ಮಳೆ ಹಾಡು
ಆಕಾಶ ಬಯಲಲ್ಲಿ ಸಾಲುಗಟ್ಟಿದ
ಮೋಡ ಗರಿಕೆಯೊಂದನೂ
ಚಿಗುರಿಸದು ನೋಡು
ಇಳೆಯ ಸಾಂಗತ್ಯಕೆ ಇಳಿದು
ಬಂದೊಡನೆಯೇ ನೆಲವೆಲ್ಲಾ
ಹಚ್ಚ ಹಸಿರು ಪಚ್ಚೆ ಕಾಡು
ಬಾನ ನಂಟಿದ್ದೂ ಅಂಟಿಕೊಳದೆ
ಭುವಿಯ ಸಾಮಿಪ್ಯಕೆ ಕಾತರಿಸಿ ಓಡಿ
ಬರುವುದು ಅಮೋಘ ಮೇಘದ ಪಾಡು
ಹೀಗೆ ಇರುವ ಪರಿ ಯಾವುದೆಲ್ಲಾ
ಸರಿ ಏನಚ್ಚರಿಯಿದೇನಚ್ಚರಿ ಎಂದು
ಯೋಚಿಸಲದು ಗೊಂದಲದ ಗೂಡು
ಮೋಡಗಟ್ಟಿ ಮಳೆ ಹೊಯ್ಯದು
ಇಳೆಯ ಬಯಸಿ ಬಳಸಿ ಅಪ್ಪುವುದು
ಋತುಮಾನ ಚಕ್ರಗತಿಯ ನಡೆಯು ನೋಡು
ಆವಿಯಾಗದ ಕಡಲು ಮಳೆಯಾಗದ
ಮೋಡ ನೆಲಕಾಗಿ ಹರಿಯದ ನದಿ
ಎನಿತಿರಲೆಂತು ಲೇಸಹುದು ಬಿಡು
ನಶೆಯೊಳಗಾಗಿ ಕಳೆದುಹೋಗದೆ
ನಿನಗಾಗಿ ನಾನು ನನಗಾಗಿ ನೀನು
ಎಂದಂದು ಬದುಕುವುದು ಒಲವ ಪಾಡು
ಕಾದ ಇಳೆಯ ಕಾಡಲಾರದೆ ಇಳಿದು
ಬಂದು ನೆರಳಂತೆ ಅಪ್ಪಿ ಒಪ್ಪಿಸಿಕೊಳ್ವುದೇ
ಈ ಚಂದದ ಮಳೆಯ ಹಾಡು
*******
ವಸುಂಧರಾ ಕದಲೂರು
–
ಚೆಂದದ ಮಳೆಯ ಹಾಡು