ಮಧುಮಾಲತಿರುದ್ರೇಶ್ ಅವರ ಕವಿತೆ-ನಾನು ನಾನೆ

ನಾನು ನಾನಾಗಿದ್ದರಷ್ಟೇ ಸಾಕು ಜಗದಲಿ
ಬದುಕಲಾರೆ ಯಾರೇನೆನ್ನುವರೊ ಎಂಬ ಭ್ರಮೆಯಲಿ
ಪರರ ಅನುಕರಣೆಯನೆಂದೂ ಮಾಡಲಾರೆ
ನನ್ನ ತನವನೆಂದೂ ಬಿಟ್ಟು ಬಾಳಲಾರೆ

ಸಾಕೆನಗೆ ನಾನು ನಾನಾಗಿರುವುದು

ನಿತ್ಯವು ನವೀನತೆಯ ದಾಂಗುಡಿಯೊಳಗೆ
ಕಳೆದು ಹೋಗಲಾರೆ ಜಂಗುಳಿಯ ಸಂತೆಯೊಳಗೆ
ಬೆಳೆದ ಆಧುನಿಕತೆಯೊಂದಿಗೆ ಸಂಪ್ರದಾಯದ ಸಡಿಲಿಕೆ
ಆಗುತಿದೆ ಎಲ್ಲೆಲ್ಲೂ ಶಿಷ್ಟತೆಗಳಿಗೆ ಕುಣಿಕೆ

ನಾನು ನಾನಾಗಿದ್ದರಷ್ಟೇ ಸಾಕೆನಗೆ

ಹಾರ ತುರಾಯಿ ಪ್ರಶಸ್ತಿಯ ಬೆನ್ನೇರಿದವರ ನಡುವೆ
ಮೌನದಿ ಸಾಧನೆಯ ಹಾದಿಯಲಿ ಸಾಗಬೇಕೆಂದಿರುವೆ
ಆಪ್ತರಂತೆ ನಟಿಸಿ ಬೆನ್ನಿಗೆ ಚೂರಿಯಿರಿದವರಿಗೂ
ದ್ವೇಷಿಸದೆ ಸೈರಿಸಬೇಕೆನುವೆ ಒಳ ಹೊರಗೂ

ನಾನು ನಾನಾಗಿರುವುದೇ ಶ್ರೇಷ್ಠವೆನಗೆ


One thought on “ಮಧುಮಾಲತಿರುದ್ರೇಶ್ ಅವರ ಕವಿತೆ-ನಾನು ನಾನೆ

Leave a Reply

Back To Top