ಓಡುವುದು ದೈಹಿಕ ವ್ಯಾಯಾಮ ಕ್ರಿಯೆಗಳಲ್ಲಿ ಒಂದು. ನಾವೆಲ್ಲಾ ಸಾಮಾನ್ಯವಾಗಿ ಬಳಸುವ ಓಡಾಡುವುದು ಎಂಬ ಪದದಲ್ಲಿ ಓಡುವುದು ಆಡುವ ಒಂದು ಕ್ರಿಯೆ ಎಂಬಂತೆ ಭಾಸವಾಗುತ್ತದೆ ಅಲ್ಲವೇ. ಚಿಕ್ಕ ಮಕ್ಕಳಂತೂ ಕುಳಿತಲ್ಲಿ ಕುಳಿತುಕೊಳ್ಳುವುದೇ ಇಲ್ಲ… ಓಡಾಡುತ್ತಲೇ ಇರುತ್ತಾರೆ. ಆದ್ದರಿಂದಲೇ ನಮ್ಮ ಜನಪದರು

ಕೂಸು ಇದ್ದ ಮನಿಗೆ ಬೀಸಣಿಕಿ ಯಾತಕ
ಕೂಸು ಕಂದವ್ವ ಒಳ ಹೊರಗ/ಆಡಿದರ
 ಬೀಸಣಿಕಿ ಗಾಳಿ ಸುಲಿದಾವು

 ಎಂದು ಮಕ್ಕಳ ಓಡಾಟವನ್ನು ಬಣ್ಣಿಸಿ ಪದ ಕಟ್ಟಿ ಹಾಡಿದ್ದಾರೆ.

 ಬದುಕಿನ ಓಡಾಟ ಬೇರೆ… ದೈನಂದಿನ ಬದುಕಿಗೆ ಅವಶ್ಯಕವಾದ ಆಹಾರ,ಬಟ್ಟೆಬರೆ ಮತ್ತಿತರ ಸೌಲಭ್ಯಗಳನ್ನು ಪೂರೈಸಲು ಅವಶ್ಯಕವಾದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಮಾಡುವ ದುಡಿಮೆಯ, ಶ್ರಮದ ಕೆಲಸಗಳ ಪ್ರತಿಫಲವಾಗಿ ದೊರೆಯುವ ಕೂಲಿ, ಸಂಬಳ, ಪಗಾರ ಎಂದೆಲ್ಲಾ ಕರೆಸಿಕೊಳ್ಳುವ ಹಣ ಗಳಿಸುವುದಕ್ಕೂ ಓಡಾಟ ಎಂದೆ ಹೆಸರು.

 ಆದರೆ ಇಲ್ಲಿ ಹೇಳುವ ಓಡುವಿಕೆ ಸಂಪೂರ್ಣವಾಗಿ ಆಟಕ್ಕೆ ಸೇರಿದ್ದು.
 ಬೇರೆ ಯಾವುದೇ ಕ್ರೀಡೆ ಇರಲಿ ತರಬೇತಿ ನೀಡುವವರು ಮೊದಲು ಕ್ರೀಡಾಪಟುಗಳನ್ನು ಮೈದಾನದಲ್ಲಿ ಓಡಿಸುತ್ತಾರೆ… ನಂತರ ಕೆಲ ಹಗುರ ವ್ಯಾಯಾಮಗಳನ್ನು ಮಾಡಿಸಿ ತರಬೇತಿಯನ್ನು ನೀಡುತ್ತಾರೆ. ಕಾರಣ ಓಡುವಿಕೆಯಿಂದ ದೈಹಿಕ ಶಕ್ತಿ ಸಾಮರ್ಥ್ಯಗಳು ಹೆಚ್ಚುತ್ತವೆ, ಓಡುವಾಗ ಉಂಟಾಗುವ ಉಸಿರಾಟದ ಏರಿಳಿತಗಳಿಂದಾಗಿ ಫುಪ್ಪುಸಗಳಲ್ಲಿ ಹೆಚ್ಚಿನ ಉಸಿರಾಟ ಪ್ರಕ್ರಿಯೆಗೆ ದಾರಿಯಾಗಿ ಅಪಾರ ಆಮ್ಲಜನಕವನ್ನು ಪೂರೈಸುತ್ತದೆ, ಅಡೆತಡೆಗಳನ್ನು ನಿವಾರಿಸುವ ಮೂಲಕ ದೇಹದಲ್ಲಿ ಹೆಚ್ಚಿನ ಶಕ್ತಿ ಸಂಚಯವಾಗುತ್ತದೆ.

 ಓಡುವಿಕೆಯಿಂದ ಸ್ನಾಯುಗಳು,ಮಾಂಸಖಂಡಗಳು  ಬಲಿಷ್ಠವಾಗುತ್ತವೆ. ದೇಹಕ್ಕೆ ಹೆಚ್ಚಿನ ದೃಢತೆ, ಕೈ ಕಾಲುಗಳಲ್ಲಿ ಬಲ ಉಂಟಾಗುತ್ತದೆ. ಓಡುವಿಕೆಯ ಮೂಲಕ ರಕ್ತದೊತ್ತಡ ಮತ್ತು ರೋಗಗಳನ್ನು ದೂರವಿಡಬಹುದು.

 ಓಡುವಿಕೆಯಿಂದ ವ್ಯಕ್ತಿಯ ದೈಹಿಕ ಶಕ್ತಿಯು ಹೆಚ್ಚಾಗುವುದು. ಇದು ರೋಗ ನಿರೋಧಕ ಶಕ್ತಿಯು ಉತ್ಪನ್ನವಾಗಲು ಕಾರಣವಾಗುತ್ತದೆ. ಸಣ್ಣ ಪುಟ್ಟ ಖಾಯಿಲೆಗಳನ್ನು ತಡೆದುಕೊಳ್ಳುವ ಮತ್ತು ದೊಡ್ಡ ದೊಡ್ಡ ಕಾಯಿಲೆಗಳನ್ನು ಎದುರಿಸುವ  ಸಾಮರ್ಥ್ಯವನ್ನು ರೋಗನಿರೋಧಕ ಶಕ್ತಿಯು  ನೀಡುತ್ತದೆ.

ಓಡುವಾಗ ಹೆಚ್ಚಿನ ಪ್ರಮಾಣದಲ್ಲಿ ದೇಹದ ಶಕ್ತಿಯು ವ್ಯಯವಾಗುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಬೊಜ್ಜು ಕರಗುತ್ತದೆ, ಪರಿಣಾಮವಾಗಿ ರಕ್ತ ಪರಿಚಲನೆಯು ಸರಾಗವಾಗುತ್ತದೆ. ದೇಹದಲ್ಲಿ ಬೊಜ್ಜು ಸಂಗ್ರಹವಾಗದೆ ಹೋಗುವ ಕಾರಣ  ರಕ್ತದೊತ್ತಡ ಮತ್ತು ಮಧುಮೇಹಗಳು ನಿಯಂತ್ರಿಸಲ್ಪಡುತ್ತವೆ. ಒಳ್ಳೆಯ ದೈಹಿಕ ಆರೋಗ್ಯವು ಉತ್ತಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಂಡು ಸಂತೃಪ್ತಿಗೆ ಕಾರಣವಾಗುತ್ತದೆ.
 ಅದಕ್ಕೆ ಹೇಳುವುದು ಅ ಸೌಂಡ್ ಮೈಂಡ್ ಇನ್ ಎ ಸೌಂಡ್ ಬಾಡಿ ಎಂದು… ಅಲ್ಲವೇ?

 ಓಡುವಿಕೆ ಮನುಷ್ಯನಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಎಂತಹದ್ದೇ ಪರಿಸ್ಥಿತಿಯನ್ನು, ಸವಾಲುಗಳನ್ನು ಎದುರಿಸುವ ಹುಮ್ಮಸ್ಸು ಮತ್ತು ಸಾಮರ್ಥ್ಯಗಳು ಮನುಷ್ಯನಲ್ಲಿ ಧನಾತ್ಮಕತೆಯನ್ನು ಉಂಟು ಮಾಡುತ್ತದೆ. ಜೊತೆ ಜೊತೆಗೆ ಒಳ್ಳೆಯ ಕ್ರೀಡಾ ಮನೋಭಾವ ಸ್ಪರ್ಧಾತ್ಮಕತೆ ಮತ್ತು ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸುವ, ಸೋಲನ್ನು ಒಪ್ಪಿಕೊಳ್ಳುವ ಮತ್ತು ಇಂದಿನ ಸೋಲನ್ನು ನಾಳೆಯ ಗೆಲುವಿಗೆ ಮೆಟ್ಟಿಲನ್ನಾಗಿ ಪರಿವರ್ತಿಸುವ ಸ್ಪರ್ಧಾ ಮನೋಭಾವ, ನಿರಂತರ ಪರಿಶ್ರಮ ಮತ್ತು ದೃಢತೆಗಳನ್ನು ಓಡುವ ಕ್ರೀಡಾಳುವಿನಲ್ಲಿ ಉಂಟು ಮಾಡುತ್ತದೆ.

ಒಂದು ಅಧ್ಯಯನದ ಪ್ರಕಾರ ಎ ಡಿ ಎಚ್ ಡಿ, ಬುದ್ಧಿಮಾಂದ್ಯತೆ ಮುಂತಾದ ತೊಂದರೆಗಳಿಂದ ಬಳಲುತ್ತಿರುವ ಮಕ್ಕಳಲ್ಲಿರುವ ವಿಪರೀತ ಚಟುವಟಿಕೆಯ ಸಾಮರ್ಥ್ಯವನ್ನು ಸರಿಯಾದ ದಿಕ್ಕಿನಲ್ಲಿ ಹರಿಸಿದಾಗ ಅವರು ಒಳ್ಳೆಯ ಕ್ರೀಡಾಪಟುಗಳಾಗಬಲ್ಲರು ಎಂದು ನಿರೂಪಿತವಾಗಿದೆ. ಇತ್ತೀಚೆಗೆ ಪ್ಯಾರಿಸ್ ನಲ್ಲಿ ನಡೆದ ಪ್ಯಾರಾ ಒಲಂಪಿಕ್ 2024 ರಲ್ಲಿ ಭಾರತ ದೇಶದ ವರಂಗಲ್ ಜಿಲ್ಲೆಯ ಕ್ರೀಡಾಪಟು ದೀಪ್ತಿ ಜೀವನಜಿ ಓಟದಲ್ಲಿ ಪದಕ ವಿಜೇತಳಾಗಿರುವುದು ಇದಕ್ಕೆ ಸಾಕ್ಷಿ.
 ಹರಿಯಾಣದ ಮತ್ತೋರ್ವ ಶತಾಯುಷಿ ನೂರಾ ಐದು ವರ್ಷದ ಅಜ್ಜಿ ರಾಮ್ ಬಾಯಿ ಗುಜರಾತ್ ನ ವಡೋದರಾದಲ್ಲಿ ನಡೆದ ರಾಷ್ಟ್ರೀಯ ಮುಕ್ತ ಹಿರಿಯರ ಅಥ್ಲೆಟಿಕ್ ಚಾಂಪಿಯನ್ಶಿಪ್ ನಲ್ಲಿ 100 ಮೀಟರ್ ಓಟವನ್ನು 45.40 ಸೆಕೆಂಡುಗಳಲ್ಲಿ ಪೂರೈಸಿ ಹೊಸ ದಾಖಲೆಯನ್ನು ಬರೆದಿದ್ದು ವಯಸ್ಸು ಕೇವಲ ಸಂಖ್ಯೆಯನ್ನು ಸೂಚಿಸುತ್ತದೆ ಎಂದು ತೋರಿದ್ದಾಳೆ.
 ಹಾಗಾದರೆ ಓಟ ಎಲ್ಲರಿಗೂ ಸೂಕ್ತವೇ? ಎಂದು ಕೇಳಿದರೆ ಉತ್ತರ ಖಂಡಿತವಾಗಿಯೂ ಇಲ್ಲ. ಅವರವರ ದೈಹಿಕ ಸಂರಚನೆ, ಓಡುವ ಕ್ಷಮತೆ, ಮತ್ತು ಮಾನಸಿಕತೆಗಳು ಅತ್ಯವಶ್ಯಕವಾಗಿದ್ದು ತೀರಾ ವಯಸ್ಸಾದವರು, ವಿಪರೀತ ರಕ್ತದೊತ್ತಡ ಹೊಂದಿರುವವರು ನಿಧಾನವಾಗಿ ಓಡ( ಜಾಗಿಂಗ್) ಬಹುದು.
 ಮಧುಮೇಹ ಹೊಂದಿರುವವರು ಸೂಕ್ತವಾದ ಬೂಟುಗಳನ್ನು ಧರಿಸಿ ಓಡಬಹುದು. ಜಗತ್ತಿನ ಯಾವುದೇ ವ್ಯಕ್ತಿಯು ಓಡಬಯಸಿದರೂ ವೈದ್ಯರ ಸಲಹೆ, ನುರಿತ ತರಬೇತುದಾರರ ಮಾರ್ಗದರ್ಶನದಲ್ಲಿ ನೋಡಬಹುದು.
 ಉತ್ತಮ ಆರೋಗ್ಯ, ದೈಹಿಕ ಕ್ಷಮತೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಲು ನೀವು ಓಡಲೇಬೇಕು.


Leave a Reply

Back To Top