ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಸರಳ ರೇಖೆಗಳು

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ಸರಳ ರೇಖೆಗಳು

ಎಷ್ಟು ಹೇಳುವುದಿತ್ತು ನಿನ್ನಲ್ಲಿ..
ಎದೆಯೊಳಗುಳಿದ ಮಾತುಗಳು
ಪ್ರತಿಭಟಿಸುತ್ತಲೇ ಇವೆ ನೋಡು
ನನ್ನ ವಿರುದ್ಧ…

ಬೇಲಿ ಹೂವಿಗೆ ಬಣ್ಣ ಬಳಿದು
ನೀನೇನೋ ಹೋಗಿಯೇ ಬಿಟ್ಟೆ
ಘಮಿಸುವ ಮುನ್ನವೇ..
ನನ್ನ ಹೂವಾಗಿಸುವ ಭರದಲ್ಲಿ
ನೀನೇ ನೆಲದಾಳಕ್ಕೆ ಇಳಿದಂತೆ!

ತೀರದಾಚೆಯಿಂದ ಈಚೆಗೆ ಬರದೆಯೇ
ತೀರಗಳ ಅಂತರಕ್ಕೆ ಬೆಚ್ಚಿ
ನನ್ನೆಡೆಗೆ ಕನ್ನಡಿ ಹಿಡಿಯಲೆತ್ನಿಸಿದೆ
ಪ್ರೇಮಕ್ಮೆ ತಪ್ಪು ಒಪ್ಪುಗಳ ಹಂಗೇಕೆ ಹೇಳು
ನೀ ದಿಟ್ಟಿಸಿದ ಕಣ್ಣಕಾಂತಿ
ಎದೆಯ ಇರುಳಿಗೆ ಬೆಳಕಾದರೆ ಸಾಕಿತ್ತು!

ಜೊತೆ ಜೊತೆಗೆ ಹೊರಟ ಸರಳ ರೇಖೆಗಳೆರಡು
ಸಂಧಿಸುವುದಿಲ್ಲವೆಂಬುದೇನೋ ನಿಜ
ಹೊರಡೋ ದಿಕ್ಕು ಬದಲಿಸಬೇಕಿತ್ತಷ್ಟೇ…
ಆದರೂ ಪರಸ್ಪರ ಕಣ್ತುಂಬಿಕೊಳ್ಳುತ್ತಾ..
ಜೊತೆಗೆ ಸಾಗಿ ಜೊತೆಗೆ ಕೊನೆಯಾಗಬಹುದಿತ್ತೇನೋ..
ರೈಲು ಕಂಬಿಗಳಂತೆ….

ಬದುಕಿನ ಜೋಕಾಲಿಯಲ್ಲಿ
ತೂಗಿ ಹೋಗಿರುವೆ..ನೀ
ತೂಗುತ್ತಲೇ…ಇರುವೆ ನಾ
ನಿಲ್ಲುವ ಹೊತ್ತು ಮತ್ತೇ ಬಂದೆ ಬರುತ್ತಿ ಎಂಬ ನಿರೀಕ್ಷೆಯಲ್ಲಿ…

ಎದೆ ತುಂಬಾ ಹರಿದಾಡುವ
ನೆನಪ ಕಂಬಳಿ ಹುಳುವನ್ನು ಪೋಷಿಸುತ್ತಿರುವೆ ಮಿಡುಕಾಡದೆ
ನಾಳೆ ಚಿಟ್ಟೆಯಾಗಿ ಕಚಗುಳಿಯಿಡಬಹುದೆಂಬ ಹಂಬಲವಷ್ಟೇ…

ಚಡಪಡಿಸುತ್ತಲೇ ಇರುವೆ ನಿತ್ಯ..
ಬಿಚ್ಚು ನಗುವಿನ ಹಿಂದೆ
ಬತ್ತದ ಕಣ್ಣೀರಿಗೆ ರಾತ್ರಿ ಮುಳುಗುತ್ತಿರುವಾಗ..
ಗರಿಕೆ ಬೇರಿನಂತೆ ಎದೆಯಾಳಕ್ಕಿಳಿದ
ನಿನ್ನ ನೆನಪುಗಳ ಕೀಳಲಾಗದೆ..‌


ಲೀಲಾಕುಮಾರಿ ತೊಡಿಕಾನ

Leave a Reply

Back To Top