ತನ್ನನ್ನು ತಡೆದದ್ದೂ ಅಲ್ಲದೇ ಮತ್ತದೇ ಹಳೆಯ ಘಟನೆಯನ್ನು ನೆನಪಿಸಿದ್ದು ವೇಲಾಯುಧನ್ ರನ್ನು ಬಹಳ ಕೆರಳಿಸಿತು. ಬೆಂಕಿಯ ಉರಿಯನ್ನು ಊದಿ ಉರಿಸಲೆಂದು ಅಲ್ಲಿಯೇ ಒಲೆಯ ಬಳಿ ಇರಿಸಿದ್ದ ಕಬ್ಬಿಣದ ಕೊಳಪೆಯನ್ನು ತೆಗೆದುಕೊಂಡು ಸುಮತಿಯನ್ನು ಹಿಗ್ಗಾ ಮುಗ್ಗಾ ಥಳಿಸಿ ಕೋಪದಿಂದ ಅದನ್ನು ಅಲ್ಲಿಯೇ ಬಿಸಾಡಿ ಜೋರಾಗಿ ಹೆಜ್ಜೆಯ ಸಪ್ಪಳವನ್ನು ಮಾಡುತ್ತಾ ಹೊರಗೆ ಹೊರಟು ಹೋದರು. ಅಲ್ಲಿಯೇ ಬಿದ್ದಿದ್ದ ಕಬ್ಬಿಣದ ಕೊಳಪೆ ಬೆಂಕಿಯನ್ನು ಊದಲು ಸಾಧ್ಯವಾಗದಷ್ಟು ಕಮಾನಿನಂತೆ ಬಾಗಿ ಹೋಗಿತ್ತು. ಸುಮತಿ ತನಗಾದ ನೋವನ್ನೆಲ್ಲಾ ಸಹಿಸಿಕೊಂಡು, ನೋವು ಮತ್ತು ಜ್ವರದ ತಾಪಕ್ಕೆ ಹಾಗೂ ಅಪ್ಪನ ಆಕ್ರೋಶಕ್ಕೆ ಹೆದರಿ ಅಳಲೂ ಕೂಡಾ ಆಗದೇ ಕುಳಿತಿದ್ದ ಮೂರು ವರ್ಷದ ತನ್ನ ಮಗಳನ್ನು ಬಿಗಿಯಾಗಿ ಅಪ್ಪಿಕೊಂಡಳು. ಆ ಮಗುವಿನ ಸ್ವರ ಗಂಟಲಲ್ಲಿ ಉಡುಗಿ ಹೋಗಿತ್ತು. ಅಪ್ಪ ಎಲ್ಲಿ ತನ್ನನ್ನು ಇನ್ನೂ ಹೊಡೆಯುವರೋ ಎನ್ನುವ ಭಯ ಒಂದು ಕಡೆ ಇದ್ದರೆ, ಅಮ್ಮನನ್ನು ಅಮಾನುಷವಾಗಿ ಹೊಡೆದ ಆಘಾತ ಇನ್ನೊಂದು ಕಡೆ. ಮಗುವು ಬಿಗಿಯಾಗಿ ಕಣ್ಣನ್ನು ಮುಚ್ಚಿಕೊಂಡು ಕುಳಿತಿತ್ತು. ಆದರೆ ಕಣ್ಣಿನಿಂದ ಧಾರಾಕಾರವಾಗಿ ಕಣ್ಣೀರು ಹರಿಯುತ್ತಿತ್ತು. ತೋಳಿನಿಂದ ರಕ್ತ ಕೀವು ಹರಿದು ಅಲ್ಲಿಯೇ ಒಣಗಿಹೋಗಿತ್ತು. ಇದನ್ನು ಕಂಡ ಸುಮತಿ ತನಗಾದ ಅತೀವ ನೋವುಗಳನ್ನೂ ಲೆಕ್ಕಿಸದೇ ಕೆದರಿದ ಕೂದಲನ್ನು ಕೈಯಿಂದ ಸರಿಪಡಿಸಿ, ಮಗುವನ್ನು ಎತ್ತಿಕೊಂಡು ಮನೆಯಿಂದ ಸ್ವಲ್ಪ ದೂರದಲ್ಲಿ ಇದ್ದ ನಾಟಿ ವೈದ್ಯರ ಬಳಿಗೆ ಕರೆದುಕೊಂಡು ಹೋದಳು.  ಅವರು ಮಗುವಿನ ತೋಳಿಗೆ ಗಿಡಮೂಲಿಕೆಗಳ ಔಷಧಿ ಹಚ್ಚಿ ಪಟ್ಟಿ ಕಟ್ಟಿ, ಕುಡಿಯಲು ಕಹಿಯಾದ ಔಷಧಿಯನ್ನು ಕೊಟ್ಟು, ಗುಳಿಗೆಗಳನ್ನು ಕೊಟ್ಟು ಮಗುವನ್ನು ಜೋಪಾನವಾಗಿ ನೋಡಿಕೊಳ್ಳುವಂತೆ ಹೇಳಿದರು. ಸುಮತಿಗೆ ಮೈ ಕೈಯೆಲ್ಲಾ ನೋಯುತ್ತಿತ್ತು. ಮನೆಗೆ ಬಂದ ನಂತರ ಒಲೆ ಹೊತ್ತಿಸಿ ನೀರನ್ನು ಬಿಸಿ ಮಾಡಲು ಇಟ್ಟಳು. ಪತಿಯು ಹೊಡೆದು ಬಾತುಕೊಂಡಿದ್ದ ಕಡೆಗಳಲ್ಲಿ ಬಿಸಿ ನೀರಿನ ಒತ್ತಡ ಕೊಟ್ಟಳು.

ಅಷ್ಟು ಹೊತ್ತಿಗೆ ಹೊರಗೆ ಆಡಲು ಹೋಗಿದ್ದ ಹಿರಿಯ ಮಗಳು ಬಂದಳು. ಕೈಗೆ ಪಟ್ಟಿಯನ್ನು ಕಟ್ಟಿ ಕುಳಿತಿದ್ದ ತಂಗಿಯನ್ನು ಹಾಗೂ ಬಿಸಿ ನೀರಿನ ಒತ್ತಡ ಕೊಟ್ಟುಕೊಳ್ಳುತ್ತಿದ್ದ ಅಮ್ಮನನ್ನು ಕಂಡಳು….”ಅಮ್ಮಾ ಏನಾಯ್ತು ಇಬ್ಬರಿಗೂ”…. ಎಂದು ಅಮ್ಮನನ್ನು ಕೇಳಿದಳು. ಸುಮತಿ ಏನನ್ನೂ ಹೇಳದೇ ಮಗಳ ಮುಖವನ್ನು ದೈನ್ಯತೆಯಿಂದ ನೋಡಿದಳು. ಅಮ್ಮನ ನೋಟದಿಂದ ಆ ಪುಟ್ಟ ಹುಡುಗಿಗೆ ಅಲ್ಲಿ ಏನು ನಡೆದಿರಬಹುದು ಎನ್ನುವ ಸಂಗತಿ ಅಲ್ಪ ಸ್ವಲ್ಪ ಅರ್ಥವಾಯ್ತು. ಅಪ್ಪನ ಕೋಪ ಹಾಗೂ ಕೋಪ ಬಂದಾಗ ಆಗಾಗ ಅಮ್ಮನನ್ನು ಹೊಡೆಯುವುದು ಅವಳಿಗೆ ತಿಳಿದಿತ್ತು. ತಂಗಿಯ ಬಳಿಗೆ ಹೋದಳು ಅವಳ ತಲೆಯನ್ನು ನೇವರಿಸುತ್ತಾ …”ಅಮ್ಮಾ ತಂಗಿಯ ತೋಳಿಗೆ ಏನಾಗಿದೆ ಪಟ್ಟಿ ಕಟ್ಟಿದ್ದಾರಲ್ಲ?”….ಎಂದಾಗ ಅವಳ ಕೈಗೆ ಗಾಯವಾಗಿದೆ ಎಂದಷ್ಟೇ ಹೇಳಿದಳು ಸುಮತಿ. ಬಿಸಿ ನೀರಿನ ಒತ್ತಡ ಕೊಟ್ಟುಕೊಂಡ ನಂತರ ಸ್ವಲ್ಪ ನೋವು ಕಡಿಮೆ ಆದಂತಾಯಿತು. ಕೋಪಗೊಂಡು ಹೊರಗೆ ಹೋದ ಪತಿ ಇನ್ನೇನು ಊಟಕ್ಕೆ ಬರಬಹುದು ಎಂದುಕೊಳ್ಳುತ್ತಾ ಕುಸುಲಕ್ಕಿ ಗಂಜಿಯನ್ನು ಮಾಡಲು ಅಕ್ಕಿ ತೊಳೆದು ಒಲೆಯ ಮೇಲೆ ಇಟ್ಟಳು.  ಸಾರು ಮಾಡಲು ಮನೆಯಲ್ಲಿ ಬೇಳೆ,ತರಕಾರಿ ಹಾಗೂ ತೆಂಗಿನಕಾಯಿ ಇರಲಿಲ್ಲ. ಹಾಗಾಗಿ ಗಂಜಿಯನ್ನು ಮಾಡಿ, ಒಣಗಿದ ಮೀನನ್ನು ಸುಟ್ಟು ಮಕ್ಕಳಿಗೆ ಗಂಜಿಯನ್ನು ಕೊಟ್ಟು ಮಲಗಿಸಿ, ಪತಿಗಾಗಿ ಕಾಯುತ್ತಾ ಕುಳಿತಳು. ರಾತ್ರಿ ಬಹಳ ಹೊತ್ತಿನ ನಂತರ ಮನೆಗೆ ಬಂದ ಪತಿಗೆ ಗಂಜಿ ಹಾಗೂ ಸುಟ್ಟ ಒಣಗಿದ ಮೀನನ್ನು ಕೊಟ್ಟು, ತಾನೂ ಗಂಜಿ ಕುಡಿದು ಮಲಗಿದಳು. ತನಗೆಷ್ಟೇ ನೋವಿದ್ದರೂ ಪ್ರತೀ ದಿನವೂ ಪತಿಯ ಇಂಗಿತಕ್ಕೆ ಅವಳು ತನ್ನನ್ನು ಒಡ್ಡಿಕೊಳ್ಳಲೇಬೇಕಿತ್ತು. ಇಲ್ಲದಿದ್ದರೆ ಅದಕ್ಕೂ ಕೋಪಗೊಂಡು ಹೊಡೆಯುತ್ತಿದ್ದರು ಪತಿ. ಹಾಗಾಗಿ ಮೈಯೆಲ್ಲಾ ನೋಯುತ್ತಿದ್ದರೂ ಮೌನವಾಗಿ  ಕಣ್ಣೀರು ಸುರಿಸುತ್ತಾ ಪತಿಯ ಇಂಗಿತವನ್ನು ಪೂರೈಸಿದಳು. 

ಅವಳ ಶಾರೀರಿಕ ನೋವನ್ನು ಗಮನಿಸದ ವೇಲಾಯುಧನ್ ಗೆ ರಾತ್ರಿಯ ಕತ್ತಲೆಯಲ್ಲಿ ಪತ್ನಿಯ ಕಣ್ಣಿಂದ ಸುರಿಯುತ್ತಿದ್ದ ಅಸಹಾಯಕತೆಯ ಕಣ್ಣೀರು ಕೂಡಾ ಕಾಣುತ್ತಿರಲಿಲ್ಲ. 

ದಿನ ಬೆಳಗಾದರೆ ಕೆಲಸಕ್ಕೆಂದು ಹೋಗುತ್ತಿದ್ದ ವೇಲಾಯುಧನ್ ತರುತ್ತಿದ್ದ ಸಂಬಳ ಕುಟುಂಬದ ನಿರ್ವಹಣೆಗೆ ಸಾಲದಾಯಿತು. ಮಕ್ಕಳನ್ನು ಬಿಟ್ಟು ಸುಮಾತಿಗೂ ಹೊರಗೆ ಹೋಗಿ ದುಡಿಯಲು ಸಾಧ್ಯವಾಗುತ್ತಿರಲಿಲ್ಲ. ಶಾಲೆಯ ರಜೆ ಇರುವ ಸಮಯದಲ್ಲಿ ಹಿರಿಯ ಮಗಳನ್ನು ಪಕ್ಕದ ಕಾಫಿ ತೋಟದಲ್ಲಿ ಕಾಫಿ ಹಣ್ಣುಗಳನ್ನು ಕೊಯ್ಯಲು ವೇಲಾಯುಧನ್  ಕಳುಹಿಸುತ್ತಿದ್ದರು. ಆ ಹುಡುಗಿ ತರುವ ದಿನಗೂಲಿ ಮನೆಗೆ ಬೇಕಾದ ದಿನಸಿಗೆ ಆಗುತ್ತಿತ್ತು. ಆ ಪುಟ್ಟ ಹುಡುಗಿ ಯಾವುದೇ ಬೆಸರವಿಲ್ಲದೇ ಕಾಫಿ ಹಣ್ಣುಗಳನ್ನು ಕೊಯ್ಯಲು

ತನ್ನ ಸೊಂಟದ ಸುತ್ತ ಗೋಣಿ ಚೀಲವನ್ನು ಕಟ್ಟಿಕೊಂಡು, ತನಗೆ ಭಾರವಾದರೂ ಕಾಫಿ ಹಣ್ಣುಗಳನ್ನು ಕೊಯ್ದು ಚೀಲದಲ್ಲಿ ತುಂಬಿ, ಇತರರ ಸಹಾಯದಿಂದ ಕಣಕ್ಕೆ ಹೊತ್ತುಕೊಂಡು ಹೋಗಿ ತೂಕ ಮಾಡಿಸಿ, ಅಂದಿನ ಕೂಲಿ ತಂದು ಅಪ್ಪನ ಕೈಗೆ ಕೊಡುತ್ತಿದ್ದಳು. ಪುಟ್ಟ ಹುಡುಗಿಯಿಂದ ದುಡಿಸಿಕೊಂಡು ಊಟಕ್ಕೆ ಬೇಕಾದ ದಿನಸಿಗಳನ್ನು ತರಬೇಕಾ? ಅಯ್ಯೋ ದೇವರೇ ಇದೆಂತಹಾ ಪರಿಸ್ಥಿತಿಗೆ ನಮ್ಮನ್ನು ದೂಡಿದೆ ಎಂದು ಸುಮತಿ ಬಹಳ ನೊಂದುಕೊಳ್ಳುತ್ತಿದ್ದಳು. ಸಣ್ಣ ವಯಸ್ಸಿಗೇ ಕುಟುಂಬಕ್ಕಾಗಿ ಆ ಪುಟ್ಟ ಹುಡುಗಿ ದುಡಿಯಲು ಪ್ರಾರಂಭಿಸಿದಳು. ಕೆಲಸ ಮಾಡುವ ಗಂಡು ಕೂಲಿ ಆಳುಗಳ ಹಾಗೂ ಅಲ್ಲಿ ಕೆಲಸ ಮಾಡಿಸಲು ಬರುತ್ತಿದ್ದ ಮೇಸ್ತ್ರಿಗಳ ಕಣ್ಣು ಆ ಪುಟ್ಟ ಹುಡುಗಿಯನ್ನು ಕೂಡಾ ಬಿಡುತ್ತಿರಲಿಲ್ಲ. ಇನ್ನೂ ಹನ್ನೊಂದು ವರ್ಷ ವಯಸ್ಸು ಆ ಪುಟ್ಟ ಹುಡುಗಿಗೆ. ಆದರೂ ನೀಚ ದೃಷ್ಟಿಗಳು, ಕೆಲವೊಮ್ಮೆ ಅವರ ಕರಗಳು ಆ ಪುಟ್ಟ ಮಗುವಿನ ಶರೀರವನ್ನು ಸವರುತ್ತಿದ್ದವು. ಆಗೆಲ್ಲಾ ಆ ಪುಟ್ಟ ಹುಡುಗಿ ಅವರ ಅಸಹ್ಯ ಹುಟ್ಟಿಸುವ ನೋಟ ಹಾಗೂ ಸ್ಪರ್ಶವನ್ನು ದಿಟ್ಟತನದಿಂದ ಎದುರಿಸುವಳು. ಮನೆಗೆ ಬಂದ ನಂತರ ಅಮ್ಮನಿಗೆ ತೋಟದಲ್ಲಿ ನಡೆದಂತಹ ಘಟನೆಗಳನ್ನು ತಿಳಿಸುವಳು ಆ ಪುಟ್ಟ ಹುಡುಗಿ.

ಸುಮತಿಗೆ ತಾನೇಕೆ ಇದನ್ನೆಲ್ಲಾ ಕೇಳಲು ಇನ್ನೂ ಬದುಕಿದ್ದೇನೆ ಎನ್ನಿಸುವಷ್ಟು ನೋವಾಗುತ್ತಿತ್ತು. ಪತಿಯಲ್ಲಿ ಅಂಜಿಕೆಯಿಂದಲೇ ಮಗಳು ಹೇಳಿದ ಘಟನೆಗಳ ಬಗ್ಗೆ ಹೇಳುವಳು. ಅವಳನ್ನು ಕೂಲಿಗೆ ಕಳುಹಿಸಬೇಡಿ ಎಂದು ಅಂಗಲಾಚಿ ಬೇಡಿಕೊಳ್ಳುವಳು. ಆಗೆಲ್ಲಾ ವೇಲಾಯುಧನ್ ಹಾಗಿದ್ದರೆ ನೀನು ಕೂಲಿಗೆ ಹೋಗು ಎನ್ನುತ್ತಿದ್ದರು. ಒಂದು ಮಗುವಿಗೆ ಮೂರು ವರ್ಷ ಇನ್ನೊಂದು ಕೈಗೂಸು ಈ ಸ್ಥಿತಿಯಲ್ಲಿ ಪತ್ನಿಯು ಕೆಲ್ಸಕ್ಕೆ ಹೋಗಲು ಆಗುವುದಿಲ್ಲ ಎನ್ನುವುದು ಅವರಿಗೆ ತಿಳಿದಿತ್ತು. ನಿನ್ನಿಂದ ಏನು ಸಾಧ್ಯ? ಎಂದು ಆಗಾಗ ಮೂದಲಿಸುತ್ತಿದ್ದರು. ಆಗೆಲ್ಲಾ ಸುಮತಿ ಮನದಲ್ಲೇ ನೊಂದು. ನನಗೆ ಸಿಕ್ಕಿದ್ದ ಸರಕಾರಿ ಕೆಲಸಕ್ಕೆ ನನ್ನನ್ನು ಹೋಗಲು ಬಿಟ್ಟಿದ್ದಿದ್ದರೆ ಇಂದು ಎಲ್ಲರೂ ಎಷ್ಟು ಸುಖವಾಗಿ ಇರುತ್ತಿದ್ದೆವು. ಆ ಕೆಲಸಕ್ಕೆ ಕಳುಹಿಸದೇ ಹೀಗೆ ಮೂದಲಿಸುತ್ತಾ ಇರುವರಲ್ಲ!! ಎಂದು ಮರುಗುವಳು. ಕೆಲವು ದಿನಗಳ ಬಳಿಕ ಮೂರನೇ ಮಗಳಿಗೆ ಒಂದು ವರ್ಷ ತುಂಬಿದ ಮೇಲೆ ಮಗುವನ್ನೂ ಜೊತೆಗೆ ಕರೆದುಕೊಂಡು ಹಿರಿಯ ಮಗಳ ಜೊತೆಗೆ ತಾನು ಕೂಡಾ ಕೂಲಿ ಕೆಲಸಕ್ಕೆ ಹೋಗತೊಡಗಿದಳು ಸುಮತಿ. ಹಿರಿಯ ಮಗಳ ವಿದ್ಯಾಭ್ಯಾಸ ಅಲ್ಲಿಗೇ ನಿಂತಿತು. ತನ್ನ ಕೈಲಾದ ಸಣ್ಣ ಪುಟ್ಟ ಕೆಲಸವನ್ನು ಮಾಡುತ್ತಾ ಅಮ್ಮನಿಗೆ ಸಹಾಯವಾಗಿ ಜೊತೆಗೆ ಆ ಮಗಳು ಹೋಗುತ್ತಿದ್ದಳು. ಪುಟ್ಟ ತಂಗಿ ಅತ್ತಾಗ ಅವಳನ್ನು ನೋಡಿಕೊಳ್ಳುತ್ತಿದ್ದಳು. ಎರಡನೇ ಮಗಳು ಪಕ್ಕದ ಮನೆಯ  ಮೇಷ್ಟ್ರ ಜೊತೆ ಶಾಲೆಗೆ ಹೋಗಿ ಬಂದ ನಂತರ ಅಲ್ಲಿಯೇ ಪಕ್ಕದಲ್ಲಿದ್ದ ತುಳು ಜನರ ಮನೆಯಲ್ಲಿ ಇರುತ್ತಿದ್ದಳು. ಅಮ್ಮ ಹಾಗೂ ಅಕ್ಕ ಕಾಫಿ ತೋಟದಿಂದ ಬರುವವರೆಗೂ ಪಕ್ಕದ ಮನೆಯ ಮಕ್ಕಳೊಂದಿಗೆ ಆಡುತ್ತಾ ಕಾಲ ಕಳೆಯುವಳು. ಸುಮತಿ ಕೆಲಸದಿಂದ ಮನೆಗೆ ಬರುವಾಗ ಅಲ್ಲಿನ ತೋಟದ ಕಿತ್ತಳೆ, ಚಕ್ಕೋತ ಹಣ್ಣುಗಳನ್ನು ತಂದು ಸಂಜೆಯ ಹೊತ್ತಿನಲ್ಲಿ ಮಕ್ಕಳಿಗೆ ತಿನ್ನಲು ಕೊಡುತ್ತಿದ್ದಳು. ಪತಿ ಬರುವ ಹೊತ್ತಿಗೆಲ್ಲ ಅಡುಗೆ ಮಾಡಿ ಇಡುವಳು. ವಾರದ ಸಂಬಳ ಬಂತೆಂದರೆ ಅದರಿಂದ ಒಂದು ನಯಾಪೈಸೆಯನ್ನೂ ತೆಗೆದುಕೊಳ್ಳದೇ ಎಲ್ಲವನ್ನೂ ಪತಿಗೆ ಕೊಡಬೇಕಿತ್ತು.


Leave a Reply

Back To Top