ನಗುವುದು ಸಹಜ ಧರ್ಮ

ನಗುವು ಸಹಜದ ಧರ್ಮ;ನಗಿಸುವುದು ಪರಧರ್ಮ।
ನಗುವ ಕೇಳುತ ನಗುವುದತಿಶಯದ ಧರ್ಮ॥
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ। ಮಿಗೆ ನೀನು ಬೇಡಿಕೊಳೊ-ಮಂಕುತಿಮ್ಮ॥

ಹೌದಲ್ಲವಾ? ನಗುವಿಗೆ ಇರುವ‌ ಶಕ್ತಿಯನ್ನು ಬಹಳ ಸುಂದರವಾಗಿ ಕಣ್ಣಿಗೆ ಕಟ್ಟುವಂತೆ ಮತ್ತು ಅದರಲ್ಲಡಗಿರುವ ಮಾರ್ಮಿಕ ಭಾವಾರ್ಥ ಮರೆಯಲು ಸಾಧ್ಯವೇ..ಅನುಸರಿಸಲು ತಿಳಿಸಿದ ಡಿ.ವಿ.ಜಿಯವರ ಕಗ್ಗಗಳು ಮನದಾಳದ ನೋವಿಗೆ ಔಷಧ ನೀಡುವುದಂತು ದಿಟ.
ಇತ್ತಿತಲಾಗಿ ನಗುವಿನ ಮಹತ್ವ ಬಹಳ ಜೋರಾಗಿ ಎಲ್ಲೆಂದರಲ್ಲಿ ಸರಾಗವಾಗಿ ನದಿಯಂತೆ ಹರಿಯುತ್ತಿದೆ.ನಗಿಸುವ ಕಲಾವಿದರನ್ನು ಬಳಸಿಕೊಂಡು ನಗೆಹಬ್ಬವನ್ನು ಆಚರಿಸುತ್ತಿರುವ ಸಂಗತಿ ಎಲ್ಲರಿಗೂ ಗೊತ್ತಿರುವುದೇ.ಕಾರಣ,ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುವ ಎಲ್ಲ ಕಾರ್ಯಕ್ರಮಗಳಲ್ಲಿ ಇಂತಹ ನಗೆಹಬ್ಬ ಕಾರ್ಯಕ್ರಮವು ಒಂದಾಗಿದೆ. ಇದನ್ನು ಸಮಯ ಮಾಡಿಕೊಂಡು ನೋಡುವ ಸಾವಿರಾರು ಅಭಿಮಾನಿಗಳು ಇದ್ದಾರೆಂದರೆ ಆಶ್ಚರ್ಯ ಪಡಬೇಕಾಗಿಲ್ಲ!. ಈಗ ನಗುವುದು ಅನಿವಾರ್ಯವಾಗಿದೆ.

ನಗಲೆ ಬೇಕಿದೆ ಬದುಕಿಗೆ
ಅತ್ತು ಸೊರಗಿದ ಕಂಗಳಿಗೆ
ನಗುವೆಂಬ ಬತ್ತಿಯಿಟ್ಟು
ದೀಪ ಹಚ್ಚಬೇಕಿದೆ
.

ಮನಸ್ಸುಗಳ ನಡುವೆ ಇರುವ ಅಂತರವನ್ನು ನಗುವೆಂಬ ದಿವ್ಯೌಷದ ನೀಡಿ ಕಾಪಾಡುವ ಮಂತ್ರ ಉಚ್ಛರಿಸುವ ದಿನಗಳು ಶುರುವಾಗಿವೆ. ಮನುಷ್ಯನ ದೇಹದ ಮೇಲೆ ಪ್ರಭಾವ ಬೀರುವ ಏಕೈಕ ಅಸ್ತ್ರ ನಗುವೆಂದರೆ ತಪ್ಪಾಗದು.ಭೂಮಿ ಸೃಷ್ಟಿಯಾದಾಗ ಪ್ರಕೃತಿ ಹಚ್ಚಹಸಿರಾಗಿ  ನಳನಳಿಸುತ್ತ,ಹೂಗಳು ತಮ್ಮಷ್ಟಕ್ಕೆ ತಾವು ಅರಳುತ್ತ ಜಗತ್ತನ್ನು ಸುಂದರವಾಗಿಸುವಷ್ಟು ಮಟ್ಟಿಗೆ ಸಹಜವಾಗಿದ್ದ ಕಾಲವದು.. ಪ್ರಾಣಿಗಳಿಗೆ,ಪಕ್ಷಿಗಳಿಗೆ ಪ್ರಕೃತಿಯ ಮಡಿಲಲ್ಲಿ ಸುಖಕಂಡ ಕ್ಷಣಗಳು. ಎಲ್ಲವೂ ಸ್ವರ್ಗದ ಬಾಗಿಲು ತೆರೆಯುವ ದಿನ…ಅದಕ್ಕೆ ಭೂಮಿಯನ್ನು ಸ್ವರ್ಗ ಎಂದು ಕರೆಯಲಾಗುತ್ತದೆ. ಇದನ್ನೆಲ್ಲ ಅನುಭವಿಸುವ ಕಂಗಳು ಮನುಷ್ಯನ ರೂಪದಲ್ಲಿ ಧರೆಗೆ  ಬಂದಾಗಿಂದ ಈ ನಗುವಿಗೆ ಇಷ್ಟೊಂದು ಬೆಲೆ.

ಮುಖದ ಮೇಲಿನ ಗೆರೆಗಳು  ದಿನದಿಂದ ದಿನಕ್ಕೆ ಮೂಡುತ್ತಿರುವ ಹಿನ್ನಲೆಯಲ್ಲಿ ನಗುವೆಂಬ ಆಭರಣ ಮಾಯವಾಗುತ್ತಿರುವುದು ದುರಂತವೆ ಸರಿ!.ಇವಾಗೆಲ್ಲ,ನಗುವುದು ಒಂದು ಮುಖವಾಡದ ಮಕುಟ ಧರಿಸುವುದು ಕಾಮನ್ ಆಗಿದೆ. ನಮಗೆಲ್ಲ ಸ್ವಚ್ಛಂದವಾಗಿ  ಅಭಿವ್ಯಕ್ತಿ ಪಡಿಸುವ ಸ್ವಾತಂತ್ರ್ಯ ಇದೆ.ಆದ್ರೆ ಮುಖದ ಶೃಂಗಾರ ಬಂಗಾರ ಅಲ್ಲ!. ಮುದ್ದಾದ ನಗುವೆ ಕಾರಣ!. ಇದೊಂದು ಇಲ್ಲದಿದ್ದರೆ ಮುಖದ ಕಾಂತಿಗೆ ಯಾವ ಬೆಲೆ? ಮೈತುಂಬ ವಜ್ರ ವೈಡೂರ್ಯಗಳು ಇದ್ದರೂ, ಮುಖದಲ್ಲಿ ಪುಟ್ಟ ಖುಷಿಯ ನಗುವಿರದಿದ್ದರೆ ಆ ರತ್ನಾಭರಣಗಳಿಗೆ ಎಷ್ಟು ಬೆಲೆ ನೀಡಲು ಸಾಧ್ಯ ಹೇಳಿ?.

ಫೇಸ್ ಬುಕ್ ನಲ್ಲಿ ಒಂದು ದೃಶ್ಯ ಹರಿದಾಡುತ್ತಿತ್ತು,ಒಂದು ಸುಂದರ ಮದುವೆ ಸಮಾರಂಭದಲ್ಲಿ ಮದುಮಗ ಮದುಮಗಳಿಗೆ ಹಾರ ಹಾಕುವ ಪರಿಯಲ್ಲಿ ಯಾವ ಸಂತೋಷವು ಇರಲಿಲ್ಲ,ನಗುನಗುತ್ತ ಖುಷಿಯಿಂದ ಮದುವೆಯಾಗುತ್ತಿದ್ದಿನಿ,ತನ್ನ ಬಾಳ ಸಂಗಾತಿಗೆ ಪ್ರೀತಿಯಿಂದ ಎಂಬ ಯಾವ ಭಾವವು ಕಾಣಲಿಲ್ಲ. ‘ವಧು’ ಹಾರಹಾಕುವ ಮೊದಲು ತುಂಬ ಲವಲವಿಕೆಯಿಂದ ಖುಷಿಯಿಂದ ವರನನ್ನು ಗಮನಿಸುತ್ತಿದ್ದಳು, ಯಾವಾಗ ‘ವರ’ ತನ್ನ ಗತ್ತನ್ನು ಅಹಂಕಾರದಿಂದ ಕತ್ತೆಗೆ ಹಾಕುವ ಹಾರದಂತೆ ಎತ್ತಿ ‘ವಧು’ವಿನ ಕೊರಳಿಗೆ ಹಾಕಿದಾಗ,ಇದನ್ನೆಲ್ಲ ಗಮನಿಸುತ್ತಿದ್ದ ವಧು ತಕ್ಷಣ ಖುಷಿಯಿಂದ ನಗುತ್ತಿದ್ದ ನಗು ತಕ್ಷಣ  ಮಾಯವಾಗಿ,ಕತ್ತೆಯಂತೆ ತಲೆ ತಗ್ಗಿಸಿದ ಕ್ಷಣ ನೋಡಿ ಕಣ್ಣೀರು ತುಂಬಿ ಬಂತು.ಯಾಕೆಂದರೆ ಒಂದು ಹೆಣ್ಣು ಮಗಳಿಗೆ ಮದುವೆಯೆಂಬ ಬಂಧನದಲ್ಲಿ ‘ಮದುಮಗ’ ಬಹುಮುಖ್ಯ ಪಾತ್ರ ವಹಿಸುತ್ತಾನೆ.ಅವಳ ದೃಷ್ಟಿಯಲ್ಲಿ ಬೇರೆ ಯಾರು ಮುಖ್ಯ ಅಲ್ಲ,ಬಾಳ ಸಂಗಾತಿ ಮಾತ್ರ ಮುಖ್ಯ.ಅವನೇ ತನ್ನ ಗೌರವಿಸಲಿಲ್ಲ ಅಂದ ಮೇಲೆ,ಇನ್ನೂ ಆ ಮದುವೆಗೆ ಏನು ಮಹತ್ವವಿದೆ? ಅನ್ನಿಸಿತು.ಸಾವಿರ ಕನಸುಗಳು ತಕ್ಷಣ ಕುಸಿದ ಗಳಿಗೆ.”ನಗು ಕಳೆದುಕೊಂಡ ವಧು,ಕೇವಲ‌ ಪ್ರತಿಮೆಯಾಗಿ ಆ ವರನ ಜೀವನದಲ್ಲಿ ಪ್ರವೇಶಿಸುವುದನ್ನು ನೆನೆಸಿಕೊಂಡರೆ  ಯಾರಿಗೂ ಇಂತಹ ಸ್ಥಿತಿ ಬೇಡ ಅನ್ನಿಸಿತು.

ಸರಳ,ಸುಂದರ ಹಾಗೂ ನಿರ್ಮೋಹತೆಗೆ ಆಭರಣವೆಂದರೆ ನಗು…ಅದರ ಇನ್ನೊಂದು ಮುಖ ಖುಷಿ,ಮಂದಹಾಸ..ಇದನ್ನು ಪ್ರತಿಯೊಬ್ಬರು ಅನುಭವಿಸಬೇಕು.ಶ್ರೀಮಂತಿಕೆಯ ಅಹಂ ಎಂದಿಗೂ ನಿರಾಭರಣ ಸೌಂದರ್ಯವನ್ನು ಅನುಭವಿಸಲು ಸಾಧ್ಯವಿಲ್ಲ. ಬಡವನೆದೆಯಲ್ಲಿ ಬಡತನ ಹಾಸು ಹೊದ್ದು ಮಲಗಿದ್ದರು,ಹಳದಿ ಬಂಗಾರ ಮೈ ತುಂಬ ಇರದಿದ್ದರು,ಅವರ ದಿನ ದುಡಿತ ಅವತ್ತಿನ ಗಂಜಿಗೆ ಸೀಮಿತವಾಗಿದ್ದರೂ ಗುಡಿಸಲಲ್ಲಿ ಬುಡ್ಡಿ ದೀಪ ಇದ್ದರೂ…ಸತಿಪತಿಗಳು ಖುಷಿಯಿಂದ ಅಂಬಲಿ ಉಣ್ಣುವ ದೃಶ್ಯ, ಅರಮನೆಯಲ್ಲಿ ಪರಸ್ಪರ ಸಿಗಬಹುದಾ? ಹಣದಿಂದ ನಗುವನ್ನು ಖರೀದಿಸಲು ಸಾಧ್ಯವಾ?  ಖಂಡಿತ ಇಲ್ಲ.
ಇದಕ್ಕೆ ನೋಡಿ ಮನಸ್ಸಿನ ಮಾತನ್ನು ಅರ್ಥ ಮಾಡಿಕೊಳ್ಳಬೇಕಾದಾಗ ಮುಖದ ಭಾವವೇ ಮುಖ್ಯ.

ಹೌದು…ನಕ್ಕರೆ ಅದೇ ಸ್ವರ್ಗ…..ಆ ನಗು ಮಾತ್ರ ನಯವಂಚನೆಯ ಆಗರವಾಗದಂತೆ ಕಾಯ್ದುಕೊಳ್ಳಬೇಕಾಗಿದ್ದು ಅನಿವಾರ್ಯ.
ಮನುಷ್ಯನ ದ್ವೇಷ ದಳ್ಳುರಿಗೆ ಬಲಿಯಾಗುವ ಕುಹಕ ನಗುವಿಗೆ ಏನೆನ್ನಬೇಕು?. ಮಾನವೀಯ ಮೌಲ್ಯಗಳಲ್ಲಿ ಪರಸ್ಪರ ಸೌಹಾರ್ದತೆಯ ಹಸ್ತಾಂದೋಲನ ಪ್ರಾರಂಭವಾಗುವುದು ಮುಗುಳ್ನಗೆಯಿಂದ.ಎಂತಹ ನೋವು,ಬೇಸರವಿದ್ದರೂ ಒಂದು ಪುಟ್ಟ” ಸ್ಮೈಲ್” ಎಲ್ಲ ಬಿಗುಮಾನಗಳನ್ನು ದೂರ ಮಾಡಿ ಒಂದುಗೂಡಿಸುವ ಕೆಲಸ ಮಾಡುವ ಶಕ್ತಿ ಇರುವುದು ಇದರಲ್ಲಿ.. ಹಾಗಂತ ನಗುವೆಂಬುವುದು ಅತಿರೇಕದ್ದಾಗಿರಬಾರದು.ಪರಿಸರ ಸ್ನೇಹಿ ನಗುವೆ ಬದುಕಿಗೆ ನವರತ್ನ ಇದ್ದ ಹಾಗೆ!. ನಗುವಿಗೆ ಬಣ್ಣಗಳ ಬಂಧನವಿಲ್ಲ.ಅದು ಎಲ್ಲದರಿಂದಲೂ ಮುಕ್ತ. ನಗಲು‌ ಸಮಯವಿಲ್ಲದಷ್ಟು ದುಡಿತವಿದೆ.ಕಳೆದು ಹೋದ ಖುಷಿ,ನಗುವನ್ನು ಪುನಃ ಪಡೆಯಲು ಹಾತೊರೆಯುತ್ತಿರುವುದು ವಿಚಿತ್ರವಾದರೂ ಸತ್ಯಸಂಗತಿ.ಕೆಲಸವಿಲ್ಲದೆ ಅಲೆಯುತ್ತಿರುವ ಜನಾಂಗದ ಹೋರಾಟಕ್ಕೆ ಗೆಲುವು ಸಿಕ್ಕಾಗ ಸಿಗುವ ಖುಷಿ ಮರೆಯಲು‌ ಸಾಧ್ಯವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಮನುಷ್ಯನಿಗೆ ಪ್ರಕೃತಿ ನೀಡಿರುವ ವರದಾನ ನಗು…ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದರ ಮೇಲೆ ನಗುವಿನ ಗುಟ್ಟು ಅಡಗಿದೆ.ಜಗತ್ತಿನ ಎಲ್ಲ ಜೀವಿಗಳಿಗೂ ಅದರದ್ದೆ ಆದ ನಗುವಿದೆ.ಅದು ಆಯಾ ಜೀವಿಗಳಿಗೆ ಮಾತ್ರ ಅರ್ಥವಾಗುತ್ತದೆ.ಹುಟ್ಟಿದ ಮಗುವಿನಿಂದ ಹಿಡಿದು ಮುಪ್ಪಿನವರೆಗೂ ನಗುವಿನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಂತಿರುತ್ತದೆ.ಯಾವ ವ್ಯಕ್ತಿ ಇದರ ಸದುಪಯೋಗ ಪಡೆಯಲಿಲ್ಲವೋ ಆ ವ್ಯಕ್ತಿಗೆ ನಗುವಿನ ಹಿಂದಿರುವ  ಅಗಾಧವಾದ ಪವರ್ ಅರಿಯಲು ಸಾಧ್ಯವಿಲ್ಲ. ಹೀಗಾಗಿ ನಗುವುದನ್ನು ಅಂದರೆ ಮುಖದ ನೈಜ ಸೌಂದರ್ಯ ಹೆಚ್ಚಿಸಲು ಮಂದಹಾಸವನ್ನು ಸದಾ ಅಳವಡಿಸಿಕೊಂಡಷ್ಟು ಆ ವ್ಯಕ್ತಿ ಸದೃಢ ಆರೋಗ್ಯ ಮನುಷ್ಯನಾಗಿ ಇರಲು ಅಸಾಧ್ಯ. ಒಮ್ಮೆ ಕನ್ನಡಿ ಮುಂದೆ ನಿಂತು ನಕ್ಕು ಬಿಡಿ, ಮೂವತ್ತೆರಡು ಹಲ್ಲುಗಳು ಕಾಣುವಂತೆ,ನೆರಿಗೆಗಳು ಬಿದ್ದರೆ ತೆರಿಗೆ ಕಟ್ಟಬೇಕಾಗಿಲ್ಲ…ಮನದಾಳದ ನೋವು ಮರೆಯಾಗಲು ನಗುವೆಂಬ ಆಭರಣ ಧರಿಸಿ.’ಮೋನಾಲಿಸಾ’ ಚಿತ್ರಪಟ ಕಣ್ಣೇದುರು ಬಂದರೆ‌ ಸಾಕಲ್ಲವೇ?ಇದ್ದಷ್ಡು ಸಮಯ ಕಳೆಬರಹದಂತೆ ಇರದೆ…ಚಿಲುಮೆಯ‌ ಕಾರಂಜಿಯಂತೆ ಖುಷಿಯಾಗಿರಲು ಪ್ರಯತ್ನಿಸಿ…ಅಸಾಧ್ಯವೆನ್ನುವುದು ಶಬ್ದಕೋಶದಲ್ಲಿ ದಾಖಲಾಗಬಾರದು…


One thought on “

Leave a Reply

Back To Top