ಪುಸ್ತಕ ಸಂಗಾತಿ
ಸಲೀಂ ಸಯ್ಯದ್ ಅವರ ತೆಲುಗು ಕಾದಂಬರಿ
“ಹವಳದ್ವೀಪ”
ಕನ್ನಡಾನುವಾದ:ಧನಪಾಲ ನಾಗರಾಜಪ್ಪ ನೆಲವಾಗಿಲು
ಒಂದು ಅವಲೋಕನ
ಅಕ್ಕಿಮಂಗಲ ಮಂಜುನಾಥ
ಪುಸ್ತಕದ ಹೆಸರು : ಹವಳದ್ವೀಪ
ತೆಲುಗು ಮೂಲ : ಸಲೀಂ Saleem Syed
ಕನ್ನಡಾನುವಾದ : ಧನಪಾಲ ನಾಗರಾಜಪ್ಪ ಧನಪಾಲ ನೆಲವಾಗಿಲು
ಪ್ರಕಾಶಕರು : ವೀರಲೋಕ ಬುಕ್ಸ್ ವೀರಲೋಕ ಪುಸ್ತಕಗಳು
ಮುಖಪುಟ : Raju Vishnu
ಇತ್ತೀಚೆಗೆ ನಾನೊಂದು ಉತ್ತಮ ಪುಸ್ತಕ ಓದಿದೆ.
ತೆಲುಗಿನ ಪ್ರಖ್ಯಾತ ಲೇಖಕ ಸಲೀಂರವರು ಬರೆದ “ಪಗಡು ದೀವಿ” ಎಂಬ ಮಕ್ಕಳ ಕಾದಂಬರಿಯನ್ನು ಕನ್ನಡದ ಯಶಸ್ವಿ ಅನುವಾದಕ ಧನಪಾಲ ನಾಗರಾಜಪ್ಪರವರು “ಹವಳದ್ವೀಪ” ಎನ್ನುವ ಹೆಸರಿನಲ್ಲಿ ಅನುವಾದಿಸಿ ಕನ್ನಡದ ಮಕ್ಕಳಿಗೊಂದು ಒಳ್ಳೆಯ ಕಾಣಿಕೆಯನ್ನು ನೀಡಿದ್ದಾರೆ. ಇದು ಮಕ್ಕಳಷ್ಟೇ ಅಲ್ಲದೆ ಹಿರಿಯರೂ ಕೂಡಾ ಓದಿ ಸಂತೋಷ ಪಡುವಂತಹ ಚೆಂದದ ಕೃತಿ ಎಂದು ನನ್ನ ಅನಿಸಿಕೆ.
ಕೈಗೆತ್ತಿಕೊಂಡು ಓದಲು ಕೂತರೆ ಮುಗಿಯುವವರೆಗೂ ಕೆಳಗಿಡಲು ಮನಸ್ಸು ಬಾರದಷ್ಟು ಗಾಢವಾಗಿ ಓದುಗರನ್ನು ಆಕ್ರಮಿಸಿಕೊಂಡುಬಿಡುತ್ತದೆ.
ಪುಟ ಪುಟ ತಿರುವಿದಂತೆ ಅಲ್ಲಿನ ಸನ್ನಿವೇಶಗಳು, ಸಾಹಸಗಳು, ವೈಜ್ಞಾನಿಕ ವಿಶ್ಲೇಷಣೆಗಳು, ಪ್ರಕೃತಿಯ ವರ್ಣನೆ… ನಮ್ಮನ್ನು ತಲ್ಲೀನಗೊಳಿಸಿಬಿಡುತ್ತದೆ.
ಮೇಲುನೋಟಕ್ಕೆ ಮಕ್ಕಳ ಸಾಹಸಮಯ ಕತೆ ಎಂದೆನಿಸಿದರೂ ಚೂರೂ ಬೇಸರ ಬರದಂತೆ ಜಿಯಾಲಜಿ, ಬಾಟನಿ, ಜುವಾಲಜಿ, ಪರಿಸರ, ಹೀಗೆ ಹಲವು ವಿಷಯಗಳ ಬಗ್ಗೆ ಕುತೂಹಲಭರಿತ ವಿಷಯಗಳನ್ನು ಓದುಗರ ಮನಮುಟ್ಟುವಂತೆ ಅರಿವು ಮೂಡಿಸಿರುವುದು ಈ ಕೃತಿಯ ವಿಶೇಷತೆ.
ಪ್ರಪಂಚದ ಸಂಕಟಕ್ಕೆ, ಬಡತನಕ್ಕೆ, ಹಸಿವೇ ಒಂದು ಪ್ರಬಲ ರೋಗ ಎಂದು ಭಾವಿಸಿದ ಸುರೇಂದ್ರ ದೇವ್ ಎಂಬ ಸಂಶೋಧಕ, ಮನುಷ್ಯ ಹಸಿವಿಗೆ ಆಹಾರವನ್ನು ಅವಲಂಬಿಸದೆ, ಸಸ್ಯಗಳು ಫೋಟೋಸಿಂಥೆಸಿಸ್ ಮೂಲಕ ಸೂರ್ಯನ ಬೆಳಕನ್ನು ಬಳಸಿಕೊಂಡು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಹಾಗೆ ಮನುಷ್ಯನೂ ಸಹ ಸೂರ್ಯನಿಂದಲೇ ಸ್ವಾವಲಂಬಿಯಾಗಿ ಆಹಾರ ತಯಾರಿಸಿಕೊಂಡು ಬದುಕುವಂತಹ ಕ್ರಮವನ್ನು ಕಂಡುಹಿಡಿದು, ಹಸಿವೆಯನ್ನು ಪ್ರಪಂಚದಿಂದಲೇ ಓಡಿಸಿ, ನೊಬೆಲ್ ಪ್ರಶಸ್ತಿ ಪಡೆದು, ತನ್ನ ಹೆಸರನ್ನು ಚಿರಸ್ಥಾಯಿಯಾಗಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯಿಂದ ಪ್ರಯೋಗವೊಂದನ್ನು ವಿಜ್ಞಾನಿ ಸುರೇಂದ್ರದೇವ್ ಲಕ್ಷದ್ವೀಪ ಸಮೂಹದ ನಿರ್ಜನವಾದ ಪುಟ್ಟ ದ್ವೀಪ ವೊಂದರಲ್ಲಿ ನಡೆಸಿರುತ್ತಾನೆ. ದಾರಿತಪ್ಪಿ ಸಿಕ್ಕಿಹಾಕಿಕೊಂಡ ಇಬ್ಬರು ಪುಟ್ಟ ಬಾಲಕರ ಮೇಲೆ ಪ್ರಯೋಗ ನಡೆಸುವ ವಿಷಯ ಓದುವಾಗ ನಮಗೆ ಸುರೇಂದ್ರದೇವ್ ಈ ಪ್ರಯೋಗದಲ್ಲಿ ನಿಜವಾಗಿಯೂ ಯಶಸ್ವಿಯಾಗಬಹುದೆಂಬ ಅನಿಸಿಕೆಯುಂಟಾಗುವಷ್ಟು ಸಹಜತೆ ಬರವಣಿಗೆಯಲ್ಲಿದೆ.
ಆದರೆ ಸ್ಮರಣ್ ಮತ್ತು ರವಿ ಎಂಬ ಹೊಸ ಹರೆಯದ ಹುಡುಗರಿಬ್ಬರು ದಾರಿ ತಪ್ಪಿ ಇದೇ ದ್ವೀಪಕ್ಕೆ ಬಂದು, ಸುರೇಂದ್ರದೇವ್ ಸಂಶೋಧನೆಯ ನೆಪದಲ್ಲಿ ಮಕ್ಕಳಿಬ್ಬರಿಗೆ ನೀಡುತ್ತಿದ್ದ ಶಿಕ್ಷೆಯನ್ನು ಕಂಡು, ಮರುಗಿ ಆ ವಿಜ್ಞಾನಿಯನ್ನು ಬಲೆ ಹಾಕಿ, ಆ ಮಕ್ಕಳನ್ನು ವಿಜ್ಞಾನಿಯದ್ದೇ ದೋಣಿಯ ಮೂಲಕ ರಕ್ಷಿಸುವ ಘಟನೆಗಳೇ ಬಲು ರೋಚಕ.
ಈ ಸಂಶೋಧನೆ ಕೇವಲ ಕಾಲ್ಪನಿಕ ಎಂದು ಸ್ಪಷ್ಟ ಅರಿವಿದ್ದ ಮೂಲ ಲೇಖಕರು ಬಲು ಜಾಣ್ಮೆಯಿಂದ ಈ ಸಾಹಸಿ ಹುಡುಗರ ಮೂಲಕ ಸಂಶೋಧನೆ ಪೂರ್ಣಗೊಳ್ಳದಂತೆ ತಡೆದಿದ್ದು ಮೆಚ್ಚಬೇಕಾದ ವಿಷಯ.
ಧನಪಾಲ ನಾಗರಾಜಪ್ಪನವರು ಈ ಕೃತಿಯನ್ನು ಮೂಲ ಕನ್ನಡದ್ದೇ ಎಂಬಷ್ಟು ಸರಳ, ಸಹಜ ಮತ್ತು ಸುಲಲಿತವಾಗಿ ಕನ್ನಡಕೆ ತಂದು, ಕನ್ನಡಿಗರಿಗೊಂದು ಕಾಣಿಕೆಯನ್ನು ನೀಡಿದ್ದಾರೆ. ಅವರಿಗೆ ಎಲ್ಲಾ ರೀತಿಯಲ್ಲೂ ಶುಭವಾಗಲಿ.
ಅಕ್ಕಿಮಂಗಲ ಮಂಜುನಾಥ
**
ಪುಸ್ತಕ ಬೇಕಾದವರು
ವೀರಲೋಕ ಬುಕ್ಸ್ ಮೊ : 7022122121 / 8861212172 ಅಥವಾ ಧನಪಾಲ ನಾಗರಾಜಪ್ಪ ಮೊ : 7892546523ಗೆ ಸಂಪರ್ಕಿಸಿ
ಧನ್ಯವಾದಗಳು ಸರ್