ಅವನಾಗದಿರಲಿ.
ಪ್ರಮೀಳಾ. ಎಸ್.ಪಿ.ಜಯಾನಂದ.
ಸದ್ದು ನಿಲ್ಲಿಸಿದ್ದ ನಾಯಿ
ಮತ್ತೇಕೆ ಸದ್ದು ಮಾಡುತ್ತಿದೆ…?
ಇಷ್ಟು ದಿನ ಮೌನವಾಗಿದ್ದ ಶುನಕ…ಇಂದೇಕೆ ಸದ್ದು..??
ಅದೊ..ಅವನು ಬಂದಿರುವನೆ..
ಚಪ್ಪರದ ಸಂಭ್ರಮ..ವಾಲಗದ ಸದ್ದು ಕೇಳಿಸಿತೆ ಅವನಿಗೆ
ಹೂಹುಂ…ಇಲ್ಲ,ಇಲ್ಲ..
ಆ ಹೊತ್ತು
ಸದ್ದು ಮಾಡದೇ ಎದ್ದು ಹೋದನಲ್ಲ… ಆ ರಾಜ..
ಜಗದ ಉದ್ದಾರ ಕ್ಕೆಂದು ನಂಬಿತು ಜಗತ್ತು
ಆದರವಳ ಮಗ…ಏನೆಂದು ದುಃಖಿಸಿದನೋ
ಇವನು
ಮಗ್ಗಲು ಬದಲಿಸುವುದರೊಳಗೆ ಎದ್ದು ಹೋಗಿದ್ದು ಯಾಕೆಂದು ತಿಳಿಯಬಲ್ಲದೆ ನನ್ನ ಹಸುಗೂಸು..??
ಗಟ್ಟಿಯಾಗದಿದ್ದರೂ ಮನಸ್ಸು
ಕಲ್ಲಾದ ದೇಹ
ದುಡಿಯಿತು
ಮಗಳ ಸಾಕುವುದು ಸುಲಭದ ಮಾತೇನು..
ಅದು ಬರೆಯಲಾಗದ ಕವಿತೆ,
ಹಾಡಲು ಬರದ ಹಾಡು..
ಅಳುವ ಕೂಸಿಗೆ ಹಾಲುಣಿಸಿ
ಕಂಬನಿ ಒರೆಸುವ ಕೈ ಅರಸಿ
ಅವನ ಹುಡುಕುವ ವ್ಯರ್ಥ
ಪ್ರಯತ್ನ ಮಾಡಬಾರದಿತ್ತು ನಾನು
ನಾಳೆ ಮಗಳು ಹಸೆ ಮಣೆ ಏರಲಿದ್ದಾಳೆ
ಬಂದವರೆಲ್ಲಾ..
ಅವಳ ಅಪ್ಪನೆಂಬುವನ ಗುರುತಿಸಿ
ಕೈ ಕುಲುಕಲು ಕಣ್ಣಾಡಿಸುತ್ತಿದ್ದಾರೆ..
ಅವನದ್ದು ಬರೀ ಹುಟ್ಟಿಸುವ ಚಟ..!?
ನೀರು-ನೆರಳಿದ್ದಲ್ಲಿ ಮೇದು
-ಮಲಗುವ ದನದಂತೆ
ಹೆಣ್ಣು ಶ್ವಾನವೊಂದ ಕಂಡರೆ
ಓಡುವ ಗಂಡು ನಾಯಿಗಳ
ದಂಡಿನಂತೆ
ಅದೆಷ್ಟೋ ದೇಹಗಳ ಹಿಂದೆ ಇವನು ಓಡಿದ್ದಾನೆ..ಸುಖ ಪಿಪಾಸಿ
ಕೈಯಲ್ಲಿನ ಕಾಸು
ತೊಡೆಯೊಳಗಿನ ಕಸುವು
ಸೋರಿಹೋಗುವಷ್ಟು ದಿನ.
ನಾಳೆ ಮಗಳ ಬದುಕಿನಲಿ
ಕಾಲಿಟ್ಟವನಾದರೂ
ಇವನಂತೆ ಆಗದಿರಲಿ….
ಬೊಗಳುತ್ತಿದ್ದ ನಾಯಿ
ಮತ್ತೆ ಮುದುಡಿ ಮಲಗಿತು.
ಹೆಂಗಳೆಯರ ಬಳೆಗಳ ಸದ್ದು
ಕೇಳುತ್ತಿದೆ..
ಗಂಗೆ ತರಲು ಹೊರಟಿರಬೇಕು..
ಸೊಗಸಾದ ಕವಿತೆ. ಅದೆಷ್ಟೋ ಹೆಣ್ಣುಗಳ ನೈಜ ಬದುಕಿನ ಚಿತ್ರಣ.
Intresting