ಲಹರಿ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
ಒಂದು ಪ್ರೇಮಪತ್ರ
ಲಹರಿ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
‘ನನ್ನಾಸೆ ನಿನ್ನಾಸೆ ಒಂದಾದ ಆ ಗಳಿಗೆ’
ನನ್ನೊಲವಿನ ಗೀತಾ
ಅತಿ ಹೆಚ್ಚು ಮುದ್ದು ಮಾಡಿ ಬೆಳೆಸಿದ ಅವ್ವನನ್ನು ಕಳೆದುಕೊಂಡ ಮೇಲೆ ಬದುಕಿನ ನೈಜ ಮುಖ ಅನಾವರಣಗೊಂಡಿತು. ಸಂಗೀತದಲ್ಲಿ ಸರಿಗಮಪ ಎನ್ನುವ ಸ್ವರಗಳಂತೆ ರಾಗ ಬದ್ಧವಾಗಿ ಎಲ್ಲ ಅಂಶಗಳನ್ನು ಪರಿಗಣಿಸಬೇಕೆನ್ನುವುದು ತಿಳಿಯಿತು. ಎಲ್ಲರನ್ನೂ ಪ್ರೀತಿ ಅಕ್ಕರೆ ಗೌರವದಿಂದ ಕಾಣಬೇಕು. ತಪ್ಪಿದರೆ ಚಡಪಡಿಕೆ, ಆತಂಕ, ಒತ್ತಡಗಳು ಕಾಡುತ್ತವೆ. ಏರುಪೇರುಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಅಗತ್ಯಗಳು ಆದಾಯವನ್ನು ಮೀರಬಾರದು. ಒಳ್ಳೆಯ ಆಲೋಚನೆಗಳು ಉತ್ತಮ ಬದುಕನ್ನು ಕಟ್ಟಿಕೊಡಬಲ್ಲದು ಎನ್ನುವ ವಿಶ್ವಾಸ ಮೂಡಿತು. ಅದೇ ಸಮಯಕ್ಕೆ ಕಣ್ಣಿಗೆ ಬಿದ್ದವಳು ನೀನು.
ಯಾವ ಹುಡುಗಿಯನ್ನು ಕತ್ತೆತ್ತಿ ನೋಡದ ನಾನು ಮೊದಲ ನೋಟಕ್ಕೆ ಸಮ್ಮೋಹಿತನಾದೆ. ನನ್ನ ಮನದಲ್ಲಿ ನೋವಿದೆ ದುಗುಡವಿದೆ ಸಾಗರದಷ್ಟು ಪ್ರೀತಿ ಮಮತೆಯಿದೆ ಎಂದು ನೀ ಪತ್ತೆ ಹಚ್ಚಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಹೂವಿಗಿಂತ ಮೃದುವಾದ ಹೃದಯವಿದೆ ಎಂಬುದನು ಕಂಡೆ. ನಿನ್ನಲ್ಲಿರುವ ಹೃದಯ ವೈಶಾಲ್ಯತೆ, ಸಹನೆ, ನಿಷ್ಟುರತೆ, ಮೃದುತ್ವಕ್ಕೆ ಆಯಸ್ಕಾಂತದಂತೆ ಆಕರ್ಷಿತನಾದೆ. ಎದೆಯೆಂಬ ಖಾಲಿ ಕಾಗದದ ಮೇಲೆ ಭಾವಗಳನ್ನೆಲ್ಲ ಚಿತ್ರಿಸಲು ಅಣಿಯಾದೆ.
‘ಏನನ್ನೇ ಹೇಳು ಕವಿಯಾಗಿ ಹೇಳು ಎಂಬ ಮಾತಿನಂತೆ’
“ನನ್ನ ಪಾಡಿಗೆ ನಾನಿದ್ದೆ.
ನೀ ಯಾಕೆ ಕಣ್ಣಿಗೆ ಬಿದ್ದೆ. ಚೆಂದದ ಬೆಡಗಿಯ ಬೆಡಗು ಬಿನ್ನಾಣ ಕಂಡ ಕಣ್ಣು ಮಿಟುಕುತ್ತದೆ. ಹೃದಯ ಹೆಚ್ಚೆಚ್ಚು ಬಡಿಯುತ್ತದೆ.
ಗೆಜ್ಜೆಯ ಹೆಜ್ಜೆ ಚೆಂದ
ನಿನ್ನ ಲಜ್ಜೆ ಬಲು ಚೆಂದ ಝರಿಯಾಗಿ ತೊರೆಯಾಗಿ ನಿರಂತರ ತರಂಗಿಣಿ. ಹೇಳಲು ಮಾತಿಲ್ಲ
ನಿನ್ನದೇ ಜಾದೂ ಎಲ್ಲ. ಒಲವೆ ಅದ್ಹೇಗೆ ನಿನ್ನ ಹಿಡಿತಕೆ ಸಿಲುಕಿರುವೆ. ಚೂರು ಮರೆಗೆ ಸರಿದರೂ ಸಹಿಸೆನು ನಾನು.
ಏಳೇಳು ಜನುಮ ನಗು ನಗುತ ಜೊತೆಗಿರಬೇಕು ನಾನು ನೀನು.”
ಹೀಗೆ ನಿನ್ನ ಬಗೆಗೆ ಅದೇನೇ ಹೇಳ ಹೊರಟರೂ ಕವಿಯಾಗಿ ಬಿಡುವೆ. ತರತಿದೆ ಅದು ನನಗೆ ಬೆರಗು ಚೆಲುವೆ. ಎಂದು ನನ್ನಲ್ಲಿರುವ ಧೈರ‍್ಯವನ್ನೆಲ್ಲ ಒಟ್ಟುಗೂಡಿಸಿ ಒಲವಿನೋಲೆ ಬರೆದಿದ್ದೆ. ಓಲೆಯನು ನಿನ್ನ ಖಾಸಾ ಗೆಳತಿ ರೂಪಾಳ ಕೈಗಿತ್ತು ಮರು ಉತ್ತರ ತರಲು ಹೇಳಿದ್ದೆ.
ಅದಕ್ಕೆ ಗೆಳೆಯ, ನೀ ಬರುವ ವೇಳೆ ಹತ್ತಿರವಾದಂತೆಲ್ಲ ನಿಂತಲ್ಲಿ ನಿಲ್ಲಲಾರದೆ ಕಾಲುಗಳಿಗೆ ಮನೋವೇಗ ಹೆಚ್ಚುತ್ತದೆ. ಸಂಗ ಒಳ್ಳೆಯದಿದ್ದರೆ ಬದುಕಿನ ಬೆಸುಗೆಗಳೆಲ್ಲ ತನ್ನಿಂತಾನೆ ಬೆಸೆದುಕೊಳ್ಳುತ್ತವೆ. ಉತ್ತಮ ಗೆಳತನವೆಂದರೆ ಕತ್ತಲೊಳಗೆ ಬೀಜ ಮೊಳಕೆಯೊಡದಂತೆ. ಮೆಲ್ಲನೆಯ ಕನಸಿನ ಮೆರವಣಿಗೆ ವೇಗ ಪಡೆದುಕೊಳ್ಳುತ್ತದೆ. ಸ್ನೇಹ ಸಹಕಾರದ ಕಂಪಿಗೆ ಗುರಿ ತಲೆದೂಗುತ್ತದೆ. ಕನಸು ನನಸಾಗಿ ಅರಳಿ, ಜೀವ ಭಾವದ ಗೆಲುವು ತಲೆದೂಗಿ ತಣಿಯುವದು. ಸಹವಾಸ ಸರಿಯಿರದಿದ್ದರೆ ಸಲೀಸಾಗಿ ಸೋತು ಬಿಡುತ್ತೇವೆ. ಕೆಂಡದಂತಹ ಕೋಪ ಮುನಿದ ಮನಸ್ಸುಗಳಲ್ಲಿ ಸ್ನೇಹ ಸೌರಭ ಎಲ್ಲಿ? ನಲುಮೆಯ ಸ್ನೇಹ ಹೆಚ್ಚದೇ ತಕರಾರು ತಾಕೀತುಗಳೇ ಹೆಚ್ಚುತ್ತವೆ. ಎಂದು ಮನದಲ್ಲಿ ತುಂಬಿ ತುಳುಕುವ ಒಲವಿದ್ದರೂ ಅದನ್ನು ಮರೆಮಾಚಿ ಸ್ನೇಹದೋಲೆ ಬರೆದಿದ್ದೆ.
ಅದನ್ನೋದಿ ಮೋಡ ಕಂಡ ನವಿಲಿನಂತೆ ನಾ ನಲಿದಿದ್ದೆ. ಪತ್ರವನ್ನು ಅದೆಷ್ಟು ಬಾರಿ ಓದಿದ್ದೆನೋ ಲೆಕ್ಕವಿಲ್ಲ. ರಾತ್ರಿ ಕಣ್ರೆಪ್ಪೆಗಳು ಅಂಟದಾದಗ ಮತ್ತೊಮ್ಮೆ ಓದಬೇಕೆಂದು ನೋಡಿದೆ. ಆಗ ಎರಡು ಸಾಲುಗಳು ಕಂಡವು. “ಯಾವತ್ತೂ ಪ್ರೀತಿ ಸೂಸುವ ನಿನ್ನ ಕಣ್ಣು. ಒಪ್ಪವಾಗಿರುವ ಕ್ರಾಪು. ಕಬ್ಬಿಣದಂತ ತೋಳು ನನಗೆ ತುಂಬಾ ಇಷ್ಟ” ಎಂದು ಬರೆದಿದ್ದೆ ಹಿಂದಿನ ಪುಟದಲ್ಲಿ. ಅದನ್ನೋದಿದ ನನಗೆ ಮುಗಿಲು ಮೂರೆ ಗೇಣು ಉಳಿದಿತ್ತು.
ಅದೊಂದು ಮುಸ್ಸಂಜೆ ಸುಂಯ್ಯೆಂದು ಸದ್ದು ಮಾಡಿ ಬೀಸುತ್ತಿದ್ದ ತಂಪಾದ ಗಾಳಿಯಲ್ಲಿ ಗುಡ್ಡದ ತುದಿಯಲ್ಲಿ ಕಚಗುಳಿಯ ಆನಂದ ತರುವ ಸ್ಪರ್ಶ ಇನ್ನೂ ಇನ್ನೂ ಬೇಕೆನಿಸುತ್ತಿತ್ತು. ಮಳೆಯ ರೂಪದಿ ಮುತ್ತಿಕ್ಕುತ್ತಿರುವ ನಿನ್ನ ಪದಗಳಿಗೆ, ಮೊದಲ ಮಳೆ ಹನಿಯು ಮುಟ್ಟಿದ ಭೂಮಿಯ ತನುವಿನಂತೆ ಅರಳಿತು ಮನ. ಮನದ ಎಲ್ಲ ದುಗುಡವನ್ನು ಹಂಚಿಕೊಂಡು ಹಗುರವಾಗಿ ಬಿಡಲೇ ಎಂದೆನಿಸಿತು. ಜಗದ ಜಂಜಡಕೆ ಬೇಸತ್ತು ಬಂದಿಹೆನು ನಿನ್ನೆದೆಗೆ ಎಂದುಸುರಬೇಕು ಎಂಬ ಆಸೆ ಅತಿಯಾಗಿ ಬಾಯಿ ತೆರೆದೆ. ಅಷ್ಟರಲ್ಲೇ ಎದೆಯ ರೋಮದಲಿ ತೋರು ಬೆರಳಿನ ರಂಗೋಲಿ ಹಾಕುತಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಹೃದಯ ಮೊಳಕೆಯೊಡೆದ ಸಸಿಯಂತೆ ಹಸಿರಾಗಿ ನಿನ್ನಲ್ಲಿ ಬೆಸೆದುಕೊಂಡಿತು. ಬಾಹು ಬಂಧದೊಳಗೆ ನಾನು ನೀನು ಮತ್ತೆ ಮತ್ತೆ ಬಂಧಿಯಾಗುವ ಕನಸು ಕಾಣಲು ಶುರು ಮಾಡಿತು ಕಣ್ಣು. ಆಹಾ! ಎಂಥ ಸಿಹಿ ಅಪ್ಪುಗೆ. ಈ ಅಪ್ಪುಗೆ, ಬೆನ್ನಿನ ಮೇಲೆ ಬೆರಳಿನ ಚಿತ್ತಾರ ಜತೆಗೆ ದೀರ್ಘ ಆಲಿಂಗನಕೆ ದಾರಿ ಮಾಡಿಕೊಡಬಹುದೇ? ಕತ್ತಿನ ಸುತ್ತ ಮುತ್ತನ್ನಿಡಲು ಅನುಮತಿ ಸಿಗಬಹುದೇ? ರತಿ ಸಾಮ್ರಾಜ್ಯದಲ್ಲಿ ಸುಖ ಸಾಗರದಲ್ಲಿ ಮಿಂದೇಳಬಹುದೇ? ಎಂದು ಮನದಲ್ಲಿ ಮಂಡಿಗೆ ತಿನ್ನುತ್ತಿದ್ದೆ. ಆಗ ಮನಸ್ಸು ಎಲ್ಲಿಯೂ ಎಲ್ಲೆ ದಾಟದಂತೆ ಪ್ರೀತಿಯ ರೀತಿಯಿರಲಿ. ಅತಿಗೆ ಮಿತಿಯಿರಲಿ ಎಂದಿತು.
ಈಗಾಗಲೇ ಹೂ ಅರಳುವ ದನಿಯಲ್ಲಿ ‘ಐಲವ್ಯೂ’ ಹೇಳಿದ್ದು ನೆನಪಿಗೆ ಬಂತು.
ನೀನಿನ್ನು ನನ್ನವಳೆಂಬ ಭಾವ ನೆನಪಾಗಿ ಸಂತಸ ಉಲ್ಲಾಸ ಉಕ್ಕಿ ಹರಿಯಿತು. ನನ್ನಾಸೆ ನಿನ್ನಾಸೆ ಒಂದಾದ ಆ ಗಳಿಗೆ ಬಳ್ಳಿಯ ಹೂಗಳಂತೆ ಗಾಳಿಯಲ್ಲಿ ಕುಣಿಯುತ್ತಿದ್ದೆವು. ಅದೇ ಕ್ಷಣದಲ್ಲಿ ನಿನ್ನತ್ತ ಹೊರಳಿತು ಕಣ್ಣು. ನಾಚಿಕೆಯಲ್ಲಿ ಕೆಂಪಾಗಿದ್ದೆ. ಸಾಗರದೊಳಗಿನ ಮುತ್ತಿನಂತೆ ಹೊಳೆಯುತ್ತಿದ್ದೆ. ಕಾಡಿಗೆ ಕಣ್ಣು ನನ್ನ ಸ್ಥಿತಿ ನೋಡಿ ನಗುತ್ತಿತ್ತು. ಕಬ್ಬಿನ ಸವಿಯನು ಇನ್ನೂ ಇನ್ನೂ ಸವಿಯಬೇಕೆನ್ನುವ ಕರಡಿಯನ್ನು ಆರಂಭದಲ್ಲೇ ಗದ್ದೆಯಿಂದ ಓಡಿಸಿದಂತಾಗಿತ್ತು ನನ್ನ ಸ್ಥಿತಿ.
ಉದ್ಯೋಗಕ್ಕೆ ಹಲವೆಡೆ ತಿರುಗಿದರೂ ಸಿಗದೇ ಹೋದಾಗ ನಿರಾಶಾನಾಗಿ ಬಿಟ್ಟಿದ್ದೆ. ಗೊತ್ತಿದ್ದ ಅಲ್ಪ ಸ್ವಲ್ಪ ಇಂಗ್ಲೀಷ್ ಪಾಠ ಹೇಳಿಕೊಡಲು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ನೇಮಕಗೊಂಡೆ. ಅಷ್ಟಾಗಿಯೂ ಹಣದ ತಾಪತ್ರಯ ಕಾಡುತ್ತಲೇ ಇತ್ತು. ಹದಗೆಟ್ಟ ಆರ್ಥಿಕ ಪರಿಸ್ಥಿತಿ ನಿರಾಶೆಯನ್ನು ಹೊತ್ತು ತರುತ್ತಿತ್ತು. ಇಂಗ್ಲೀಷ್ ಕಲಿಸಿ ಕೊಡುವುದಕ್ಕೆ ದೊರೆಯುತ್ತಿದ್ದುದು ಪುಡಿಗಾಸು ಮಾತ್ರ ಆದರೂ ಕಲಿಸುವ ಶ್ರದ್ಧೆಯಲ್ಲಿ ಒಂದಿನಿತೂ ವ್ಯತ್ಯಾಸ ಮಾಡಲಿಲ್ಲ ಎಂಬುದು ನಿನಗೂ ಗೊತ್ತು. ಇಂಗ್ಲೀಷಿನಲ್ಲಿ ಆಸಕ್ತಿಯಿರುವುದನ್ನು ಕಂಡು ಬಿಡಿಗಾಸು ತೆಗೆದುಕೊಳ್ಳದೇ ನಿನ್ನ ಹಿತೈಷಿಗಳಲ್ಲೊಬ್ಬರಿಗೆ ಹೇಳಿ ಚೆನ್ನಾಗಿ ತರಬೇತಿ ನೀಡಿಸಿದೆ. ಇದೇ ಸಮಯದಲ್ಲಿ ಸರಕಾರದಿಂದ ಪ್ರಾರಂಭವಾದ ಹೊಸ ಇಂಗ್ಲೀಷ್ ಮಾಧ್ಯಮದ ಶಾಲೆಗೆ ಶಿಕ್ಷಕನಾಗಿ ಆಯ್ಕೆಯಾಗುವಲ್ಲಿ ಅನುಕೂಲವಾಯಿತು. ನುರಿತ ಅನುಭವಿ ಶಿಕ್ಷಕರ ತಿದ್ದಿ ತೀಡುವಿಕೆಯಲ್ಲಿ ಮತ್ತಷ್ಟು ಪರಿಣತಿಯನ್ನು ಗಳಿಸಿದೆ. ಬದುಕಿನ ಸಂಪಾದನೆಗೆ ಹಾದಿಯಾಯಿತು. ತುಸು ನೆಮ್ಮದಿಯನ್ನು ಉಂಟು ಮಾಡಿತು.
ನಮ್ಮೂರಿಂದ ಬಹುದೂರವಿರುವ ಬೆಂಗಳೂರಿನಲ್ಲಿ ನೀನಿಲ್ಲದೇ ಯಾವುದರಲ್ಲೂ ಸಂತೋಷ ಕಾಣುತ್ತಿಲ್ಲ. ನೆಮ್ಮದಿ ಮಾಯವಾಗಿ ಬಿಟ್ಟಿದೆ. ಮೈಯಲ್ಲಿ ಮನೆ ಮಾಡಿಕೊಂಡಿರುವ ಪ್ರೀತಿಯ ಕಾಯಿಲೆಗೆ ವಿರಹದ ಸಂಕಟ. ಪದೇ ಪದೇ ಎಲ್ಲ ಹುಡುಗಿಯರಲ್ಲೂ ನಿನ್ನದೇ ಹುಡುಕಾಟ. ಇದರಿಂದ ಮನಸ್ಸಿನ ತಾಕಲಾಟ ಮಿತಿಮೀರುತ್ತಿದೆ. ನಿದ್ರಾ ರಾಣಿ ಸನಿಹ ಸುಳಿಯುತ್ತಿಲ್ಲ. ಆದರೆ ನೀ ಬಳಿ ಸುಳಿದಂತೆ ನೂರೆಂಟು ಆಲೋಚನೆಗಳು ಒಂದರ ಹಿಂದೊಂದರಂತೆ ಸಮುದ್ರದ ಅಲೆಯಂತೆ ಅಪ್ಪಳಿಸುತ್ತಿವೆ.
ಕಡು ನೇರಳೆ ಬಣ್ಣದ ರವಿಕೆಗೆ ಅಚ್ಚ ಬಿಳುಪಿನ ಸೀರೆಯುಟ್ಟು ಕಂಗೊಳಿಸುತ್ತಿದ್ದ ನಿನ್ನನ್ನು ಕನಸಿನಲ್ಲಿ ಕಂಡೆ. ನೀನಿರುವಲ್ಲಿಗೆ ಹಕ್ಕಿಯಂತೆ ಹಾರಿ ಬರಬೇಕೆಂದೆನಿಸಿತು. ಬದುಕಿನಲ್ಲಿ ನಾ ದಿಕ್ಕಿಲ್ಲದೇ ಅಲೆವಾಗ ಕೈ ಹಿಡಿದವಳು ನೀನು. ಈಗ ಜೀವನ ಪೂರ್ತಿ ನನ್ನ ಕೈ ಹಿಡಿಯಲು ನಿನ್ನಪ್ಪನ್ನನ್ನು ಒಪ್ಪಿಸಿರುವೆ.
ಮೆಚ್ಚಿದ ನಿನ್ನೊಂದಿಗೆ ಸಖ್ಯದಿ ಮಧುರ ಪ್ರಣಯದ ಪಯಣ ಶುರು ಮಾಡುವ ಸಮಯವಿದು. ಪ್ರತಿ ರಾತ್ರಿಯಲಿ ಮಾವು ಕಿತ್ತಳೆ ಹಣ್ಣಿನ ಘಮಲದಲಿ ಮಂದ ಬೆಳಕಿನಲಿ ಮಲ್ಲಿಗೆ ಹಾಸಿಗೆಯಲಿ ನೀ ಹೂವಾಗುವ ನಾ ದುಂಬಿಯಾಗುವ ಆಟವಾಡುವಾ. ಪ್ರಣಯದ ಪರದೆಯನ್ನು ಮೆಲ್ಲ ಮೆಲ್ಲನೇ ಓರೆ ಮಾಡಿ ನೋಡುವಾ. ಶೃಂಗಾರ ಋತು ಸಂಭ್ರಮವನ್ನು ಜೀವನದುದ್ದಕ್ಕೂ ಸವಿಯುವಾ ಬೇಗ ಬಂದು ಬಿಡು ಗೀತಾ
ನಿನ್ನನ್ನೇ ಎದುರು ನೋಡುತ್ತಿರುವ
ನಿನ್ನವನಾದ ಸಂಜು
ಜಯಶ್ರೀ.ಜೆ. ಅಬ್ಬಿಗೇರಿ