ಸುವಿಧಾ ಹಡಿನಬಾಳ ಅವರ ಕವಿತೆ-ನನ್ನ ಕವಿತೆ

ಮೊಟ್ಟೆ ಚಿಕ್ಕಿ ಬಾಳೆಹಣ್ಣು ಬಿಸಿಯೂಟ
ಎಸ್ ಎನ್ ಎಪ್, ,ಎಂಡಿಎಂ,
ಯುಡೈಸ್, ಅಪಾರ್, ಆಧಾರ್

ಸ್ಯಾಟ್ಸ, ಪುಷ್ಠಿ, ಸಚೇತನ , ವೆಂಡರ್
ಸರ್ವರ್, ಲಾಗಿನ್, ತಾಂತ್ರಿಕ ಸಮಸ್ಯೆ
ಗಳಲ್ಲಿ ಕಳೆದು ಹೋಗಿದೆ ನಿದ್ದೆ !

ಓದು ಅಭಿಯಾನ, ಮಕ್ಕಳ ರಕ್ಷಣಾ ನೀತಿ
ಪೂರ್ವ ವಿದ್ಯಾರ್ಥಿ ಸಂಘ, ಪರಿಹಾರ
ಬೋಧನೆ, ಎಫ್ ಎಲ್ ಎನ್ ಮಾಹಿತಿ

ನೀಡುವಲ್ಲಿ ಸಮಯ ಸರಿತಾ ಇದೆ
ಆನ್ಲೈನ್ ಅಪ್ಲೋಡ್, ಸುತ್ತೋಲೆ ಓದುವಲ್ಲಿ
ಕಣ್ಣು ಮಂಜಾಗುತ್ತಿದೆ ತಲೆ ಖಾಲಿಯಾಗಿದೆ

ಇಷ್ಟಾಗಿಯೂ ಅಲ್ಲೊಂದು ಇಲ್ಲೊಂದು
ಕೆಸರಲ್ಲರಳಿದ ಕಮಲದಂತೆ ಮೂಡಿ
ಬರುತ್ತಿದೆ ನನ್ನ ಕವಿತೆ ಜೀವಂತಿಕೆಯ

ಕುರುಹಾಗಿ, ನನ್ನೊಳಗಿನ ಇರುವಾಗಿ
ನನ್ನೊಳಗೇ ಇರು, ನನ್ನತನಕ್ಕೊಂದು
ಮುಕುಟವಾಗಿ ನಾ ಕಳೆದು ಹೋಗದಂತೆ…..


Leave a Reply

Back To Top