ಒಲ್ಲೆನಲು ಸಾಧ್ಯವೇ?ವಾಣಿ ಯಡಹಳ್ಳಿಮಠ ಅವರ ಕವಿತೆ

ಯಾರಿಲ್ಲದೆಯೂ ಬಾಳುವ ಈ ಬದುಕಿಗೆ
ಯಾರ್ಯಾರನೋ ಉಸಿರಾಗಿಸಿಕೊಂಡೆ
ಯಾರಿಲ್ಲದೆಯೂ ಸಾಗುವ ಈ ಪಯಣಕೆ
ಯಾರ್ಯಾರನೋ ಜೊತೆಗಾರರಾಗಿಸಿಕೊಂಡೆ

ಬೇಡೆಂದವರ ಬಳಿ ಸಾಗಿ ಬಂಧುವಾದೆ
ಒಲ್ಲೆಂದವರ ಒಲವ ಹನಿಗಾಗಿ ಮರುಭೂಮಿಯಾದೆ
ಮೂಕ ಜನರೆದುರು ಮಾತಿನ ಮಲ್ಲಿಗೆಯಾದೆ
ಭಾವುಕರಾಗದವರೆದುರು ಭಾವನೆಗಳ ಮಳೆಯಾದೆ
ಕಣ್ಮಣಿಯಾಗಲು ಹೋಗಿ ನಾ ಕಸವಾಗಿ ಹೋದೆ
ನಗಿಸಲು ಹೋಗಿ ನಾ ನಗೆಪಾಟಲಾಗಿ ಹೋದೆ

ಬಿಕ್ಕಳಿಸುತಿರುವ ಮನದ ಪರದಾಟ
ಕೆಳಗಿಳಿಯದ ಕಂಬನಿಯ ತಡಕಾಟ
ಒಡೆದೆದೆಯ ಚೂರುಗಳ ಹುಡುಕಾಟ
ಸಾಯುತಿರುವ ಸ್ವಾಭಿಮಾನದ ಹೆಣಗಾಟ

ಜೀವನವು ಕಲಿಸುತಿದೆ ನಿರಂತರ
ಬದುಕಿನ ಪಾಠಗಳು ನಿರಂತರ
ಒಲ್ಲೆನಲು ಸಾಧ್ಯವೇ?!
ಒಲ್ಲೆನಲು ಸಾಧ್ಯವೇ!?

Leave a Reply

Back To Top