ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿವಚನ
ಅಕ್ಕಮಹಾದೇವಿಯವರ ವಚನ
ಅಂಗದಲ್ಲಿ ಆಚಾರವ ತೋರಿದ
ಆ ಆಚಾರವೇ ಲಿಂಗವೆಂದರುಹಿದ
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ
ಅರಿವೆ ಜಂಗಮವೆಂದು ತೋರಿದ
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯ ಪ್ರಭುವೆ
12ನೇ ಶತಮಾನದ ಶ್ರೇಷ್ಠ ಶರಣೆಯರ ಸಾಲಿನಲ್ಲಿ ಅಕ್ಕಮಹಾದೇವಿಯವರು ಪ್ರಥಮ .ಅವರೊಳಗಿನ ಅರಿವಿನ ಜ್ಞಾನವೇ ಅಕ್ಕಮಹಾದೇವಿಯ ವರ ಗಂಡ ಚೆನ್ನಮಲ್ಲಿಕಾರ್ಜುನ.ಆ ಚೆನ್ನಮಲ್ಲಿಕಾರ್ಜುನನನ್ನು ಹುಡುಕುವ ಪರಿಯು ಅದು ಅನಂತ ದಿವ್ಯ ಜ್ಞಾನವನ್ನು ಪಡೆಯುವ ಪಯಣ .ಸೃಷ್ಟಿಯ ಜೀವ ಸಂಕುಲದ ನಡುವೆ ಜ್ಞಾನದ ಅರಿವಿನ ಹಸಿವು .ಆ ಹಸಿವನ್ನು ನೀಗಿಸುವ ಪಯಣ ಅಕ್ಕಮಹಾದೇವಿಯವರದು .ಅಂಗದಲ್ಲಿ ನೆಲೆಸಿ ನಿಂತ ದಿವ್ಯ ಜ್ಞಾನದ ಆಚಾರದ ಪ್ರತೀಕ ಲಿಂಗ. ಈ ಲಿಂಗದಲ್ಲಿಯೇ ಆಚಾರ ಅನುಭೂತಿ .ವ್ಯಕ್ತಿಯ ಸಾಧನೆ ಮತ್ತು ಸಿದ್ದಿಗಳಲ್ಲಿ ಈ ಆಚಾರದ ಅಧ್ಯಾತ್ಮಿಕ ವಿಚಾರ ಅತ್ಯದ್ಭುತ. ಅದು ಜಗತ್ತಿಗೆ ನಿಲುಕಲಾರದ ಲಿಂಗ ಜ್ಞಾನ.
ಅದನ್ನು ಗಟ್ಟಿತನದಿಂದ ಗಟ್ಟಿಯಾಗಿ ಹಿಡಿದುಕೊಳ್ಳಲು ಅಂತಃಪುರದ ಅರಮನೆಯ ಸಿರಿ ಸೌಭಾಗ್ಯ, ಸಕಲ ರಾಣಿವಾಸದ ಸುಖವನ್ನು ಕಿತ್ತೆಸೆದು ಬಂದು ತನ್ನ ಅರಿವಿನ ಕುರುವು ಆಚಾರದ ಪ್ರತೀಕ ಲಿಂಗವನ್ನು ತನ್ನ ಅಂಗದಲ್ಲಿ ಪ್ರತಿಷ್ಠಾಪಿಸಿಕೊಂಡು .ಪ್ರಾಣದ ಹಂಗನ್ನು ತೊರೆದು ವೀರ ವೀರಾಗಣಿಯಾಗಿ ಹೊರ ನಡೆದ ಅಕ್ಕನವರ ಅಂತರಂಗದ ಕ್ರಾಂತಿಯ ಪಯಣ ಅದು ಯಾರಿಗೂ ನಿಲುಕಲಾರದಂತಹದು .ಅಂತಹ ಅರಿವು ,ಆಚಾರ, ಜಂಗಮ ಚೇತನ ಶಕ್ತಿಯನ್ನು ಪಡೆದು ಪುಣ್ಯ ಪುರುಷ ರ ನಡೆಗೆ ಹೆಜ್ಜೆ ಹಾಕಿದ ದಿಟ್ಟೆ ಅಕ್ಕನವರು ,ಈ ಅರಿವಿನ ದಿವ್ಯ ಜ್ಞಾನದ ಭಕ್ತಿಯ ಪಥದ ಜ್ಞಾನದ ಮಾರ್ಗವನ್ನು ಕಂಡುಕೊಂಡ ಚೆನ್ನಬಸವಣ್ಣನವರನು ಹೆತ್ತ ತಂದೆ ಸಂಗಣ ಬಸವಣ್ಣನವರು ನನಗೆ ಈ ಮಾರ್ಗವನ್ನು ,ಈ ಅರಿವಿನ ಆಚಾರದ ಮಾರ್ಗದ ಪಥವನ್ನು ತೋರಿದ ದಿವ್ಯ ಜ್ಞಾನಿಗೆ ಅನಂತ ಶರಣು ಎನ್ನುವರು ಅಕ್ಕ.
ಅಂಗದಲ್ಲಿ ಆಚಾರವ ತೋರಿದ
ಆ ಆಚಾರವೇ ಲಿಂಗವೆಂದರುಹಿದ
ವಿಶ್ವಗುರು ಬಸವಣ್ಣನವರು ಕಾಯದಲ್ಲಿ ಕಾಯಕ ಕಲಿಸಿದ ಶ್ರಮದ ಪ್ರತಿಫಲ ಅರುಹಿದ ದಿವ್ಯ ಪುರುಷ ಬಸವಣ್ಣನವರು .ಈ ಕಾಯದಲ್ಲಿಯೇ ಕೈಲಾಸದ ಮಾರ್ಗ ತೋರಿದವರು ಬಸವಣ್ಣನವರು .ನಮ್ಮ ಆಚಾರ ವಿಚಾರ ತತ್ವ ಸಿದ್ಧಾಂತದ ಅರಿವಿನ ಮಾರ್ಗದ ರುವಾರಿ ಬಸವಣ್ಣನವರು ಆಗಿದ್ದಾರೆ .ಇಂತಹ ಅರಿವಿನ ರೂವಾರಿಯಾದ ಬಸವಣ್ಣನವರು ,ಆಚಾರವೇ ಲಿಂಗವೆಂದರುಹಿದರು .
ಪ್ರಾಣದಲ್ಲಿ ಅರಿವು ನೆಲೆಗೊಳಿಸಿದ
ಅರಿವೆ ಜಂಗಮವೆಂದು ತೋರಿದ
ಅಂಗದಲ್ಲಿ ನೆಲೆಗೊಳಿಸಿದ ಪ್ರಾಣ ಲಿಂಗ ಜಂಗಮವೆಂದು ತೋರಿದ ಬಸವಣ್ಣನವರು .ಈ ಲಿಂಗವೇ ಜಂಗಮ. ಜಂಗಮ ಜೋಳಿಗೆ ಹೊತ್ತು ಊರೂರು ಸುತ್ತುವುದು ಅಲ್ಲ.ಜಂಗಮದ ಮಹತ್ವ ಬರಬೇಕಾದರೆ ,ಸಮಾಜವನ್ನು ತಿದ್ದುವ ,ಬದಲಿಸುವ ಕಾಯಕವನ್ನು ಮಾಡಿ. ಅರಿವು ಅಂದರೆ ತನ್ನ ಜ್ಞಾನದ ಹರಿವು ವಿಕಾಸಗೊಳ್ಳುವ ಒಂದು ಕ್ರಿಯೆ .ತನ್ನೊಳಗಿನ ಗುರುವನ್ನು ಹುಡುಕಿ ಅದನ್ನು ಜಂಗಮ ನೆಲೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿಕೊಳ್ಳುವ ಒಂದು ಕ್ರಿಯೆಯೇ ಜಂಗಮ .
ಇಲ್ಲಿ ಜಂಗಮ ಎಂದರೆ ಕಾವಿ ಹೊದ್ದು ಜೋಳಿಗೆ ಕಟ್ಟಿಕೊಂಡು ಭಿಕ್ಷೆ ಬೇಡುವಾತ ಜಂಗಮ ಅಲ್ಲ.ಜಾತಿಯೂ ಅಲ್ಲ .ಅದು ನಮ್ಮ ಪ್ರಾಣದಲ್ಲಿ ಅರಿವನ್ನು ಮೂಡಿಸಿ ,ನಮ್ಮ ಅರಿವಿಗೆ ನಾವೇ ಗುರುಗಳಾಗಿ, ಜಂಗಮ ಚೇತನರಾಗಿ ದಿವ್ಯವಾದ ಜ್ಞಾನವನ್ನು ಪಡೆಯುವ ಬಗೆ ಯನ್ನು ಬಸವಣ್ಣನವರು ತಿಳಿಯಪಡಿಸಿದ್ದಾರೆ ಎಂದು ಅಕ್ಕಮಹಾದೇವಿಯವರು ಅತ್ಯಂತ ಅಭಿಮಾನದಿಂದ ಹೇಳಿಕೊಂಡಿದ್ದಾರೆ .
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ
ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯ *ಪ್ರಭುವೆ*
ಅಕ್ಕಮಹಾದೇವಿಯವರು ಉಡುತಡಿಯನ್ನು ತೊರೆದು ಕಲ್ಯಾಣದಲ್ಲಿ ಬಸವಣ್ಣನವರನ್ನು ಕಾಣುವ ಹಂಬಲದಿಂದ ಬಂದ ಅಕ್ಕಮಹಾದೇವಿಯವರು .ನನ್ನ ಅರಿವಿನ ಗಂಡನಾದ ಚೆನ್ನಮಲ್ಲಿಕಾರ್ಜುನನನ್ನು ಹೆತ್ತ ತಂದೆ ಬಸವಣ್ಣನವರು ಆಗಿದ್ದಾರೆ .ನನ್ನ ಈ ಕ್ರಮವು ಬಸವಣ್ಣನವರು ನನಗೆ ತೋರಿದ ಮಾರ್ಗ.ಬಸವಣ್ಣನವರು ಎಲ್ಲ ಲೋಕಕ್ಕೂ ಬಸವಣ್ಣನೇ ತಂದೆ ಬಸವಣ್ಣನವರೇ ತಾಯಿ ಎನ್ನುವ ಅಕ್ಕಮಹಾದೇವಿಯವರ ಗಟ್ಟಿ ನುಡಿಮಾತುಗಳೊಳಗೆ ಸತ್ಯದ ಹುಡುಕಾಟ ವಿದೆ .ನೋವಿಗೆ ಸ್ಪಂದಿಸುವ ಧ್ವನಿ ಇದೆ .ಬಳಲಿ ಬಸವಳಿದ ದೇಹಕ್ಕೆ ಸಾಂತ್ವನದ ಸಹೃದಯವೇ ಬಸವಣ್ಣನವರು ಎನ್ನುವ ಅಕ್ಕನವರ ಒಂದು ವೈಚಾರಿಕ ನಿಲುವನ್ನು ನಾನು ಈ ಒಂದು ವಚನದಲ್ಲಿ ಕಂಡು ಕೊಂಡಿರುವೆ .
ಡಾ ಸಾವಿತ್ರಿ ಕಮಲಾಪೂರ