ಲೇಖನ ಸಂಗಾತಿ
“ರಮೇಶ ಸಿ ಬನ್ನಿಕೊಪ್ಪ ಹಲಗೇರಿ
“ಅನ್ಯರವರೆನ್ನುವ ಸಂಕಟದೊಳಗೆ…
ಒಂದು ಕುಟುಂಬದ ಮಗಳು ಇನ್ನೊಂದು ಕುಟುಂಬಕ್ಕೆ ಬರುವ ಸೊಸೆಯಾಗಿರಲಿ..!
ಒಂದು ಕುಟುಂಬದ ಮಗ ಇನ್ನೊಂದು ಕುಟುಂಬಕ್ಕೆ ಹೊಸ ಸಂಬಂಧಗಳ ಮೂಲಕ ಅಳಿಯನಾಗಿ ಹೋಗುವ ಸಂಬಂಧ ವಿರಲಿ…!!
ಅಥವಾ
ಒಂದೇ ತರಗತಿಯಲ್ಲಿ ಓದಿ ಒಬ್ಬರಿಗೊಬ್ಬರು ಮುಖ ನೋಡಿಕೊಂಡಿದ್ದರೂ ಶಾಲೆಯಲ್ಲಿ ಅಭ್ಯಾಸ ಮಾಡಿದ ಗೆಳೆಯರು ಎಷ್ಟೋ ದಿನಗಳ ನಂತರ ಎದುರಿಗೆ ಕಂಡಾಗ ಗೊತ್ತಿಲ್ಲದಂತೆ ಹೋದರೆ…!!
ಹೀಗೆ ಅನೇಕ ವಿಚಾರಗಳು ಮತ್ತು ಸನ್ನಿವೇಶಗಳು ಎದುರುಗೊಂಡಾಗ ಕೆಲವು ಸಲ ಇವರು ನಮ್ಮವರು, ನಮ್ಮ ಬದುಕಿನಲ್ಲಿ ವಿಶೇಷ ಸ್ಥಾನವನ್ನು ಪಡೆದವರು ಎಂದುಕೊಂಡು ಅವರ ಬಗ್ಗೆ ಎಲ್ಲಿಲ್ಲದ ಕನಸನ್ನು ಕಾಣುತ್ತೇವೆ. ಕೆಲವು ಸಲ ಆ ಕನಸುಗಳು ನುಚ್ಚುನೂರಾಗುತ್ತವೆ. ಕೈಗೆ ಬಂದ ಮಗನಿಗೆ ಮದುವೆ ಮಾಡಿ, ಸೊಸೆಯಿಂದ ಬಿಸಿರೊಟ್ಟಿ ತಿನ್ನುವ ಅತ್ತೆಯ ಕನಸಾಗಲಿ, ಸೊಸೆಯೊಡನೆ ಪ್ರೀತಿಯಿಂದ ನಗುನಗುತ್ತಾ ಮಾತನಾಡುತ್ತಾ ಆಕೆಯನ್ನು ‘ಮಗಳ’ ರೂಪದಲ್ಲಿ ಕಾಣುವ ಮಾವನ ಆಸೆಯು ಈಡೇರಬೇಕೆಂದರೆ, ಆ ಮನೆಗೆ ಬಂದ ಸೊಸೆ ಅವರಿಗೆ ಪರಕಿಯಳಾಗಿ ಕಾಣಬಾರದು.
ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಬಂದ ಅವಳು ತನ್ನ ಗಂಡನ ಮನೆಯನ್ನು ಬೆಳಗಲಿಕ್ಕೆ ಬಂದಿರುವೆ ಎನ್ನುವ ಉದಾತ್ತ ಮನೋಭಾವ ಅವಳ ಹೃದಯದೊಳಗೆ ತುಂಬಿರಬೇಕು. ಅವರ ತಂದೆ ತಾಯಿಯನ್ನು ಬಿಟ್ಟು ನಮ್ಮನ್ನೇ ತಂದೆ ತಾಯಿ ಎಂದುಕೊಂಡು ಬಂದು ನಮ್ಮ ಮನೆಯನ್ನು ಬೆಳಗುತ್ತಿರುವ ಈಕೆ ನನ್ನ ಮಗಳ ಸ್ವರೂಪವೆಂದು ಅತ್ತೆ ಮಾವನವರು ತಿಳಿದುಕೊಳ್ಳಬೇಕು. ಹಾಗೆಯೇ ಅವರ ಮಗಳನ್ನು ಮದುವೆ ಮಾಡಿಕೊಂಡಿರುವೆ, ಇವರು ನನ್ನ ತಂದೆಯ ತಾಯಿಯ ಸ್ವರೂಪವೆಂದು ತಿಳಿಯಬೇಕು. ಅವರು ಅಷ್ಟೇ ಅಳಿಯ ತಮ್ಮ ಮನೆಗೆ ಬಂದಾಗ ಮಗನಿಗಿಂತಲೂ ಹೆಚ್ಚಾಗಿ ಕಾಣಬೇಕಾದ ಆದ್ಯಕರ್ತವ್ಯ ಅತ್ತೆ ಮಾವನವರಿಗಿರುತ್ತದೆ.
ಬದುಕೆಂದರೆ ಹೀಗೆ…
ಒಬ್ಬರು ಇನ್ನೊಬ್ಬರಿಗೆ ಪ್ರೀತಿಯಿಂದ ಕಾಣುವ, ಗೌರವಿಸುವ, ಸಣ್ಣಪುಟ್ಟ ತಪ್ಪುಗಳನ್ನು ಮನ್ನಿಸುವ ದೊಡ್ಡತನ ಎಲ್ಲರೊಳಗೆ ಇದ್ದಾಗ, ಅವರಿಗೆ ಇವರು ; ಇವರಿಗೆ ಅವರು ಯಾವತ್ತೂ ಪರಕೀಯರಾಗುವುದಿಲ್ಲ. ಬದುಕಿನಲ್ಲಿ ಸಹಜವಾಗಿ ಮಾತನಾಡುತ್ತಾ ಮಾತನಾಡುತ್ತಾ ಮನೆಯಲ್ಲಿ ಕುಳಿತ ಸಂಬಂಧಿಗಳ ಮುಂದೆ “ಈ ಸೊಸೆ ನಮ್ಮ ತವರು ಮನೆ ಕಡೆಯಿಂದ ಸಂಬಂಧ ಆಗಿದ್ದು, ಇನ್ನೊಬ್ಬ ಸೊಸೆ ಇದ್ದಾಳಲ್ಲ ಅವಳು ಹೊರಗಿನ ಕಡೆಯವಳು ಅಂದರೆ ಅರ್ಥ ಪರಕೀಯವಳು..” ಎನ್ನುವ ಮಾತುಗಳು ಕೆಲವು ಸಲ ಸೊಸೆಯರೊಳಗೆ ಕೀಳರಿಮೆ ಬೆಳೆದುಬಿಡುತ್ತದೆ. ಅದು ಅವರ ತಪ್ಪಲ್ಲ. ನಮ್ಮ ಮಾತುಗಳು ನಮ್ಮ ಹಿಡಿತದಲ್ಲಿರಬೇಕು. ನಮ್ಮ ಅಕ್ಕಪಕ್ಕ ಯಾರಿದ್ದಾರೆ, ಅವರ ಮನಸ್ಸಿಗೆ ನೋವಾಗದಂತೆ ಮಾತನಾಡುವ ಎಚ್ಚರಿಕೆಯ ಪ್ರಜ್ಞೆ ನಮ್ಮೊಳಗಿರಬೇಕು. ನಂಟಸ್ತಿಕೆ, ಬೀಗತನ, ಸಂಬಂಧ.. ಹೊಸದೇ ಇರಬಹುದು ಆದರೆ ಒಂದು ಸಲ ಸಂಬಂಧ ಬೆಳೆದ ನಂತರ ಆಕೆ ಸೊಸೆಯಾಗಲಿ, ಅವನು ಅಳಿಯನಾಗಲಿ ಆ ಮನೆಯ ಬಂಧುವಾಗುತ್ತಾರೆ. ಬಂಧು ಬಾಂಧವರನ್ನು ಆಪ್ತತೆಯಿಂದ ಕಾಣಬೇಕಾದ ಕರ್ತವ್ಯ ಪ್ರತಿಯೊಬ್ಬರಿಗಿರುತ್ತದೆ. ಇಲ್ಲದೆ ಹೋದರೆ ಹೊಸ ಸಂಬಂಧಗಳು ಬಿರುಕು ಬಿಡಲು ಪ್ರಾರಂಭಿಸುತ್ತವೆ.
ತನಗಿಷ್ಟವಲ್ಲದ ಊಟ, ಅಭಿರುಚಿ, ಆಸಕ್ತಿ, ಹವ್ಯಾಸಗಳು ಕ್ರಮೇಣ ರೂಢಿಸಿಕೊಳ್ಳಲೇಬೇಕು. “ಇದು ನನಗೆ ಹಿಡಿಸುವುದಿಲ್ಲ” ಎನ್ನುವ ಮಾತುಗಳು ಕೆಲವು ಸಲ ಬದುಕನ್ನೇ ಛಿದ್ರಗೊಳಿಸಿ ಬಿಡುತ್ತವೆ. ನಮ್ಮ ಅಭಿರುಚಿಗಳು, ಆಸಕ್ತಿಗಳು ಕೆಲವು ಸಲ ಕುಟುಂಬಕ್ಕಾಗಿ ತ್ಯಾಗ ಮಾಡಬೇಕಾಗುತ್ತದೆ. ಕುಟುಂಬದ ಸದಸ್ಯರು ಕೂಡ ಅಷ್ಟೇ ಹೊಸದಾಗಿ ಮನೆಗೆ ಬಂದ ಸೊಸೆಯಾಗಲಿ, ಅಳಿಯನಾಗಲಿ ಅವರ ಅಭಿರುಚಿ, ಆಸಕ್ತಿ, ಹವ್ಯಾಗಳನ್ನು ತ್ಯಾಗ ಮಾಡಿಕೊಡಬೇಕು. ಎಷ್ಟು ಸಾಧ್ಯವೋ ಅಷ್ಟು ಅವರ ಒಳ್ಳೆಯ ಹವ್ಯಾಸಗಳಿಗೆ ಪ್ರೋತ್ಸಾಹಿಸಬೇಕು. ತಪ್ಪಾಗಿ ನಡೆದುಕೊಂಡರೆ, ಕೆಟ್ಟದಾಗಿ ವರ್ತಿಸಿದರೆ ಪ್ರೀತಿಯಿಂದ ತನ್ನ ಮಗಳಿಗೆ ಅಥವಾ ಮಗನಿಗೆ ಯಾವ ರೀತಿ ತಿಳಿ ಹೇಳುತ್ತಾರೋ ಅದೇ ರೀತಿ ತಿಳಿ ಹೇಳಬೇಕು. ಸುಧಾರಿಸದೆ ಹೋದಾಗ ಮಾತ್ರ ಅವರ ತವರು ಮನೆಯವರಿಗೆ ವಿಷಯವನ್ನು ಗಮನಕ್ಕೆ ತಂದು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು.
ನೆನಪಿರಲಿ.. ಸಂಬಂಧಗಳು ಕೇವಲ ಒಬ್ಬರಿಂದ ಹಾಳಾಗುವುದಿಲ್ಲ ಅದು ಒಬ್ಬರಿಗೊಬ್ಬರು ಪರಸ್ಪರ ಪೂರಕವಾಗಿ ಹಾಳಾಗಲು ಕಾರಣವಾಗುತ್ತವೆ. ಒಂದು ಹೆಜ್ಜೆ ಹಿಂದೆ ಸರಿದು ಮಾತನಾಡಿದರೆ, ನಮ್ಮ ವ್ಯಕ್ತಿತ್ವವೇನು ಬಿದ್ದು ಹೋಗುವುದಿಲ್ಲ ಎನ್ನುವ ಔದಾರ್ಯ, ದೊಡ್ಡತನ ನಮ್ಮೊಳಗಿರಬೇಕು. ಇಲ್ಲದೆ ಹೋದರೆ ಸಂಬಂಧಗಳು ಸವಕಲಾಗಿ ಬಿಡುತ್ತವೆ. ಮತ್ತೊಂದು ಮನೆಯಾಗಲು ಕಾರಣವಾಗುತ್ತವೆ. ಯಾವಾಗಲೂ ಮನೆಯೊಂದಾಗಿದ್ದರೆ, ಒಲೆ ಒಂದಾಗಿದ್ದರೆ ಅದು ಚಂದ. ಇಲ್ಲದೆ ಆದರೆ ಪರಕೀಯರೆನ್ನುವ ಎನ್ನುವ ಸಂಕಟ ಎದೆಯೊಳಗೆ ಉರಿಯುತ್ತಲೇ ಹೋಗುತ್ತದೆ.
ಇನ್ನು ಗೆಳತನದ ವಿಷಯಕ್ಕೆ ಬಂದರೆ ಒಂದೇ ಶಾಲೆಯಲ್ಲಿ ಓದಿದ ಒಂದೇ ತರಗತಿಯಲ್ಲಿ ಪಾಠ ಕೇಳಿದ ದಿನಾಲೂ ಪರಸ್ಪರ ಮುಖವನ್ನು ನೋಡಿ ಆಟ ಪಾಠಗಳಲ್ಲಿ ಒಂದಾಗಿ ಸ್ನೇಹವನ್ನು ಮಾಡಿದ ಗೆಳೆಯರು ಕೆಲವು ದಿನಗಳ ನಂತರ ಆಕಸ್ಮಿಕವಾಗಿ ಎದುರುಗೊಂಡಾಗ ಅವರಿಗೆ ಪ್ರೀತಿಯಿಂದ ನಾಲ್ಕು ಮಾತು, ಒಂದು ಮುಗುಳ್ನಗೆ ಅದು ಬಹುದೊಡ್ಡ ಸಂಬಂಧವನ್ನು ಇನ್ನು ಗಟ್ಟಿಮಾಡುತ್ತದೆ. “ಅವನು ನನ್ನ ಕ್ಲಾಸ್ಮೇಟ್, ಅವನು ನನ್ನ ಸ್ನೇಹಿತ, ಅವರು ನಾವು ಒಂದೇ ಶಾಲೆಯಲ್ಲಿ ಓದಿದ್ದೇವೆ, ಒಂದೇ ವಸತಿ ಶಾಲೆಯಲ್ಲಿ ವಾಸವಾಗಿದ್ದೆವು, ಅಂದು ಕಳೆದ ದಿನಗಳ ಚೆಂದ ಎಷ್ಟು ಮರೆಯಲಾಗದು..” ಎನ್ನುವ ಪ್ರೀತಿಯ ಮಾತುಗಳು ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ.
“ಸ್ನೇಹವೆಂದರೆ ಭಾವನಾತ್ಮಕ ಸಂಬಂಧದ ಹೃದಯವಿದ್ದಂತೆ, ಸಂಬಂಧಗಳಲ್ಲಿ ಹೇಳಿಕೊಳ್ಳಲಾರದ ಅನೇಕ ಸಂಗತಿಗಳನ್ನು ಸ್ನೇಹದಲ್ಲಿ ಹೇಳಿಕೊಳ್ಳುತ್ತೇವೆ. ಸ್ನೇಹಿತನ ಸ್ನೇಹ ಯಾವಾಗಲೂ ತೆರೆದ ಹೃದಯದಂತಿರಬೇಕು. ಆಗ ಮಾತ್ರ ಸ್ನೇಹಿತ ಪರಕಿಯಾಗುವುದಿಲ್ಲ. ಕಷ್ಟ ನೋವು, ಸಂಕಟದಲ್ಲಿ ಕೈಹಿಡಿದ ಸ್ನೇಹ ಅದು ಯಾವತ್ತಿಗೂ ಶಾಶ್ವತವಾಗಿರುತ್ತದೆ. ಅದು ಎಂದಿಗೂ ಬದಲಾಗುವುದಿಲ್ಲ. ಕೇವಲ ಅಗತ್ಯಕ್ಕಾಗಿ ಹುಟ್ಟಿದ ಸ್ನೇಹ ಅದು ಕ್ಷಣಿಕ. ತಾತ್ಕಾಲಿಕ. ಅಂತ ಸ್ನೇಹ ಶಾಶ್ವತವೂ ಅಲ್ಲ. ಕೇವಲ ಅದೊಂದು ಸವಕಲು ಸಂಬಂಧ ಮಾತ್ರ. ಇವೆಲ್ಲವನ್ನು ಮೀರಿ ನಿಂತಾಗಲೇ ನಮ್ಮ ಬಾಂಧವ್ಯದ ಬದುಕು ಗಟ್ಟಿಯಾಗುತ್ತದೆ.
ಎದುರುಗೊಂಡವರಿಗೆ ಒಂದು ಪ್ರೀತಿಯ ಮುಗುಳ್ನಗೆ, ಹಸನ್ಮುಖವಾದ ಪ್ರೀತಿ, ಪ್ರೀತಿಯ ಮಾತುಗಳು, ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬಲ್ಲದು. ನಾವು ಯಾರಿಗೂ ದುಡ್ಡು ಕೊಟ್ಟು ಸಂಬಂಧವನ್ನು ಗಟ್ಟಿಗೊಳಿಸಲು ಆಗುವುದಿಲ್ಲ. ನಮ್ಮ ಸಂಬಂಧಗಳು ಸ್ನೇಹ ಸಂಬಂಧಗಳಾಗಿರಬಹುದು, ಬಾಂಧವ್ಯದ ಸಂಬಂಧಗಳಾಗಿರಬಹುದು ಅವುಗಳು ಪರಸ್ಪರ ಒಬ್ಬರಿಗೊಬ್ಬರು ಪೂರಕವಾಗಿರಬೇಕೆಂದರೆ ಒಬ್ಬರಿಗೊಬ್ಬರು ಪರಸ್ಪರ ಸಂಪರ್ಕದಲ್ಲಿರಬೇಕು. ಪ್ರೀತಿಯ ಮಾತುಗಳು, ಸಲಹೆ ಸೂಚನೆಗಳು, ಸರಿಯಾದ ಮಾರ್ಗದರ್ಶನ ಅವುಗಳು ಧನಾತ್ಮಕವಾಗಿದ್ದು ಬದುಕಿಗೆ ಪೂರಕವಾಗಿದ್ದರೆ ಅದನ್ನು ಸ್ವೀಕರಿಸುವ ದೊಡ್ಡತನ ಎಲ್ಲರೊಳಗಿರಬೇಕು. ಆಗ ನಮ್ಮ ಬದುಕಿನ ಬಾಂಧವ್ಯ ಗಟ್ಟಿಯಾಗುತ್ತಾ ಪರಸ್ಪರ ಒಬ್ಬರಿಗೊಬ್ಬರು ಪರಕಿಯರು ಎನಿಸುವುದಿಲ್ಲ. “ಅವರು ಅನ್ಯರಲ್ಲ ನಮ್ಮವರು” ಅನ್ಯರೆನ್ನುವ ಸಂಕಟ ನಮ್ಮ ಹೃದಯದೊಳಗೆ ಮೂಡಲೇಬಾರದು. ಅನ್ಯರೆನ್ನುವ ಸಂಕಟ ಅದು ವರ್ಣಿಸಲಾಗದು. ಅದು ಕೇವಲ ನೋವು, ಸಂಕಟ, ಕಣ್ಣೀರು.. ಮಾತ್ರ ಕೊಡುತ್ತದೆ. ಬದುಕಿನಲ್ಲಿ ನಾವು ಪರಸ್ಪರ ಒಬ್ಬರಿಗೊಬ್ಬರು ಆಗೋಣ. ನನ್ನವರೆನ್ನುವ ಪ್ರೀತಿ ನಮ್ಮೊಳಗಿರಲಿ. ಬಸವಣ್ಣನವರ ವಚನ,
“ಇವನಾರವ ಇವನಾರವ ಎನ್ನದಿರುಇವ ನಮ್ಮವ ಇವ ನಮ್ಮ ಮನೆಯ ಮಗನೆಂದನಿಸಯ್ಯ.. ಕೂಡಲಸಂಗಮದೇವ..” ಎನ್ನುವ ವಚನ ಪ್ರಸ್ತುತ ಬದುಕಿಗೆ ಯಾವಾಗಲೂ ದಾರಿದೀಪವಾಗಲಿ. ನಮ್ಮ ಬದುಕಿನ ಹೆಜ್ಜೆ ಗುರುತಿನಲ್ಲಿ ಸಂಬಂಧಗಳು ಗಟ್ಟಿಯಾಗಿರಲೆಂದು ಆಶಿಸುತ್ತಾ, ಪ್ರೀತಿ, ಸ್ನೇಹ, ಮಧುರತೆ, ವಾತ್ಸಲ್ಯ… ನಮ್ಮ ಹೃದಯದೊಳಗಿಳಿಯಲೆಂದು ಬಯಸುವೆ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ