ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ ಅವನ ಕವಿತೆ-
‘ಆತ್ಮಸಾಕ್ಷಿಗೆ ಯಾವ ಧರ್ಮ?’
ಮಡಿಲು ತುಂಬಿದ
‘ಅನಾಥ’ ಮಗುವಿನ ಕಂಗಳಲ್ಲಿ
ರಾಶಿ ರಾಶಿ ಮುಗ್ಧತೆ
ಹಾಲ್ಗಲ್ಲದ ನಗುವಲ್ಲಿ
ತಮ ಸೀಳೋ ಬೆಳದಿಂಗಳು
ಕಿರಿಗಾತ್ರದ ಹಿರಿಮನಸಿನ ವಿಶ್ವಮಾನವ!!
ಜನನ ಪ್ರಮಾಣ ಪತ್ರವೂ ಸಿದ್ಧ
ಅವಳೇ ತಾಯಿ, ಗಂಡನೇ ತಂದೆ
ಅವರದೇ ಜಾತಿ-ಧರ್ಮ!
ಜತನವಾಗಿ ಎತ್ತಿಟ್ಟಿದ್ದಾಳೆ
ಸಂಬಂಧಗಳಿಗಿಂತ ದಾಖಲೆಗಳಿಗೆ
ಬೆಲೆ ಜಾಸ್ತಿ ಎಂಬ ಸತ್ಯಕ್ಕೆ
ತಲೆಬಾಗಿ….
ಆತ್ಮಸಾಕ್ಷಿಗೆ ಯಾವ ಧರ್ಮ?
ಕಂದನ ಜನ್ಮಧಾತನದೊಂದು ಧರ್ಮ
ಹೆತ್ತವಳದೋ ಇನ್ನೊಂದು ಧರ್ಮ
ಪೊರೆದವಳದೋ ಮಗದೊಂದು ಧರ್ಮ
ಪ್ರಪಂಚವರಿಯದ ಬೆತ್ತಲೆ ಕಂದನಿಗೆ
ಯಾವ ಧರ್ಮದ ಅಂಗಿ ತೊಡಿಸಲಿ?
ಪ್ರೇಮಕ್ಕೆ ಕಾಮಕ್ಕೆ ಇಲ್ಲದ ಧರ್ಮ
ಕವಚದಂತೆ ದೇಹಕ್ಕೆ ಅಂಟುವ ಕರ್ಮ
ಎದೆಹಾಲಿಗೆ ಕೈತುತ್ತಿಗೆ
ಯಾವ ಧರ್ಮದ ಹೆಸರಿಡಲಿ?
ಇದೀಗ ಜಾತಿ- ಧರ್ಮದ ಕಿರುಪರಿಧಿಯಿಂದ ಹೊರಬಂದು
ಸರ್ವಧರ್ಮಗಳ ಜೊತೆಯಾಗಿ ಬೆರೆಸಿ
ಸೋಸಿದ ಸತ್ ಸಾರವನು ಕುಡಿಸಿ
ಸೌಹಾರ್ದತೆಯ ತೊಟ್ಟಿಲಲ್ಲಿ ತೂಗಿ ತೂಗಿ
ಬಿಟ್ಟು ಬಿಟ್ಟಿದ್ದಾಳೆ ಮನುಜ ಕುಲದೊಳಗೆ!
ಮಾನವ ಧರ್ಮದೆಡೆಗೆ ದಾರಿ ತೋರಿಸಿ
ಜಾತಿ-ಧರ್ಮದ ಉಡುಪು ತೊಡಿಸದೆ ಬೆತ್ತಲಾಗಿಸಿ…
ಲೀಲಾಕುಮಾರಿ ತೊಡಿಕಾನ
ಎಲ್ಲರಿಗಿರುವುದೊಂದೇ ಮಾನವಧರ್ಮ
ಅದನರಿತು ನಡೆದರೆ ಎಲ್ಲರ ಬದುಕೂ ಸುಸ್ಥಿರ