ಸಿದ್ದರಾಮ ಹೊನ್ಕಲ್ ಅವರ ಕವಿತೆ-ಈ ಕಣ್ಣುಗಳೇ ಹೀಗೆ…

ಕೆಲವು
ಕಣ್ಣುಗಳು
ಕಣ್ಣಲ್ಲೆ ಮಾತಾಡಿಸಿ
ಕಣ್ಣಿರನ್ನೇ
ಶಾಶ್ವತಗೊಳಿಸುತ್ತವೆ;
ತಾವಾದರೂ ಚೆಂದ
ಇರುತ್ತವೆಯೋ..
ಅದು ಇಲ್ಲ
ಇಡೀ ಬದುಕು
ಕಣ್ಣೀರು ಮಿಡಿಯುತ್ತವೆ…

ಇನ್ನೂ
ಕೆಲವು
ಕಣ್ಣುಗಳು
ಕಾಣದ ಲೋಕದ
ಕಾಮನಬಿಲ್ಲು
ತೋರಿ
ಮರೀಚಿಕೆಯಾಗುತ್ತವೆ

ಕೆಲವು
ಕಣ್ಣುಗಳು
ಆಸೆಯ
ಅಮಲೇರಿಸಿ
ತಮ್ಮ ಸುತ್ತಲೂ..
ಸುತ್ತಲಚ್ಚುತ್ತವೆ…

ಇನ್ನೂ
ಕೆಲವು
ಕಣ್ಣುಗಳಿರುತ್ತವೆ
ನೋಡಿದಾಕ್ಷಣ…
ಕಣ್ಣಿಗೇನೇ ಮುತ್ತಿಕ್ಕಿ
ಕಣ್ಣಲ್ಲೆ ಸ್ಖಲಿಸುವ
ಆಸೆ ಕೆರಳಿಸುತ್ತವೆ..
ಬಯಕೆಯ ಹುಚ್ಚು
ಮನಸ್ಸಿಗೆ..
ನಿಜಕ್ಕೂ
ಹುಚ್ಚೆಬ್ಬಿಸುತ್ತವೆ..‌

ಕೆಲವು
ಕಣ್ಣುಗಳು
ತಾಯ ಮಮತೆ
ತಂಗಿಯ ಬಾಂಧವ್ಯ
ಮಗಳ ವಾತ್ಸಲ್ಯವನ್ನು
ಮೈಮನಕ್ಕೆ ಮುಟ್ಟಿಸಿ
ಕರುಳಬಳ್ಳಿಯಾಗುತ್ತವೆ

ಕೆಲವು ಕಣ್ಣುಗಳು
ಹಾಗಲ್ಲ
ಸಾಂತ್ವನ ನೀಡಿ
ಸಮಾಧಾನ ಮಾಡಿ
ವಿಶ್ರಮಿಸುತ್ತವೆ…

ಬೇರೆಯವರ
ಪಾಡೇನೋ
ನಾನರಿಯೇ!


ಕಣ್ಣುಗಳೇ
ಹೀಗೆ ..‌
ಹೆಣ್ಣಿನ ಮನಸ್ಸಿನ
ಹಾಗೇ …
ಬಣ್ಣ ಬಣ್ಣದೋಕುಳಿ
ಸಿಡಿಸಿ
ಕನಸುಗಳ ಅರಳಿಸಿ
ರೆಪ್ಪೆಯ ಅಡಿಯಲ್ಲಿ
ಮುಚ್ಚಿಕೊಂಡು
ಪ್ರಕೃತಿಯ ಹಾಗೇ
ಮೌನವಾಗುತ್ತವೆ…


Leave a Reply

Back To Top