ಅನಸೂಯ ಜಹಗೀರದಾರ ಅವರ ಗಜಲ್

ಏಕಾಂಗಿ ಬೆಂಕಿಯಲಿ ಈಬದುಕು
ಬೇಯುತ್ತಿದೆ ಈಗ ನೀನಿರಬೇಕಿತ್ತು|
ನಡೆವ ಹೆಜ್ಜೆ ಹೊಸ್ತಿಲಲಿ ನಿಂತು
ಕಾಯುತ್ತಿದೆ ಈಗ ನೀನಿರಬೇಕಿತ್ತು|

ಮಗ್ಗುಲು ಬದಲಾಯಿಸುತ್ತ ನಿದ್ದೆ ಇಲ್ಲದ
ಅದೆಷ್ಟೋ ರಜನಿ ಕಳೆದವು|
ಹರಿದ ಕಂಬನಿಯಲಿ ದಿಂಬು
ತೋಯುತ್ತಿದೆ ಈಗ ನೀನಿರಬೇಕಿತ್ತು|

ಶಿಶಿರದ ಬೋಳು ಮರಕೆ ಗತದ ಚಿಗುರ
ನೆನಿಕೆಗಳು ಸಹಜವಲ್ಲವೆ ಸಾಕಿ|
ಗೂಡಿನ ಹುಳು ತನ್ನ ಸುತ್ತ ಎಳೆಯ
ನೇಯುತ್ತಿದೆ ಈಗ ನೀನಿರಬೇಕಿತ್ತು|
.
ಸ್ವಚ್ಛ ಆಗಸದಲಿ ನಿತ್ಯ ತಾರೆಗಳ ಎಣಿಸುತ
ಸೋಲನು ಒಪ್ಪಿದೆ ದೊರೆಯೆ|
ಇರುವ ಭ್ರಮಿಸಿ ಸಂಭ್ರಮಸಿ ಈಮನ
ನೋಯುತ್ತಿದೆ ಈಗ ನೀನಿರಬೇಕಿತ್ತು|

ಏಕತಾನತೆಯ ಬದುಕು ನೀರಸವೆನಿಸಿ
ಭಾರವಾಯಿತು ನೋಡು ಸಾಕಿ|
ಸ್ಪರ್ದೆ ಬೆಂಬತ್ತಲಾಗದು ಕಾಮನೆ
ಸಾಯುತ್ತಿದೆ ಈಗ ನೀನಿರಬೇಕಿತ್ತು|

ಏರಿಳಿಕೆಯಲ್ಲದ ತೂಕದ ಮಾತು ನವ
ರಸವ ದ್ರವಿಸಲಿಲ್ಲ ನೋಡು ಸಾಕಿ|
ನೋವಿಗೂ ನಗುವ ನೆನಪು ಎದೆ
ಮೀಯುತ್ತಿದೆ ಈಗ ನೀನಿರಬೇಕಿತ್ತು|

ಕೆರೆ ಪಾಲು ಕೆರೆಗೆ ಸಾಗರಕೆ ಸಮವೆ
ಹೋಲಿಕೆ ಅನೂಹ್ಯ ಅನು
ನೆಲೆ ನಿಲ್ಲದ ಮನ ಬರೀ ಓಟ ಕಾಲ
ಬೀಯುತ್ತಿದೆ ಈಗ ನೀನಿರಬೇಕಿತ್ತು|


One thought on “ಅನಸೂಯ ಜಹಗೀರದಾರ ಅವರ ಗಜಲ್

Leave a Reply

Back To Top