ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ನೀನಿಲ್ಲದೆ ನಾನಿಲ್ಲ.!
ನೀನೆ ನನ್ನೊಳಗಿನ ಜೀವತ್ವ
ನೀನಿಲ್ಲದೆ ನನಗೆಲ್ಲಿದೆ ಅಸ್ತಿತ್ವ.?
ನಿನೇ ಈ ಬದುಕಿನ ನಿತ್ಯ ಸತ್ವ
ನಿನ್ನಿಂದಲೇ ಆ ಬೆಳಕಿನ ತತ್ವ.!
ನಿನ್ನದೇ ಕಡಲು ಮಳೆಮುಗಿಲು
ನಿನ್ನದೇ ನನ್ನೊಳಗಿನ ಒಡಲು
ನಿನ್ನದೇ ಸುಳಿಗಾಳಿ ತೂಗುಹಸಿರು
ನಿನ್ನದೇ ಒಳಗಣ ಪ್ರಾಣದುಸಿರು.!
ಅಡಿಗಡಿಗು ನಿನ್ನದೇ ಒಲವು
ಕಣಕಣಕು ನಿನ್ನದೇ ಬಲವು
ಹೊರಗೆ ನಿನ್ನದೇ ಕಾರುಣ್ಯ
ನನ್ನೊಳಗೆ ನಿನ್ನದೇ ಚೈತನ್ಯ.!
ನೀನೇ ಬಾಹ್ಯದ ಸೌಂದರ್ಯ
ನೀನೆ ಅಂತರಂಗ ಮಾಧುರ್ಯ
ನೀನೇ ಜೀವದ ಆಂತರ್ಯ
ನೀನೇ ಜೀವನಕೆ ಔದಾರ್ಯ.!
ನೀನೇ ಪರಮಾತ್ಮನೆಂಬ ಸಿಂಧು
ನಿನ್ನಿಂದಲೇ ಆತ್ಮವೆಂಬ ಬಿಂದು
ನೀನೇ ನರ-ನರದ ಸಂಚಲನ
ನೀನೆ ಸ್ವರ-ಸ್ವರದ ಸಂಕೀರ್ತನ.!
ನಿನ್ನಿಂದಲೇ ನನ್ನಿರುವು ಉಳಿವು
ನಿನ್ನಿಂದಲೇ ನನ್ನಯಾ ಅಳಿವು
ನಿನ್ನಿಂದಲೇ ಪಂಚಭೂತ ಹರಿವು
ನಿನ್ನಿಂದಲೇ ಪಂಚೇಂದ್ರಿಯ ಅರಿವು.!
ನಿನೇ ಜೀವಭಾವಗಳ ಝೇಂಕಾರ
ನಿನ್ನಿಂದಲೇ ಬೆಳಕು ಭಾಷ್ಯ ಸಾಕಾರ
ನಿನ್ನೊಡನೆಯೇ ಅವಿನಾಬಂಧ ನಂಟು
ನೀನಿಲ್ಲದೆ ನಾನಾದರೂ ಎಲ್ಲುಂಟು.?
ಎ.ಎನ್.ರಮೇಶ್.ಗುಬ್ಬಿ.