ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಸಮಾಜದ ಸ್ವಾಸ್ಥ್ಯ ನಮ್ಮ ಜವಾಬ್ದಾರಿ
ನಾವೆಲ್ಲರೂ ವಾಸಿಸುತ್ತಿರುವ ಜಗತ್ತು…ಪ್ರಕೃತಿಯ ಕೆಲಭಾಗವಷ್ಟೇ.. ಆದರೆ ಇಲ್ಲಿ ಜೀವಿಸುವ ಪ್ರತಿಯೊಬ್ಬರು ಅವರದೇ ಯಾವ ಪ್ರಕೃತಿಯಲ್ಲಿ ಬದುಕುತ್ತಿದ್ದಾರೆ.ಮನುಷ್ಯನ ಜೀವಿತಾವಧಿ ಪ್ರಾಣಿ ಪಕ್ಷಿಗಳಿಗಿಂತ ಭಿನ್ನ!. ಕಾರಣ,ಮಾನವ ಬುದ್ದಿವಂತ ಜೀವಿ! ಸಂಘ ಜೀವಿ!.ಹೊಂದಿಕೊಂಡು ಬಾಳುವ ಮನೋಭಾವದವ.ನಗನಾಣ್ಯಗಳು ಇಲ್ಲದಿರುವ ಕಾಲದಿಂದಲೂ, ದವಸ ಧಾನ್ಯಗಳು ಪರಸ್ಪರ ಸಂಪರ್ಕ ಕಲ್ಪಿಸುವ ಮಾಧ್ಯಮಗಳಾಗಿ ಅವಶ್ಯಕತೆಗಳನ್ನು ಪೂರೈಸಲು ಇವು ಸಹಾಯ ಮಾಡಿದ್ದರ ಪರಿಣಾಮ, ಒಬ್ಬರಿಗೊಬ್ಬರು ಸಹಕಾರ ಮನೋಭಾವಕ್ಕೆ ತಲೆಬಾಗಿದ್ದನ್ನು ಇತಿಹಾಸ ಹೇಳುತ್ತದೆ.ಮನುಷ್ಯ ತನ್ನ ಸ್ವಾರ್ಥಕ್ಕಾಗಿ, ತನ್ನವರ ಸ್ವಾಸ್ಥ್ಯವನ್ನು ಬಲಿಕೊಟ್ಟ ಉದಾ.ಗಳು ಇವೆ.ಆಗಿನ ಸಾಮಾಜಿಕ ವ್ಯವಸ್ಥೆ, ಆರ್ಥಿಕ ವ್ಯವಸ್ಥೆಯು, ಜನಸಾಮಾನ್ಯರ ಬದುಕನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕುಟುಂಬ ಹಾಗೂ ಸಂಘ ಜೀವನ ಎಲ್ಲವೂ ಒಂದೇ ಸೂರಿನಲ್ಲಿ ವ್ಯವಸ್ಥಿತವಾಗಿ ನಿರ್ಮಿಸಿದ ಕೊಡುಗೆ ನಮ್ಮ ಪೂರ್ವಜರ ಶ್ರಮದ ಫಲವಾಗಿ ಇಂದು ನಾವು ಅಧ್ಯಯನ ಮಾಡಲು ಸಹಕಾರಿಯಾಗಿದೆ. ನಾಗರಿಕತೆಯ ತೊಟ್ಟಿಲು ಗಳು ಎಂದಿಗೂ ವಿಫಲವಾದ ದಾಖಲೆಯಿಲ್ಲ.ಅವೆಲ್ಲವೂ ಇಂದಿನ ಪೀಳಿಗೆಗೆ ಸಾಮಾಜಿಕ ಚಿಂತನೆಯನ್ನು ಬಳಸಿಕೊಂಡು ಹೊಸ ಸೃಷ್ಟಿ ನಿರ್ಮಿಸಲು ಸಾವಿರಾರು ವರ್ಷಗಳಿಂದ ಸತತವಾಗಿ ಅನೇಕ ಅಧ್ಯಯನಕಾರರು ಗುರುತಿಸಿ, ಸೃಜಿಸಿ,ಬರಹ ರೂಪದಲ್ಲಿ ಸಂರಕ್ಷಿಸಿದ್ದಾರೆ.ಇನ್ನೂ ಆ ಕೆಲಸ ನಿರಂತರವಾಗಿ ನಡೆಯುತ್ತಿದೆ.
ಸಾಮಾಜಿಕ ವ್ಯವಸ್ಥೆ ಬಗ್ಗೆ ವಿಚಾರ ಮಾಡಿದರೆ, ಕುಟುಂಬಗಳು ಒಂದೆಡೆ ಸೇರಿ ಇರುವುದು,ವಿವಿಧ ಕೆಲಸಗಳನ್ನು ಹಂಚಿಕೊಂಡು,ತಮಗೆ ನೀಗುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು,ಸಮಾಜದ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ತಮ್ಮ ಕೊಡುಗೆ ನೀಡಿದ್ದು,ಒಂದು ಸಮಾಜದಲ್ಲಿ ಇರಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಅನೇಕ ರೂಪಾಂತರ ಬದಲಾವಣೆಗಳು,ಸುರಕ್ಷತಾ ಕ್ರಮಗಳು,ಆಚರಣೆಗಳು, ಸಂಪ್ರದಾಯಗಳು,ಕಸುಬುಗಳು, ಪ್ರಾಣಿ, ಪಕ್ಷಿಗಳ ಸಂರಕ್ಷಣೆ,ಗುರುಕುಲ ಪದ್ದತಿ ಕ್ರಮೇಣ ಶಿಕ್ಷಣ ಕ್ಷೇತ್ರದಲ್ಲಾದ ಬದಲಾವಣೆಗಳು, ಇವೆಲ್ಲವೂ ದೇಶಾದ್ಯಂತ ಸಂಚರಿಸಿ ತಮ್ಮ ತಮ್ಮ ರಾಜ್ಯಗಳಲ್ಲಿ ತಮ್ಮ ಸಂಸ್ಕೃತಿಗಳ ಪ್ರಭಾವದಿಂದಾಗಿ ವಿಶೇಷ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ. ಇಷ್ಟೆಲ್ಲ ಆದಾಗ್ಯೂ, ಒಂದಂತು ಸತ್ಯ
ಅನ್ಯಾಯ,ಅತ್ಯಾಚಾರ,ಕೊಲೆ,ಸುಲಿಗೆ,ಮೋಸ,ವಂಚನೆ ಇವು ಕೂಡ ಸಮಾಜದ ಒಂದು ಅಂಗವೇ.ಪೋಲಿಸ್ ಠಾಣೆಗಳು ಕಳ್ಳರನ್ನು ಬಂಧಿಸಿ ಜೈಲಿಗೆ ಹಾಕುವ,ಕೋರ್ಟು ಕಚೇರಿ ಅಲೆದಾಡುವ ಜನಸಾಮಾನ್ಯರ ಬದುಕು ಅದು ಕೂಡ ಸಮಾಜದ ಭಾಗ.ಇಷ್ಟೆಲ್ಲ ಆದರೂ ಬದಲಾವಣೆಯೆನ್ನುವುದು ಶೂನ್ಯ ವಾದರೆ ಮುಂದೇನು ಗತಿ!.
ಅಲ್ಲಲ್ಲಿ ಸುದ್ದಿಯಾಗುವ ಗ್ರಾಮಗಳು ವಿಶಿಷ್ಟ ರೀತಿಯಲ್ಲಿ ಪ್ರಚಾರಕ್ಕೆ ಬರುತ್ತವೆ.ಪಾನ ಮುಕ್ತ,ಬಯಲು ಶೌಚ ಮುಕ್ತ ಹೀಗೆ….ಇದೊಂದು ಶುಭ ಸೂಚನೆ.ಫೇಸ್ ಬುಕ್ ನಲ್ಲಿ ಗಮನಿಸಿದ್ದು,ಆಶ್ಚರ್ಯವಾಗಿದ್ದು
ರಾಜಸ್ಥಾನದ ಅಜ್ಮಿರದಲ್ಲಿ ಒಂದು ಊರು,ಅದರ ಹೆಸರು ದೇವಮಾಲಿ,ಅಲ್ಲಿ (ಕು)ಗುಜ ಜನಾಂಗದ ಜನರು ವಾಸವಿದ್ದು,ಆ ಊರು ಇಷ್ಟವಾಗಿದ್ದು,ಅಲ್ಲಿಯ ಜನ ಮಣ್ಣಿನ ಮನೆಗಳಲ್ಲಿ ವಾಸಿಸುತ್ತಾರೆ, ಶ್ರೀಮಂತ ಬಡವ ಅನ್ನುವ ಬೇಧ ಭಾವ ಅನ್ನದೆ ಎಲ್ಲರೂ ಮಣ್ಣಿನ ಮನೆಗಳಲ್ಲಿಯೇ ಇರುತ್ತಾರೆ.ಅವರು ಸಸ್ಯಹಾರಿಗಳು,ಇದುವರೆಗೂ ಜಗಳವಾಡಿಲ್ಲ, ಊರಿನ ಯಾವ ಮನೆಗೂ ಬೀಗ ಹಾಕುದಿಲ್ಲ, ಸರಾಯಿ ಕೂಡ ಮಾರಲ್ಲ,ಕುಡಿಯಲ್ಲ,ಐವತ್ತು ವರ್ಷಗಳಾದರೂ ಇದುವರೆಗೂ ಕಳ್ಳತನ ಆಗಿಲ್ಲ. ಶ್ರೀ ಕೃಷ್ಣ ನ ಆರಾಧಕರು ಈ ಊರಿನ ಜಾಗ ದೇವರ ಹೆಸರಿನಲ್ಲಿ ಇದೆಯೆಂಬುದು.ಈಗಲೂ ಇಂತಹ ಊರಿದೆ ಎಂಬುದೇ ಆಶ್ಚರ್ಯಗಳಲ್ಲೊಂದು.
ಇದನ್ನು ನೋಡಿದ ಮೇಲೆ, ನಮ್ಮನಮ್ಮ ಊರುಗಳು ಹೀಗೆ ಪರಿವರ್ತನೆ ಆಗಲು ಸಾಧ್ಯವಾ? ಊರಲ್ಲಿ ಏಕತೆಯಿಲ್ಲ,ಕೋಮುಗಲಭೆಗಳು, ಸಾಮರಸ್ಯದ ಒಳಸುಳಿವಿಗೆ ನಿಪರಾಧಿಗಳು ಬಲಿಯಾಗುತ್ತಿರುವುದು, ಯುವಕರು ದುಶ್ಚಟಗಳ ದಾಸನಾಗುತ್ತಿರುವುದು,ಮನೆಯ ಹೆಣ್ಣುಮಕ್ಕಳು ಜೀವನ ನಡೆಸಲು ಹರಸಾಹಸ ಪಡುತ್ತಿರುವುದು,ಎಷ್ಟೋ ಕುಟುಂಬಗಳು ಗಂಡು,ಹೆಣ್ಣಿನ ನಡುವಿನ ಬಿರುಕಿನಿಂದ ಕೋರ್ಟ್ ಮೆಟ್ಟಿಲು ಹತ್ತುತ್ತಿರುವುದು.ಪರಸ್ಪರ ದ್ವೇಷ,ಮೋಸ,ಅನೈತಿಕ ಸಂಬಂಧಗಳಿಂದ ಹತ್ಯೆಯಾಗುತ್ತಿರುವ ಪ್ರಕರಣಗಳು ದಿನನಿತ್ಯದ ಸುದ್ದಿಯಾಗಿವೆ.”ಸುರಕ್ಷತೆ” ಎಂಬ ಪದಕ್ಕೆ ಯಾವ ಉದಾ.ಕೊಡಬೇಕೋ !.ಹೆತ್ತವರ ಗೋಳು ಕೇಳುವವರಾರು? ಇನ್ನೂ ಮನೆಗೆ ಬೀಗ ಹಾಕದೆ ಇದ್ದರೆ ಮುಗಿತು!. ಅಗತ್ಯತೆಗಳನ್ನು ಪೂರೈಸಲು ಕಳ್ಳದಾರಿ ಹಿಡಿವ ಆಗಂತುಕರನ್ನು ನಂಬಿಬದುಕುವ ಸಮಯ ನಮ್ಮೂರಲ್ಲಿ ಇದೆಯಾ? ಎಂಬ ಪ್ರಶ್ನೆ ಮೂಡದಿರದು!. ಬೆಳಿಗ್ಗೆ ಹೋದವರು ಸಂಜೆ ಸುರಕ್ಷಿತವಾಗಿ ಮನೆಗೆ ಬರುವರೆ ಎಂಬ ನಿರೀಕ್ಷೆ ಅಷ್ಟೇ!. ಜಗಳಗಳೇ ಇಲ್ಲದ ಊರು ನಮ್ಮದಾದಿತೆ? ಆದರೆ ಇಂತಹ ಊರು ಇದೆ ಎಂಬುದೇ ಪರಮಾಶ್ಚರ್ಯ!.
ಒಟ್ಟಾರೆಯಾಗಿ ಹೇಳುವುದಾದರೆ,ಇಂತಹ ಊರುಗಳು ದೇಶಾದ್ಯಂತ ಇದ್ದಿದ್ದರೆ? ನಮ್ಮೂರು ಹೀಗೆ ಇದ್ದರೆ? ಶಾಂತಿ,ಸುರಕ್ಷತೆಗಾಗಿ ಹೆಸರಾಗಿದ್ದರೆ? ಅಪರಾಧಗಳಿಂದ ಮುಕ್ತವಾಗಿದ್ದರೆ? ಭ್ರಾತೃತ್ವ ಮನೋಭಾವ ಹೀಗೆ ಏನೆಲ್ಲ ಉಹಿಸಲು ಸಾಧ್ಯವೋ ಅದೆಲ್ಲವೂ ಯಶಸ್ವಿಯಾಗುತ್ತಿತ್ತು.ಕೋಟ್ಯಾಂತರ ಕುಟುಂಬಗಳು ನೆಮ್ಮದಿಯಿಂದ ಇರುತ್ತಿದ್ದವು.ಉಹಿಸಿದಷ್ಟು ಖುಷಿಯೆನಿಸುತ್ತದೆ.ಇದು ಅಸಾಧ್ಯವೆಂಬುದು ಗೊತ್ತು.ರಾಮ ರಾಜ್ಯದ ಕನಸು ಕಂಡ ರಾಷ್ಟಪಿತ ಈಗ ಇದ್ದಿದ್ದರೆ? ಸಮಾಜಿಕ ಅಂತಸ್ತನ್ನು ಶಾಶ್ವತ ಅಂತಸ್ತಾಗಿ ಪರಿವರ್ತಿಸುವತ್ತ ಸಾಗುತ್ತಿರುವ ಮನಸ್ಥಿತಿಗಳಿಗೆ ಅರಿವಿನ ಬೆಳಕು ಹರಿದಷ್ಟು ಸೂಕ್ತ!. ಬದಲಾಗಬೇಕಾಗಿದ್ದು ಮನಸ್ಸಲ್ಲಿರುವ ಮೌಡ್ಯತೆಯ ಜಾಡಗಳು.ಸಮಾಜದ ಸ್ವಾಸ್ಥ್ಯ ನಮ್ಮ ಜವಾಬ್ದಾರಿಯೆಂಬುವುದು ನಮ್ಮ ಅರಿವಿಗೆ ಬಂದಾಕ್ಷಣ ಒಳಿತಾಗುವುದೆಂಬ ಕನಸು!.
ಶಿವಲೀಲಾ ಶಂಕರ್