ಕಾವ್ಯ ಸಂಗಾತಿ
ಜಯಂತಿಸುನಿಲ್
ಬರಿಯ ಬೆಳಕಲ್ಲಾ
ಬೆಳಕಿನ ನಿನಾದ ಜಗವೆಲ್ಲಾ ತುಂಬಿರಲು…
ಮನದಿ ಕತ್ತಲೇಕೋ..?
ಪಂಚೇಂದ್ರಿಯಗಳಲ್ಲಿ ಜಿಡ್ಡುಗಟ್ಟಿದ ಭಾವವೇಕೋ..?
ಮನೆ ಮನೆಗಳಲಿ
ಊರೂರ ಹಾದಿ ಬೀದಿಗಳಲಿ
ಸಾಲು ಜ್ಯೋತಿಗಳು ಝಗಮಗಿಸಲು
ಮನದಂಗಳ ಮಾತ್ರ ನಿತ್ಯಕತ್ತಲೇಕೋ..? ನೀರವಮೌನವೇಕೋ..?
ಹಣತೆ ಹಚ್ಚಿ, ಈ ಕತ್ತಲನ್ನು ಹೊರದೋಡಿಸೋಣವೆಂದು
ಕುಂಬಾರನ ಮನೆಗ್ಹೋಗಿ ಮಣ್ಣಹಣತೆ ತಂದು…
ಗಾಣಿಗರ ಮನೆಯಿಂದ ತೖಲ ತಂದು..
ಬತ್ತಿಯ ನೇಯ್ದು ಬೆಳಗಿಸಿದೆ, ಬೆಳಗಲಿಲ್ಲಾ ಇದು ಬರಿಯ ಬೆಳಕಲ್ಲಾ…!!
ಮತ್ತೆ ಮತ್ತೆ ಕಂಗೆಡಿಸುವ ಆ ಕತ್ತಲಾವುದು?
ಆಗೊಮ್ಮೆ ಈಗೊಮ್ಮೆ ಚಿತ್ತವನ್ನಾವರಿಸುವ ಈ ಬೆಳಕಾವುದು?
ತಿಳಿಯುತ್ತಿಲ್ಲಾ…ಹೊಳೆಯುತ್ತಿಲ್ಲಾ
ಈ ಕತ್ತಲು ಹೊರಗಿನದ್ದೋ? ಒಳಗಿನದ್ದೋ..?
ಕಣ್ಮುಚ್ಚಿ ಕುಳಿತೆ
ತಾರಕ್ಕೇರುವ ಈ ಭವದ ತಲ್ಲಣಗಳ
ಜೋಳಿಗೆಯಲಿಡಿದ ಜಂಗಮ ಎದುರಾದ..
ಆಹಾ!! ಎಂಥಾ ವರ್ಚಸ್ಸಿನ ಆ ಮೊಗ
ಕಣ್ಣಲ್ಲೇ ತುಳುಕಾಡುವ ಬೆಳಕು
ನನ್ನ ನೋಡಿ ಪಕ ಪಕನೇ ನಕ್ಕ
ಕಾರಣವೇನೆಂದೆ?
ಅಯ್ಯೋ ಹುಚ್ಚಿ
ನೀ ಹುಡುವ ಬೆಳಕು ಹೊರಗಿನದ್ದಲ್ಲಾ.. ಒಳಗಿನದ್ದು.
ಹೊರದೋಡಿಸಬೇಕಾದದ್ದು
ಕತ್ತಲನ್ನಲ್ಲಾ..
ಅರಿಷಡ್ವರ್ಗಗಳನ್ನು.
ಹಚ್ಚಬೇಕಾಗಿರುವುದು ಮಣ್ಣಿನ ಹಣತೆಯಲ್ಲಾ..
ಪ್ರೇಮದ ಹಣತೆ.
ಕಣ್ಣೆವೆ ಬಿಡುವುದರೊಳಗೆ
ಮಾಯವಾದ..
ಜ್ಞಾನೋದಯವಾದ ಬುದ್ಧನಂತೆ ಎದ್ದು ಕುಳಿತೆ.
ಇದೀಗ ಹಚ್ಚಲು ಹೊರಟೆ
ಪ್ರೇಮದ ಹಣತೆಯನು
ಬೆಳಗಲು ಹೊರಟೆ
ಶಾಶ್ವತವಾಗಿ ಕತ್ತಲೇ ಇಲ್ಲದ
ಆತ್ಮಜ್ಯೋತಿಯನು..!!
ಜಯಂತಿಸುನಿಲ್