ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಹಾರಿಹೋಗುವ ಹಕ್ಕಿ
ಹಾರಿಹೋಗುವ ಹಕ್ಕಿ ನೀನು
ಗೂಡನ್ನೇಕೆ ಕಟ್ಟಿದೆ
ಹಾರಿ ಹೋಗುವ ಮೊದಲು
ಮನದ ಮೂಲೆಯಲ್ಲಿ
ಭಾವನೆಗಳನ್ನೇಕೆ ಬಿತ್ತಿದೆ
ನೂರು ಭಾವ ನೂರು ನೋವ
ಮನದಲ್ಲೇ ಉಳಿಸಿ ಬೆಳೆಸಿದೆ
ಮನದ ಮುಗಿಲತುಂಬ ಹಾರಿ
ಒಲವ ನಗೆಯ ಬೀರಿದೆ
ಕಣ್ಣ ತುಂಬ ಬಣ್ಣ ಬಣ್ಣದ
ಕನಸುಗಳನ್ನು ತುಂಬಿದೆ
ಎದೆಯ ಬಡಿತದೊಳಗೆ
ಬೆರೆತು ಹೋಗಿ
ಉಸಿರೊಳಗಿನ ಉಸಿರಾಗಿ
ಉಳಿದು ನಲಿದು
ಎತ್ತ ಹಾರಿಹೋದೆ
ಚಿತ್ತದೊಳಗೆ ಚಿಂತೆತುಂಬಿ
ಕಂಬನಿಯ ಮಿಡಿಡಿಸಿದೆ
ಮೌನದಲ್ಲೇ ನೂರುಮಾತ
ನನ್ನೊಳಗೆ ನುಡಿಸಿದೆ
ಕಾಡುವ ಯಾವುದೋ ಭಾವ
ಮನದಿ ಹಾಗೆಯೇ ಉಳಿಸಿದೆ
ಖಾಲಿ ಖಾಲಿ ಗೂಡನ್ನುಳಿಸಿ
ಏತಕೆ ದೂರ ಹಾರಿಹೋದೆ
ಮನದ ತುಂಬ ನೋವ ತುಂಬಿ
ಶೂನ್ಯ ಭಾವವ ಉಳಿಸಿಹೋದೆ
ಮನದೊಳಗಿನ ಕನಸುಗಳ
ಚೆಲ್ಲಾಪಿಲ್ಲಿಗೊಳಿಸಿ ದೂರವಾದೆ
ಮೂಕ ಮುಗ್ಧ ಮನಸನು
ಸುಮ್ಮನೆ ಘಾಸಿಗೊಳಿಸಿದೆ
ನಾಗರಾಜ ಜಿ. ಎನ್. ಬಾಡ