ಕಾವ್ಯ ಸಂಗಾತಿ
ಸುಧಾ ಹಡಿನಬಾಳ
ʼನಿತ್ಯ ಹೊಸತಿನಂತೆʼ
ಒಮ್ಮೊಮ್ಮೆ ಎಲ್ಲಾ ಖುಲ್ಲಂ ಖುಲ್ಲಾ!
ಏನೆಂದರೆ ಏನೂ ಇಲ್ಲ ಖಾಲಿ ಖಾಲಿ
ನನ್ನ ಮೈ ನಾ ಚಿವುಟಿ ನೋಡಿಕೊಂಡು
ಮೌನಕ್ಕೆ ಶರಣಾಗುವ ಪರಿ
ಅಹಂ ನಿರಸನಕ್ಕಿರಬಹುದೆ??
ಸ್ವ ಅವಲೋಕನಕ್ಕಿರಬಹುದೆ?
ಹೊಸತನಕ್ಕೆ ತೆರೆದುಕೊಳ್ಳಲೆಂದೆ?
ನನ್ನ ನಾ ಅರಿಯಲೆಂದೆ?
ಅಂತರಂಗಕ್ಕಿಳಿದು ಒಳಗಿನ
ತಹತಹ ತವಕ ತಲ್ಲಣ ಕಳೆದು
ಹಗುರಾಗಲು ಅಲ್ಲೊಂದು ಹೊಸ ಹೊಳಹು ಇಲ್ಲೊಂದು ಸುಳಿ ಮಿಂಚು
ಕತ್ತಲೆಯಲಿ ಮಿಣುಕು ಹುಳು ಕಂಡಂತೆ
ಉರಿ ಬಿಸಿಲಲಿ ತಂಗಾಳಿ ಸುಳಿದಂತೆ
ಎಳೆಗರು ಕೆಚ್ಚಲು ತಿವಿವಂತೆ
ಹೊಸ ಹುರುಪು ಹೊಸ ಪಲುಕು
ನೀ ಬಂದೆ ಹೊಸ ಕವಿತೆ
ಹೊಸ ಚಿಗುರಿನಂತೆ
ಮರು ಹುಟ್ಟಿನಂತೆ
ನಿಜವ ಅರುಹುವಂತೆ!
ಜೀವನ ಚಕ್ರವೆಂದರೆ ಹೀಗೆ
ಏರಿಳಿತ ಸಹಜ ಎಂದುಕೊಂಡರೆ
ಪ್ರತಿ ನಿದ್ದೆ ನಿತ್ಯ ಮರಣದಂತೆ
ಪ್ರತಿ ಬೆಳಗು ಹೊಚ್ಚ ಹೊಸತಿನಂತೆ
ಸುಧಾ ಹಡಿನಬಾಳ