ಕಾವ್ಯಯಾನ

ಕಿಟಕಿ

woman behind leaves

ದೀಪ್ತಿ ಭದ್ರಾವತಿ

ನೀನು ನನ್ನಿಂದ ದೂರ ಸರಿದಿದ್ದೀಯೆ
ಆದರೂ ಮೋಡದ
ಅಂಚುಗಳಲಿ
ನಾನು ನಿನ್ನನ್ನು ಕಾಣುತ್ತೇನೆ

ಮುಸ್ಸಂಜೆ ಕೆಂಬಣ್ಣದಲಿ ನೆನಪ ಅಲೆಗಳು
ಓಕುಳಿಯಾಡುವಾಗಲೆಲ್ಲ
ನಿನ್ನ ಮುಂಗುರುಳು ನನ್ನ
ಕಣ್ಣಿನಲಿ
ಇಣುಕಿದಂತೆ ಭಾಸವಾಗುತ್ತದೆ

ವ್ಯಾಖ್ಯಾನಿಸುತ್ತೇನೆ
ನಾನು ನಿನ್ನನ್ನು ಮರೆತಿದ್ದೇನೆ ಎಂತಲೇ..
ಆದರೆ
ಬಿಟ್ಟು ಹೋದ ಹೆಜ್ಜೆ ಗುರುತುಗಳ
ಹಾದಿ ಮಳೆಗಾಲದಲಿ ಮಿದುವಾಗಿ
ಬೇಸಿಗೆಯಲಿ ಒರಟಾಗಿ
ಬೆರಳಿಗಂಟುವಾಗ
ಅರ್ಧ ಬರೆದಿಟ್ಟ ಕವಿತೆಯೊಂದು
ಎದೆಯಲ್ಲಿ ಗೂಡು
ಕಟ್ಟುತ್ತದೆ

ಮತ್ತೆ ಇನ್ನೆಂದು ನಿನ್ನ ಭೇಟಿಯಾಗುವುದಿಲ್ಲ
ಎಂದೆ ನಂಬುತ್ತೇನೆ.
ಮುಚ್ಚಿ ಎದ್ದು ಹೋದ ಕಿಟಕಿಯಲಿ
ಬೆಳಕ ಗೀರೊಂದು ತಡತಡಕಿ ಬರುವಾಗ
ನಿನ್ನ ಕಣ್ಣ ಮಿಂಚು
ಇರುಳ ಸರಳುಗಳ
ತೂರಿ ನನ್ನೆಡೆಗೆ ಬಂದಂತೆ ಅನ್ನಿಸುತ್ತದೆ

ಮತ್ತೆ ಮತ್ತೆ ನಿನ್ನ ನೆನಪುಗಳ
ಬೇಕೆಂದೆ ದೂರ ಅಟ್ಟುತ್ತೇನೆ
ಅವು ಜಾತ್ರೆಯಲಿ ಕೈ ಬಿಟ್ಟ ಕೂಸಿನಂತೆ
ಬಿಕ್ಕುವಾಗಲೆಲ್ಲ
ಹೆಕ್ಕಿ ಎದೆಯ ಕಪಾಟಿನಲಿ ಬಚ್ಚಿಟ್ಟುಕೊಳ್ಳುತ್ತೇನೆ
ಮತ್ತವು ನಿನಗೆ ಕಾಣದೆ
ದಿಕ್ಕು ತಪ್ಪಿಸುವಾಗ
ನಗುವಿನ ಸವಕಲು ನಾವೆಯೊಂದು
ತಣ್ಣಗೆ ನನ್ನತ್ತ ತೇಲಿ ಬರುವುದು
ಕಾಣತೊಡಗುತ್ತದೆ

*********

4 thoughts on “ಕಾವ್ಯಯಾನ

Leave a Reply

Back To Top