ಕಾವ್ಯಯಾನ

ಆಪ್ತ ಗೆಳೆಯನ ಸಾವು

old bicycle, wreck, waste, rust, scrap, garbage, metal, broken ...

ವೆಂಕಟೇಶ್ ಚಾಗಿ

ಅವನು ನನ್ನೊಂದಿಗೆ ಪ್ರತಿದಿನವೂ
ಶಾಲೆಗೆ ಬರುತ್ತಿದ್ದ
ನನ್ನ ಆಟ ಪಾಠ ಕೀಟಲೆಗಳಿಗೆ
ಅವನು ಸಾಕ್ಷಿಯಾಗಿದ್ದ
ಪಾಪ, ಅವನು ಮೂಗ
ನನ್ನೊಂದಿಗೆ ಮಾತನಾಡದಿದ್ದರೂ
ಭಾವನೆಗಳನ್ನು
ಅರ್ಥಮಾಡಿಕೊಳ್ಳುವ
ಆತ್ಮಬಾಂಧವ
ನನ್ನಿಂದ ಬಯಸುವುದು
ನನ್ನ ತುಳಿತವಷ್ಟೇ
ಪ್ರತಿದಿನವೂ ತುಳಿತಕ್ಕೊಳಗಾದರೂ
ಅವನು ಬದುಕಿದ್ದು ನನಗಾಗಿಯೇ
ಅವನ ಕಾಲುಗಳಿಗೆ
ನೋವುಗಳು ಚುಚ್ಚಿದಾಗ
ಅವನೇ ಉಸಿರೇ ಹೋಗುತ್ತಿತ್ತು
ಆಗಾಗ ಉಸಿರು ನೀಡಿದಾಗ
ಮತ್ತೆ ಬದುಕುತ್ತಿದ್ದ
ಪ್ರತಿದಿನದ ನನ್ನ ಸೇವೆಗಾಗಿ;
ನನ್ನ ಭಾರವನ್ನೆಲ್ಲ ಅವನು
ನಿರಾಕರಿಸದೇ ಹೊರುತ್ತಿದ್ದ
ಮತ್ತೆ ನನ್ನ ಭಾರವನ್ನೂ ಸಹ.
ಅವನೊಂದಿಗೆ ನಾನು ಹಂಚಿಕೊಂಡ
ಮಾತುಗಳು ಸಾವಿರಾರು
ನೀಡಿದ ಮುತ್ತುಗಳೂ ಸಾವಿರಾರು
ತಾನು ಕಷ್ಟಗಳ ಅಪ್ಪಿದರೂ
ಕ್ಷಣಕ್ಷಣವೂ ನೋವನ್ನುಂಡರೂ
ನನ್ನ ಗಾಳಿಯಲ್ಲಿ ತೇಲಿಸುತ್ತಿದ್ದ
ನಾನೇ ಮಾಡಿದ ಗಾಳಿಪಟದಂತೆ.
ಅವನುಂಡ ಬಿಸಿಲು
ಆ ರೈತನಿಗೂ ದಕ್ಕಿಲ್ಲ
ಮಳೆಯ ಹನಿಗಳ ಸುಖವನ್ನು
ಪ್ರತಿಭಾರಿಯೂ
ಅನುಭವಿಸುವವನು ಅವನೇ
ಚಂದ್ರ ರಜೆ ಹಾಕಿದಾಗ
ಗೆಳೆಯನ ಹಣೆಯ ಮೇಲೆ
ಅಲ್ಲಲ್ಲಿ ಮೈಮೇಲೆ
ಬಂದು ಕುಳಿತುಕೊಳ್ಳುತ್ತಿದ್ದ
ಸತ್ತ ಹೂವುಗಳು
ಅವನ ಮುಡಿ ಏರಿದರೂ
ಮಣ್ಣಿಗೆ ಕೆಡವಿ ಮತ್ತೆ
ಬದುಕಿಸುವ ಸಾಹಸ ಅವನದು
ಅವನು ಉದಾರಿ ನಿಸ್ವಾರ್ಥಿ
ಸ್ವಾಭಿಮಾನಿ ಮತ್ತೆ ಆತ್ಮೀಯ ಸೇವಕ
ದಿನಗಳು ಕಳೆದಂತೆ
ನಾನು ಮಾತ್ರ ಬದಲಾದೆ ಅವನಲ್ಲ
ಆ ವಿರಹವೇದನೆಯೇನೋ
ಅವನನ್ನು ಮಣ್ಣಾಗಿಸಿತು ಆ
ಗುಜರಿ ಅಂಗಡಿ
ಅವನನ್ನು ಸೈಕಲ್ ಎನ್ನಲಾದೀತೇ
ಅದು ನನ್ನ ಗೆಳೆಯನ ಸಾವು ಅಷ್ಟೇ.

=> ವೆಂಕಟೇಶ ಚಾಗಿ

2 thoughts on “ಕಾವ್ಯಯಾನ

  1. ಮಣ್ಣಿಗೆ ಕೆಡವಿ‌‌ ಮತ್ತೆ
    ಬದುಕಿಸುವ ಸಾಹಸ ಅವನದು
    ಅದ್ಭುತ ಸಾಲು
    ಎದೆಗೆ ನಾಟಿತು ಕವಿತೆ

Leave a Reply

Back To Top