ಧಾರಾವಾಹಿ-64
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸುವ ಅನಿವಾರ್ಯತೆ
ಎಲ್ಲರೂ ಹಾಸನದಿಂದ ಸಕಲೇಶಪುರ ತಲುಪುವ ವೇಳೆಗೆ ಮಧ್ಯಾಹ್ನ ಕಳೆದಿತ್ತು. ಸುಮತಿಯ ಅಕ್ಕನಿಗೂ ವಿಷಯ ತಿಳಿಸಿ, ಅವರ ಕುಟುಂಬವನ್ನು ಜೊತೆಗೆ ಕರೆದುಕೊಂಡು ಸಕಲ ವಿಧಿವಿಧಾನಗಳೊಂದಿಗೆ ಹೇಮಾವತಿ ನದಿಯ ದಡದಲ್ಲಿ ವೇಲಾಯುಧನ್ ರವರ ಅಂತ್ಯಕ್ರಿಯೆಯನ್ನು ಮಾಡಲಾಯಿತು. ಸುಮತಿ ಹಾಗೂ ಮಕ್ಕಳ ಕೆಲವು ದಿನಗಳ ಖರ್ಚಿಗೆ ಆಗುವಷ್ಟು ಹಣವನ್ನು ಹಿರಿಯ ಅಕ್ಕನ ಕೈಲಿ ಕೊಟ್ಟು ಅವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ವಿನಂತಿಸಿಕೊಂಡು ಅವರ ಸಹೋದರ ಹಾಸನದ ಕಡೆಗೆ ಪ್ರಯಾಣ ಬೆಳೆಸಿದನು. ಹದಿನಾರನೇ ದಿನ ಬಂತು ಆಗ ಸುಮತಿಯ ಸಹೋದರ ಅಕ್ಕನನ್ನು ತನ್ನ ಮನೆಗೆ ಕರೆಸಿಕೊಂಡು ಅಲ್ಲೇ ಪುಣ್ಯ ಕಾರ್ಯದ ವಿಧಿವಿಧಾನಗಳನ್ನು ಮಾಡಲು ತೀರ್ಮಾನಿಸಿದನು. ಆತನ ಹೆಂಡತಿಯು ಬಹಳ ಸದ್ಗುಣ ಸಂಪನ್ನೆ. ತಿಥಿಯ ಖರ್ಚಿಗಾಗಿ ತನ್ನ ಒಡವೆಗಳನ್ನು ಒತ್ತೆಯಿಟ್ಟು ಆ ಹಣದಿಂದ ಪುಣ್ಯತಿಥಿಯ ಕಾರ್ಯವನ್ನು ಮಾಡಲು ಪತಿಗೆ ಸೂಚಿಸಿದಳು. ಅದರಂತೆಯೇ ಸುಮತಿಯ ಸಹೋದರ ತಿಥಿಗೆ ಸಿದ್ಧತೆಗಳನ್ನು ಮಾಡಿಕೊಂಡ. ಯಾವುದೇ ಕೊರತೆಯೂ ಆಗದಂತೆ ನೋಡಿಕೊಂಡ. ಪುಣ್ಯತಿಥಿ ಕಾರ್ಯವು ಸುಸೂತ್ರವಾಗಿ ನೆರವೇರಿತು. ಸುಮತಿಗೆ ತನ್ನ ಸಹೋದರನ ಸಂಸಾರದಲ್ಲಿ ತನ್ನಿಂದಾಗಿ ಯಾವುದೇ ತೊಂದರೆ ಆಗುವುದು ಇಷ್ಟವಿರಲಿಲ್ಲ. ಸಹೋದರನ ಹಾಗೂ ಅವನ ಪತ್ನಿ ಎಷ್ಟು ಕೇಳಿಕೊಂಡರೂ ಅವರ ಮನೆಯಲ್ಲಿ ಉಳಿದುಕೊಳ್ಳದೇ ಸ್ವಾಭಿಮಾನಿಯಾದ ಅವಳು ಮಕ್ಕಳನ್ನು ಕರೆದುಕೊಂಡು ಸಕಲೇಶಪುರದ ಕಡೆಗೆ ಹೊರಟಳು. ಗರ್ಭಿಣಿಯಾದ ತಾನು ಎಲ್ಲಿಗೆ ಹೋಗುತ್ತೇನೆ, ಏನು ಕೆಲಸ ಮಾಡುತ್ತೇನೆ,ಯಾರ ಆಶ್ರಯದಲ್ಲಿ ಇರುತ್ತೇನೆ ಎನ್ನುವುದು ಕೂಡಾ ಅವಳಿಗೆ ತಿಳಿದಿರಲಿಲ್ಲ. ಇತ್ತ ಅಕ್ಕನ ಮನೆಗೂ ಹೋಗಿ ಅವರ ಕುಟುಂಬದವರಿಗೂ ಭಾರವಾಗಲು ಅವಳಿಗೆ ಇಷ್ಟವಿರಲಿಲ್ಲ. ಹಾಗಾಗಿ ತನಗೂ ತನ್ನ ಮಕ್ಕಳಿಗೂ ಬದುಕಲು ಒಂದು ನೆಲೆಯನ್ನು ಕಾಣುವ ಹುಡುಕಾಟದಲ್ಲಿ ತೊಡಗಿದಳು.
ಪತಿಯ ಜೊತೆ ವಾಸವಿದ್ದ ಅದೇ ಮನೆಗೆ ಹಿಂತಿರುಗಿ ಬಂದಳು. ಮನೆಯಲ್ಲಿ ಆಹಾರ ಪದಾರ್ಥಗಳು ಯಾವುದು ಇರಲಿಲ್ಲ. ಪಕ್ಕದಲ್ಲಿದ್ದ ತುಳುವರ ಮನೆಯವರು ಒಂದೆರಡು ದಿನಗಳಿಗೆ ಆಗುವಷ್ಟು ಅಡುಗೆಗೆ ಬೇಕಾದ ಆಹಾರ ಪದಾರ್ಥಗಳನ್ನು ಕೊಟ್ಟರು. ಸುಮತಿಯ ಈಗಿನ ಸ್ಥಿತಿಯನ್ನು ಕಂಡು ನೆರೆಹೊರೆಯವರು ಬಹಳ ಮರುಗಿದರು. ನೆರೆಹೊರೆಯವವರು ಕೊಟ್ಟ ಆಹಾರ ಪದಾರ್ಥಗಳು ಒಂದೆರಡು ದಿನಕ್ಕೆ ಸಾಕಾಗುವಷ್ಟು ಇದ್ದವು. ಆದರೆ ಮುಂದೆ ಏನು ಮಾಡುವುದು ಎನ್ನುವ ಚಿಂತೆ ಅವಳನ್ನು ಕಾಡಿತು. ಅಮ್ಮನ ಪರಿಸ್ಥಿತಿಯನ್ನು ನೋಡಿ ಹಿರಿಯ ಮಗಳು ತಾನು ಕೂಲಿ ಕೆಲಸಕ್ಕೆ ಹೋಗುವುದಾಗಿ ಅಮ್ಮನಿಗೆ ತಿಳಿಸಿದಳು. ತನ್ನ ಮಗಳು ಇನ್ನೂ ಚಿಕ್ಕವಳು ಅವಳನ್ನು ಹೇಗೆ ದುಡಿಸಲಿ?
ಇಡೀ ಸಂಸಾರದ ಭಾರವನ್ನು ಆ ಪುಟ್ಟ ಹುಡುಗಿಯ ಹೆಗಲ ಮೇಲೆ ಹೇಗೆ ಹಾಕಲಿ? ಇದ್ದಕ್ಕಿದ್ದ ಹಾಗೆ ಪತಿಯು ತಮ್ಮನ್ನು ಅಗಲಿ ಹೋದ ಆಘಾತದಿಂದ ಅವಳಿನ್ನೂ ಆಚೆ ಬಂದಿರಲಿಲ್ಲ. ತಾನು ಹಾಗೂ ಮಕ್ಕಳು ಅನಾಥವಾಗಿದ್ದನ್ನು ನೆನೆದು ಅವಳ ಮನವು ಮೂಕವಾಗಿ ರೋಧಿಸುತ್ತಿತ್ತು. ಎಲ್ಲಿಗೆ ಹೋಗಲಿ? ತನಗೂ ಮಕ್ಕಳಿಗೂ ಯಾರು ದಿಕ್ಕು ಎನ್ನುವ ಆಲೋಚನೆಯು ಅವಳ ಮನಸ್ಸನ್ನು ಕೊರೆಯುತ್ತಿತ್ತು. ಅವರಿದ್ದದ್ದು ಬಾಡಿಗೆ ಮನೆಯಾಗಿದ್ದ ಕಾರಣ ಬಾಡಿಗೆ ಕೊಡದೇ ಹೆಚ್ಚು ದಿನ ಅಲ್ಲಿ ಇರುವುದು ಸಾಧ್ಯವಿರಲಿಲ್ಲ. ಇತ್ತ ತಂದೆಯ ಮನೆಗೆ ಹೋಗಲು ಅವಳ ಮನಸ್ಸು ಒಪ್ಪಲಿಲ್ಲ. ಅಪ್ಪ ಕೂಡ ಒಬ್ಬರೇ ಇರುವರು ತನ್ನ ಹಾಗೂ ಮಕ್ಕಳ ಜವಾಬ್ದಾರಿಯನ್ನು ಅವರ ಹೆಗಲ ಮೇಲೆ ಹೊರಿಸುವುದು ಅವಳಿಗೆ ಇಷ್ಟವಿರಲಿಲ್ಲ. ಸುಮತಿಯ ತಂದೆಗೆ ಮಗಳು ಎಲ್ಲಿ ವಾಸವಿರುವಳು ಎಂದು ಕೂಡಾ ತಿಳಿದಿರಲಿಲ್ಲ. ಸಕಲೇಶಪುರದ ಆನೆಮಹಲ್ ನಿಂದ ಸುಮತಿಯ ಕುಟುಂಬವು ಬೇರೆಡೆಗೆ ವಾಸ್ತವ್ಯ ಹೂಡಿದ ಮೇಲೆ ಅವರ ಸ್ಥಿತಿಗತಿಗಳು ಏನು ಎಂದು ಕೂಡ ಸುಮತಿಯ ತಂದೆಗೆ ತಿಳಿದಿರಲಿಲ್ಲ. ಹಿರಿಯ ಮಗಳಿಂದ ಅವರಿಗೆ ತಡವಾಗಿ ಎಲ್ಲಾ ವಿಷಯವೂ ತಿಳಿಯಿತು. ಆದರೆ ಈಗ ಮಕ್ಕಳೊಂದಿಗೆ ಎಲ್ಲಿ ವಾಸವಿರುವಳು ಎಂದು ಅವರಿಗೆ ಹಾಗೂ ಹಿರಿಯ ಮಗಳಿಗೂ ತಿಳಿಯಲಿಲ್ಲ.
ನೆರೆ ಹೊರೆಯವರು ಕೊಟ್ಟ ಆಹಾರ ಪದಾರ್ಥಗಳು ಮುಗಿದು ಹೋದವು. ಇದನ್ನೆಲ್ಲಾ ಅರಿತ ಹಿರಿಯ ಮಗಳು ಅಮ್ಮ ಬೇಡವೆಂದರೂ ಕೇಳದೆ ತೋಟದಲ್ಲಿ ಕೂಲಿ ಕೆಲಸ ಮಾಡಲು ಹೊರಟಳು. ಸುಮತಿ ಈಗ ತುಂಬು ಗರ್ಭಿಣಿ. ತೋಟದಲ್ಲಿ ಹೋಗಿ ಕೆಲಸ ಮಾಡುವುದು ಸಾಧ್ಯವಿರಲಿಲ್ಲ.
12 ವರ್ಷದ ಮಗಳು ಹೀಗೆ ಒಂಟಿಯಾಗಿ ತೋಟದಲ್ಲಿ ಹೋಗಿ ದುಡಿಯುವುದನ್ನು ನೆನೆದರೆ ಅವಳಿಗೆ ಕರುಳು ಹಿಂಡಿದಷ್ಟು ನೋವಾಗುತ್ತಿತ್ತು. ಅಮ್ಮ ನೊಂದುಕೊಂಡಾಗಲೆಲ್ಲ ಮಗಳು ಸಾಂತ್ವನ ಹೇಳುತ್ತಿದ್ದಳು.
ಆದರೂ ಸುಮತಿಯ ಮನಸಿಗೆ ನೆಮ್ಮದಿ ಸಿಗಲಿಲ್ಲ. ತಮ್ಮ ಇಂದಿನ ಪರಿಸ್ಥಿತಿಯನ್ನು ನೆನೆದು ತನ್ನೆಲ್ಲಾ ನೋವುಗಳನ್ನು ದೇವರಲ್ಲಿ ಹೇಳಿಕೊಳ್ಳುತ್ತಿದ್ದಳು. ಹೀಗಿರುವಾಗ ಸುಮತಿಯ ಪ್ರಸವದ ದಿನಗಳು ಸಮೀಪಿಸಿದವು. ಮಕ್ಕಳನ್ನು ಜೊತೆಗೆ ಕರೆದುಕೊಂಡು ಸಕಲೇಶಪುರದ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾದಳು. ಮಕ್ಕಳನ್ನು ರಾತ್ರಿ ಸಮಯದಲ್ಲಿ ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲು ಅವಕಾಶವಿರಲಿಲ್ಲ. ಹಾಗಾಗಿ ಸುಮತಿಯು ತಾನು ಆಸ್ಪತ್ರೆಯಿಂದ ಮನೆಗೆ ಹಿಂದಿರುಗುವವರೆಗೂ ಅಕ್ಕನ ಮನೆಗೆ ಹೋಗಿ ಅಲ್ಲಿ ಸ್ವಲ್ಪ ದಿನಗಳ ಮಟ್ಟಿಗೆ ಇರಲು ಹೇಳಿ ಕಳುಹಿಸಿದಳು. ಆದರೆ ಸುಮತಿಯ ಹಿರಿಯ ಮಗಳಿಗೆ ಇದು ಸರಿ ಅನಿಸಲಿಲ್ಲ. ಹಾಗಾಗಿ ತಂಗಿಯರನ್ನು ಕರೆದುಕೊಂಡು ನೇರವಾಗಿ ಅವರು ವಾಸವಿದ್ದ ಮನೆಗೆ ಹೋದಳು. ಅಲ್ಲಿದ್ದು ನಾನು ತೋಟದ ಕೂಲಿ ಕೆಲಸಕ್ಕೆ ಹೋಗಿ ತಂಗಿಯರನ್ನು ನೋಡಿಕೊಳ್ಳುತ್ತಿದ್ದಳು. ಇದರ ನಡುವೆ ತೋಟದ ಕೆಲಸಕ್ಕೆ ರಜೆ ಇದ್ದಾಗ ತನ್ನ ಇಬ್ಬರು ತಂಗಿಯರನ್ನು ಕರೆದುಕೊಂಡು ಅಮ್ಮನನ್ನು ನೋಡಲು ಬರುತ್ತಿದ್ದಳು. ತಾನು ಮತ್ತು ತನ್ನ ತಂಗಿಯರು ದೊಡ್ಡಮ್ಮನ ಮನೆಗೆ ಹೋಗದೆ ನೇರವಾಗಿ ತಮ್ಮ ಮನೆಗೆ ಹೋಗಿದ್ದಾಗಿ ಅಮ್ಮನಿಗೆ ತಿಳಿಸಿದಳು. ಈ ವಿಷಯವನ್ನು ತಿಳಿದ ಸುಮತಿಗೆ ಎದೆ ಒಡೆದು ಹೋಗುವಷ್ಟು ಸಂಕಟವಾಯಿತು. ಆದರೆ ಈಗ ಅವಳು ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.
ಜೂನ್ ತಿಂಗಳಾದ ಕಾರಣ ಮಳೆಯೂ ಪ್ರಾರಂಭವಾಗಿತ್ತು. ಆಸ್ಪತ್ರೆಗೆ ದಾಖಲಾದ ಒಂದು ವಾರದಲ್ಲಿ ಸುಮತಿ ಮತ್ತೊಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮಗು ಹುಟ್ಟಿ ಒಂದು ವಾರ ಕಳೆಯುವುದರ ಒಳಗೆ ತೋಟಕ್ಕೆ ರಜೆ ಇರುವ ಒಂದು ದಿನ ಹಿರಿಯ ಮಗಳು ಆಸ್ಪತ್ರೆಗೆ ಹೋಗಿ ಅಮ್ಮನನ್ನು ಹಾಗೂ ಪುಟ್ಟ ತಂಗಿಯನ್ನು ಮನೆಗೆ ಕರೆದುಕೊಂಡು ಬಂದಳು. ಪುಟ್ಟ ತಂಗಿಯನ್ನು ಕಂಡಾಗ ಸುಮತಿಯ ಆ ಮೂವರು ಹೆಣ್ಣು ಮಕ್ಕಳಿಗೂ ಎಲ್ಲಿಲ್ಲದ ಸಂತಸ. ತಂಗಿಯನ್ನು ಮುದ್ದಿಸಿ ಖುಷಿಪಟ್ಟರು. ಹಿರಿಯ ಮಗಳು ತಾನು ತೋಟದ ಕೆಲಸಕ್ಕೆ ಹೋಗಿ ತರುವ ಅಲ್ಪಸ್ವಲ್ಪ ದಿನಗೂಲಿಯಲ್ಲಿ ಮನೆಗೆ ಬೇಕಾದ ದಿನಸಿಯನ್ನು ತಂದು ಅಮ್ಮನನ್ನು ತಂಗಿಯನ್ನು ನೋಡಿಕೊಳ್ಳುತ್ತಿದ್ದಳು.
ವೇಲಾಯುಧನ್ ರ ಮರಣವು ಸುಮತಿಯನ್ನು ಹಾಗೂ ಮಕ್ಕಳನ್ನು ಅನಾಥತ್ವಕ್ಕೆ ದೂಡಿತು. ಪತಿಯು ಮಾನಸಿಕವಾಗಿ ಹಾಗೂ ದೈಹಿಕವಾಗಿ ಎಷ್ಟೇ ಹಿಂಸೆ ಕೊಟ್ಟಿದ್ದರೂ, ಅವರು ಬದುಕಿದ್ದಾಗ ಇಂಥಹಾ ಅನಾಥ ಪ್ರಜ್ಞೆ ಸುಮತಿಯನ್ನು ಮತ್ತು ಮಕ್ಕಳನ್ನು ಕಾಡಿರಲಿಲ್ಲ. ದಿನ ದೂಡುವುದೇ ಈಗ ಬಹಳ ಕಷ್ಟಕರವಾಗಿತ್ತು. ಅಪ್ಪನ ಮನೆಗೆ ಹೋಗೋಣವೆಂದರೆ ಸಂಬಂಧಿಕರಲ್ಲಿ ವಿಚಾರಿಸಿದಾಗ ಅಪ್ಪ ಊರಲ್ಲಿ ಇಲ್ಲ ಚಿಕ್ಕಮಗಳೂರಿಗೆ ಯಾವುದೋ ಕೆಲಸದ ನಿಮಿತ್ತ ಹೋಗಿದ್ದಾರೆ ಎಂದು ತಿಳಿಯಿತು. ಕೈಗೂಸನ್ನು ಹಿಡಿದು ಕೊಂಡು ಕೂಲಿ ಕೆಲಸಕ್ಕೂ ಹೋಗುವುದು ಸಾಧ್ಯವಿರಲಿಲ್ಲ. ಏನು ಮಾಡುವುದು ಎಂದು ತೋಚದೇ ಸುಮತಿ ಕಂಗಾಲಾದಳು. ಹೀಗಿರುವಾಗ ಸುಮತಿಯ ಸಂಬಂಧಿಕರು ಸಕಲೇಶಪುರದಲ್ಲಿ ಇರುವ ಒಂದು ಅನಾಥಾಲಯದ ಬಗ್ಗೆ ತಿಳಿಸಿದರು. ಮಗು ಸ್ವಲ್ಪ ದೊಡ್ಡದಾಗಿ ಸುಮತಿಗೆ ಒಂದು ಕೆಲಸ ಸಿಗುವವರೆಗೂ ಮಕ್ಕಳನ್ನು ಅಲ್ಲಿ ಸೇರಿಸಿದರೆ ಹೇಗೆ? ಎಂದು ಸಂಬಂಧಿಕರು ಕೇಳಿದರು…
̲̲̲̲̲̲̲̲̲̲̲̲