ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಹುಡುಕಾಟ
ಹಚ್ಚಿರುವೆ ದೀಪಗಳ ಆಗಸದ ತುಂಬ
ಉರಿಯುತಿದೆ ಸುತ್ತಲೂ ಶುಭ್ರವಾಗಿ
ಮುಚ್ಚಿರುವ ಕಣ್ಣು ರೆಪ್ಪೆಯೊಳಗಿನ ಬಿಂದು
ಹರಿಯುತಿದೆ ಕೆನ್ನೆಯಲಿ ಉಲ್ಕೆಯಾಗಿ
ಪರಿಧಿಯೊಳು ಬಂಧಿಸಿ ಬಿಗಿದು ಕಟ್ಟಿದೆ
ಅತ್ತಿತ್ತ ಹೊರಳದೆ ಸ್ಥಿರವಾಗಿರಲು
ಮುರಿಯುತಿದೆ ಮನಸು. ಸುತ್ತಿರಲು ಕನಸು
ಹೂತಿಟ್ಟ ಭಾವಗಳು ಕುಸಿದಿರಲು
ಯಾರು ಮಾಡಿದ ತಪ್ಪಿಗಾಗಿ ಶಿಕ್ಷೆ
ಇನ್ಯಾರಿಗೋ ಅರಿಯದ ಪರೀಕ್ಷೆ
ಬೇರು ಇಳಿದರೂ ಆಳಕೆ ಚಿಗುರಲಿಲ್ಲ
ಮರವು ಮೇಲಕೆ ಮತ್ತೆ ಬೆಳೆಯಲಿಲ್ಲ
ಆಸೆಯೆಂಬ ಮರೀಚಿಕೆಯ ಬೆನ್ನು ಹತ್ತದಿರು
ನಿರಾಸೆ ಕಟ್ಟಿಟ್ಟ ಬುತ್ತಿಯಂತೆ
ಆಕಾಂಕ್ಷೆ ಕಾಡುತ್ತಿರಲು ಎದೆಯೊಳಗೆ
ಸುಖದ ಹುಡುಕಾಟ ಬದುಕಿನೊಳಗೆ
ಅನುರಾಧಾ ರಾಜೀವ್ ಸುರತ್ಕಲ್