ವೀಣಾ ನಿರಂಜನ ಅವರ ಕವಿತೆ-ʼಅವಳ ಸಂಜೆ ದಿನಚರಿʼ

ದಿನವೂ ಸಂಜೆಯಾದೊಡನೆ
ಆ ಕೊನೆಯ ದೊಡ್ಡ ಬಂಗಲೆಯ ಮಕ್ಕಳು
ಗೇಟು ದಾಟಿ ಹೊರಗಿಳಿಯುತ್ತಾರೆ
ಆಯಮ್ಮಳ ಜೊತೆಗೆ

ಪುಟ್ಟ ಮಗು ಗಾಲಿಕುರ್ಚಿಯಲ್ಲಿ
ದೊಡ್ಡ ಮಗು ಪುಟ್ಟ ಸೈಕಲ್ ಮೇಲೆ
ಪುಟ್ಟ ಮಗುವಿನ ಕುರ್ಚಿಯನ್ನು ತಳ್ಳುತ್ತ
ಅವಳು ಒಂದು ಕಣ್ಣಿಟ್ಟಿರುತ್ತಾಳೆ ದೊಡ್ಡ ಮಗುವಿನತ್ತ

ಸಂಜೆಯಾದೊಡನೆ ಪುಟ್ಟ ಕಂದ
ತಪ್ಪದೇ ತನ್ನ ಗಾಡಿಯ ಕಡೆಗೊಮ್ಮೆ
ಹೊರಗೊಮ್ಮೆ ನೋಡುತ್ತ ಆಯಮ್ಮಳಿಗೆ
ಸೂಚನೆ ಕೊಡುತ್ತದೆ ತನ್ನದೇ ಬಾಲ ಭಾಷೆಯಲ್ಲಿ

ಮಕ್ಕಳು ಹೊರಬೀಳುವಾಗ ದಿನವೂ
ಕಾರಿನಿಂದಿಳಿವ ಅಪ್ಪ ಅಮ್ಮ ಕಣ್ಣಿಂದಲೇ
ಮುದ್ದು ಮಾಡುತ್ತಾರೆ ಅಲ್ಲಿಂದಲೇ
ಕೈ ಬೀಸಿ ಮುತ್ತು ತೂರಿ ಬಿಡುತ್ತಾರೆ

ಪುಟ್ಟ ಮಗು ಸಂಭಾಷಣೆಗಿಳಿಯುತ್ತದೆ
ಆ ಊ ಎನ್ನುತ್ತ ತನ್ನ ತೊದಲ ಭಾಷೆಯಲ್ಲಿ
ಆಯಮ್ಮಳ ಜೊತೆಗೆ ಕೈಕಾಲು ಕುಣಿಸುತ್ತ
ಕತ್ತು ತಿರುಗಿಸಿ ಕಣ್ಣು ಮಿಟುಕಿಸುತ್ತದೆ

ತಲ್ಲೀನವಾಗುತ್ತ ಮಗುವಿನ ಜೊತೆಗೆ
ತಟ್ಟನೇ ನೆನಪಾಗುತ್ತದೆ ತನ್ನ ಪುಟ್ಟ ಕಂದ
ಅಳುತ್ತಿರ ಬಹುದೇ ಅಲ್ಲಿ ತನಗಾಗಿ
ಬೇಗ ಹೊರಡಬೇಕು ಇಲ್ಲಿಯ ಡ್ಯೂಟಿ ಮುಗಿಸಿ

ಕಣ್ಣು ತೇವವಾಗುತ್ತದೆ ನೆನೆದು
ಎದೆ ಭಾರವಾಗುತ್ತದೆ ಬೇಸರದಲ್ಲಿ
ಏನೆಂದರೆ ಏನೂ ಡ್ಯೂಟಿಯಾಗಬಹುದು
ಈ ಹೊತ್ತಲ್ಲಿ ಎಲ್ಲವೂ ಹೊಟ್ಟೆಪಾಡು


Leave a Reply

Back To Top