ಪುಟ್ಟ ಮಕ್ಕಳು ಗುಂಪಾಗಿ ನೃತ್ಯ ಮಾಡುವಾಗ ಹೆದರುವುದಿಲ್ಲ, ಆದರೆ ಅದೇ ಮಕ್ಕಳನ್ನು ಒಬ್ಬೊಬ್ಬರಾಗಿ ವೇದಿಕೆಯ ಮೇಲೆ ಕರೆದು ನಿಲ್ಲಿಸಿದಾಗ ಕೆಲ ಮಕ್ಕಳು ವೇದಿಕೆಯ ಮೇಲೆ ಬರುತ್ತಲೇ ಭಯದಿಂದ ಅಳತೊಡುತ್ತಾರೆ.
 ಇದು ಕೇವಲ ಮಕ್ಕಳಿಗೆ ಮಾತ್ರ ಸೀಮಿತವಲ್ಲ… ಬಹಳಷ್ಟು ಜನ ವೇದಿಕೆಯ ಮೇಲೆ ಮಾತನಾಡಲು ಎದ್ದು ನಿಲ್ಲುತ್ತಲೇ ಗಾಬರಿಯಿಂದ  ನಡುಕ ಉಂಟಾಗಿ ಇಲ್ಲವೇ ಬೆವರಿ ಏನೂ ಮಾತನಾಡಲಾಗದೆ ಹೋಗುತ್ತಾರೆ. ಹೀಗೇಕೆ ಆಗುತ್ತದೆ??
ವೇದಿಕೆಯ ಮೇಲೆ ಭಯದಿಂದ ಮುಕ್ತರಾಗಿ ಸರಾಗವಾಗಿ ಮಾತನಾಡಲು ಸಾಧ್ಯವಾಗದೆ ಇರುವ ಕಾರಣವಾದರೂ ಏನು?
 ಮೊದಲನೆಯದಾಗಿ ಭಯ ಮತ್ತು ಆತಂಕ… ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ನನಗೆ ಮಾತನಾಡಲು ಸಾಧ್ಯವೇ?ಎಂಬ ಭಯ ಆತಂಕವನ್ನು ಉಂಟುಮಾಡುತ್ತದೆ. ನಮ್ಮ ಮನಸ್ಥಿತಿಯನ್ನು ಧನಾತ್ಮಕವಾಗಿ ಬದಲಾಯಿಸಿಕೊಂಡು ಭಯವನ್ನು ಹತ್ತಿಕ್ಕಿ ಹಿಂಜರಿಕೆ ಇಲ್ಲದೆ ವೇದಿಕೆಯ ಮೇಲೆ ಮೊದಮೊದಲು ಒಂದೆರಡು ನಿಮಿಷ ಮಾತನಾಡಲು ಆರಂಭಿಸಿದಾಗ ನಿಧಾನವಾಗಿ ಆತ್ಮವಿಶ್ವಾಸ ಕುದುರಿಸಿಕೊಳ್ಳಬೇಕು. ವಿಷಯ ಸಂಗ್ರಹಕ್ಕೆ ಒತ್ತು ನೀಡಿ ಕೇವಲ ಒಂದೆರಡು ವಿಷಯಗಳ ಮೇಲೆ ಸ್ಪಷ್ಟವಾಗಿ ಮತ್ತು ಕ್ಲುಪ್ತವಾಗಿ ಮಾತನಾಡಲು ಕಲಿಯಬೇಕು. ಎಷ್ಟೋ ಬಾರಿ ನಮ್ಮ ಮುಂದೆ ಕುಳಿತಿರುವವರಿಗೆ ಏನೂ  ಗೊತ್ತಿಲ್ಲ ಎಂಬ ಭಾವದಿಂದ ಮಾತನಾಡಲು ಹೇಳುವುದು ಇದೇ ಕಾರಣಕ್ಕೆ.

 ಒಳ್ಳೆಯ ವಿಷಯ ಸಂಗ್ರಹಣೆ, ಕಥೆ ಹೇಳುವ ಕಲೆ, ಭಾಷೆಯ ಜ್ಞಾನ ಮತ್ತು ರಚನಾತ್ಮಕವಾಗಿ ವಿಷಯವನ್ನು ವಿವರಿಸುವ ರೀತಿಯಲ್ಲಿ ಭಾಷಣದ ಪ್ರತಿಯನ್ನು ಸಿದ್ಧಪಡಿಸಿದರೆ ಅರ್ಧ ಯುದ್ಧವನ್ನು ಗೆದ್ದಂತೆ.ಚೆನ್ನಾಗಿ ಪ್ರಸ್ತುತಪಡಿಸುವುದೊಂದೇ ಬಾಕಿ.

 ಒಂದೇ ಸಮನೆ ಇಸವಿಗಳನ್ನು ಹೇಳುತ್ತ ವಿಷಯ ಪ್ರತಿಪಾದಿಸುವಾಗ ಕೇಳುಗರಲ್ಲಿ ಆಸಕ್ತಿ ಕುಂದುತ್ತದೆ ಬದಲಾಗಿ ನಾವು ಪ್ರತಿಪಾದಿಸುವ ವಿಷಯಕ್ಕೆ, ವ್ಯಕ್ತಿಗೆ ಪೂರಕವಾದ ಘಟನೆಗಳನ್ನು ಕಥನ ರೀತಿಯಲ್ಲಿ ಹೇಳಿದಾಗ ಜನರು ಆಸಕ್ತಿಯಿಂದ ಕೇಳುತ್ತಾರಲ್ಲದೇ ಆ ಘಟನೆಯನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

 ಭಾಷಣ ಮಾಡಲು ಪೂರ್ವ ತಯಾರಿ ಅತ್ಯಗತ್ಯ.
 ಭಾಷಣ ಮಾಡಲು ಅವಶ್ಯಕ ಮಾಹಿತಿಯನ್ನು ಕಲೆ ಹಾಕಿ ಅವುಗಳನ್ನು ರಚನಾತ್ಮಕವಾಗಿ ಜೋಡಿಸಿ ಬರೆದಿಟ್ಟುಕೊಳ್ಳಬೇಕು,, ಸಾಧ್ಯವಾದರೆ ಒಂದೆರಡು ಬಾರಿ ಕನ್ನಡಿಯ ಮುಂದೆ ನಿಂತುಕೊಂಡು ತಾಲೀಮು ಮಾಡಬೇಕು.ನಾಟಕೀಯವಲ್ಲದ ಒಳ್ಳೆಯ ಆಂಗಿಕ ಚಲನೆ, ಹಾವಭಾವಗಳ ಮೂಲಕ ವಿಷಯವನ್ನು ಪ್ರತಿಪಾದಿಸಬೇಕು. ಭಾಷಣ ಮಾಡುವಾಗ ನಿಲ್ಲುವ ಭಂಗಿ, ಮುಖದ ಭಾವ ಮತ್ತು ಧ್ವನಿಯ ಏರಿಳಿತಗಳ ಮೂಲಕ ವಿಷಯವನ್ನು ಪ್ರತಿಪಾದಿಸಬೇಕು. ಜಾಣ್ಮೆ,ಆತ್ಮವಿಶ್ವಾಸ ಮತ್ತು ಭಾಷೆಯ ಮೇಲಿನ ಪ್ರಬುದ್ಧ ಹಿಡಿತದಿಂದಾಗಿ ಕೇಳುಗರಲ್ಲಿ ಆಸಕ್ತಿಯನ್ನು ಹುಟ್ಟಿಸಬಹುದು.

 ಕೇಳುಗರ ಗಮನ ಅತ್ತಿತ್ತ ಹೋಗದಂತೆ ಅವರನ್ನು  ಮಾತಿನ ಮೋಡಿಯಲ್ಲಿ ಹಿಡಿದಿಟ್ಟುಕೊಳ್ಳುವುದು ಬಹಳ ಮುಖ್ಯ. ನಮ್ಮ ಮುಂದೆ ಕುಳಿತ ಸಭಿಕರ ಕುರಿತ ಸ್ಪಷ್ಟ ಅವಗಾಹನೆ ನಮಗಿದ್ದರೆ ಒಳ್ಳೆಯದು. ಉದಾಹರಣೆಗೆ ಮಹಿಳೆಯರ ಮತ್ತು ರೈತರ ಮುಂದೆ ರಾಜಕೀಯ, ವಿದೇಶಿ ಆರ್ಥಿಕತೆ, ಬಂಡವಾಳ ಹೂಡಿಕೆಗಳ ಕುರಿತು ಮಾತನಾಡಿದಾಗ ಅವರಿಗೆ ಆಸಕ್ತಿ ಹೊರಟು ಹೋಗುತ್ತದೆ.
 ಕೌಟುಂಬಿಕ ವಿಷಯಗಳು, ಮನೆ ನಿರ್ವಹಣೆ ವೈಯುಕ್ತಿಕ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಗುಡಿ ಕೈಗಾರಿಕೆಗಳು, ನೈರ್ಮಲ್ಯ, ಆರೋಗ್ಯ, ಧಾರ್ಮಿಕ ಸಂಸ್ಕೃತಿ ಮುಂತಾದ ಸಾಮಾಜಿಕ ವಿಷಯಗಳನ್ನು ಅವರ ಮುಂದೆ ಮಾತನಾಡುವುದು ಒಳಿತು. ರೈತರ ಮುಂದೆ ಮಾತನಾಡುವಾಗ ಕೃಷಿಯ ಹೊಸ ಆವಿಷ್ಕಾರಗಳು ಅವುಗಳಿಂದ ಆಗುವ ಲಾಭಗಳು, ಆಧುನಿಕ ಮಾರುಕಟ್ಟೆ, ಹೊಸ ಯಂತ್ರೋಪಕರಣಗಳು, ಕೃಷಿಯಲ್ಲಿ ಬಳಸಲ್ಪಡುವ ವಿವಿಧ ಹೊಸ ತಂತ್ರಜ್ಞಾನಗಳು,ಸಾಲ ಸೌಲಭ್ಯಗಳು ಹೀಗೆ ಗ್ರಾಮೀಣ ಬದುಕಿಗೆ ಸಂಬಂಧಪಟ್ಟ ವಿಷಯಗಳು ಮಾತನಾಡಿದರೆ ಒಳಿತು.

 ಭಾಷಣ ಮಾಡುವವರು ಕೇವಲ ಭಾಷಣ ಕಲೆಯನ್ನು ಸಿದ್ಧಿಸಿಕೊಂಡರೆ ಸಾಲದು, ತಾವು ಪ್ರತಿಪಾದಿಸುವ ವಿಷಯಗಳ ಕುರಿತಾದ ಒಳ್ಳೆಯ ಜ್ಞಾನ ಹೊಂದಿರಲೇಬೇಕು. ಕೇಳುಗರಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ, ಟೀಕೆಗಳಿಗೆ ಒತ್ತಡ ರಹಿತವಾಗಿ, ಸಮಾಧಾನಕರವಾಗಿ ಉತ್ತರ ನೀಡುವಷ್ಟು ವಿಷಯ ಜ್ಞಾನ ಇರಬೇಕು.

 ನಿಮ್ಮದೇ ಆದ ವೈಯುಕ್ತಿಕ ಮತ್ತು ವೈಶಿಷ್ಟ್ಯಪೂರ್ಣ ಶೈಲಿಯಲ್ಲಿ ವಿಷಯವನ್ನು ಪ್ರತಿಪಾದಿಸಬೇಕು. ನಿಮ್ಮ  ಶೈಲಿ ನಿಮ್ಮ ವ್ಯಕ್ತಿತ್ವದ ಗಟ್ಟಿತನದ ಪ್ರತಿಫಲನವನ್ನು ತೋರಬೇಕು.
 ಹೀಗೆ ಒಂದೊಂದೇ ವಿಷಯಗಳ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ ಭಾಷಣ ಕಲೆಯನ್ನು ರೂಢಿಸಿಕೊಳ್ಳಬೇಕು.

ತಮಾಷೆಯಾಗಿ ಹೇಳುವುದಾದರೆ ಭಾಷಣ ಕಲೆ ಪ್ರೇಯಸಿ ಇದ್ದಂತೆ…ಆಕೆಯ ಕುರಿತ ಎಲ್ಲಾ ವಿವರಗಳನ್ನು ಕಲೆ ಹಾಕಿ, ಜಾಣ್ಮೆಯಿಂದ ಅನುನಯಿಸಿ, ಯಾವುದೇ ರೀತಿಯ ಅಡೆ-ತಡೆಗಳಿಲ್ಲದಂತಹ ಸರಾಗ, ಸ್ಪಷ್ಟ ಮತ್ತು  ನಿಚ್ಚಳ ಪ್ರೀತಿಯನ್ನು ವ್ಯಕ್ತಪಡಿಸಿ ಒಲಿಸಿಕೊಳ್ಳಬೇಕು ಮತ್ತು ಬದುಕಿನುದ್ದಕ್ಕೂ ಆ ಕಲೆಯನ್ನು  ಅಭಿವೃದ್ಧಿಪಡಿಸಿಕೊಳ್ಳುತ್ತಾ ಮತ್ತಷ್ಟು ಪ್ರಭಾವಿ ಭಾಷಣಕಾರರಾಗಬೇಕು.

ಭಾಷಣ ಕಲೆಯನ್ನು ರೂಢಿಸಿಕೊಳ್ಳುವಲ್ಲಿ ಎದುರಾಗುವ ಭಯವನ್ನು ತೊರೆದು ಆತ್ಮವಿಶ್ವಾಸವನ್ನು ಹೊಂದಿ,ಒಳ್ಳೆಯ ವಿಷಯ ಜ್ಞಾನವನ್ನು ಸಂಪಾದಿಸಿ,ನಿರರ್ಗಳ ಮಾತುಗಾರಿಕೆಯ
ಮೂಲಕ ಕೇಳುಗರನ್ನು ಪ್ರಭಾವಗೊಳಿಸುವ ಭಾಷಣ ಮಾಡುವ ಕಲೆಯನ್ನು ರೂಢಿಸಿಕೊಳ್ಳುವ ಮೂಲಕ ಸಭಾಕಂಪನದಿಂದ ಹೊರಬನ್ನಿ ಎಂಬ ಆಶಯದೊಂದಿಗೆ


Leave a Reply

Back To Top