‘ಧರ್ಮ ಮತ್ತು ದೇವರು’-ನಾಗರತ್ನ ಎಚ್ ಗಂಗಾವತಿ ಅವರ ವಿಶೇಷ ಲೇಖನ

ಧರ್ಮ ಮತ್ತು ದೇವರು ಎನ್ನುವಂತಹ ಪದಗಳು ತುಂಬಾ ಚಿಂತನಾಶೀಲವಾದದ್ದು. ಅಷ್ಟೇ ಅಲ್ಲದೆ ದೇವರು ಪರೋಕ್ಷವಾಗಿ ಕಾಣದಿದ್ದರೂ ಧರ್ಮದ ಹಾದಿಯಲ್ಲಿ ನಡೆದರೆ ಸಕಲ ಕೆಲಸದಲ್ಲೂ ಕೂಡ ಯಶಸ್ಸು ಸಿಗುತ್ತದೆ ಎನ್ನುವ ಅಪಾರ ನಂಬಿಕೆ.
ಕೆಲವರು ದೇವರು ಇಲ್ಲ ಎನ್ನುವ ಚಿಂತನೆಯಲ್ಲಿ ನಡೆಯುವರು. ಇನ್ನು ಕೆಲವರು ದೇವರು ಇದ್ದಾನೆ ಎನ್ನುವರು. ಹಾಗೆಯೇ ಮಾನವನು ನಿತ್ಯ ಬದುಕಿನಲ್ಲಿ ಪ್ರತಿಯೊಂದು ಕೆಲಸದಲ್ಲಿ ತನ್ನದೇ ಆದ ಆಲೋಚನೆಗಳಲ್ಲಿ ದೇವರು ಮತ್ತು ಧರ್ಮವನ್ನು ಕಾಣುತ್ತಾ ಸಾಗುತ್ತಾನೆ.
ಮನುಷ್ಯನು ಸಂಘ ಜೀವಿಯಾಗಿದ್ದು ಎಲ್ಲರೊಟ್ಟಿಗೆ ಹೊಂದಿಕೊಂಡು ಹೋಗುವುದು, ಜೀವನದ ಸಹಜ ಧರ್ಮವಾಗಿದೆ. ಇಂದಿನ ಯಾಂತ್ರಿಕ ಬದುಕಿನಲ್ಲಿ ಸಂಬಂಧಗಳಲ್ಲಿ ಆತ್ಮೀಯತೆ, ಭಾಂಧವ್ಯ, ಪ್ರೀತಿ, ವಾತ್ಸಲ್ಯಗಳು ಕೇವಲ ಕ್ಷಣಿಕವಾಗಿ ಉಳಿದಿವೆ.
ಇತ್ತೀಚಿನ ವರ್ಷಗಳಲ್ಲಿ ಎಲ್ಲವೂ ಮರೆಯಾಗಿ ಸಾಗಿವೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬರ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ರೂಡಿಸಿಕೊಂಡು ಎಲ್ಲರೊಟ್ಟಿಗೆ ಸಂತೋಷದಿಂದ ಹೋದಲ್ಲಿ ಜೀವನ ತುಂಬಾ ಸುಂದರವಾಗಿರುತ್ತದೆ ಎಂಬುದು ಕೇವಲ ಮಾತು ಮತ್ತು ಬರಹಗಳಲ್ಲಿ ಉಳಿದಿದೆ. ಕಾರ್ಯಗತವಾಗುತ್ತಿಲ್ಲ.
ಉದಾಹರಣೆಗೆ ಒಂದು ಕುಟುಂಬದಲ್ಲಿ ತಂದೆ ಮತ್ತು ತಾಯಿ ಬಂಗಾರದ ಶಿಖರವಿದ್ದಂತೆ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರು ಕೂಡ ಅವರದೇ ಆದ ಆಸೆ-ಆಕಾಂಕ್ಷೆಗಳ ನಡುವೆ ಜೀವನ ಸಾಗಿಸುವುದರಲ್ಲಿ ತಂದೆ-ತಾಯಿಗಳ ಸೇವೆಯನ್ನೇ ಮರೆತುಬಿಟ್ಟಿದ್ದಾರೆ. ತಂದೆ ಒಂದು ಸಂಸಾರದ ಜವಾಬ್ದಾರಿಯನ್ನು ಹೊತ್ತು ಮನೆಯಲ್ಲಿ ತುಂಬಾ ಆತ್ಮೀಯವಾಗಿ ಹಾಗೂ ಪ್ರೀತಿಯಿಂದ ಮನೆಯವರಿಗೆ ಏನೂ ತೊಂದರೆ ಆಗದಂತೆ ತುಂಬಾ ಜವಾಬ್ದಾರಿಯಿಂದ ಮಕ್ಕಳ ಕನಸನ್ನ ನನಸು ಮಾಡುವ ಆಸೆಗಳನ್ನು ಹೊಂದಿರುತ್ತಾನೆ. ಅದೇ ರೀತಿ ತಾಯಿಯೂ ಕೂಡ ತನ್ನ ಎಲ್ಲಾ ಕೆಲಸ ಒತ್ತಡದ ನಡುವೆ ಮಕ್ಕಳ ಲಾಲನೆ-ಪಾಲನೆ, ಪೋಷಣೆ ಮತ್ತು ಅವರ ಯಶಸ್ಸನ್ನು ಕಂಡು ಸಂತೋಷ ಪಡುತ್ತಾಳೆ.
ಇಂತಹ ಒಂದು ಕುಟುಂಬದಲ್ಲಿ ಇಬ್ಬರು ಅಣ್ಣತಮ್ಮಂದಿರು ಇರುತ್ತಾರೆ. ಅವರು ಉತ್ತಮ ಸೇವೆಯಲ್ಲಿ ಇರುತ್ತಾನೆ. ಹಿರಿಯವನು ಸಂಜಯ್ ಮತ್ತು ಕಿರಿಯವನ್ನು ಸತೀಶ್. ಹಿರಿಯ ಮಗನು ಎಲ್ಲರನ್ನ ಗೌರವದಿಂದ ಕಾಣುವುದು ಮತ್ತು ಚಿಕ್ಕ ಪುಟ್ಟ ಸಹಾಯಗಳನ್ನು ಮಾಡುವಂತಹ ಗುಣವನ್ನು ಹೊಂದಿರುತ್ತಾನೆ. ಆದರೆ ಚಿಕ್ಕವನು ತುಂಬಾ ಅಹಂಕಾರಿಯಾಗಿ ತನ್ನದೇ ಆದ ಕೆಟ್ಟ ಆಲೋಚನೆಗಳಿಂದ ಕೆಟ್ಟ ಅಭ್ಯಾಸವನ್ನು ಬೆಳಿಸಿಕೊಂಡು ಅನಾರೋಗ್ಯದಿಂದ ಬಳಲುತ್ತಾ ಇರುತ್ತಾನೆ. ಆಗ ತಂದೆ ತಾಯಿಗಳು ಅವನಿಗೆ ಚಿಕಿತ್ಸೆಯನ್ನು ಮಾಡಿಸಿ, ಅವನ ಆರೋಗ್ಯ ಸರಿಯಾಗುವಂತೆ ಪ್ರಯತ್ನ ಮಾಡುತ್ತಾರೆ.
ಪ್ರತಿಯೊಬ್ಬರು ಸಣ್ಣ ಪುಟ್ಟ ಸಹಾಯವನ್ನು, ದಾನ ಧರ್ಮಗಳನ್ನು ಮಾಡುವುದರಿಂದ ಬದುಕಿನ ಜಂಜಾಟದಲ್ಲಿ ಯಾವುದೇ ತೊಂದರೆಗಳು ಆಗದಂತೆ ದೇವರು ಪರೋಕ್ಷವಾಗಿ ನಮ್ಮನ್ನು ಸನ್ಮಾರ್ಗದ ಹಾದಿಯಲ್ಲಿ ನಡೆಸಿದಾಗ ಧರ್ಮವು ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆ ಇದೆ. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಪರಮಾತ್ಮ ನೆಲೆಸಿರುತ್ತಾನೆ ಎನ್ನುವ ಭರವಸೆ ಇದೆ.
ಪ್ರತಿಯೊಬ್ಬರಿಗೂ ಸಣ್ಣ ಪುಟ್ಟ ಸಹಾಯವನ್ನು ಮಾಡುವ ಸೇವೆಯನ್ನು ಹೊಂದುವುದು ಒಂದು ಉತ್ತಮ ಹವ್ಯಾಸವಾಗಿದೆ. ಹಾಗೆಯೇ ನಾವು ಕಲ್ಪಿಸಿಕೊಳ್ಳುವುದು ಉತ್ತಮ. ದೇವರೊಂದಿಗೆ ನಿವೇದನೆ ಮಾಡಬೇಕಾದರೆ ಅದಕ್ಕೊಂದು ವಾಹಕ ಬೇಕು. ಆ ವಾಹಕದ ರೂಪವೇ ಕಣ್ಣಿಗೆ ಕಾಣುವ ಮೂರ್ತಿ. ದೇವರು ಅಮೂರ್ತ ಎನ್ನುವ ಕಲ್ಪನೆ ಇದೆ. ಆದರೆ ಧರ್ಮ ಎನ್ನುವುದು ಕಣ್ಣಿಗೆ ಕಾಣುವ ಮೂರ್ತ ರೂಪ. ನಮ್ಮ ಸುತ್ತಲಿನ ಎಲ್ಲರನ್ನೂ ಪ್ರೀತಿ ಗೌರವದಿಂದ ಕಾಣುವುದು ತುಂಬಾ ಉತ್ತಮ ಕಾರ್ಯವಾಗಿದೆ.
ಧರ್ಮ ಮತ್ತು ದೇವರ ಬಗ್ಗೆ ವಸ್ತುನಿಷ್ಠವಾದ ಚರ್ಚೆಯನ್ನು ೧೨ನೇ ಶತಮಾನದಲ್ಲಿನ ಶರಣರು ಮಾಡಿದ್ದರು. ಇದನ್ನು ನಾವು ‘ಕ್ರಾಂತಿಕಾರಿ ಯುಗ’ ಎನ್ನುತ್ತೇವೆ. ವಚನ ಚಳುವಳಿ ಮೂಲಕ ಉತ್ತಮ ಸಂಸ್ಕೃತಿ ಬೆಳೆಸಲು ಪ್ರಯತ್ನಿಸಿದರು. ವಚನ ಚಳುವಳಿಯು ಧರ್ಮದ ವಿಶೇಷತೆಯನ್ನು ತಿಳಿಸುತ್ತದೆ. ದಯವೇ ಧರ್ಮದ ಮೂಲ ಎಂದು ಶರಣರು ನುಡಿದ್ದಿದ್ದಾರೆ. ಅಂತೆಯೇ ‘ಧರ್ಮೋ ರಕ್ಷತಿ ರಕ್ಷಿತಃ’ ಅಂದರೆ ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವು ರಕ್ಷಿಸುತ್ತದೆ ಎನ್ನುವ ಒಂದು ನಾನ್ನುಡಿ ನಮಗೆಲ್ಲರಿಗೂ ತಿಳಿದಿದೆ. ಹಾಗಾಗಿ ಧರ್ಮ ಮತ್ತು ದೇವರು ಒಂದು ನಾಣ್ಯದ ಎರಡು ಮುಖಗಳು.

——————————————————————

Leave a Reply

Back To Top