ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಕುಂಭಮೇಳವೂ
ಮತ್ತು
ಭಕ್ತಿ ಎಂಬ ಗರಗಸವೂ.
ಈ ತಿಂಗಳ ಪ್ರಚಲಿತ ವಿಷಯ ಅಂದ್ರ ಕುಂಭ ಮೇಳ . ಈ ಮೇಳಗಳು ಹಿಂದೆಯು ನಡೆದಿದ್ವು , ಆದ್ರ ಈ ವರ್ಷ ಅದರ ಬಗ್ಗೆ ಅತೀ ಉತ್ಸಾಹ ಅದ ಜನರಿಗಿ. ನಮ್ಮ ದೇಶದ ಜನರು ಒಂದು ರೀತಿ ಅನುಕರಣೆ ಸ್ವಭಾವದವ್ರು ನೋಡ್ರಿ. ಯಾರ ಏನ ಮಾಡತಾರ ಕುರಿಗಳಂಗ ಅನುಸರಿಸತಾರ. ಅದ್ರಾಗಂತೂ ದೇವ್ರು ಭಕ್ತಿ ವಿಷಯದಾಗ ಯಾರು ಯಾರಿಗೂ ಹೇಳಂಗಿಲ್ಲ, , ಕೇಳಂಗಿಲ್ಲ . ವೈಚಾರಿಕ ನಿಲುವು ಉಳ್ಳವ್ರು ಸುಮ್ನ ಬಾಯಿ ಮುಚ್ಚಿಕೊಂಡು ಅವ್ರು ಆಚರಣೆ ಢಾಂಭಿಕತೆ ನೋಡಕ್ಕೊಂತ ಕೂಡಬೇಕು. ಅಷ್ಟೆ. ಯಾಕಂದ್ರ ದೇವ್ರ ವಿಷಯದಾಗಿನ ಚರ್ಚೆ ಗಳಿಗಿ ಕೋನೆನೆ ಇಲ್ಲ ನೋಡ್ರಿ. ಹಾಂಗ ನೋಡಿದ್ರ ನಮ್ಮ ದೇಶದಾಗ ಅತೀ ಚರ್ಚೆ ವಿಷಯಗಳು ಅಂದ್ರ ದೇವರು , ಜಾತಿ ಮತ್ತ ಹೆಣ್ಣು.
ಈ ವಿಷಯಗಳ ಬಗ್ಗೆ ಚರ್ಚೆ ತಲಾತಲಾಂತರದಿಂದ ಆಗತಾನೆ ಅದ.ಆದ್ರ ಒಮ್ಮತದ ನಿರ್ಧಾರ ಅಸಾದ್ಯ ಬಿಡ್ರಿ , ಯಾವ ವಿಷಯದಾಗೂ ಒಮ್ಮತದ ನಿರ್ಧಾರ ಅಸಾದ್ಯನೆ ಬಿಡ್ರಿ.
ಭಕ್ತಿ ಎನ್ನೋದು ನಮ್ಮ ಜನರಲ್ಲಿ ಒಂದೊಂದು ಸರಿ ಸಾಂಕ್ರಾಮಿಕವಾಗಿ ಹಬ್ಬಿ ಬಿಡತದ.ಹುಣ್ಣಿ , ಅಮಾಸಿ , ಹಬ್ಬಗಳು , ಒಂದೊಂದು ದಿನ , ನಕ್ಷತ್ರ , ಇಂತಾ ಸಮಯದಾಗ ಎಲ್ಲರ ಮನಸಿನಾಗ ದೇವ್ರಿಗಿ ಹೋಗಿ ನೋಡೇ ಬರಬೇಕು ಅಂಬೋ ಇಚ್ಚಾ ಜಾಗ್ರತ ಆಗತದ. ಬೇಕಾದ್ರ ನೀವು ಗಮನಿಸಿರಬೇಕು , ಯಾವದಾದ್ರು ಗುಡಿಗಿ ಹೋಗಿ ತಕ್ಷಣ ದೇವ್ರ ದರ್ಶನ ಸಿಕ್ಕರ ಅಂತಾ ಸಮಯದಾಗ ಆ ದೇವ್ರ ದರ್ಶನ ಮಾಡಿದ ಅನುಭೂತಿನೆ ಬರಲ್ಲ . ಅದೇ ಒಂದು ದಿನ ಅಥವಾ ನಾಲೈಂಟು ತಾಸು ಲೈನ್ ದಾಗ ನಿಂತು ಅದೇ ದೇವ್ರ ದರ್ಶನ ಮಾಡ್ರೀ , ಆ ಭಕ್ತಿಯ ಅನೂಭೂತಿನೆ ಬ್ಯಾರೆ ಇರತದ ಅವ್ರುಗಿ. ಅದ್ಕ ದೇವ್ರ ಬಗೆಗಿನ ಭಕ್ತಿಯ ಪರಾಕಷ್ಟೆಗಾಗಿ ಜನ ಯಾವಾಗಲೂ ಗುಂಪಿನಲ್ಲಿ , ಜಂಗುಳಿಯಲ್ಲಿ ಹೋಗಲಿಕ್ಕಿ ಇಷ್ಟ ಪಡತಾರ. ಗುಂಪು , ಜಾತ್ರೆಗಳು ಸಂಕಷ್ಟಕ್ಕ ಈಡು ಮಾಡ್ತವ. ಕಾಲತುಳಿತ ಆಗತದ ಅಂತ ಗೊತ್ತಿದ್ರೂ ಮತ್ತ ಮತ್ತ ಜನಜಂಗುಳಿ ಯೊಳಗ ಕಲೆತು ಭಕ್ತಿಯ ಅನೂಭೂತಿ ಪಡೆಯುವದು ಮನುಷ್ಯ ನ ಸ್ವಭಾವ.
ಹಿಂದೆ ಆದ ಎಷ್ಟೋ ದುರಂತಗಳು ನೋಡಿಯು ಮತ್ತೆ ಮುಂದಿನ ಘಟನೆಗೆ ಸಾಕ್ಷಿಯಾಗಲು ಮನುಷ್ಯ ಮಾತ್ರ ತಯ್ಯಾರಾಗತಾನೆ. ಎಷ್ಟೆ ಕಷ್ಟ ಆದ್ರೂ ಇಂತದೆ ದಿನ , ಇಂತದೆ ನಕ್ಷತ್ರ , ಇಂತದೆ ಸಂದರ್ಭದಲ್ಲಿ , ಇಂತಿಂತಹ ದೇವರ ದರ್ಶನ ಮಾಡಬೇಕು ಎಂಬ ಮನಸ್ಥಿತಿ ಮುಂದಿನ ಜನಾಂಗಕ್ಕೂ ವರ್ಗ ಆಗತಾನೆ ಇರತದ.ಇಲ್ಲಿ ವಿದ್ಯಾವಂತ್ರೂ , ಅವಿದ್ಯಾವಂತ್ರು ಅಂಬೋ ಪ್ರಶ್ನೆ ನಿರುಪಯುಕ್ತ. ಅರಿವು ಅಂಬೋದು ಒಂದೋಂದು ಸಂದರ್ಭದಾಗ ಒಂದೋದು ರೂಪ ಪಡಿತದ. ಹಂಗ ಆಸ್ತಿಕ , ನಾಸ್ತಿಕತೆಯು ಹಂಗ. ನಮ್ಮ ಜೀವನದ ಘಟನೆಗಳ ಮ್ಯಾಲ ಅವಲಂಬಿಸ್ತಾವ. ಮನುಷ್ಯ ಯಾವಾಗ್ಲೂ ನೆಮ್ಮದಿಯಾಗಿ ಸುಖ ವಾಗಿ ಬದುಕಲಕ್ಕ ಇಷ್ಟ ಪಡತಾನ , ಆ ಸುಖ ನೆಮ್ಮದಿಗಾಗಿ ಅವ್ನು ಏನು ಮಾಡ್ಲಕ್ಕೂ ತಯ್ಯಾರಿರತಾನ. ಸುಲಭವಾಗಿರೋದು ಅಂದ್ರೆ ದೇವರ ಮೇಲಿನ ಭಕ್ತಿ , ಆಚರಣೆಗಳು , ಉಪವಾಸ , ವ್ರತ. ಇವುಗಳಿಂದ ತನ್ನ ಕಷ್ಟ ಪರಿಹಾರ ಆಗ್ತದ ಅಂತ ಸಮಾಜದಿಂದ ನಂಬಿದ ಮನುಷ್ಯ ಇದನ್ನೆ ಮಾಡ್ತ ತನ್ನ ಮುಂದಿನ ಪಿಳಿಗೆಗೂ ಇದನ್ನೆ ವರ್ಗಾಯಿಸ್ತಾನ.
ಇರಲಿ , ದೆವ್ರನ್ನು ನಂಬಿ ಕೆಟ್ಟವರಿಲ್ಲ ಅಂತಾರ. ನಮ್ಮ ದೇಶದ ಘನತೆಗಳು ಗುಡಿಗಳು , ನದಿಗಳು , ಹಿಂದುತ್ವ ಎಂಬ ಆಚರಣೆಗಳಲ್ಲಿ ಎಂದು ನಂಬಿದ್ದವ್ರು ನಂಬಲಿ.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಆಗತಿರೋ ಕುಂಭ ಮೇಳಕ್ಕೆ ಹೋಗಿ ಕಾಲ್ತುಳಿತದಲ್ಲಿ ಎಷ್ಟೋ ಜನ ಸತ್ರು , ಮತ್ತೆ ಮತ್ತೆ ಜನರು ಅಂತ ಅಂತಹ ರಶ್ ಇರೋ ಸ್ಥಳಗಳಿಗಿ ಹೋಗಿ ನಮ್ಮ ದೇಶ ನಮ್ಮ ಸಂಸ್ಕತಿ ಅಂತ ಸಾರತಾರಂದ್ರ ಅವರನ್ನು ಮೂರ್ಖರು ಅನ್ನದೆ ಮತ್ತೆನು ಅನ್ನಲಿಕ್ಕ ಆಗಲ್ಲ. ಇಂತಾ ರಶ್ ದಾಗ ಹೋಗಬ್ತಾಡ್ರೀ , ಅಂತ ಹೇಳೋ ಬುದ್ದಿ ಮಾತು ಕೇಳೋ ಮನಸ್ಥಿತಿ ದಾಗ ಅವ್ರು ಇರಲ್ಲ . ದೇವ್ರು ದಿಡ್ಡರ ವಿಷಯದಾಗಂತೂ ನಮ್ಮ ಬಹು ಸಂಖ್ಯಾತರ ಧಾರ್ಮಿಕ ವಿಷಯದ ಬಗ್ಗೆ ಚರ್ಚೆ ಬಂತದ್ರಅವ್ರ ಭಕ್ತಿ , ದೇಶ ಭಕ್ತಿ ಮೇರೆ ಮೀರತದ.
ಎಲ್ರೂ ಗಮನಿಸಿರಬೇಕು , ಇಂತಹಾ ಮೇಳಗಳದಾಗ ಕಾಲ್ತುಳಿತಗಳದಾಗ ಸಾಯೋರು ಬಡ ಮುಗ್ದ ಜನಗಳು. ಜೀವನದಾಗ ಸದಾ ಬಳಲಿದವ್ರು , ದೇವ್ರು ಇರೋ ಸ್ಥಳದಾಗ ಬಂದ್ರ , ನೀರಲ್ಲಿ ಮುಳಗಿದ್ರ ತಮಗೀಟು ನೆಮ್ದಿ ಸಿಗತದೇನೋ ಎಂಬೋ ನಂಬಿಕೆಯವ್ರು. ಸ್ಪೇಶಲ್ ದರ್ಶನ ಕ್ಕ ಕೊಡಲಿಕ್ಕ ದುಡ್ಡ ಇರಲಾರ್ದೆ ಎಷ್ಟೋತ್ತಿಗಾದ್ರು ದೇವ್ರು ಮಾರಿ ತೊರಿಸ್ಲಿ , ಕಾಯಕ್ಕೋಂತ ನಿಲ್ಲೋವ್ರು. ಚಿಕ್ಕವ್ರು , ಮಕ್ಕಳು , ಮುದುಕರು .. ಅಲ್ಲಿ ರೊಕ್ಕ ಕೊಟ್ಟವ್ರು ಜಲ್ದಿ ಜಲ್ದಿ ದೇವ್ರಿಗಿ ನೋಡಿ ಹೋಗತಿರತಾರ , ದುಡ್ಡು ಕೊಟ್ಟವ್ರಿಗಿ ಮತ್ತ ಮತ್ತ ಮುಖ ತೋರಿಸೋ ದೇವ್ರು , ಆ ಕಡಿ ಎಷ್ಟೋ ಗಂಟೆಗಳಿಂದ ತನಗ ನೋಡಲಾಕ ನಿಂತೀರೋರ ಬಗ್ಗೆ ವಿಚಾರನೂ ಮಾಡಲ್ಲ. ಹಿಂಗ ಗಂಟೆಗಟ್ಲೆ ಕಾಯ್ದ ಅವ್ರಿಗೂ ತಾಳ್ಮೆ ಮುಗಿತಾ ಬಂದಿರತದ. ಮನಿ ಸೇರಕೊಳ್ಳೊ ತವಕ , ಆಗ ಒಮ್ಮಿಗಿ ಎಲ್ರ ಅಸಹನೆ ಕಟ್ಟೆ ಒಡದು ಗುಂಪಿನಲ್ಲಿ ಒಮ್ಮಿಗಿ ಚಲನೆ ಆಗಿ..ಏನಾಗಲತದ ಅಂತ ಅರಿವಾಗೋವಷ್ಟರಲ್ಲಿ ಅವಘಡ ಸಂಭವಿಸಿಯೆ ಬಿಡತದ. ಪಾಪ ದೇವ್ರು ಅಸಹಾಯಕ.
ನಾವು ಗಮನಿಸಿದಂಗ ಇಂತಹ ಅವಘಡಗಳದಾಗ ಸಾಯೋರೆಲ್ಲ ಅಮಾಯಕರು. ಯಾರೋಬ್ಬ ವಿ . ಐ . ಪಿ . ಗಳಿರಲ್ಲ. ಯಾರೊಬ್ಬ ಸೆಲಿಬ್ರಿಟಿಗಳಿರಲ್ಲ , ಯಾರೋಬ್ಬ ಸಾಧುಗಳು , ಮಠಾದೀಶರುಗಳು , ರಾಜಕಾರಣಿಗಳು ಇರಲ್ಲ. ಗುಡಿಗಳು , ಜಾತ್ರೆಗಳಲ್ಲಿ ಕಾಲತುಳಿತಕ್ಕ ಒಳಪಟ್ಟೋರೆಲ್ಲ ಅತೀ ಸಾಮಾನ್ಯ ಜನರು.
ದೇವಸ್ಥಾನ ಗಳ ನಾಡು , ಸಂಸ್ಕೃತಿಗಳ ಬೀಡಾದ ನಮ್ಮ ದೇಶದಲ್ಲಿ ಯಾಕ ಹಿಂಗಾಗತದ..! ಜನರ ಭಕ್ತಿಯ ಭಾವನೆಗಳು ಇಷ್ಟು ಯಾಕ ಉದ್ರೇಕ ಆಗತವ. ಯಾಕಂದ್ರ ನಮ್ಮ ದೇಶದಲ್ಲಿ ಜನರ ಭಕ್ತಿಯ ಭಾವನೆಗಳನ್ನು ಉದ್ರೇಕಿಸಲಾಗತದ. ಹಿಂದೆ ವೈದಿಕ ಸಮಾಜ ಜನರನ್ನು ದೇವ್ರ ಹೆಸರಲ್ಲಿ ಅಂಜಿಸಿ ನಂಬಿಸಿದ ಆಚರಣೆಗಳನ್ನೆ ಈಗಲೂ ಮಾಡಲಾಗತದ. ಇದಕ್ಕ ಸೋಸಿಯಲ್ ಮೀಡಿಯಾ ಎಂಬ ಪಿಡುಗು ಕಾರಣ. ಇಂತಿಂತ ದೇವ್ರ ಹತ್ರ ಹೋದ್ರ ಇಂತಿಂತಾ ಕಷ್ಟ ಪರಿಹಾರ ಆಗತಾವ , ಇಷ್ಟ ಖರ್ಚ ಮಾಡಿ ಇಂತಿಂತ ಪೂಜೆಗಳು ಮಾಡ್ದರ ಒಳ್ಳೆದಾಗತದ. ದೂರ ದೂರ ಎಲ್ಲೆಲ್ಲೂ ಇರೋ ದೇವ್ರೀಗಳಿಗಿ ಇಂತಿಂತ ಸಮಯದಾಗ ಮಾತ್ರ ದರ್ಶನ ಮಾಡ್ದರ ಮೋಕ್ಷ ಸಿಗತದ. ಗಂಗೆಯಲ್ಲಿ ಮುಳಗಿದ್ರ ಪಾಪ ಪರಿಹಾರ ಆಗತದ.. ಈಗ ಇವೆಲ್ಲ ಟಿ ವಿ ಮತ್ತ ಸೋಷಿಯಲ್ ಮಿಡಿಯಾಗಳಿಂದ ಮತ್ತು ನಾವು ನಂಬುವ ಸಾಧು ಸಂತರಿಂದ ಬಿತ್ತರಿಸಲಾಗತದ. ನಿಮ್ಮ ಕಷ್ಟ ಪರಿಹಾರ ಆಗಬೇಕಾದ್ರ ಅಲ್ಲಿಗಿ ಹೋಗ್ರೀ , ಹಿಂಗ ಮಾಡ್ರೀ ಅಂದ್ರ , ಒಟ್ಟಿನಲ್ಲಿ ನಮ್ಮ ಸಮಸ್ಯೆ ಪರಿಹಾರ ಆದ್ರ ಸಾಕು ಅಂತ ಕಾಯೋರು ಎಷ್ಟೆ ತೋಂದ್ರೆ ಆದ್ರೂ ಎಲ್ಲಿಗಿ ಬೇಕಾದ್ರೂ ಹೋಗಲಿಕ್ಕ ತಯ್ಯಾರ ಇರತಾರ. ಒಬ್ಬರ ನೋಡಿ ಮತ್ತೊಬ್ರ ಮತ್ತೊಬ್ರು , ಹಿಂಗ ನಂಬಿಕೆ ಅನ್ನೋದು ಮೌಡ್ಯ ಆಗತಿದ್ರ ಅವಘಡಗಳು ಆಗಾನೆ ಇರತಾವ.
ನಮ್ಮ ದೇಶದ ಬಹಳಷ್ಟು ಊರುಗಳು , ರಾಜ್ಯಗಳು ಆಯಾ ಪ್ರದೇಶದ ದೇವಸ್ಥಾನ ಗಳಿಂದಲೆ ಅಭಿವೃದ್ಧಿ ಆಗ್ಯಾವ. ಹಿಂದುಳಿದ ಪ್ರದೇಶವಾದ ಉತ್ತರ ಪ್ರದೇಶದ ಅಭಿವೃದ್ದಿಗಾಗೆ ಅಯೋದ್ಯಯಲ್ಲಿ ರಾಮನ ದೇವಸ್ಥಾನ ಕಟ್ಟಲಾಯಿತು. ಉತ್ತರ ಪ್ರದೇಶದ ಸರ್ಕಾರ ಕುಂಭ ಮೇಳದ ನೆಪದಲ್ಲಿ ಜನರನ್ನು ಆಕರ್ಷಿಸಿ ತನ್ನ ಪ್ರದೇಶದ ಅಭಿವೃದ್ದಿಗೆ ಯೋಜನೆ ಹಾಕಿರಬೇಕು. ಕುಂಭ ಮೇಳದಂತ ಜಾತ್ರೆಯಿಂದ ಒಂದು ಪ್ರದೇಶದ ಅಭಿವೃದ್ದಿ ಆಗೋದು ಒಳ್ಳೆ ಯೋಜನೆ ಅಂತಾನೆ ತಿಳಕೊಳ್ಳರಿ . ಆದ್ರ ಜನರನ್ನು ಪುಸಲಾಯಿಸಿ ಇಷ್ಟು ವರ್ಷಕೊಮ್ಮೆ ಬರತದ ಎಂದೋ , ಸಾಧು ಅಘೋರಿಗಳ ಬಗ್ಗೆ ವೈಭವಿಕರಿಸಿಯೋ ಜನರನ ಬರುವಂತೆ ಮಾಡಿ ನಂತರ ಅಲ್ಲಿ ಆಗುವ ಅವಘಡಗಳಿಗೆ ಯಾರು ಹೋಣೆ..! ದೇವ್ರಾ , ಸರ್ಕಾರಾ..
ಪ್ರವಾಸ ಹೋಗುವದು ಒಳ್ಳೆದೆ . ನಮ್ಮ ಜಂಜಾಟ ಎಲ್ಲಾ ಮರತು ಒಂದ ನಾಕು ದಿನ ಕುಟುಂಬದ ಜೋಡಿ ಇಲ್ಲ ದೊಸ್ತರ ಜೋಡಿ ಹೋಗಿ ಬರಲಕ್ಕ ಅಡ್ಡಿ ಇಲ್ಲ . ಆದ್ರ ನಮ್ಮ ದೇಶದಾಗ ಪ್ರವಾಸ ಅಂದ್ರ ದೊಡ್ಡ ದೊಡ್ಡ ಗುಡಿಗಳು ಇರೋ ಕಡಿ ಹೋಗೊದಕ್ಕ ಪ್ರವಾಸ ಅಂತಾರ. ಹೆಂಬತ್ತು , ತೊಂಬತ್ತನೆ ಶತಮಾನದವ್ರು ಈಗಲೂ ಪ್ರವಾಸಕ್ಕ ಹೋಗಬೇಕು ಅಂದ್ರ ಅಲ್ಲಿ ಯಾವ್ದಾದ್ರು ಗುಡಿ ಇರಲೇಬೇಕು. ಇಲ್ದಿದ್ರ ಅದು ಅವ್ರಿಗಿ ಪ್ರವಾಸ ಅನಿಸೋದೆ ಇಲ್ಲ. ನಮ್ಮ ಪ್ರವಾಸ ಹೋಗೋ ಚಾಳಿ ಅಲ್ಲಿನ ಸ್ಥಳ ಅಭಿವೃದ್ದಿ ಆಗದು ಹ್ಯಾಂಗರ ಇರಲಿ , ಪರಿಸರ ಎಷ್ಟು ಹಾಳ ಮಾಡಲತಿವಿ ಅಂಬೋ ಬಗ್ಗೆ ಯಾರಿಗೂ ಚಿಂತಿ ಇಲ್ಲ ಬಿಡ್ರಿ.
ಕಾರು , ಜೀಪ್ , ಬಸ್ಸು ಮಾಡಕ್ಕೊಂಡು ಹಿಂಡು ಹಿಂಡು ಜನ ಧಾರ್ಮಿಕ ಕ್ಷೇತ್ರಕ್ಕ ಹೋಗುವಾಗ ದಾರಿಲೆಲ್ಲ ಮಲ ಮೂತ್ರ ಮಾಡಿ , ಮತ್ತ ಅದೆ ಹೊಲಸೆಲ್ಲ ಮಳಿ ನೀರಿನ ಜೋಡಿ ನದಿ ಸೇರಿ ಮತ್ತ ನಾವು ಅದೇ ನದಿಯೊಳಗ ಹೋಗಿ ಪುಣ್ಯ ಸ್ನಾನ ಮಾಡಿ…
ಗಿಡವ ಕಂಡಲ್ಲಿ ಸುತ್ತು ಹಾಕಿ , ನೀರು ಕಂಡಲ್ಲಿ ಮುಳುಗು ಹಾಕಿ ನಮ್ಮ ಭಕ್ತಿಯನ್ನು ಆಚರಿಸ್ತೆವೆ.
ಇನ್ನೋ ಒಂದು ವಿಷಯ ನನಗ ಆಶ್ಚರ್ಯ ಉಂಟ ಮಾಡತದ. ಹೆಣ್ಣ ಮಕ್ಳು ಸ್ವಲ್ಪ ಮೈ ಕೈ ಕಾಣೋ ಬಟ್ಟೆ ಹಾಕ್ಕೋಂಡ್ರ ಇದು ನಮ್ಮ ಸಂಸ್ಕೃತಿ ಅಲ್ಲ ಅಂಬೋ ಬುದ್ದಿವಂತ್ರು , ಅಲ್ಲಿ ಕುಂಭ ಮೇಳದಲ್ಲಿ ಸಾವಿರಾರು ಹೆಣ್ಣಮಕ್ಳು ನೀರಲ್ಲಿ ಮುಳಗಿ ಮೈಗೆ ಅಂಟಿದ ಹಸಿ ಬಟ್ಟೆಗಳನ್ನು ಗಂಗಾ ನದಿ ದಡದಲ್ಲೆ ಕುಳಿತು ಹರ ಸಾಹಸ ಮಾಡ್ತ ತೆಗೆಯುತ್ತಿವದನ್ನು ವಿಡಿಯೋದಾಗ ನೋಡ್ದಾಗ ಏನು ಅನಿಸಲ್ಲ ಏನು..! ಐ ಅವ್ರೀಗೆನು ಮಂದ್ಯಾಗೆ ಬಟ್ಟೆ ಬದಲಾಯಿಸಲಕ್ಕ ಏನಾಗ್ಯಾದ , ಸರ್ಕಾರ ಎಷ್ಟೋ ವ್ಯವಸ್ಥೆ ಮಡ್ಯಾರ ಅನ್ನಬಹುದು.
ಯಾವ ವ್ಯವಸ್ಥೆ ಆದ್ರೂ ನಮ್ಮ ದೇಶದಲ್ಲಿ ಸ್ವಲ್ಪ ಹೊತ್ತಿಗೆ ಅವ್ಯವಸ್ಥೆ ಆಗರ ಆಗತದ, ಯಾಕಂದ್ರ ನಮಗ ತಾಳ್ಮೆ ಇರಲ್ಲ . ಕುಂಭ ಮೇಳದಾಗ ಹೆಣ್ಣು ಮಕ್ಕಳು ನೀರಲ್ಲಿ ಮುಳಗಿ ಚಳಿದಾಗ ದೂರ ದೂರ ಬಟ್ಟೆ ಬದಲಾಸೋ ಸ್ಥಳಕ್ಕ ಹೋಗಲಿಕ್ಕ ಆಗ್ದೆ ಜಲ್ದಿ ಮೈಮ್ಯಾಲಿನ ಹಸಿ ಬಟ್ಟಿ ತೆಗದು ಒಣಗಿದ ಬಟ್ಟಿ ಹಾಕ್ಕೋಳೋ ಧಾವಂತದಾಗ ಸುತ್ತ ಯಾರು ಇದ್ದಾರ ಅಂತ ಕೂಡ ನೋಡೊ ತಾಳ್ಮೆ ಇಲ್ಲ ಅವ್ರಿಗಿ . ಆದ್ರ ವಿಡಿಯೋ ಮಾಡೋರ ಕ್ಯಾಮೇರಾದಾಗ ಎಲ್ಲಾ ಸೆರೆ ಆಗ್ತದ. ಇಂತಹ ಸಂಸ್ಕೃತಿ ನಾವೆಲ್ಲ ಕುಳಿತಲ್ಲೆ ನೋಡತಿದ್ದೆವೆ.
ಧಾರ್ಮಿಕ ಕ್ಷೇತಗಳಿಗಿ ಪ್ರವಾಸ ಹೋಗುವದು ನಮ್ಮ ಜಡತ್ವ ಕಳೆದು ಒಂದಿಷ್ಟು ಹಗುರ ಮಾಡ್ತದ ಅಂತ ಹೋಗಬೇಕು. ಆದ್ರ ಇಂತ ಸಮಯದಾಗೆ , ಇಷ್ಟೆ ವರ್ಷಗಳ ನಂತರ , ಇಷ್ಟ ರಶ್ ನಲ್ಲಿಯೇ , ಇಂತಿಂತ ನಕ್ಷತ ಗೋತ್ರದಲ್ಲೆ ಹೋಗಬೇಕು . ಇಂತಾ ಸಂದರ್ಭದಾಗ ಹೋದ್ರ ಮಾತ್ರ ಪುಣ್ಯ ಸಿಗತದ , ಮೋಕ್ಷ ಸಿತದ , ಪಾಪ ಕಳಿತದ ಅಂಬೋ ನಂಬಿಕೆ ಜನರಲ್ಲಿ ಇರೋವರೆಗೂ ಇಂತಹ ಸಾವು ನೋವುಗಳು ಸಂಭವಿಸ್ತಾನೆ ಇರತಾವ.
ದೇವರು , ಗುಡಿ , ಜನಜಾತ್ರೆ , ಕಾಲುತುಳಿತ , ಸಾವು ನೋವುಗಳು ಹಿಂದೆಯು ಘಟಿಸಿದವುಗಳು , ಮುಂದೆ ಮತ್ತೆ ಮತ್ತೆ ಘಟಿಸ್ತಾನೆ ಇರತಾವೆ ಅದರೊಂದಿಗೆ ನಾವು ಮತ್ತ ಮತ್ತೆ ಭಾಗಿ ಆಗತಾನೆ ಇರತೀವಿ. ಇಲ್ಲೇನು ಬದಲಾಗಲ್ಲ ಅನಿಸ್ತದ.
ಜ್ಯೋತಿ ಡಿ ಬೊಮ್ಮಾ