ಮನೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಆದಾಗ,ಅಪ್ಪ ಅವ್ವನಿಗೆ ಗರಂ ಆಗಿ ಏರು ಧ್ವನಿಯಲ್ಲಿ ಬಯ್ಯುವಾಗ ಹೇಳುವ ಮಾತು;ನಿಮ್ಮವ್ವನಿಗೆ ವಧು ದಕ್ಷಿಣೆ ಕೊಟ್ಟು ಮದುವೆ ಮಾಡಿಕೊಂಡು ಬಂದಿನಿ.ಅವರೇನು ವರದಕ್ಷಿಣೆ ಕೊಟ್ಟಿಲ್ಲ,ನಾನು ತಗೊಂಡಿಲ್ಲ..”ಐದು ದಿನದ ಮದುವೆ ನಡೆದಿತ್ತು”.ಅಂತದರಾಗ ನಿಮ್ಮವ್ವ ನನಗ “ಗುರ್” ಅಂತಾಳ.ಅಂದಾಗ ನನಗ ಕುತೂಹಲ… ಹುಡುಗನಿಗೆ ವರೋಪಚಾರ ಮಾಡಿಲ್ಲೇನು ಅಪ್ಪಾ? ಅಪ್ಪ…ನಮಗ ಉಳಕೊಳ್ಳಾಕ ಊರಾನ ಗುಡಿ ಕೊಟ್ಟಿದ್ದರು,ಬಂಡಿ ಕಟಗೊಂಡ ಬಂದ ನಮ್ಮ ಬಂಧುಬಳಗಕ್ಕ ಊರಿನವರು ಊಟ ಬಡಿಸಿದ್ದರು…ಯಾಕೆಂದರೆ ಈಗಿನ ಹಾಂಗೆ ಒಂದ ದಿನ ಎಂಗೆಜಮ್ಮೆಂಟು, ಫ್ರೀ ವೆಡ್ಡಿಂಗ್ ಶೂಟ್ ,ನಂತರ ಮದುವೆಯಿರಲಿಲ್ಲ.ಬಡವರ ಮದುವೆಯೆಂದರೆ ಊರಿಗೆ ಊರೆ ಸಹಾಯ ಮಾಡುವ ಕಾಲ..ಅಪ್ಪ ಸತ್ತ ಮಕ್ಕಳ ಮದುವೆ ಹೇಗಿರುತ್ತೆ ಅನ್ನೊದು ನಾನು ನಿಮ್ಮವ್ವ ಮದುವೆಯೆ ಉದಾಹರಣೆ. ನಿಮ್ಮವ್ವ ಹಾಗೂ ನಾನು ತಂದೆಯಿಲ್ಲದ ತಬ್ಬಲಿಗಳು.ಒಂದುವರುಷದೊಳಗ ಮದುವೆಯಾಗಬೇಕು.ಯಾರೋ ಸಂಬಂಧ ತಂದಿದ್ದರು,”ಎತ್ತಣ ಮಾಮರ,ಎತ್ತಣ ಕೋಗಿಲೆ”…ಅನ್ನುವಂತೆ
ನಮ್ಮ ಋಣಗಳು ಮೇಳೈಸಿದಂತೆ ಮದುವೆ ಗುರು ಹಿರಿಯರು ನಿಶ್ಚಯಿಸಿದರು. ಮದುವೆಗೆ ಬಂದ ನಾವು ವಧುದಕ್ಷಿಣೆ ಕೊಡುವುದು ಕಡ್ಡಾಯ..ನಮ್ಮ ಕೈಲಾದಷ್ಟು ಶಾಸ್ತ್ರಕ್ಕೆ ವಧುವನ್ನು ನಮ್ಮಂತೆ, ಗಟ್ಟಿಮಾಡುವ ಶಾಸ್ತ್ರದ ಸಮಯದಲ್ಲಿ ಹಿರಿಯರ ಸಮ್ಮುಖದಲ್ಲಿ ಹಣ ನೀಡಿ ತಾಂಬೂಲ ಬದಲಾಯಿಸಿಕೊಂಡು.ಮತ್ತೆ ಊರಿಗೆ ಹೋಗದೆ ಮದುವೆಯ ಎಲ್ಲ ಶುಭ ಕಾರ್ಯಗಳನ್ನು ಮುಗಿಸಿ ಐದನೇ ದಿನ ವಧುವಿನೊಂದಿಗೆ ನಮ್ಮೂರಿಗೆ ಬಂದಿವಿ.ಅಂದಾಗ ಹಿಂದೆ ಮದುಮಗಳಿಗೆ ವಧು ದಕ್ಷಿಣೆ ನೀಡುವ ಪದ್ದತಿಯಿತ್ತೆಂದು ಕೇಳಿದ್ದೆ,ಆದರೆ  ಮನೆಯಲ್ಲಿ ಇಂತಹ ಮದುವೆಯಾಗಿತ್ತೆಂದು ಗೊತ್ತಿರಲಿಲ್ಲ.

ಸಂಪ್ರದಾಯಗಳು,ರೀತಿ ನೀತಿಗಳು ಸಾಮಾನ್ಯವಾಗಿ ಎಲ್ಲರ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತವೆ ಎಂಬುದನ್ನು ಸೂಚಿಸುತ್ತದೆ. ಇಂದು “ವಧು ದಕ್ಷಿಣೆ ” ಎಂಬ ಪದ ” ವರದಕ್ಷಿಣೆ “ಯಾಗಿ ಬದಲಾಗಿದೆ.ವರನ ಕೈಗೆ ನೇರವಾಗಿ ನೀಡದಿದ್ದರೂ,ಅವನಿಗೆ ವಸ್ತು, ಸೈಟು,ಗೋಲ್ಡ್ ಹೀಗೆ ಹಲವಾರು ರೂಪದಲ್ಲಿ ಗಂಡಿನ ಮನೆಯವರ ಆಶೋತ್ತರಗಳನ್ನು ಪೂರೈಸಲು ಹೆಣ್ಣು ಹೆತ್ತವರು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿರುವುದು..ಗೊತ್ತಿರದ ವಿಷಯವೆನಲ್ಲ.ಸಮಾಜದ ದೃಷ್ಟಿ ಕೋನ ಬದಲಾಯಿಸುವ ಕಾರ್ಯ ಯಾರಿಂದ ಆಗಬೇಕು? ಎಂಬ ಪ್ರಶ್ನೆ. ಒಂದು ಮನೆಯಲ್ಲಿ ಹೆಣ್ಣು ಹುಟ್ಟಿತೆಂದರೆ ಖುಷಿ ಪಡುವ ಮನಸ್ಸಿಗಿಂತ ದುಃಖ ಪಡುವ ಸ್ಥಿತಿಗಳೇ ಸಾವಿರಾರು.ಅವಳ ಮದುವೆಯೇ ದೊಡ್ಡ ಸಾಧನೆ   ಚೌಕಟ್ಟು ಬಿಗಿದು, ಅವಳನ್ನು ಇನ್ನೊಂದು ಮನೆಗೆ ಹೋಗುವ ವಸ್ತುವಾಗಿ ಬೆಳೆಸುತ್ತೆವೆ ಹೊರತು,ಅವಳ ಸುಖ ಗಂಡನ ಮನೆಯಲ್ಲಿ ಎಂಬ ಬೀಜ ಮಂತ್ರ ಹೇಳಿ ಹೇಳಿ ಅವಳ ಆಂತರಿಕ ಶಕ್ತಿಯನ್ನು ಕುಗ್ಗಿಸುವ ಕೆಲಸಗಳು ಪರೋಕ್ಷವಾಗಿ ನಡೆಯುತ್ತಿರುತ್ತವೆ.ವರದಕ್ಷಿಣೆ ತೆಗೆದುಕೊಳ್ಳದೆ ಮದುವೆಯಾಗುತ್ತಿನಿ‌ ಅಂದ ಹುಡುಗನಿಗೆ ಅನುಮಾನ ದಿಂದ ನೋಡುವ ಕುಟುಂಬಗಳು ಇವೆ.ಹುಡುಗನಿಗೆ ಏನಾದರೂ ಸಮಸ್ಯೆ ಇರಬೇಕು..!. ಉಚಿತಕ್ಕೆ ಬೆಲೆಯಿಲ್ಲ!. ಡೋನೆಶನ್ ಕೊಟ್ಟರೆ ನೆಮ್ಮದಿ. ಇದೊಂದು ಥರ ವ್ಯಾಪಾರ!. ಒಂದು ಗಂಡಿಗೆ ಅವನ ನೌಕರಿ ಗಮನಿಸಿ ಒಂದ ರೇಟ್ ಫಿಕ್ಸ!.ವಿದ್ಯಾವಂತೆ ಹುಡುಗಿಯಾಗಿದ್ದರೂ ಕೂಡ!
ಇನ್ನೂ ಎಷ್ಟೋ ಹುಡುಗ,ಹುಡುಗಿಗೆ ಮದುವೆ ಮರಿಚೀಕೆ!.ಮದುವೆ ವ್ಯಾಪಾರಿಕರಣ ನಾವೆಲ್ಲ ಒಪ್ಪಲೇ ಬೇಕು!. ಮದುವೆ ಮಾಡಿಸೋ ಆನ್ಲೈನ್ ಬುಕಿಂಗ್ ಸೌಲಭ್ಯ ಎಲ್ಲ ಮೊಬೈಲ್ ಗಳಲ್ಲಿ ಲಭ್ಯ!.ಮದುವೆ ಸ್ವರ್ಗದಲ್ಲಿ ಆಗಿರುತ್ತೆ! ಇಲ್ಲಿ ನೆಪ ಮಾತ್ರ!.

‘ಇದೇನು ಹೊಸ ವಿಷಯವಾ’?.. ಹೆಣ್ಣು ಹೆತ್ತವರು ಮಾಡಲೇಬೇಕಾದ ಕರ್ತವ್ಯ.. ಎಂದು ವ್ಯಂಗ್ಯ ಮಾತಾಡುವ ಜನರಿಗೇನು ಕಮ್ಮಿಯಿಲ್ಲ.ಹೆಣ್ಣು ಸಮಾಜದ ದೃಷ್ಟಿಯಿಂದ ದ್ವಿತೀಯ ದರ್ಜೆಗೆ ಸೇರಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬದುಕುವ ಬಹುತೇಕ ನಾವುಗಳು..” ಹೆಣ್ಣು ಪ್ರಧಾನವಾಗಿ ನೋಡುವುದಂತೂ ದೂರದ ಮಾತು”. ಶಿಕ್ಷಣ ಪಡೆದ ಸಾಕ್ಷರತೆ ಸಾಧಿಸಿದ ಪ್ರಜ್ಞಾವಂತ ಪ್ರಜೆಗಳು ಈಗಲೂ ಮನೆ ಮಹಿಳೆಯರಿಗಷ್ಟೇ ಮೀಸಲು ಎಂಬ ಧೋರಣೆಯಿಂದ ಹೊರಬಂದಿಲ್ಲ.ಸಮಯ ಮೊದಲಿನಂತಿಲ್ಲ, ಎಲ್ಲರೂ ಗಂಡು,ಹೆಣ್ಣು ಎಂಬ ಬೇಧ ಭಾವ ತೋರದೆ ಸಮನಾಗಿ ಕಲಿತು ಉದ್ಯೋಗ ಮಾಡುತ್ತ,ಸ್ವಾವಲಂಬಿಯಾದರೂ, ಮದುವೆಯಾದ ಮೇಲೆ ತಾನು ದುಡಿದ ಸಂಬಳಕ್ಕೂ ಗಂಡನೆದುರು ಕೈಚಾಚುವ ಸ್ಥಿತಿ ಮತ್ತು ಎಷ್ಟೋ ದುಡಿವ ಹೆಣ್ಣು ಮಕ್ಕಳಿಗೆ ತನ್ನ ಖಾತೆಯಲ್ಲಿ ಎಷ್ಟು ಹಣವಿದೆ? ನನ್ನ ಸಂಬಳ ಎಷ್ಟು? ನನ್ನ ಬ್ಯಾಂಕ್ ಖಾತೆ ನಂಬರ್ ಸಹ ಗೊತ್ತಿಲ್ಲವೆಂದರೆ ಆಶ್ಚರ್ಯ ಆಗಬಹುದು!. ಗಂಡನ ಮೇಲೆ ನಂಬಿಕೆ, ನನ್ನೆಲ್ಲ ಜವಾಬ್ದಾರಿ ಗಂಡನದೆ ಹೀಗಿರುವಾಗ ಅದರ ಬಗ್ಗೆ ಹೆಚ್ಚು ತಿಳಿದು ಏನಮಾಡಬೇಕಿದೆ? ನನ್ನ ಖರ್ಚಿಗೆ, ಮನೆಗೆ,ಮಕ್ಕಳಿಗೆ, ಬಂದುಹೋಗುವ ನೆಂಟರಿಗೆ ಎಲ್ಲ ಖರ್ಚು ನಿಭಾಯಿಸುವವರಿದ್ದಾಗ ನನಗ್ಯಾಕೆ ಬೇಕು ಇದೆಲ್ಲ ಎಂದು ಕೈ ಚೆಲ್ಲಿ ಕುಳಿತವರು ನಮ್ಮ ಮುಂದಿದ್ದಾರೆ.ಸತ್ಕರ್ಮಗಳು ಒಳ್ಳೆಯದನ್ನು ಮಾಡುತ್ತವೆ.

ಮದುವೆಯಾಗಲು ಹೆಣ್ಣುಗಳಿಲ್ಲ!. ಮದುವೆಯಾದ ಸಂಬಂಧಗಳು ಬಾಳಿಕೆ ಬರುತ್ತಿಲ್ಲ!,ಹಳ್ಳಿಯಲ್ಲಿ ಹೊಟ್ಟೆ ತುಂಬುವುದಿಲ್ಲ!, ನಗರದಲ್ಲಿ ಬಾಳಲು ತಾಕತ್ತಿಲ್ಲ!,ಉದ್ಯೋಗಕ್ಕೆ ಸ್ಥಳಾವಕಾಶ ಇಲ್ಲ, ಕಲಿತಷ್ಟು ವಿದ್ಯಾರ್ಥಿಗಳು ಜೀವನದ ಪಾದದಲ್ಲಿ ಎಡುವುತ್ತಿರುವುದು,ಅನ್ವಯದ ಪ್ರಭಾವ ನಶಿಸುತ್ತಿರುವುದು ಮೌಲ್ಯವನ್ನು ವಿನಾಶದಂಚಿಗೆ ತಳ್ಳಿದಂತೆ.ಇದೊಂದು ಪ್ರಗತಿಯೋ ಅಥವಾ ವಿಕೃತ ಮನಸ್ಥಿತಿಯೋ?.
ಪ್ರಕೃತಿಯ ಮಡಿಲಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ಮಾನವ ಸರಪಳಿ ಬಲಗೊಳ್ಳಬೇಕಿದೆ.ಅಂದಾಗ ಮಾತ್ರ ಎನೋ ಸಾಧಿಸಿದ ಅನುಭವ!.

ಮನುಷ್ಯ ಸಂಬಂಧಗಳು ಹರಿದು ಹಂಚಿ ಹೋಗದಂತೆ ತಡೆಯಲು ಪ್ರಯತ್ನ ಮಾಡುವುದು ಅನಿವಾರ್ಯ. ವಿಚ್ಛೇದನಗಳು ಸಮಾಜವನ್ನು ಅಭದ್ರ ಸ್ಥಿತಿಗೆ ತಂದುನಿಲ್ಲಿಸಿವೆ.ಹೆಣ್ಣು ನೊಂದು,ಗಂಡು ನೊಂದು ಆತ್ಮಹತ್ಯೆಗೆ ಶರಣಾಗುವುದನ್ನು ಮುಕ್ತಗೊಳಿಸಬೇಕಿದೆ.ಮದುವೆಯಾಗಿ ಒಂದು ದಿನ,ವಾರ,ತಿಂಗಳು ಜೀವನ ಮಾಡದೇ… ದೂರಾಗುವ ಯುವ ಪೀಳಿಗೆ, ಮದುವೆಯ ಮಹತ್ವ ಹಾಗೂ ಅದರ ಹಿಂದಿರುವ ಸಾಮಾಜಿಕ ಕಳಕಳಿಯ ಬಗ್ಗೆ ಕುಟುಂಬ ವ್ಯವಸ್ಥೆಯ ಅರಿವು ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಭಾವಿ ಭವಿಷ್ಯದ ಕಲ್ಪನೆ ಆತಂಕಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಪ್ರಕಟವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.
ಹತ್ತನೆ ತರಗತಿ ಮುಗಿಸುವ ಮೊದಲೇ ತಾಯಿ,ತಂದೆಯರಾದ ಮಕ್ಕಳು ನಮ್ಮ ಮುಂದೆ!.ಅಪ್ರಾಪ್ತ ವಯಸ್ಸಿನ ಮಕ್ಕಳ ಮಾನಸಿಕ ಸ್ಥಿತಿ ಹದಗೆಡಲು ಪರೋಕ್ಷವಾಗಿ ಸಾಮಾಜಿಕ ವ್ಯವಸ್ಥೆ ನಶಿಸಿರುವುದು ಕಾರಣವೆನ್ನಬಹುದು.ಅಂದರೆ ನಮ್ಮಗಳ ಸ್ವಾರ್ಥದ ಲಾಭವೆಂದರೂ ತಪ್ಪಾಗದು.ದೋಷಗಳನ್ನು ಹುಡುಕುವುದು ದೊಡ್ಡ ಕಾಯಕ ಅಲ್ಲ, ಇನ್ನೊಬ್ಬರತ್ತ ಬೆರಳು ಮಾಡುವುದು ದೊಡ್ಡ ಸಾಧನೆಯಲ್ಲ,ನಮ್ಮ ಕೊಡುಗೆ ಎಷ್ಟಿದೆ? ಎಂಬ ಆತ್ಮ ವಿಮರ್ಶೆ ಮಾಡಿಕೊಳ್ಳುವ ಮೂಲಕ ಹೆಜ್ಜೆಗಳನ್ನು ಇಟ್ಟರೆ ? ಅದಕ್ಕೆ ಇಲ್ಲೊ ಮಾದರಿ ಕುಟುಂಬಗಳು ಅಲ್ಪಸ್ವಲ್ಪ ಪ್ರಮಾಣದಲ್ಲಿ ಕಾಣಸಿಗುತ್ತಿರುವುದು,ಮರಳುಗಾಡಿನಲ್ಲಿ ಓಯಾಸಿಸ್ ಸಿಕ್ಕಂತೆ!. ಅದನ್ನು ಪರಾಮರ್ಶೆಗೆ ಒಳಪಡಿಸಿ ಮುಂದೊಂದು ದಿನ ಕೇವಲ ಉಹಿಸಿಕೊಳ್ಳುವ ಸ್ಥಿತಿಗೆ ಬರುವಂತೆ ಮಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ!.

ಒಟ್ಟಾರೆಯಾಗಿ ಹೇಳುವುದಾದರೆ, ಜನಜೀವನ,ಕುಟುಂಬ ವ್ಯವಸ್ಥೆ, ದಾಂಪತ್ಯ ಎಲ್ಲವೂ ನಮ್ಮ ಆಚಾರ ವಿಚಾರಗಳನ್ನು ಅವಲಂಬಿಸಿದೆ. ಅಭಿವೃದ್ಧಿ ಹೆಸರು ನಿಸ್ವಾರ್ಥವಾಗಿ ನೆಲೆ ನಿಲ್ಲಬೇಕಾದರೆ,ಆ ಕುಟುಂಬಗಳ ಸಂಸ್ಕಾರ ಸಂಸ್ಕೃತಿಗಳ ಮೇಲೆ ಪ್ರಭಾವ ಬೀರುತ್ತದೆ. ಶಿಕ್ಷಣದ ಮಹತ್ವ ಪ್ರತಿಯೊಬ್ಬರು ಸಬಲರಾಗಬೇಕೆಂಬುದು.ಅಜ್ಞಾನ ಕಳೆದು ಜ್ಞಾನದ ಬೆಳಕಿನಲ್ಲಿ ಪರಸ್ಪರ ಸಾಮರಸ್ಯದಿಂದ ಬದುಕಬೇಕೆಂಬುದು‌.ಹಿಂದಿನ ಕಾಲದ ದಾಂಪತ್ಯ ಇಂದಿಗೂ ಮಾದರಿ.ಈಗಿನ ಕಾಲದ ದಾಂಪತ್ಯ ಕೋರ್ಟ್ ಕಚೇರಿ ಅಲೆಯುವುದರಲ್ಲಿ ಕಳೆದರೆ? ಅಕ್ಷರ ಕಲಿತವ,ಅನಕ್ಷರಸ್ಥರಂತೆ ಬದುಕಿದರೆ ಏನು ಲಾಭ? ಗಂಡಿರಲಿ,ಹೆಣ್ಣಿರಲಿ ಸಮಾಜದಲ್ಲಿ ಸಮಾನ ಮನಸ್ಕರಾಗಿ ಬಾಳುವುದು ಬಹುಮುಖ್ಯ. ಇಬ್ಬರು ತಮ್ಮ ಅಹಂ ನ ದೂರ ಸರಿಸಿ ಮಾನವೀಯ ಮೌಲ್ಯಗಳನ್ನು ಒಳಗೊಂಡಿದ್ದರೆ,ಹೆತ್ತವರ ಒಡಲು ತಣ್ಣಗಿರುತ್ತದೆ.ಸಾಮಾಜಿಕ ಪಿಡುಗುಗಳನ್ನು ಮುಕ್ತ ಮನಸ್ಸಿನಿಂದ ತಡೆಗಟ್ಟಲು ಯುವ ಮನಸ್ಸುಗಳು ಸಿದ್ದರಾಗಬೇಕಿದೆ‌.ಮೌಡ್ಯಗಳನ್ನು ಕಿತ್ತೊಗೆದು ಬದುಕಿದರೆ ಸಾಧ್ಯವಾಗುತ್ತದೆ. ಹೇಳಿದಷ್ಟು ಸುಲಭವಲ್ಲ ಎಂಬ ಅರಿವಿದೆ.ಹಾಗಂತ ಸಾಧ್ಯವಿಲ್ಲ ಅನ್ನಲು ಮನಸ್ಸು ಒಪ್ಪುತ್ತಿಲ್ಲ…..ಒಮ್ಮೆ ಯೋಚಿಸಿ.


3 thoughts on “

  1. ತುಂಬಾ ಸೊಗಸಾದ ಚಿತ್ತ ಕ್ಕೆ ಏನೋ ಮತ್ತಷ್ಟು ಓದಬೇಕು ಎನ್ನುವ ಲೇಖನ.

  2. Egina generation ge sari honduva lekhana maduve javabadari sambanda nibhaysuva manobhava badalige tanatana ego dodastige inda yalavu kaledukolata ideve..

  3. ಸಮಾಜದ ವ್ಯವಸ್ಥೆಯ ಕುರಿತಾದ ಲೇಖನ ಸುಂದರವಾಗಿ ಮೂಡಿ ಬಂದಿದೆ.

Leave a Reply

Back To Top