ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
“ಸಾಲು ಮೂರು.. ಸಾರ ನೂರು.!”
ಕಾಲ, ಬದುಕು, ಬಂಧಗಳನು
ಉಪೇಕ್ಷಿಸುವ ಮುನ್ನ ಯೋಚಿಸಿ
ಮತ್ತೆ ಅಪೇಕ್ಷಿಸಿದರೂ ಸಿಗದು.!
ಶಂಕೆಯಲಿ ವ್ಯಕ್ತಿ ವ್ಯಕ್ತಿತ್ವಗಳನು
ಪರೀಕ್ಷಿಸಿದ ಮೇಲೆ ಯಾಚಿಸಿ
ಮನಸೊಡೆದರೆ ಮತ್ತೆ ಸೇರದು.!
ಅಕ್ಕರೆ ಆಪ್ತತೆ ಆತ್ಮೀಂiÀiತೆಗಳನು
ಕಳೆದುಕೊಳ್ಳುವ ಮುನ್ನ ಚಿಂತಿಸಿ
ಮರಳಿ ನಿರೀಕ್ಷಿಸಿದರು ಬಾರದು.!
ದೋಷ ದೌರ್ಬಲ್ಯ ನ್ಯೂನತೆಗಳನು
ಎತ್ತಾಡುವ ಬದಲು ಮನ್ನಿಸಿ
ಟೀಕಿಸುತಿದ್ದರೆ ಸಂಬಂಧ ಕೂಡದು.!
ಎದುರಿನ ಮನಸು ಹೃದಯಗಳನು
ನಮ್ಮಂತೆಯೇ ಎಂದು ಭಾವಿಸಿ
ಅಲಕ್ಷಿಸಿದರೆ ಭಾವ ಬೆಸೆಯದು.!
ವೃಥಾ ಬಿಂಕ ಬಿಗುಮಾನಗಳನು
ಅಲಂಕರಿಸಿಕೊಳ್ಳದೆ ಸದಾ ತ್ಯಜಿಸಿ
ಬೀಗಿದರೆ ಜೀವಗಳು ಬೆರೆಯದು.!
ಖಿನ್ನತೆ ಬೇಸರ ಅನುಮಾನಗಳನು
ಆವರಿಸಿಕೊಳ್ಳದೆ ನಿತ್ಯ ನಂದಿಸಿ
ನಗೆ ಮರೆತರೆ ಬಾಳು ನಾಕವಾಗದು.!
ಸೋಲು ಹತಾಶೆ ಅವಮಾನಗಳನು
ಆಶ್ರಯಿಸದೆ ಆದಷ್ಟು ದೂರವಿರಿಸಿ
ಪರಿತಪಿಸಿದರೆ ಪಯಣ ಸಾಗದು.!
ಈಕಾಲ ಈದಿನ ಈಕ್ಷಣಗಳನು
ಕಡೆಗಣಿಸಿ ಕಳೆಯದೆ ಆರಾಧಿಸಿ
ಕೈಜಾರಿದರೆ ಮತ್ತೆಂದೆಂದು ಸಿಕ್ಕದು.!
ಹುಟ್ಟುಸಾವು ನಡುವಿನ ನಾಲ್ಕುದಿನ
ವ್ಯರ್ಥವಾಗಿಸದೆ ವರ್ಣವಾಗಿಸಿ
ಉಸಿರಳಿದರೆ ಮತ್ತೇನೂ ದಕ್ಕದು.!
ಎ.ಎನ್.ರಮೇಶ್.ಗುಬ್ಬಿ.