ಧಾರಾವಾಹಿ-62
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ವೇಲಾಯುದನ್ ಪಶ್ಚಾತ್ತಾಪದ ಮಾತುಗಳು
ವೈದ್ಯರ ಸಲಹೆಯ ಅನುಸಾರವಾಗಿ ದಾದಿಯು ವೇಲಾಯುಧನ್ ರವರಿಗೆ ಔಷಧಿಗಳನ್ನು ನೀಡಿ ಪೆನ್ಸಿಲಿನ್ ಚುಚ್ಚುಮದ್ದನ್ನು ಕೊಟ್ಟು, ಅಂದಿನ ತಮ್ಮ ಕೆಲಸ ಕಾರ್ಯಗಳ ಅವಧಿ ಮುಗಿದ ಕಾರಣ ಆ ದಾದಿಯು ಮನೆಗೆ ತೆರಳಿದರು. ಆನಂತರ ರಾತ್ರಿಯ ಪಾಳಿಯಲ್ಲಿ ಕಾರ್ಯನಿರ್ವಹಿಸುವ ದಾದಿಯು ಬಂದರು. ಕೊಠಡಿಯಲ್ಲಿ ದಾಖಲಾಗಿದ್ದ ಎಲ್ಲಾ ರೋಗಿಗಳ ಬಳಿ ಹೋಗಿ ಅವರಿಗೆ ಬೇಕಾದ ಔಷಧಿಗಳನ್ನು ಕೊಟ್ಟರು. ಹಾಗೆಯೇ ವೇಲಾಯುಧನ್ ರವರ ಬಳಿ ಬಂದು ಅಂದುಕೊಟ್ಟ ಔಷಧಿಯ ವಿವರಗಳನ್ನು ಚೀಟಿಯಲ್ಲಿ ನೋಡಿದರು. ಹಗಲಿನ ಪಾಳಿಯ ದಾದಿಯು ತಾವು ಹೊರಡುವ ಮೊದಲು ವೇಲಾಯುಧನ್ ರವರಿಗೆ ಔಷಧಿ ಹಾಗೂ ಚುಚ್ಚುಮದ್ದು ಕೊಟ್ಟದ್ದನ್ನು ಮನೆಗೆ ತೆರಳುವ ತರಾತುರಿಯಲ್ಲಿ ನಮೂದಿಸುವುದನ್ನು ಮರೆತಿದ್ದರು. ರಾತ್ರಿಯ ಪಾಳಿಯ ದಾದಿಯು ಕೂಡ ವೇಲಾಯುಧನ್ ರವರಿಗೆ ಔಷಧಿಗಳನ್ನು ಹಾಗೂ ಪೆನ್ಸಿಲಿನ್ ಚುಚ್ಚುಮದ್ದನ್ನು ಕೊಡಲು ಮುಂದಾದರು. ಆಗ ಸುಮತಿಯು ಬೆಳಗಿನ ಪಾಳಿಯ ದಾದಿಯು ಮನೆಗೆ ಹೋಗುವ ಮುನ್ನ ಪತಿಗೆ ಔಷಧಿ ಹಾಗೂ ಚುಚ್ಚುಮದ್ದನ್ನು ಕೊಟ್ಟಿರುವರು ಎಂದು ಹೇಳಿದಳು. ಆಗ ಆ ದಾದಿಯು ಅದು ಹಗಲಿನ ಔಷಧಿ ಹಾಗೂ ಚುಚ್ಚುಮದ್ದು ಇರಬೇಕು. ಸಂಜೆ ಅವರು ನೀಡಿದಂತಹ ಔಷಧಿ ಹಾಗೂ ಚುಚ್ಚುಮದ್ದುಗಳ ವಿವರಗಳನ್ನು ಇಲ್ಲಿ ನಮೂದಿಸಿಲ್ಲ ಹಾಗಾಗಿ ಈಗ ರಾತ್ರಿಯ ಪಾಳಿಯ ಔಷಧಿ ಹಾಗೂ ಚುಚ್ಚುಮದ್ದನ್ನು ಕೊಡಬೇಕಾಗುತ್ತದೆ ಎಂದರು. ಇದನ್ನು ಕೇಳಿದ ಸುಮತಿಯು ಹಾಗೆ ಇರಬಹುದು ಎಂದು ಸುಮ್ಮನಾದಳು. ದಾದಿಯು ಔಷಧಿ ಹಾಗೂ ಪೆನ್ಸಿಲಿನ್ ಚುಚ್ಚುಮದ್ದನ್ನು ಮೇಲಾಯುಧನ್ ರವರಿಗೆ ಕೊಟ್ಟು ತಮ್ಮ ಇತರೆ ಕೆಲಸಗಳಲ್ಲಿ ಮಗ್ನರಾದರು.
ಸ್ವಲ್ಪ ಹೊತ್ತಿನ ಬಳಿಕ ಮೇಲಾಯುಧನ್ ರವರಿಗೆ ಸ್ವಲ್ಪ ಅಸ್ವಸ್ಥತೆ ಕಾಣಿಸಿಕೊಂಡಿತು. ಅದನ್ನು ಪತ್ನಿಗೆ ತೋರಗೊಡದೆ ತಮ್ಮ ಬಳಿ ಬಂದು ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. ಪತಿಯು ಸನ್ನೆ ಮಾಡಿ ಬಳಿಗೆ ಕರೆದದ್ದನ್ನು ಅರಿತ ಸುಮತಿ ಅಳುಕುತ್ತಲೇ ಪತಿಯ ಬಳಿಗೆ ಹೋದಳು. ತನ್ನ ತಲೆಯ ಬಳಿ ಕುಳಿತುಕೊಳ್ಳುವಂತೆ ಸುಮತಿಯನ್ನು ವೇಲಾಯುಧನ್ ಕೇಳಿಕೊಂಡರು. ಅದರಂತೆಯೇ ಸುಮತಿಯು ಪತಿಯ ತಲೆಯ ಬಳಿ ಕುಳಿತಳು. ಪತ್ನಿಯು ಬಂದು ಕುಳಿತ ಕೂಡಲೇ ವೇಲಾಯುಧನ್ ತಮ್ಮ ತಲೆಯನ್ನು ಪತ್ನಿಯ ಮಡಿಲ ಮೇಲೆ ಇರಿಸಿದರು. ಸುಮತಿಗೆ ಪತಿಯ ಈ ರೀತಿಗಳೆಲ್ಲವೂ ಹೊಸದೆನಿಸಿತು. ಆದರೂ ಮೌನವಾದಳು. ತನ್ನ ಮಡಿಲಲ್ಲಿ ಮಲಗಿದ ಪತಿಯ ತಲೆಯನ್ನು ನೇವರಿಸಿದಳು. ಪತ್ನಿಯ ಕೈ ಸ್ಪರ್ಶದಿಂದ ವೇಲಾಯುಧನ್ ರ ಮನಸ್ಸಿಗೆ ಏನೋ ನೆಮ್ಮದಿ ಸಿಕ್ಕಂತಾಯಿತು. ಕೂಡಲೇ ಪತ್ನಿಯ ಕರಗಳನ್ನು ಹಿಡಿದು…. “ಸುಮತಿ ನನ್ನನ್ನು ಕ್ಷಮಿಸುವೆಯಾ?”ಎಂದು ಕೇಳಿದರು. ಪತಿಯ ಮಾತನ್ನು ಕೇಳಿ ಸುಮತಿಯು ಆಶ್ಚರ್ಯಚಕಿತಳಾದಳು. ಪತಿ ಏನು ಹೇಳುತ್ತಿದ್ದಾರೆ? ನನ್ನಲ್ಲಿ ಕ್ಷಮೆ ಕೇಳುತ್ತಿದ್ದಾರೆಯೇ? ಏತಕ್ಕಾಗಿ? ಎಂದು ತಿಳಿಯದೇ, ತಾನೇನು ಕೇಳುತ್ತಿದ್ದೇನೆ ಎಂಬುದನ್ನು ಅರಿಯದೇ, ತನ್ನ ಕಿವಿಗಳನ್ನೇ ನಂಬದಾದಳು….”ಏನು ಹೇಳುತ್ತಿರುವಿರಿ ನೀವು? ಮತ್ತು ಏಕೆ ಹೀಗೆ ಹೇಳುತ್ತಿರುವಿರಿ?…. ಎಂದು ಅಳುಕುತ್ತಲೇ ಪತಿಯನ್ನು ಕೇಳಿದಳು. ಆಗ ವೇಲಾಯುಧನ್ ಪತ್ನಿಯ ಮುಖವನ್ನು ನೋಡುವ ಧೈರ್ಯವಿಲ್ಲದೆ ಕಣ್ಣುಮುಚ್ಛಿ …. “ನಾನು ನಿನಗೊಬ್ಬ ಉತ್ತಮ ಪತಿಯಾಗಲೇ ಇಲ್ಲ… ನಿನ್ನನ್ನು ಹಲವಾರು ರೀತಿಯಲ್ಲಿ ನೋಯಿಸಿದ್ದೇನೆ, ನಿಂದಿಸಿದ್ದೇನೆ,ಹೊಡೆದು ಬಡಿದು, ಬೈದಿದ್ದೇನೆ. ನಿನ್ನ ಆಸೆ ಆಕಾಂಕ್ಷಿಗಳನ್ನು ನಾನೆಂದು ಅರ್ಥ ಮಾಡಿಕೊಂಡು ನಿನ್ನೊಂದಿಗೆ ವ್ಯವಹರಿಸಿಲ್ಲ…. ಮಕ್ಕಳನ್ನು ಕೂಡ ನಾನು ಪ್ರೀತಿಸಲಿಲ್ಲ…. ಸುಶೀಲಯಾದ ನಿನ್ನನ್ನು ಬಿಟ್ಟು ಇತರ ಹೆಣ್ಣುಗಳ ಸಹವಾಸ ಮಾಡಿದ್ದೇನೆ…. ಇಷ್ಟೆಲ್ಲಾ ಆದರೂ ಕೂಡ ನೀನು ಸಹನೆ, ತಾಳ್ಮೆ, ಸಂಯಮದಿಂದ ನನ್ನ ಜೊತೆ ಬಾಳ್ವೆ ನಡೆಸಿದ್ದೀಯ….
ಮೃಗದಂತೆ ನಾನು ನಿನ್ನೊಂದಿಗೆ ವರ್ತಿಸಿದ್ದೇನೆ…. ಸದಾ ನಿನ್ನನ್ನು ಹೀನ ದೃಷ್ಟಿಯಿಂದಲೇ ನೋಡಿದ್ದೇನೆ…. ಆದರೂ ನನ್ನನ್ನು ಅನಾರೋಗ್ಯ ಕಾಡಿದಾಗಲೆಲ್ಲ ಕರುಣೆಯಿಂದ, ಪ್ರೀತಿಯಿಂದ, ತಾಯಿಯಂತೆ ನೋಡಿಕೊಂಡ ಸಾದ್ವಿ ನೀನು…. ನಿನಗಿದೋ ನನ್ನ ತುಂಬ ಮನದ ಕೃತಜ್ಞತೆಗಳು ಹಾಗೂ ವಂದನೆಗಳು….. ನೀನು ಇಲ್ಲದೆ ಹೋಗಿದ್ದರೆ ಇಷ್ಟು ಕಾಲ ನಾನು ಹೇಗಿರುತ್ತಿದ್ದನೋ?…. ನಿನಗಾಗಿ ಮಕ್ಕಳಿಗಾಗಿ ನಾನ ಏನನ್ನು ಮಾಡಲಿಲ್ಲ…. ನನ್ನ ಇಷ್ಟಕ್ಕೆ ತಕ್ಕಂತೆ ಬದುಕಿದ್ದೇನೆ….ವಯಸ್ಸಿನಲ್ಲಿ ನೀನು ನನಗಿಂತ ಕಿರಿಯಳಾದರೂ ಗುಣದಲ್ಲಿ ನನಗಿಂತ ಎಷ್ಟೋ ಹಿರಿಯಳು ನೀನು…. ನಿನ್ನ ಸ್ಥಾನದಲ್ಲಿ ಬೇರೆ ಯಾರೇ ಇದ್ದರೂ ನನ್ನನ್ನು ಎರಡಾಗಿಸಿ ಸೀಳಿ ಊರಾಚೆಗಿನ ಬಾಗಿಲಲ್ಲಿ ತೋರಣವನ್ನು ಕಟ್ಟುತ್ತಿದ್ದರು….ಆದರೆ ನೀನು ಎಲ್ಲವನ್ನು ಸಹಿಸಿ ತಾಳ್ಮೆಯಿಂದ ನನ್ನ ಜೊತೆ ಬಾಳಿದೆ…. ಸುಕುಮಾರಿಯಾಗಿ ಬಾಳಿದ ನಿನ್ನನ್ನು ಕಾಫಿ ತೋಟದ ಕೆಲಸಕ್ಕೆ, ಕೂಲಿ ಕೆಲಸಕ್ಕೆ ಕಳುಹಿಸಿದೆ…. ನನ್ನ ದುಷ್ಟತನಕ್ಕೆ ಪರಿಮಿತಿಯೇ ಇರಲಿಲ್ಲ”…. ಎಂದಾಗ ಸುಮತಿಯು ಪತಿಯನ್ನು ತಡೆದು…. ಇದೇನು ಹೇಳುತ್ತಿರುವಿರಿ ನೀವು? ನೀವು ತುಂಬಾ ಆಯಾಸವಾದಂತೆ ಕಾಣುತ್ತಿದ್ದೀರಿ….ಹೆಚ್ಚು ಮಾತನಾಡದೆ ನನ್ನ ಮಡಿಲಲ್ಲಿ ಮಲಗಿ ನಿದ್ರಿಸಿ ಎಂದಳು. ಪತಿಯ ಮಾತುಗಳನ್ನು ಆಲಿಸಿದ ಸುಮತಿಯ ಕಣ್ಣಿನಿಂದ ಕಣ್ಣೀರ ಕೋಡಿಯೇ ಹರಿಯುತ್ತಿತ್ತು. ನಡುವೆ ಮಾತನಾಡಿದ ಪತ್ನಿಯನ್ನು ತಡೆದು, ವೇಲಾಯುಧನ್…. “ನನ್ನನ್ನು ಕ್ಷಮಿಸಿ ಬಿಡು ಸುಮತಿ” ಎನ್ನುವ ವೇಳೆಗೆ ಅವರ ಧ್ವನಿಯು ಕ್ಷೀಣವಾಯಿತು. ವೇಲಾಯುಧನ್ ತೀರಾ ಅಸ್ವಸ್ಥರಾದಂತೆ ಸುಮತಿಗೆ ತೋರಿತು. ಪತಿಯ ಕುತ್ತಿಗೆಯು ಪಕ್ಕಕ್ಕೆ ವಾಲುತ್ತಾ ಇರುವುದರ ಅನುಭವವಾಯಿತು. ಕೂಡಲೇ ಮೆಲ್ಲನೆ ಪತಿಯ ತಲೆಯನ್ನು ತನ್ನ ಮಡಿಲಿನಿಂದ ದಿಂಬಿನ ಮೇಲೆ ಇರಿಸಿದಳು.
ಪತಿಯ ಅಸ್ವಸ್ಥ ಪರಿಸ್ಥಿತಿ ಹಾಗೂ ಪತಿಯಾಡಿದ ಮಾತುಗಳನ್ನು ಕೇಳಿದ ಸುಮತಿಯ ಮನಸ್ಸು ಗೊಂದಲಕ್ಕೆ ಒಳಗಾಯಿತು. ಪತಿಗೆ ಏನೋ ಆಗುತ್ತಿದೆ ಎಂದು ಹೆದರಿ ಕಂಗಾಲಾದಳು. ತನ್ನ ಭಾರವಾದ ಹೊಟ್ಟೆಯನ್ನು ಹೊತ್ತು ಓಡು ನಡಿಗೆಯಲ್ಲಿ …”ಸಿಸ್ಟರ್ ಬೇಗ ಬನ್ನಿ”… ಎಂದು ಕೂಗುತ್ತಾ ದಾದಿಯ ಬಳಿಗೆ ಹೋಗಲು ಅನುವಾದಳು. ಆಗ ಕೊಠಡಿಯಲ್ಲಿ ಇದ್ದ ರೋಗಿಗಳು ಹಾಗೂ ಅವರ ಆರೈಕೆಗಾಗಿ ಜೊತೆಗಿದ್ದ ಇತರರು …ಅಯ್ಯೋ!!! ತಾಯಿ ಗರ್ಭಿಣಿಯಾದ ನೀನು ಈ ರೀತಿ ಭಾರವಾದ ಹೊಟ್ಟೆಯನ್ನು ಹೊತ್ತು ಓಡಬಾರದು ಏನಾದರೂ ತೊಂದರೆ ಆದೀತು… ನಿಧಾನವಾಗಿ ನಡೆಯಮ್ಮ”… ಎಂದು ಕಾಳಜಿಯಿಂದ ನುಡಿದರು. ಅವರ ಕಾಳಜಿಯ ಮಾತುಗಳ ಕಡೆಗೆ ಅವಳ ಗಮನ ಹರಿಯಲಿಲ್ಲ. ಪತಿಯು ತೀರ ಅಸ್ವಸ್ಥವಾಗಿದ್ದು ಮಾತ್ರ ಅವಳ ಚಿತ್ತದಲ್ಲಿ ಇತ್ತು. ಓಡು ನಡಿಗೆಯಲ್ಲಿ ಹೋದವಳು ಟೇಬಲ್ ಬಳಿ ನಿಂತಿದ್ದ ದಾದಿಯ ಕೈಯನ್ನು ಹಿಡಿದು”….ನನ್ನ ಪತಿಯು ತೀರಾ ಅಸ್ವಸ್ಥರಾಗಿದ್ದಾರೆ… ನನ್ನೊಂದಿಗೆ ಮಾತನಾಡುತ್ತಿರುವಾಗ ಅವರ ಧ್ವನಿ ಕ್ಷೀಣವಾಗುತ್ತಾ ಬಂತು ನಂತರ ಅವರ ಕುತ್ತಿಗೆಯು ಪಕ್ಕಕ್ಕೆ ವಾಲಿತು…. ದಯವಿಟ್ಟು ಬಂದು ಅವರನ್ನೊಮ್ಮೆ ಪರೀಕ್ಷಿಸಿ ನೋಡಿ ನನಗೆ ಭಯವಾಗಿದೆ”…. ಎನ್ನುತ್ತಾ ಅಲ್ಲಿಯೇ ಕುಸಿದು ಕುಳಿತುಬಿಟ್ಟಳು…. “ಅಯ್ಯೋ ಅಮ್ಮ ನೀವು ಹೆದರಬೇಡಿ ಬನ್ನಿ”… ಎನ್ನುತ್ತಾ ಸುಮತಿಯ ಕೈಯನ್ನು ಹಿಡಿದುಕೊಂಡು ವೇಲಾಯುಧನ್ ಮಲಗಿದ್ದ ಹಾಸಿಗೆಯ ಕಡೆಗೆ ದಾದಿ ನಡೆದರು. ವೇಲಾಯುಧನ್ ರ ನಾಡಿಯನ್ನು ಹಿಡಿದು ಪರೀಕ್ಷಿಸಿ, ಅವರು ಉಸಿರಾಡುತ್ತಿದ್ದಾರೆಯೇ ಇಲ್ಲವೇ ಎಂದು ಗಮನಿಸಿದರು. ನಂತರ ಏನೂ ಹೇಳದೇ ವಾರ್ಡ್ ಬಾಯನ್ನು ಕರೆದು ರಾತ್ರಿಯ ಪಾಳಿಯಲ್ಲಿ ಕಾರ್ಯನಿರತರಾಗಿರುವ ಯಾರಾದರೂ ಒಬ್ಬ ವೈದ್ಯರನ್ನು ತುರ್ತಾಗಿ ಕರೆತರುವಂತೆ ಹೇಳಿದರು.