ರಾಧಿಕಾ ಗಣೇಶ್ ಅವರ ಕವಿತೆ-ವಿಶ್ವ ರೈತರ ದಿನ

ಉಳುವ ಯೋಗಿಯ ನೋಡಲ್ಲಿ.
ಬೆವರನು ಸುರಿಸುವ ಹೊಲದಲ್ಲಿ
ಕಾಯಕ ಮಾಡುವ ಹಗಲಿರುಳು
ನೊಗವನು ಹೊತ್ತಿವೆ ಎತ್ತುಗಳು//

ಹದವನು ಗೊಳಿಸಿದ ಹೊಲವನ್ನು
ಬಿತ್ತನೆ ಮಾಡಿದ ಬೀಜವನು
ಕಾಲ ಕಾಲಕೆ ನೀರು ಗೊಬ್ಬರ ಹಾಕಾಯ್ತು
ಬೀಜ ಮೊಳೆತು ಸಸಿಯಾಯ್ತು
//

ಮಾಡಲೇ ಬೇಕು ಬೆಳೆಗಳ ರಕ್ಷಣೆ
ಕಾಡುಪ್ರಾಣಿ,ಕೀಟಗಳಿಂದ ತಪ್ಪೋದಿಲ್ಲ ಬವಣೆ
ಸಸಿ ಬೆಳೆದು ತೆನೆ ಮೂಡಲು
ಮೂಡುವುದು ಮುಖದಲ್ಲಿ ನಗೆಯ ಹೊನಲು//

ಫಸಲು ಬೆಳೆಯಲು ಮಾಡುವರು ಕಟಾವು
ಭತ್ತ ಬೇರ್ಪಡಿಸಿದರೆ ಸಿಗುವುದು ದನಗಳಿಗೆ ಮೇವು
ದನಗಳಿಂದ ಸಿಗುವುದು ಸಾವಯವ ಗೊಬ್ಬರ
ಇದೇ ಆಗಿದೆ ಬೆಳೆಗಳಿಗೆ ಸತ್ವಯುತ ಆಹಾರ//

ಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತಿದೆ
ಆದರೆ ಇಂದು ರೈತನ ಬೆವರಿಗೆ ಬೆಲೆಯಿಲ್ಲದಂತಾಗಿದೆ
ಎಲ್ಲರೂ ಬಯಸುವರು ಉನ್ನತ ಉದ್ಯೋಗ,ಕೈತುಂಬಾ ಹಣ..
ಯಾರಿಗೂ ಬೇಕಿಲ್ಲ ಭೂಮಿ ತಾಯಿ ನೀಡುವ ಅನ್ನದ ಋಣ//

ನಾನೂ ಓರ್ವ ರೈತ ಮಹಿಳೆ..
ಆರಾಧಿಸುವೆ ನಮ್ಮಿ ಇಳೆ.
ಕಷ್ಟ ಪಡುವೆವು ಒಂದಿಷ್ಟು ಕಾಲ
ಇಂದಲ್ಲ ನಾಳೆ ಸಿಕ್ಕೇ ಸಿಗುವುದು ಬೆವರಿನ ಫಲ//

ಅಕ್ಕಿಯ ಬೆಲೆ ಗಗನಕ್ಕೆ ಏರಿದರೂ ನಮಗೆ ಚಿಂತೆಯಿಲ್ಲ
ನಮ್ಮ ಕಣಜದೊಳಗೆ ವರುಷಕಾಗೋವಷ್ಟು ಅಕ್ಕಿ ತುಂಬಿದೆಯಲ್ಲಾ..
ಕಡೆಗಣಿಸದಿರಿ ಅನ್ನದಾತ ರೈತರನ್ನ..
ಮುರಿಯದಿರಿ ದೇಶದ ಬೆನ್ನೆಲುಬನ್ನ….//


Leave a Reply

Back To Top