ಅಂಕಣ ಸಂಗಾತಿ
ಗಜಲ್ ಗಂಧ
ವೈ ಎಂ ಯಾಕೊಳ್ಳಿ
ವಾರದ ಗಜಲ್
ಪ್ರಭಾವತಿ ದೇಸಾಯಿ
ಲೌಕಿಕ ಪ್ರೇಮದಿಂದ
ಅಲೌಕಿಕ ಪ್ರೇಮಕ್ಕೆ ಬೆಳೆವ
ಪ್ರಭಾವತಿ ದೇಸಾಯಿಯವರ ಗಜಲ್
ಒಲವ ಮಾತಿನಲಿ ಬಂಧಿಸಿದ ಮಾತುಗಾರನ ಎಲ್ಲಿ ಹುಡುಕಲಿ
ನುಡಿ ವೀಣೆಗೆ ಮೌನ ಹೊದಿಸಿದ ಮೌನಗಾರನ ಲ್ಲಿ ಹುಡುಕಲಿ.
ಪ್ರೀತಿಯ ಸೋನೆ ಮಳೆ ಸುರಿಸಿ ನೀ ಎದೆ ಹೊಲದಲಿ ಹಸಿರು ಹುಟ್ಟಿಸಿದೆ
ಅಂಬರ ಬಯಲು ಒಂದಾಗಿಸಿದ ಕಲೆಗಾರನು ಎಲ್ಲಿ ಹುಡುಗ ಪಿ
ಮುಗಿಲಲಿ ಮೂಡಿದ ಕಾಮನ ಬಿಲ್ಲಿಗೆ ಗರಿ ಬಿಚ್ಚಿ ಗೆಲುವಲಿ ಕುಣಿಸಿದೆ
ಕಣ್ಣಲಿ ಕನಸುಗಳ ಮೂಡಿಸಿದ ಕನಸುಗಾರರನು ಎಲ್ಲಿ ಹುಡುಕಲಿ
ಹೆಜ್ಜೆಯ ನೂಪುರ ನಾದಕ್ಕೆ ಜಗವೇ ಮರುಳಾಗಿ ಮೈಮರೆಯಿತು
ಕಾಲ ಗೆಜ್ಜೆಯನು ಕಳಚಿದ ಮೃದಂಗಗಾರನನು ಎಲ್ಲಿ ಹುಡುಕಲಿ
ನುಡಿದಂತೆ ನಡೆಯುತ ಅಕ್ಕನನು ಒರೆಗೆ ಹಚ್ಚಿ ಜಗಕೆ ತೋರಿಸಿದೆ
ವಚನ ಅನುಭವವನು ಬರೆಸಿದ ಬೆಡಗುಗಾರನನು ಎಲ್ಲಿ ಹುಡುಕಲಿ
ಸೆರಗಿಗೆ ಅಂಟಿದ ಘಮದ ಸುಳಿಗೆ ಅವನನು ಸಿಲುಕಿಸಲಾ ಗದು ಪ್ರಭೆ
ಚೆಲುವ ಮಾಯೆಯನು ತ್ಯಜಿಸಿದ ಮಾಯೆಗಾರನನು ಎಲ್ಲಿ ಹುಡುಕಲಿ
ಪ್ರಭಾವತಿ ದೇಸಾಯಿ
—
ವಿಶ್ಲೇಷಣೆ
ವೈ ಎಂ ಯಾಕೊಳ್ಳಿ
” ನನ್ನ ದೃಷ್ಟಿಯಲ್ಲಿ ಗಜಲ್ ಎಂದರೆ ಧ್ಯಾನ, ಆತ್ಮಾ ನುಂಧಾನ . ನಮ್ಮನ್ನು ನಾವು ಅರಿತುಕೊ ಳ್ಳುವುದು . ಲೌಕಿಕ ಪ್ರೀತಿಯಿಂದ ಅಲೌಕಿಕ ಪ್ರೀತಿಯಲ್ಲಿ ಕೊನೆ ಗೊಳ್ಳುವುದು”
ಇದು ಪ್ರಭಾವತಿ ದೇಸಾಯಿಯವರ ದೃಷ್ಟಿಯಲ್ಲಿ ಗಜಲ್ ವ್ಯಾಖ್ಯೆ.
ಪ್ರೀತಿಯ ಹುಡುಕಾಟ ಇಂದು ನಿನ್ನೆಯದಲ್ಲ. ಅದ ಜಗತ್ತಿನ ಆರಂಭದಿಂದಲೇ ಶುರುವಾಗುತ್ತದೆ. ಪ್ರೀತಿಯಿಲ್ಲದೇ ಜಗತ್ತಿಲ್ಲ. ಅದಕ್ಕೆ ವಿಸ್ತಾರವಾದ ಅರ್ಥವಿದೆ. ಗಂಡು ಹೆಣ್ಣಿನ ಒಲವು ಎಂಬುದು ಪ್ರೀತಿಯಂಬ ಸಾಗರದ ಒಂದು ಕವಲು ಅಷ್ಟೇ. ಮನುಷ್ಯ ಮನುಷ್ಯರ ನಡುವೆ ಮಾತ್ರವಲ್ಲ ಜಗತ್ತಿನ ಎಲ್ಲ ವಸ್ತುಗಳ ನಡುವೆಯೂ, ಸಂಗತಿಗಳ ನಡುವೆಯೂ ಒಂದು ಪ್ರೀತಿ ಹರಿಯುತ್ತಿರುತ್ತದೆ, ಮುಂದುವರೆದಂತೆ ಅದು ದೈವದ ಮೇಲಿನ ಅಲೌಕಿಕಪ್ರೀತಿಯೂ ಆಗಿ ಕಾಣಿಸುತ್ತದೆ.
ವಯಸ್ಸಿನ ದೃಷ್ಟಿಯಿಂದ ಮಾತ್ರವಲ್ಲ, ಗಜಲ್ ಸಂಕಲನಗಳ ಪ್ರಕಟಣೆಯ ಸಂಖ್ಯಾ ದೃಷ್ಟಿಯಿಂದ , ಸತ್ವದ ದೃಷ್ಟಿಯಿಂದ ಗಜಲ್‌ನೊಡನ ಒಡನಾಟದ ದೃಷ್ಟಿಯಿಂದ , ಗಜಲ್ ನಲ್ಲಿ ಮಾಡುವ ಪ್ರಯೋಗಗಳ ದೃಷ್ಟಿಯಿಂದ ಸಮಕಾಲೀನ ಕನ್ನಡ ಗಜಲ್ ಕಾವ್ಯದ ಹಿರಿಯಕ್ಕ ವಿಜಯಪುರದ ಪ್ರಭಾವತಿ ದೇಸಾಯಿಯವರು. ಅವರನ್ನು ಗಜಲ್ ಲೋಕ ಪ್ರಭಾವತಿ ಅಮ್ಮನವರೆಂದೇ ಕರೆಯುತ್ತದೆ. ವಯಸು ಮಾತ್ರವಲ್ಲ; ಗಜಲ್ ಬರವಣಿಗೆ ಯಲ್ಲಿ ಅವರು ಮುಟ್ಟಿದ ಎತ್ತರ ಅವರನ್ನು ಗಜಲ್ ಕಾವ್ಯದ ಮುಂಚೂಣಿ ಕವಯಿತ್ರಿ ಯನನಾಗಿ ಮಾಡಿದೆ. ಒಂಬತ್ತು ಗಜಲ; ಸಮಕಲನಗಳನ್ನು ತಂದ ಇನ್ನೊಬ್ಬ ಗಜಲ್ಕಾರ/ ಗಜಲ್ಕಾರ್ತಿಯಂತೂ ಸಮಕಾಲೀನ ಕನ್ನಡದಲ್ಲಿಯಂತೂ ಇಲ್ಲ.
ಕೇವಲ ಗಜಲ್ ಕಾವ್ಯದ ಬರವಣಿಗೆ ಒಂದೇ ಅಲ್ಲ ಗಜಲ್ ವಿಮರ್ಶೆ ಮತ್ತು ವ್ಯಾಖ್ಯಾನ ವಿಶ್ಲೇಷಣೆಯಲ್ಲಿಯೂ ಅವರು ಸಿದ್ದ ಹಸ್ತರು. ಅವರು ಬರೆದ ನಲವತ್ತು ಗಜಲ್ ಕಾರರ ವಿಸ್ತಾರವಾದ ವಿಮರ್ಶೆ ಮಾಡಿದ ಒಂದು ಪ್ರತ್ಯೇಕ ಕೃತಿಯೂ ಪ್ರಕಟವಾಗಿದೆ. ಇನ್ನೊಬ್ಬ ಪ್ರತಿಭಾವಂತ ಕಲಬುರ್ಗಿಯ ಗಜಲ್ಕಾರ ಡಾ. ಮಲ್ಲಿನಾಥ ತಳವಾರ ಅವರ ಜೊತೆಗೆ ಸೇರಿಕೊಂಡು ಗಜಲ್ ಜುಗಲ್ ಬಂಧಿ ಸಂಕಲನವನ್ನು ಮತ್ತೂ ಒಂದು ಜುಗಲ್ ಸಂಕಲನವನ್ನು ತಂದವರು ಅವರು. ಇತರರ ಗಜಲ್ಕಾರರ ಗಜಲ್ಗಳನ್ನು ಅನುಸಂಧಾನ ಮಾಡಿ ಅವುಗಳಿಗೆ ತರಹಿ ಬರೆದು ಆ ಸಂಕಲನವನ್ನು (ತರಹಿ ಗಜಲ್ ಸಂಕಲನ) ತಂದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.
ರಾಯಚೂರಿನಲ್ಲಿ ೦೧/೦೭/೧೯೪೭ ರಲ್ಲಿ ಜನಿಸಿದ ಅವರು ಕಲಬುರ್ಗಿ, ಹುಬ್ಬಳ್ಳಿಗಳಲ್ಲಿ ತಮ್ಮ ಶಿಕ್ಷಣ ಪಡೆದು ವಿಜಯಪುರದ ಸರ್ಕಾರಿ ಮಹಿಳಾ ವೃತ್ತಿ ತರಬೇತಿ ಕೇಂದ್ರದಲ್ಲಿ ಮುಖ್ಯ ಬೋಧಕರಾಗಿ ಸೇವೆ ಸಲ್ಲಿಸಿ ನಿರ್ವತ್ತರಾದರು.ವಿಚಿತ್ರವೆಂದರೆ ನಿವೃತ್ತಿ ಹೊಂದಿದ ಮೇಲೆ ಸಾಹಿತ್ಯದತ್ತ ವಲಿದ ಅವರು ಈವರೆಗೆ ೨೩ ಕೃತಿಗಳನ್ನು ತಂದಿದ್ದಾರೆ. ಕವಿತೆ , ಹನಿಕವಿತೆ, ಪ್ರಬಂಧ , ಆಧುನಿಕ ವಚನಗಳು, ಕಥೆ , ಪ್ರವಾಸ ಕಥನ, ವಿಮರ್ಶೆ ಮತ್ತು ಮುಖ್ಯವಾಗಿ ಇತ್ತೀಚೆಗೆ ಗಜಲ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೌನ ಇಂಚರ, ಮಿಡಿತ, ನಿನಾದ, ಬಾವಗಂದಿ. ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ (ತರಹಿ ಸಂಕಲನ) , ಒಲವ ಹಾಯಿ ದೋಣಿ, ಜೀವ ಭಾವದ ಉಸಿರು(ಜುಗಲ ಬಂಧಿ ), ಸೆರಗಿಂಟಿದ ಕಂಪು, ಬೆಸೆದ ಭಾವಕೆ ಒಲವ ನಾದ (ಜುಗಲ್ ಬಂಧಿ),-ಇವು ಅವರ ಗಜಲ್ ಕೃತಿಗಳಾದರೆ ಪಿಸುಮಾತು ಎಂಬುದು.ದ್ವಿಪದಿ ಸಂಕಲನವಾಗಿ ಮೂಡಿ ಬಂದಿದೆ .
ಪ್ರಭಾವತಿ ದೇಸಾಯಿಯವರ ಮೇಲಿನ ಗಜಲ್ ಅವರ ಮಾಗಿದ ಮನದ ಅಭಿವ್ಯಕ್ತಿ .ಗಜಲ್ ಮೇಲೆಯೆ ಹೇಳಿದಂತೆ ಇಲ್ಲಿ ಲೌಕಿಕ ಪ್ರೇಮದಾಚೆ ಗಜಲ್ ಬೆಳೆದಿದೆ.ಅಲೌಕಿಕ ಪ್ರೇಮದ ಚಿಂತನೆ ಗಜಲ್ ನ ವಸ್ತು. ಗಜಲ್ ಪ್ರಕಾರದ ಆದ್ಯರಾದ ಶಾಂತರಸ ರಿಂದ ಹಿಡಿದು ಈ ಬಗೆಯ ಗಜಲ್ ಗಳು ಕನ್ನಡದಲ್ಲಿ ಬಂದಿವೆ. ಆರಂಭದ ಮತ್ಲಾದಲ್ಲಿಯೆ ಗಜಲ್ಕಾರ್ತಿ ತಮ್ಮ ಆಲೋಚನೆಯನ್ನು ಸ್ಪಷ್ಟಪಡಿಸಿದ್ದಾರೆ.
*ಒಲವ ಮಾತಿನಲಿ ಬಂಧಿಸಿದ ಮಾತುಗಾರನ ಎಲ್ಲಿ ಹುಡುಕಲಿ
ನುಡಿ ವೀಣೆಗೆ ಮೌನ ಹೊದಿಸಿದ ಮೌನಗಾರನ ಲ್ಲಿ ಹುಡುಕಲಿ.*
ಆತ ಒಲವಿನ ಮಾತಾಡುತ್ತಲೆ ಬಂಧಿಸಿದ ಮಾಯಾವಿ ಎನ್ನುವಲ್ಲಿ ಅವನು ಈ ಲೋಕದವನಲ್ಲ ಎನ್ನುವದು ಸ್ಪಷ್ಟ..ಅಲ್ಲದೆ ಅವನು ಸಾಮಾನ್ಯದವನಲ್ಲ. ನುಡಿವೀಣೆಗೆ ಮೌನ ಹೊದಿಸಿದವನು ಮೌನದಲಿ ಎಲ್ಲ ಹೇಳಬಲ್ಲ ಮಾತುಗಾರ. ಮನವ ಗೆಲಿದವನಾದ್ದರಿಂದ ಅವಳು ಅವನನ್ನು ಎಲ್ಲಿ ಹುಡುಕಲಿ ಎಂದುಕೇಳುತ್ತಾಳೆ
ಅವನು ತೋರಿದ್ದು ಪ್ರೀತಿಯಾದರೂ ಅದು ಲೌಕಿಕವಲ್ಲ
ಅದನ್ನೆ ಗಜಲ್ ನಮುಂದಿನ ಷೇರ್ ವಿವರಿಸಿವೆ.
ಅವನ ಪ್ರೀತಿಗೆ ಎದೆಯಹೊಲದಲಿ ಹಸಿರು ಹುಟ್ಟಿಸುವ ಶಕ್ತಿ ಇದೆ.ಆದ್ದರಿಂದಲೆ ಗಜಲ್..
*ಪ್ರೀತಿಯ ಸೋನೆ ಮಳೆ ಸುರಿಸಿ ನೀ ಎದೆ ಹೊಲದಲಿ ಹಸಿರು ಹುಟ್ಟಿಸಿದೆ
ಅಂಬರ ಬಯಲು ಒಂದಾಗಿಸಿದ ಕಲೆಗಾರನು ಎಲ್ಲಿ ಹುಡುಕಲಿ*
ಎನ್ನುತ್ತ ಅವನ ಕಲೆಗಾರಿಕೆಯನ್ಬು ವಿವರಿಸಿದೆ.ಅವನೇನೋ ಹಸಿರು ಹುಟ್ಟಿಸಿದ ನಿಜ , ಆದರೆ ಅವನು ಎಲ್ಲಿರುವನೆಂಬುದರ ಹುಡುಕಾಟವೇ ಭಕ್ತನಿಗೆ ಮುಖ್ಯ. ಆಕಾರಣಕ್ಕಾಗಿಯೆ ಅವನಿಗೊಲಿದ ಮನ ಅವನು ಎಲ್ಲಿರುವನೆಂದು ಹುಡುಕಾಟ ನಡೆಸಿದೆ. ಅವನೊ ಅಂಬರ ಬಯಲು ಒಂದಾಗಿಸಿದ ಕಲೆಗಾರ..ಹಗುರಕ್ಕೆ ಸಿಗುವವನಲ್ಲ.ಅಂತೆಯೆ ಅವನ ಆ ಬಯಲೊಳಗೆ ಬಯಲಾಗಿರುವ ವ್ಯಕ್ತಿತ್ವವನ್ನು ಗಜಲ್ ಬಣ್ಣಿಸುತ್ತಲೆ ಬೆಳೆಯುತ್ತದೆ.
ಇನ್ನೂ ಮುಂದುವರೆದು ಅವನ ನರ್ತನ ಇವಳನ್ನು ಪ್ರಭಾವಿಸಿದ ರೀತಿಯನ್ನು ಮುಂದಿನ ಭಾಗ ಇನ್ನೂ ಸ್ಪಷ್ಟ ಮಾಡುತ್ತದೆ.
*ಮುಗಿಲಲಿ ಮೂಡಿದ ಕಾಮನ ಬಿಲ್ಲಿಗೆ ಗರಿ ಬಿಚ್ಚಿ ಗೆಲುವಲಿ ಕುಣಿಸಿದೆ
ಕಣ್ಣಲಿ ಕನಸುಗಳ ಮೂಡಿಸಿದ ಕನಸುಗಾರರನು ಎಲ್ಲಿ ಹುಡುಕಲಿ*
ಅವನ ಸಂಮೋಹನದಿಂದ ಮುಗಿಲಲಿಲ್ಲಿಕಾಮನ ಬಿಲ್ಲುನಮೂಡಿದೆ ,ಅಷ್ಟೇ ಅಲ್ಲ ಅದು ಅವನ ಆರಾಧಕಿಯಾಗಿರುವ ಗಜಲ್ ನ ನಾಯಕಿಯ ಮನದಲ್ಲಿ ಮೋಹಕ ಅಲೆ ಎಬ್ಬಿಸಿದೆ.ಇದು ಲೌಕಿಕ ಸಂಮೋಹನ ವಲ್ಕ.ಆದರೂಲ್ಲಿ ಸಂತಸಕ್ಕೆನು ಕೊರತೆಯಿಲ್ಕ. ಭಕ್ತಿಯ ತಹತಹವೂ ಪ್ರೇಮದ ತಹತಹವೇ ಅಲ್ಲವೆ? ಹಾಗಾಗಿಯೆ ಅವನ. ಹುಡುಕಾಟ ಮುಂದುವರೆದಿದೆ.ಈ ಹುಡುಕಾಟದಲ್ಲಿ ನಮಗೆ ಅಕ್ಕಮಹಾದೇವಿಯ, ಮೀರಾಳ ನೆನಪಾಗದೆ ಇರದು. ಅವರೂ ತಮ್ಮ ತಮ್ಮಮನದ ಗಮ್ಯ ವಾಗಿರುವವನ ಅರಸಿ ಹೊರಟವರಲ್ಲವೆ? ಹಾಗೆಯೆ ಗಜಲ ನ ನಾಯಕಿಯು ಕೂಡಾ ಅವನನ್ನು ಅರಸುತ್ತಿದ್ದಾರೆ.ಅದು ಮುಂದಿನ ಷೇರ್ ನಲ್ಲಿ ಇನ್ಬೂ ಸ್ಪಷ್ಟವಾಗಿ ನಮಗೆ ಅಕ್ಕ ಮಹಾದೇವಿ ಯಂಥವರ ನೆನಪು ತರುತ್ತದೆ..
ನುಡಿದಂತೆ ನಡೆಯುತ ಅಕ್ಕನನು ಒರೆಗೆ ಹಚ್ಚಿ ಜಗಕೆ ತೋರಿಸಿದೆ
ವಚನ ಅನುಭವವನು ಬರೆಸಿದ ಬೆಡಗುಗಾರನನು ಎಲ್ಲಿ ಹುಡುಕಲಿ
ಗಜಲ್ ನ ಈ ಷೇರ್ ಹನ್ನೆರಡನೆಯ ಶತಮಾನದ ಅಕ್ಕನನ್ನೇ ಗಜಲ್ ಒಳಗೆ ಪ್ರವೇಶ ಮಾಡಿಸುತ್ತದೆ.ತಾನು ಅರಸುತ್ತಿರುವವ ನೂ ಬೇರಾರೂ ಅಲ್ಲ.ಯಾವಾತನು ಅಕ್ಕನಿಗೆ ಚನ್ನಮಲ್ಲಿಕಾರ್ಜುನನಾಗಿ ಕಾಡಿದ್ದನೋ ಅವನನ್ನೇ ತಾನೂ ಅರಸುತ್ತಿದ್ದೇನೆ ಎನ್ನುವ ಗಜಲ್ಕಾರ್ತಿ ನುಡಿದಂತೆ ನಡೆದ ಅಕ್ಕನನು ಒರೆಗೆ ಹಚ್ಚಿದವನು ಎನ್ನುವಲ್ಲಿ ಮಲ್ಲಿಕಾರ್ಜುನನ ನೆನಪೇ ಆಗುತ್ತದೆ.ಇನ್ನೊಂದು ನೆಲೆಯಲ್ಲಿ ಅದು ಅಲ್ಲಮನನ್ನು ನೆನಪಿಸುತ್ತದೆ. ಬಸವಣ್ಣ ನವರ ಅನುಭವ ಮಂಟಪದಲ್ಲಿ ಎಲ್ಲರೂ ತಿಳಿದಿರುವಂತೆ ಅಕ್ಕ ನನ್ನು ಒರೆಗೆ ಹಚ್ಚುವಾತ ಪ್ರಭುದೇವರೇ ಆಗಿದ್ದಾರೆ. ಅವರೂ ಪರಶಿವನ ಸ್ವರೂಪರೇ. ಸಭೆಯ ಮಧ್ಯದಲ್ಲಿ ಅಕ್ಕನ ಮಹಿಮೆಯನ್ನು ಪ್ರಶ್ನಿಸುವ ಮೂಲಕ ಇಡೀ ಶರಣ ಗಣಕ್ಕೆ ಪರಿಚಯಿಸಿದ ಅವರು ಅವಳು ಬರೆದ ವಚನಗಳ ಮಹತ್ವವನ್ನೂ ಸಾರುತ್ತಾರೆ. ಅದನ್ನೆ ಗಜಲ್ ‘ ವಚನ ಅನುಭವವನು ಬರೆಸಿದ ಬೆಡಗುಗಾರ ಎಂದು ಸಂಕೇತಿಸಿದೆ. ಎಲ್ಲಿಯೂ ಯಾರೊಬ್ಬರ ಹೆಸರನ್ನೂ ತರದೆ ಗಜಲ್ ತನ್ನ ಸಾಂಕೆತಿಕತೆಯಿಂದಲೆ
ಎಲ್ಲವನ್ನೂ ತಿಳುಹುತ್ತ ಹೋ್ಗುತ್ತದೆ.
ಕೊನೆಯ ಮಕ್ತಾ ಅತ್ಯಂತ ಸುಮಧುರವಾಗಿದ್ದು ಮನುಷ್ಯ ಎಷ್ಟಾದರೂ ತನ್ನ ಮಿತಿಯಲ್ಲಿ ಬದುಕುವವನು ಎಂಬ ಮಿತಿಯನ್ನೂ ಹೇಳುತ್ತದೆ.
*ಸೆರಗಿಗೆ ಅಂಟಿದ ಘಮದ ಸುಳಿಗೆ ಅವನನು ಸಿಲುಕಿಸಲಾ ಗದು ಪ್ರಭೆ
ಚೆಲುವ ಮಾಯೆಯನು ತ್ಯಜಿಸಿದ ಮಾಯೆಗಾರನನು ಎಲ್ಲಿ ಹುಡುಕಲಿ*
ಭಕ್ತನಾ/ಳಾದವನು/ಳು ಎಷ್ಟೇ ಅವನನ್ನು ಬಯಸಬ ಹುದು. ಆದರೆ ಅವನು ಅವಳ ಸೆರಗಿಗಂಟುವ ಜಾಯಮಾನದವನಲ್ಲ.ಆಕೆ ತನ್ನ ಸೌಂದರ್ಯದಿಂದ, “ಸೆರಗಿಗಂಟಿದ ಘಮದ ಸುಳಿಗೆ ಅವನನ್ನು ಸಿಲುಕಿಸಲಾಗದು” ಎನ್ನುವ ನುಡಿಗಟ್ಟು ಇದನ್ನೇ ಸಾರುತ್ತದೆ. ಏಕೆಂದರೆ ಅಂಥ ಚೆಲುವೆ ಮಾಯೆಯನೆ ತ್ಯಜಿಸಿದ ಮಾಯಗಾರ.ಇನ್ನು ತನ್ನ ಸೆರಗಿಗಂಟಿದ ಘಮಕೆ ಹೇಗೆ ಸಿಕುಕಿಯಾನು? ಎನ್ನುತ್ತದೆ ಗಜಲ್.
ಹೀಗೆ ಪ್ರಭಾವತಿ ದೇಸಾಯಿಯವರ ಅನುಭವ ಅನುಭಾವವಾಗುವ ಪರಿ ಇಲ್ಲಿ ವ್ಯಕ್ತವಾಗಿದೆ. ಲೌಕಿಕ ಪ್ರೇಮಕ್ಕಿಂತ ಅಲೌಕಿಕ ಪ್ರೇಮಕೆ ಒಲಿದ ಅನೇಕ ಶ್ರೇಷ್ಟ ಗಜಲ್ ಗಳೇ ಕನ್ನಡದಲ್ಲಿವೆ.ಅಂತಹ ಗಜಲ್ ಗಳಲ್ಲಿ ದೇಸಾಯಿಯವರ ಈ ಗಜಲ್ ಗೂ ಸ್ಥಾನವಿದೆ .
ವೈ ಎಂ ಯಾಕೊಳ್ಳಿ