೇಮ ದಿನಕ್ಕೆ
ಮೀಸಲಿಡದ
ಪ್ರೇಮಿ ನನ್ನವನು
ಎಂದು ಪದ ಕಟ್ಟಿತ್ತು.

ಕೈ ಪಿಡಿದು
ಬಾಳಿನ
ಪ್ರತಿ ಹೆಜ್ಜೆಗೂ
ಹೂಹಾಸಿದವನ
ಕಟ್ಟಿಕೊಂಡ ಕಥೆ ಹೇಳಿ ನಕ್ಕಿತ್ತು…

ಈ ದಿನಕ್ಕೆ ಬರೆದ
ಕವಿತೆಗೂ
ಹೂ ಘಮಲ
ಹೊತ್ತು ಅವನ
ಪ್ರೇಮ ತೇರ ಮೆರೆಸಿರುವೆ…

ಗುಲಾಬಿಗಿಂತ
ಘಮ್ ಎನ್ನುವ
ಮಲ್ಲಿಗೆಯ
ಪರಿಮಳ
ಮತ್ತೇರಿದ
ಮೊದಲ ರಾತ್ರಿ
ಮೊದಲ ಮುತ್ತು
ಮೊದಲ ಮಿಲನ
ಕಾಡುವುದು
ಪೂಜಿಸುವುದು
ಎನ್ನುವ ಸತ್ಯ
ಈ ಮಣ್ಣಿನ
ಮಹಾಕಾವ್ಯಕ್ಕೂ ತಿಳಿದಿತ್ತು…


Leave a Reply

Back To Top