ಗ್ರಂಥಾಲಯದಲ್ಲಿ
ಮೂಲ ಮಲಯಾಲಂ:ರವೀಂದ್ರನ್ ಪಾಡಿ
ಕನ್ನಡಕ್ಕೆ:ಚೇತನಾ ಕುಂಬ್ಳೆ
ಗ್ರಂಥಾಲಯದಲ್ಲಿ ಎಲ್ಲವೂ
ಬಂಧನಕ್ಕೊಳಗಾಗಿವೆ.
ಕಪಾಟಿನ ತುಂಬ
ಪುಸ್ತಕಗಳು
ಎಷ್ಟೊಂದು ಬದುಕುಗಳು
ಎಷ್ಟೊಂದು ಕಾಲ,
ಎಷ್ಟೊಂದು ಜ್ಞಾನಗಳು
ಪೆಟ್ಟಿಗೆಯೊಳಗೆ
ಅದರಲ್ಲಿ ಕೆಲವು
ಮಮ್ಮಿಗಳ ಹಾಗೆ
ನಿತ್ಯ ವಿಶ್ರಾಂತಿ ಪಡೆಯುತ್ತಿವೆ
ಗಾಜಿನ ಮನೆಯೊಳಗೆ
ಒಂದಿಷ್ಟು ಉಸಿರು
ಮತ್ತೊಂದಿಷ್ಟು ಬೆಳಕು
ಹಂಬಲಿಸಿತು
ಅವುಗಳನ್ನು ತಲುಪಲು
ಒಂದು ಪ್ರಪಂಚವೇ ಅಲ್ಲವೇ
ಎಲ್ಲ ಕೃತಿಗಳೂ
ನಾನಂದುಕೊಂಡೆ
ಮನದೊಳಗೆ
ತೆರೆದಿಡಬೇಕು ನಿತ್ಯವೂ
ಗ್ರಂಥಾಲಯಗಳ ಬಾಗಿಲುಗಳನ್ನು
ಜೊತೆಗೆ ಕಪಾಟುಗಳ
ಬಾಗಿಲುಗಳನ್ನೂ
ಹಾಳೆಗಳನ್ನೊಮ್ಮೆ ತಿರುವಿ ಹಾಕಿ
ಗಂಧವನ್ನು ಆಘ್ರಾಣಿಸಬೇಕು
ಪುನಃ ಸ್ಥಾನ ಬದಲಿಸಿ
ಇಡಬೇಕಿದೆ
ಅವುಗಳನ್ನೂ ತಲುಪಿ ಬಿಡಲಿ
ವರ್ತಮಾನದ ವಿಚಾರಗಳು
ಹೊಸ ಬೆಳಕು,
ಹೊಸ ಗಾಳಿ
***********