ಸ್ವಾತ್ಮಗತ

ದೇವನೂರು ಮಹಾದೇವರೂ..!


ಮತ್ತವರು ಹುಡುಕಿದ ಹೊಸ ಅಭಿವ್ಯಕ್ತಿ ಕ್ರಮಗಳ ಪ್ರಸ್ತುತತೆಯೂ.!!

We should protect our heart, brain and eyes from religious ...

ದೇವನೂರ ಮಹಾದೇವ

ದೇವನೂರ ಮಹಾದೇವ ಅವರು ಹುಟ್ಟಿದ್ದು ಜೂನ್ 10, 1948ರಂದು. ಹಾಗೆಂದು ಅವರ ಬಳಿ ಹೋಗಿ ‘ಹ್ಯಾಪಿ ಬರ್ತ್ ಡೇ ಸಾರ್’ ಅಂತ ಹೇಳಿದರೆ, ‘ಇವನ್ಯಾವನಯ್ಯಾ ಮಿಕ’ ಎಂದು ಗಂಭೀರರಾಗಿಬಿಡುತ್ತಾರೇನೋ ಅನಿಸುತ್ತದೆ. ಅವರು ಮನುಷ್ಯನ ಮೂಲ ಆಳವನ್ನು ತಲುಪದ ಯಾವ ಆಚರಣೆಗಳನ್ನೂ ಒಪ್ಪುವವರಲ್ಲವೇನೋ ಎಂದೆನಿಸುತ್ತಿದೆ.

ದೂರದರ್ಶನ ಬಂದ ಪ್ರಾರಂಭದ ದಿನಗಳಲ್ಲಿ ಇರಾನ್, ಇರಾಕ್ ದೇಶಗಳ ಯುದ್ಧಗಳು ಕ್ರಿಕೆಟ್ ಆಟ ನೇರ ಪ್ರಸಾರವಾಗುವಂತೆ ವಾರ್ತೆಗಳಲ್ಲಿ ಪ್ರಸಾರವಾಗುತ್ತಿದ್ದವು. ಯುದ್ಧದಲ್ಲಿನ ಕ್ಷಿಪಣಿ ಪ್ರಯೋಗಗಳು, ಬಾಂಬ್ ಹೇಗೆ ಬೀಳುತ್ತಿವೆ ಎಂದು ಕುತೂಹಲದಿಂದ ಅಲ್ಲಿನ ರಸ್ತೆಗಳಲ್ಲಿ ನೋಡುತ್ತಿದ್ದ ಮಕ್ಕಳು, ಇಂಧನ ಸೋರಿಕೆಯಿಂದ ಕಪ್ಪುಗಟ್ಟಿದ ಸಮುದ್ರ, ಆ ಸಮುದ್ರದ ದಡದಲ್ಲಿ ಬದುಕಲೂ ಆಗದೆ, ಸಾಯಲು ಆಗದೆ ನಲುಗುತ್ತಿದ್ದ ಒಂದು ಪಕ್ಷಿ ಇವೆಲ್ಲಾ ನಮ್ಮ ಮನಸ್ಸಿನಲ್ಲಿ ಮರೆಯಾಗದೆ ನಿಂತಿವೆ. ಅದೇ ದಿನಗಳಲ್ಲಿ ನಮ್ಮ ದೇವನೂರು ಮಹಾದೇವರ ಒಂದು ಸಂದರ್ಶನ ಕೂಡಾ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಅವರನ್ನು ಕೇಳಿದ ಪ್ರಶ್ನೆ, “ಇಂದಿನ ಬದುಕಿನಲ್ಲಿ ತಮ್ಮನ್ನು ಕಾಡುತ್ತಿರುವ ಪ್ರಶ್ನೆ ಯಾವುದು?”. ದೇವನೂರು ಮಹಾದೇವ ಅವರು ಹೇಳಿದ್ದು, “ಗಲ್ಫ್ ಯುದ್ಧದಲ್ಲಿ ತನ್ನ ಬದುಕನ್ನು ಕಳೆದು ಕೊಂಡು ಒದ್ದಾಡುತ್ತಿದೆಯಲ್ಲಾ ಆ ಪಕ್ಷಿ…. ಅದು ನನ್ನನ್ನು ತುಂಬಾ ಕಾಡುತ್ತಿದೆ!”

ದೇವನೂರ ಮಹಾದೇವ ಎಂದರೆ ತಕ್ಷಣ ನೆನಪಿಗೆ ಬರುವುದು ಅವರ ಒಡಲಾಳ, ಕುಸುಮಬಾಲೆ, ಅಮಾಸ, ಗ್ರಸ್ತ, ಡಾಂಬರು ಬಂದುದು, ಮೂಡಲ ಸೀಮೆಯ ಕೊಲೆಗಿಲೆ, ಮಾರಿಕೊಂಡವರು ಹೀಗೆ ಹಲವು ಕಥೆಗಳು. ನಮ್ಮ ದೇಶದಲ್ಲಿ ನಾವು ಜನರನ್ನು ಪ್ರಾಂತ್ಯ, ಭಾಷೆ, ಜಾತಿ, ಉಪಜಾತಿ, ಮರಿ ಜಾತಿ ಹೀಗೆ ಯಾವ ರೀತಿಯಲ್ಲಿ ಛಿದ್ರ ಛಿದ್ರವಾಗಿ ಒಡೆದುಹಾಕಿದ್ದೇವೆಯೋ ನಮ್ಮ ಬುದ್ಧಿವಂತ ಜನಾಂಗ ಸಾಹಿತ್ಯವನ್ನೂ ಕೂಡ ನವ್ಯ, ದಲಿತ, ಬಂಡಾಯ, ಮರಿ ಬಂಡಾಯ ಹೀಗೆ ಒಡೆದು ಹಾಕಿಬಿಟ್ಟಿದೆಯೇನೋ ಅಂತನಿಸುತ್ತದೆ. ನಾನು ಸಾಹಿತ್ಯದ ಬಗ್ಗೆ ಅಷ್ಟೊಂದು ಬಲ್ಲವನಲ್ಲವಾದದ್ದರಿಂದ ಆ ಬಗ್ಗೆ ಹೇಳಿದರೆ ಇವನೊಬ್ಬ ಶುದ್ಧ ಶುಂಠ, ಅವೈಜ್ಞಾನಿಕ ಎಂದು ಹಲವು ಮಹನೀಯರು ಪ್ರತಿಭಾನ್ವಿತ ವಿಶ್ಲೇಷಣೆಗೆ ಬರುವ ಸರ್ವ ಸಾಧ್ಯತೆಗಳಿವೆ! ಅದು ಏನೇ ಇರಲಿ, ಇಂತಹ ವಾದ ವಿವಾದಗಳು ನಮ್ಮನ್ನು ಮಾನವನ ಆಳದಲ್ಲಿ ಇಳಿಯುವ ಶ್ರೇಷ್ಠ ಅನುಭಾವದಿಂದ ದೂರ ಮಾಡುತ್ತಿವೆಯೇನೋ ಎಂಬುದು ನನ್ನಲ್ಲಿರುವ ವ್ಯಥೆ. ದೇವನೂರ ಮಹಾದೇವ ಅಂತಹ ಅಂತರಾಳಕ್ಕಿಳಿಯುವ ಸಮರ್ಥ ಬರಹಗಾರನನ್ನು ಯಾವುದೋ ದಲಿತ – ಬಂಡಾಯ ಎಂದು ಪ್ರತ್ಯೇಕಿಸ ಹೊರಟಾಗ ಇಡೀ ಮಾನವ ಸಂಕುಲಕ್ಕೆ ಅಗತ್ಯವಾಗಿರುವ ಅವರ ಬರಹಗಳಲ್ಲಿನ ತೀವ್ರವಾದ ಸ್ಪಂದನೆಗಳ ಲಾಭ ಸರಿಯಾಗಿ ಆಗುವುದಿಲ್ಲ. ಅವರ ಬರಹಗಳ ಆಳವನ್ನು ವರ್ಗರಹಿತವಾಗಿ ಪ್ರತಿಯೊಬ್ಬರೂ ತಲುಪಿ ಮಾನವನ ಮೂಲಸ್ಪಂದನೆಗಳನ್ನು ಅರ್ಥೈಸಿ ಅದರಲ್ಲೊಂದಾಗುವ ಅವಶ್ಯಕತೆ ತುಂಬಾ ಇದೆ.

ಒಮ್ಮೆ ಅವರು ಮಾನಸ ಗಂಗೋತ್ರಿಯಲ್ಲಿ ಮಾಡಿದ ಭಾಷಣದ ತುಣುಕುಗಳು ಹೀಗಿವೆ ‘ನಾನು ಬರೆಯುತ್ತಾ ಬರೆಯುತ್ತಾ ಬರೆಯುವ ಪ್ರಕ್ರಿಯೆಯಲ್ಲಿ ನನ್ನನ್ನು ನಾನು ಕಳೆದುಕೊಂಡು ಬೇರೆಯವನಾಗಬೇಕು. ಹಾಗೆ ಬೇರೆಯಾದವನು ಯಾರೂ ಆಗಬಹುದು ಆ ಮೂಲಕ ಎಲ್ಲರಂತೂ ಆಗಬಹುದು. ಹೀಗಾದಾಗ ನನ್ನನ್ನು ನಾನು ಕಳೆದುಕೊಳ್ಳಲು ಸಾಧ್ಯ. ನಾನು ಮಹಾದೇವ ಎನ್ನುವುದನ್ನೂ ಬಿಟ್ಟು ಬಿಡಬೇಕು. ನನ್ನ ಜಾತಿಯನ್ನು ಮರೆಯಬೇಕು. ನನ್ನ ಭಾಷೆಯನ್ನು ಮರೆಯಬೇಕು. ಆ ಬರೆಯುವ ಕ್ರಿಯೆಯಲ್ಲಿ ಈ ಎಲ್ಲವುಗಳನ್ನೂ ಮೀರಬೇಕು. ಸಭೆಯ ಮಧ್ಯದ ಸಭಿಕನಾಗಿದ್ದರೆ ಹೇಗೆ ಮಾತನಾಡಲು ಸಾಧ್ಯವಿಲ್ಲವೋ ಹಾಗೆ ಬರೆಯುವ ಕ್ರಿಯೆ ಕೂಡ. ಅಂದರೆ ಬಿಕಮಿಂಗ್ ಅದರ್ ಬೀಯಿಂಗ್ ಎಂದಾಯಿತು. ಬರೆಯುವ ಕ್ರಿಯೆಯಲ್ಲಿ ಕೆಲವು ಬಾರಿ ‘ಆತ್ಮ’ವಾಗಿ ಬರಬಹುದು. ಕೆಲವು ಬಾರಿ ‘ದೇಹ’ವಾಗಿ ಬರಬಹುದು. ಒಟ್ಟಿನಲ್ಲಿ ನೋಡಿದರೆ ನೋವು, ಕಷ್ಟ, ಸಂಕಟ, ದುಃಖ, ಖುಷಿ ಎಲ್ಲವೂ ಒಂದೇ. ಅದು ಒಂದು ಜೀವದಿಂದ ಮತ್ತೊಂದು ಜೀವಕ್ಕೆ ಹೋಗುವಂತೆ ಅಥವಾ ತನ್ನೊಳಗೆ ಜಗತ್ತನ್ನು ಭಾವಿಸುವ, ಜಗತ್ತಿನೊಳಗೆ ತನ್ನನ್ನು ಭಾವಿಸಿಕೊಳ್ಳುವಂತಹ ಪ್ರಕ್ರಿಯೆ. ಹಿಂದೆ ಹೇಳಿದೆನಲ್ಲಾ ರೂಢಿ ಎಂದು ಹಾಗೆ. ಅಂದರೆ ನಾನು ಮುಸ್ಲಿಂ, ದಲಿತ, ಬ್ರಾಹ್ಮಣ, ಮಹಾದೇವ ಎಂಬಲ್ಲಿಗೇ ನಿಂತರೇ ಸಾಯುವವರೆಗೂ ಆ ಸ್ಥಿತಿಯಲ್ಲೇ ನಿಂತು ಬಿಡುತ್ತೇನೆ (ಅರವತ್ತು ವರ್ಷದವನಾದರೂ ಪ್ರೈಮರಿ ಶಾಲೆಯೇ ಫೇಲಾಗಿರುವ ಹುಡುಗನ ಮನಸ್ಥಿತಿಯಲ್ಲಿಯೇ ಉಳಿದಂತೆ ಕಾಣುತ್ತಾನೆ). ಗಿರೀಶ ಕಾರ್ನಾಡ್ ಒಮ್ಮೆ ಹೇಳುತ್ತಿದ್ದರು – ಪಂಜಾಬ್‌ನಲ್ಲಿ ಗಲಭೆ ಆಗಿ ಆಗಿ ಹೆಣ ರಸ್ತೇಲಿ ಬಿದ್ದಿದ್ದರೂ ಮಕ್ಕಳು ಅದನ್ನೂ ನೋಡಿ ಸುಮ್ಮನೆ ಹೋಗುತ್ತಿರುತ್ತಾರೆ – ಅಂದರೆ ಅವರು ಅದಕ್ಕೆಲ್ಲ ಅಡ್ಜೆಸ್ ಆಗಿ ಹೋಗಿರುತ್ತಾರೆ. ಸಾವಿನ ಬಗೆಗಿನ ಸೂಕ್ಷ್ಮತೆ ಕೂಡ ಕಳೆದುಕೊಂಡು ಬಿಟ್ಟಿದ್ದಾರೆ. ಹೀಗೆ ಸೂಕ್ಷ್ಮತೆಯನ್ನು ಕಳೆದುಕೊಂಡರೆ ಅದು ಸೃಜನಶೀಲವಾಗುವುದಿಲ್ಲ”. ದೇವನೂರು ಮಹಾದೇವ ಅವರು ಸೂಕ್ಷ್ಮಜ್ಞತೆಯಲ್ಲಿ ನಮ್ಮನ್ನು ಇಳಿಸುವ ಅವರ ಹಲವು ಲೇಖನಗಳಾದ ಅಂಬೇಡ್ಕರ್, ಗಾಂಧೀ ಮತ್ತು ಹಲವು ವರ್ಗಸಂಹಿತೆಗಳ ವಿರೋಧಗಳು ಇವೆಲ್ಲಾ ವೈಯಕ್ತಿಕತೆಗೆ ಮೀರಿದ ಆಳದಲ್ಲಿ ಮನಸ್ಸು ಈಜುತ್ತಿರುವ, ಏನನ್ನೋ ಗಾಢವಾದದ್ದನ್ನು ಅರಸುತ್ತಿರುವ ಅನುಭಾವವನ್ನು ಕೊಡುತ್ತವೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದಲ್ಲಿ ಜನಿಸಿದ ಮಹಾದೇವರು ತಮ್ಮ ಶಿಕ್ಷಣ-ವಿದ್ಯಾಭ್ಯಾಸವನ್ನು ದೇವನೂರು, ನಂಜನಗೂಡು, ಮೈಸೂರುಗಳಲ್ಲಿ ಪಡೆದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ ಪದವಿ ಪಡೆದರು. 1975-1989ರ ಅವಧಿಯಲ್ಲಿ ಮೈಸೂರಿನ ಸೆಂಟ್ರಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಲ್ಯಾಂಗ್ವೇಜಸ್ ನಲ್ಲಿ ಉದ್ಯೋಗನಿರತರಾಗಿದ್ದ ಇವರು ನಂತರದ ವರ್ಷಗಳಲ್ಲಿ ಪೂರ್ಣಾವಧಿಯ ಕೃಷಿಕರಾಗಿದ್ದಾರೆ. ದ್ಯಾವನೂರು ಸಂಕಲನದ ಕತೆಗಳನ್ನು ಗಮನಿಸಿದರೆ ನವ್ಯ ಸಾಹಿತ್ಯ ಚಳುವಳಿಯ ಪರಿಚಯ ಪ್ರೇರಣೆ ಒಂದು ಹಂತದಲ್ಲಿ ಇವರಿಗೆ ಗಾಢವಾಗಿತ್ತೆಂದು ತಿಳಿದು ಬರುತ್ತದೆ. ಇದರ ಜೊತೆಗೆ ಅರವತ್ತು – ಎಪ್ಪತ್ತರ ದಶಕಗಳಲ್ಲಿ ಕ್ರಿಯಾಶೀಲವಾಗಿದ್ದ ಲೋಹಿಯಾವಾದಿ ಸಮಾಜವಾದಿ ಯುವಜನ ಸಭಾದ ಚಿಂತನ ಚಟುವಟಿಕೆಗಳು, ಮೈಸೂರಿನಲ್ಲಿ ವಾಸವಾಗಿದ್ದ ಯು. ಆರ್. ಅನಂತಮೂರ್ತಿ, ಶ್ರೀ ಕೃಷ್ಣ ಆಲನಹಳ್ಳಿ ಇಂತಹ ಲೇಖಕರೊಡನೆ ಇದ್ದ ಒಡನಾಟ, ಇವೆಲ್ಲವೂ ಮಹಾದೇವರಿಗೆ ಲೇಖಕ ವ್ಯಕ್ತಿತ್ವವನ್ನು ಹುಡುಕಿಕೊಳ್ಳಲು ನೆರವಾಗಿರಬಹುದು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ‘ನರ’ ಎಂಬ ಪ್ರತಿಭಟನಾ ಪತ್ರಿಕೆಯ ಸಂಪಾದಕ-ಪ್ರಕಾಶಕರಾಗಿದ್ದರು. 1975ರಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣರು ಮೈಸೂರಿಗೆ ಬಂದಿದ್ದಾಗ, ಸಾರ್ವಜನಿಕ ಸಭೆಯೊಂದರ ಅಧ್ಯಕ್ಷರಾಗಿದ್ದುದು ಆ ಕಾಲದ ಇವರ ಆಸಕ್ತಿಯ ಹರವುಗಳನ್ನು ಸೂಚಿಸುತ್ತದೆ.

ದೇವನೂರ ಮಹಾದೇವ ಅವರ ಸಾಧನೆಗಳನ್ನು ಕನ್ನಡ ಸಾಂಸ್ಕೃತಿಕ ಲೋಕ ಮನಸಾರೆ ಒಪ್ಪಿ ಗೌರವಿಸಿದೆ. 1984ರಲ್ಲಿ ಕಲ್ಕತ್ತಾದ ಭಾರತೀಯ ಪರಿಷತ್ ಇವರ ‘ಒಡಲಾಳ’ ವನ್ನು ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿದೆ. ಅದೇ ವರ್ಷ ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ದೊರೆಯಿತು. 1989ರಲ್ಲಿ ಅಮೆರಿಕಾದಲ್ಲಿ ನಡೆದ “ಇಂಟರ್ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ”ನಲ್ಲಿ ಮಹಾದೇವ ಭಾಗವಹಿಸಿದರು. 1991ರಲ್ಲಿ ಕುಸುಮ ಬಾಲೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ನಲವತ್ತೊಂದರ ಕಿರಿವಯಸ್ಸಿನಲ್ಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ಪಡೆದ ಭಾರತೀಯ ಲೇಖಕರಲ್ಲಿ ಮಹಾದೇವ ಅವರೇ ಮೊದಲನೆಯವರಿರಬೇಕು. ಅವರಿಗೆ ಭಾರತ ಸರ್ಕಾರದ ‘ಪದ್ಮಶ್ರೀ’ ಗೌರವ ಕೂಡಾ ಸಂದಾಯವಾಯಿತು. ಪ್ರಶಸ್ತಿ ಸ್ವೀಕರಿಸಲು ಕೂಡಾ ಅವರು ಹೋಗಿರಲಿಲ್ಲ. ಅವರ ಮನೆ ಬಾಗಿಲಿಗೇ ಅದು ಅರಸಿಕೊಂಡು ಬಂತು. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಕೇಂದ್ರಸರ್ಕಾರದ ವಿರುದ್ಧವಾಗಿ ಹಲವಾರು ಸಾಹಿತಿಗಳು ಪ್ರಶಸ್ತಿ ವಾಪಸ್ ಮಾಡುತ್ತಿದ್ದ ಅಭಿಯಾನದಲ್ಲಿ ಮಹಾದೇವರೂ ತಮಗೆ ಸಂದಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಮತ್ತ ಪದ್ಮಶ್ರೀ ಗೌರವಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದರು.

ಈ ರೀತಿಯ ಸಾಂಸ್ಥಿಕ ಪ್ರಶಸ್ತಿಗಳೇ ಅಲ್ಲದೆ ದೇವನೂರ ಮಹಾದೇವ ಅವರು ಪಡೆದಿರುವ ವಿಮರ್ಶಾ-ಪ್ರೀತಿ ಗೌರವ ಕೂಡಾ ತುಂಬಾ ಅಪೂರ್ವವಾದದ್ದು. ಪುತಿನ, ಜಿ.ಎಚ್.ನಾಯಕ, ಯು.ಆರ್.ಅನಂತಮೂರ್ತಿ, ಯಶವಂತ ಚಿತ್ತಾಲ, ಪಿ. ಲಂಕೇಶ್ ಅಂತಹ ಹಿರಿಯರು ಕೂಡಾ ಈ ವಿಮರ್ಶಾ ಚರ್ಚೆಯಲ್ಲಿ ಭಾಗವಹಿಸಿದ್ದಾರೆಂಬುದು ಮುಖ್ಯ. ಒಡಲಾಳ, ಕುಸುಮಬಾಲೆ, ಅಮಾಸ – ಈ ಕೃತಿಗಳೆಲ್ಲಾ ನಾಟಕಗಳಾಗಿ ರೂಪಾಂತರಗೊಂಡು ರಂಗಭೂಮಿಯಲ್ಲಿ ಯಶಸ್ವಿಯಾಗಿವೆ.

ಹಿಂಸೆ, ದಬ್ಬಾಳಿಕೆ ಕ್ರೌರ್ಯ – ಇವೆಲ್ಲವೂ ನಮ್ಮ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಹಾಸು ಹೊಕ್ಕಾಗಿವೆಯೆಂದರೆ,ಈ ವಿದ್ಯಮಾನಗಳೆಲ್ಲಾ ನಮಗೆ ಸಹಜವಾಗಿ, ಸರಿಯಾಗಿಯೇ ಕಾಣುತ್ತವೆ. ಇಂತಹ ಸಮಾಜದಲ್ಲಿ ಲೇಖಕನಾಗುವವನಿಗೆ ಪ್ರತಿಭಟನೆಯ ಬಂಡಾಯದ ಅನಿವಾರ್ಯತೆ ಮತ್ತು ಸಂದಿಗ್ಧತೆ ತಿಳಿದಿರಬೇಕು. ಇಲ್ಲಿ ಮನುಷ್ಯನಲ್ಲಿ ಪ್ರೀತಿಸುವ ಮತ್ತು ತಿಳಿಯುವ ಶಕ್ತಿಯು ಎಷ್ಟೊಂದು ಮುಕ್ಕಾಗಿ ಹೋಗಿದೆ ಎಂಬುದನ್ನು ಹೇಳುತ್ತಲೇ, ಈ ಜನವೇ ಪೂರ್ಣವಾಗಿ ಮನುಷ್ಯರಾಗಿ ಅನಾವರಣಗೊಂಡಾಗ, ಎಷ್ಟೊಂದು ಪ್ರೀತಿಸಬಲ್ಲರು, ಎಷ್ಟೊಂದು ಗಾಢವಾಗಿ ತಿಳುವಳಿಕೆ ಪಡೆಯಬಲ್ಲರು ಎಂಬುದನ್ನು ಸೂಚಿಸುವ, ಕನವರಿಸುವ ಶಕ್ತಿಯೂ ಇರಬೇಕು. ಮಹಾದೇವರ ಬರವಣಿಗೆ ಪ್ರಾರಂಭಿಕ ಹಂತದಿಂದಲೂ ಈ ಎಲ್ಲ ಗುಣ ಸ್ವಭಾವಗಳನ್ನು ಬೇರೆ ಬೇರೆ ಸ್ತರದಲ್ಲಿ ಪ್ರಕಟಿಸುತ್ತಾ, ವಿಕಾಸಗೊಂಡಿದೆ ಎಂಬುದೇ ಅವರ ಸಾಹಿತ್ಯದ ವೈಶಿಷ್ಟ್ಯ ಮತ್ತು ಮಹತ್ವ. ಈ ಕಾರಣಕ್ಕಾಗಿಯೇ ಮಹಾದೇವ ದಲಿತರ ಬದುಕಿನ ಬಗ್ಗೆ ಬರೆಯುತ್ತಲೇ ಒಟ್ಟು ಸಮಾಜವನ್ನು, ಒಟ್ಟು ಚರಿತ್ರೆಯನ್ನು ಗ್ರಹಿಸಲು ಅಭಿವ್ಯಕ್ತಿಸಲು ಪ್ರಯತ್ನಿಸುತ್ತಾರೆ. ದಲಿತರು ನಮ್ಮಗಳ ಮನಸ್ಸನ್ನು ಪರಿಭಾವಿಸುವಷ್ಟು ಪ್ರತ್ಯೇಕರಲ್ಲ ಎಂದು ಸೂಚಿಸುವ ಕ್ರಮ ಕೂಡಾ ಇದಾಗಿರಬಹುದು.

ಈ ರೀತಿಯ ಗ್ರಹಿಕೆಯ ಸೂಚನೆಗಳೆಲ್ಲಾ ಅವರ ಮೊದಲ ಕಥಾ ಸಂಕಲನದಲ್ಲೇ ಇದೆ. ಗ್ರಸ್ತ, ಮಾರಿಕೊಂಡವರು ಇಂಥ ಪುಟ್ಟ ಕತೆಗಳಲ್ಲಿನ ಕಥಾ ವಿನ್ಯಾಸವೇ ದೊಡ್ದದಾಗಿದೆ. ಅವುಗಳು ಒಳಗೊಳ್ಳುವ ಪ್ರಪಂಚದ ವಿಸ್ತಾರ ಮತ್ತು ಸಂಕೀರ್ಣತೆ ಸಾಂಪ್ರದಾಯಕ ಸಣ್ಣಕತೆಯ ಅಳವಿಗೆ ಮೀರಿದ್ದು. ಗ್ರಸ್ತ ಕತೆಯಲ್ಲಿ ನಿರೂಪಕ, ಆತನ ತಾಯಿ, ಆತನನ್ನು ಓದಿಸಿ ಬೆಳೆಸಿದ ಊರ ಗೌಡ-ಎಲ್ಲರೂ ಬರವಣಿಗೆಯಲ್ಲಿ ಸಿಕ್ಕಿಹಾಕಿಕೊಂಡವರೆ, ಅಪೂರ್ಣರೇ, ಅವರೊಳಗೆ ಪ್ರೀತಿಸುವ ಮತ್ತು ಅಷ್ಟೇ ಮುಖ್ಯವಾಗಿ ಸತ್ಯ ಹೇಳುವ ಶಕ್ತಿಯೂ ಇದೆ. ಹೀಗಾಗಿ ದಲಿತನೊಬ್ಬನು ತನ್ನ ಸದ್ಯದ ಅವಸ್ಥೆಯನ್ನು ಮೀರಲು ಪ್ರಯತ್ನಿಸುತ್ತಲೇ, ತನ್ನ ಪ್ರತಿಭಟನೆ ಮತ್ತು ಪ್ರೀತಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನದ ಕತೆಯೂ ಆಗಿದೆ. ಡಾಂಬರು ಬಂದುದು, ಮೂಡಲ ಸೀಮೆಯ ಕೊಲೆಗಿಲೆ ಮುಂತಾಗಿ ಮಾರಿಕೊಂಡವರು ಕತೆಗಳ ಪಾತ್ರ ಮತ್ತು ಕಥಾವಿನ್ಯಾಸವೂ ಇದೆ ರೀತಿಯದು.

‘ಒಡಲಾಳ’ ಕಥಾನಕವನ್ನು ಕನ್ನಡ ಸಾಹಿತ್ಯ ಲೋಕ ಕ್ಲಾಸಿಕ್ ಎಂದು ಗುರುತಿಸಿಬಿಟ್ಟಿದೆ. ಸಾಕವ್ವನ ಪರಿವಾರದ ಸದಸ್ಯರೆಲ್ಲಾ ಒಟ್ಟಿಗೆ ಕುಳಿತು ಕಡಲೇಕಾಯಿ ತಿನ್ನುವುದು, ಪುಟ್ಟಗೌರಿ ನವಿಲು ಬಿಡಿಸುವುದು, ಇಂತಹ ಪ್ರಕರಣಗಳು ಕನ್ನಡ ಓದುಗರ ಸಂವೇದನೆಯಲ್ಲಿ ಶಾಶ್ವತ ಸ್ಥಾನ ಪಡೆದಿವೆ. ನೂರಾರು ಪ್ರತಿಭಟನಾ ಬಂಡಾಯದ ಕತೆಗಳನ್ನು ಬರೆದರೂ, ಒಡಲಾಳದಂತಹ ಶುದ್ಧಮಾನವ ಪ್ರೀತಿಯ ಕತೆಯ ಪ್ರಭಾವ ಮುಕ್ಕಾಗಲಾರದು. ಒಡಲಾಳವು ದಲಿತರ, ಬಂಡಾಯದ, ಪ್ರತಿಭಟನೆಯ ಒಡಲಾಳದ ಕತೆಯೆಂದು ತಿಳಿಯುವ ಮುನ್ನವೇ ಓದುಗ ಸಂವೇದನೆಯ ಸ್ತರದಲ್ಲೇ ದಲಿತರ ಸ್ಥಿತಿಯ ಬಗ್ಗೆ, ಅವರ ಆಸೆ-ಆಕಾಂಕ್ಷೆಗಳ ಬಗ್ಗೆ ಇತ್ಯಾತ್ಮಕ ಧೋರಣೆಯ ಮನುಷ್ಯನಾಗಿ ಪರಿವರ್ತನೆ ಹೊಂದಿರುತ್ತಾನೆ ಎಂಬುದೇ ಈ ಕೃತಿಯ ಸಾಧನೆ. ಇಲ್ಲಿಯ ನಿರೂಪಣೆ ಕನ್ನಡ ಕಥನ ಸಾಹಿತ್ಯದ ಇಬ್ಬರು ಶ್ರೇಷ್ಠಬರಹಗಾರರಾದ ಮಾಸ್ತಿ ಮತ್ತು ಕುವೆಂಪು ಅವರನ್ನು ಮತ್ತೆ ಮತ್ತೆ ನೆನೆಪಿಗೆ ತರುತ್ತದೆ. ಮಹಾದೇವರ ಈ ಕೃತಿಯಲ್ಲಿ ಹಾಸ್ಯ, ತಮಾಷೆಗಳ ಮೆಲುದನಿಯಿದ್ದರೂ ಅದು ಕಥಾವಸ್ತುವಿನಲ್ಲಿ ಅಡಕವಾಗಿರುವ ವಿಷಾದ ಭಾವಕ್ಕೆ ಅಡ್ಡಿ ಬರುವುದಿಲ್ಲ. ಈ ಕೃತಿಯಲ್ಲಿ ಮಹಾದೇವ ಪ್ರತಿಭಟನೆ-ಬಂಡಾಯವೆನ್ನುವುದು ಎಷ್ಟೊಂದು ಪ್ರೀತಿಯ, ಎಷ್ಟೊಂದು ಅಂತಃಕಾರಣದ ಕ್ರಿಯೆಯೆಂಬುದನ್ನು ಓದುಗರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.

‘ಕುಸುಮ ಬಾಲೆ’ ಒಂದು ದೃಷ್ಟಿಯಿಂದ ಕತೆಯ ಹಂಗನ್ನು ತೊರೆದ ಕಾದಂಬರಿ ಎಂದು ಹೇಳಬಹುದು. ಹಾಗೆಂದರೆ ಕತೆ ಇಲ್ಲವೆಂದಲ್ಲ. ಘಟನೆ ಇಲ್ಲವೆಂದಲ್ಲ. ಲೇಖಕನೇ ಕತೆಯ ಸ್ವಾರಸ್ಯವನ್ನೆಲ್ಲಾ ಕೇವಲ ಏಳೆಂಟು ವಾಕ್ಯಗಳಲ್ಲಿ ನಾಂದಿ ರೂಪದಲ್ಲಿ ಹೇಳಿ, ಕತೆಯನ್ನು ಮೀರಿದ್ದಕ್ಕೆ ಓದುಗನನ್ನು ಸಿದ್ಧಗೊಳಿಸುವಂತಿದೆ. ಅಕ್ಕಮಹಾದೇವಿ, ಆಕೆಗೆ ಜೀತದಾಳಿನಿಂದ ಹುಟ್ಟಿದ ಮಗ ಯಾಡ, ನಂತರ ಅವನು ಬೆಳೆದು ಯಾಡೇಗೌಡನಾಗುವುದು, ಅವನ ಮಗ ಸೋಮಪ್ಪ ಊರಿಗೆ ದೊಡ್ಡವನು, ಅವನ ಮಗಳು ಕುಸುಮ, ಅವಳಿಗೆ ಚನ್ನನ ಮೂಲಕ ಮಗು, ಚೆನ್ನನ ಕೊಲೆ, ಅದನ್ನು ಅರಿಯದವರು ಅವನಿಗಾಗಿ ಕಾಯುವ ಪರಿ ಇಷ್ಟು ಕತೆಯ ಹಂದರ. ಈ ಹಂದರ ಪಡೆಯಬಹುದಾದ ಕಾಲಾಂತರದ ದೇಶಾಂತರದ ಸ್ವರೂಪವೇ ಕೃತಿಯ ಜೀವಾಳ. ಈ ಜೀವಾಳವು ಕತೆಯನ್ನು ಪ್ರವೇಶಿಸಲು ಅನೇಕ ಕಿಟಕಿಗಳನ್ನು ತೆರೆಯುತ್ತದೆ. ಯಾವ ಕಿಟಕಿಯ ಮೂಲಕ ನೀವು ಕತೆ ಹೊಕ್ಕರೂ ಕೊನೆಗೆ ಅನುಭವಿಸುವ ಜೀವಂತಿಕೆಯ ಮತ್ತು ವಿಷಾದದ ಭಾವ ಮಾತ್ರ ಬೇರೆ ಬೇರೆಯಾಗುವುದಿಲ್ಲ. ಬೇರೆ ಬೇರೆ ಸ್ತರಗಳಿಗೆ, ಬೇರೆ ಬೇರೆ ಕಾಲಕ್ಕೆ ಸೇರಿದ ಪಾತ್ರಗಳ ಮೂಲಕ ತನ್ನ ಭಾಷಾ ಪ್ರಯೋಗದ ಮೂಲಕ ನಿರೂಪಣಾ ವೈವಿಧ್ಯದ ಮೂಲಕ ಓದುಗರನ್ನು ಕೆಣಕುವುದು ಈ ಕೃತಿಯ ಒಂದು ಮುಖ್ಯಗುಣ.

ಹೀಗೆ ದೇವನೂರು ಮಹಾದೇವರ ಬರವಣಿಗೆ ಎರಡು ದೃಷ್ಟಿಯಿಂದ ಮಹತ್ವದ್ದೆನಿಸುತ್ತದೆ. ಒಂದು ಅವರ ಕಂದರಿಸಿ ಶೋಧಿಸಿ ಮಂಡಿಸಿದ ದಲಿದ ಲೋಕದ ಅನುಭವ, ಮತ್ತೊಂದು ಅವರು ಹುಡುಕಿದ ಹೊಸ ಅಭಿವ್ಯಕ್ತಿ ಕ್ರಮಗಳ ಪ್ರಸ್ತುತತೆ.

ಇತ್ತೀಚಿನ ವರ್ಷದಲ್ಲಿ ದೇವನೂರರ ಹಲವಾರು ಚಿಂತನೆಗಳ ಮೂಸೆಯಲ್ಲಿ ಅರಳಿದ ‘ಎದೆಗೆ ಬಿದ್ದ ಅಕ್ಷರ’ ಎಂಬ ಕೃತಿ ಪ್ರಕಟಗೊಂಡಿದೆ. ಕಳೆದ ನಾಲ್ಕು ದಶಕಗಳಲ್ಲಿ ದೇವನೂರ ಅವರು ಬರೆದ, ಆಡಿದ ಮಾತುಗಳನ್ನು ಒಟ್ಟಿಗೆ ಸೇರಿಸಿ ಓದುಗರಿಗೆ ಒಪ್ಪಿಸುವ ಒಂದು ಪ್ರಯತ್ನ ಇದಾಗಿದೆ. ದೇವನೂರರ ಈ ಬರಹದಲ್ಲಿ ಗಾಂಧಿ, ಅಂಬೇಡ್ಕರ್ ಮತ್ತು ರಾಮಮನೋಹರ ಲೋಹಿಯಾರ ಚಿಂತನೆಗಳು ಹಾಸುಹೊಕ್ಕಾಗಿವೆ. “ಭಾರತ ಗಾಯಗೊಂಡು ಬಿದ್ದಿದೆ, ಅದರ ಗಾಯ ಅದಕ್ಕೆ ಗಾಯ ಅಂತ ಅನ್ನಿಸುತ್ತಿಲ್ಲ. ಅಸ್ಪೃಶ್ಯತೆ, ಜಾತಿ, ಮತೀಯತೆಯ ಗಾಯವು ನಂಜಾಗಿ ಮಿದುಳಿಗೇರಿ ಭಾರತ ಹುಚ್ಚಾಗಿದೆ. ಈ ಗಾಯವನ್ನೇ, ಹುಚ್ಚನ್ನೇ ಸಮಾಜದೊಳಗೆ ಸಂಸ್ಕೃತಿ ಅಂತ, ಪರಂಪರೆ ಅಂತ ಬಿಂಬಿಸಲಾಗಿದೆ” ಎಂಬ ದೇವನೂರ ಮಹಾದೇವರ ಮಾತುಗಳು ಅವರ ಚಿಂತನೆಗಳ ಆಳದಲ್ಲಿರುವ ವ್ಯಥೆಗಳನ್ನು, ಕಾಳಜಿಗಳನ್ನು ಸ್ಪಷ್ಟಪಡಿಸುತ್ತವೆ.

“ದಿನ ಸವೆಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಕಳು ಬರುತ್ತವೆ. ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ” ಎಂಬ ದೇವನೂರರ ಮಾತುಗಳು ಅವರಿಗೆ ಪ್ರಪಂಚದ ಕುರಿತಾಗಿ ಇರುವ ಪ್ರೀತಿಯ ಬಗ್ಗೆ ನಮಗೆ ಇನ್ನಿಲ್ಲದಂತಹ ಗಾಢತೆಯನ್ನು ತಲುಪಿಸುತ್ತದೆ.

ತಮ್ಮ ಬರವಣಿಗೆ, ಸಾಮಾಜಿಕ ಚಿಂತನೆ, ಮುಕ್ತ ಅಭಿಪ್ರಾಯ ಮಂಡನೆ, ಜನಸ್ಪಂದನೆಗಳ ಮೂಲಕ ನಮ್ಮ ನಡುವಿನ ಅಪೂರ್ವ ವ್ಯಕ್ತಿತ್ವದ ದೇವನೂರ ಅವರನ್ನು ನೆನೆದು ಮನ ಕೃತಜ್ಞತೆಗಳೊಡನೆ ಹರ್ಷಿತವಾಗುತ್ತದೆ.

******

ಕೆ.ಶಿವು.ಲಕ್ಕಣ್ಣವರ

Leave a Reply

Back To Top